“ಬಂಗಾರದ ಮನುಷ್ಯ” ಚಿತ್ರದ ಬಗ್ಗೆ ನಿಮಗೆ ಗೊತ್ತಿರದ ಕೆಲವು ಸಂಗತಿಗಳು

0
1316

ಚಲನಚಿತ್ರ ಒಂದು ಸಮಾಜವನ್ನು ಕಟ್ಟಲೂಬಹುದು ಕೆಡವಲೂಬಹುದು ಅಂತ ಹೇಳ್ತಾರೆ. ಕೇವಲ ಮೂರು ಗಂಟೆಯಲ್ಲಿ ಬೆಳ್ಳಿ ಪರದೆಯ ಮೇಲೆ ಮೂಡುವ ಬಣ್ಣದ ಬೆಳಕು ಸಮಾಜವನ್ನೇ ಅಥವಾ ಒಂದು ಸಮುದಾಯವನ್ನೇ ಬದಲಿಸುವಷ್ಟು ಪ್ರಭಾವ ಬೀರಬಹುದೇನು!!? ಎಂಬುದು ಈಗಲೂ ಚರ್ಚೆಯಾಗುವ ವಿಷಯ. ಸಾಕಷ್ಟು ಜನ ಚಲನಚಿತ್ರ ಕೇವಲ ಮನೋರಂಜನೆಯ ಸರಕಷ್ಟೇ ಅದರಿಂದ ಬದಲಾವಣೆ ಸಾಧ್ಯವಿಲ್ಲ ಎಂದೇ ಈಗಲೂ ವಾದಿಸುತ್ತಾರೆ. ಆದರೆ ಸಮಾಜವನ್ನು ಸೂಕ್ಷ್ಮವಾಗಿ ಗಮನಿಸಿ ನೋಡಿದರೆ ನಾವು ಧರಿಸುವ ಬಟ್ಟೆ, ನಮ್ಮ ಹೇರ್ ಸ್ಟೈಲ್, ನಮ್ಮ ಗುಣಗಳು, ನಮ್ಮ ಭಾಷೆ, ಎಲ್ಲವನ್ನು ನಮಗೆ ಒಂದಲ್ಲ ಒಂದು ರೀತಿಯಲ್ಲಿ ಸಿನಿಮಾ ಕಲಿಸಿಕೊಟ್ಟಿದೆ, ಕೊಡುತ್ತಿದೆ. ಖ್ಯಾತ ಚಿತ್ರಸಾಹಿತಿ,ಕವಿ ಜಯಂತ ಕಾಯ್ಕಿಣಿಯವರು“ಚಿತ್ರಮಂದಿರಗಳು ಸಮಾಜದ ಪಾಠಶಾಲೆಗಳಿದ್ದಂತೆ”  ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಚಲನಚಿತ್ರದಿಂದ ಸ್ಫೂರ್ತಿ ಪಡೆದು ಒಬ್ಬ ವ್ಯಕ್ತಿ ಅಥವಾ ಇಡೀ ಒಂದು ಸಮುದಾಯವೇ ಬದಲಾದ ಸಾಕಷ್ಟು ಉದಾಹರಣೆಗಳು ನಮಗೆ ಕಾಣಸಿಗುತ್ತವೆ. ಇತ್ತೀಚಿನ ‘ರಾಜಕುಮಾರ’ ಸಿನಿಮಾ ನೋಡಿ ತಂದೆ ತಾಯಿಯರನ್ನು ವೃದ್ದಾಶ್ರಮಕ್ಕೆ ದೂಡಿದ್ದ ಎಷ್ಟೋ ಮಂದಿ ಮನೆಗೆ ಕರೆದುಕೊಂಡು ಬಂದ ಎಷ್ಟೋ ತಾಜಾ ಉದಾಹರಣೆಗಳು ಈಗಲೂ ನಮ್ಮ ಕಣ್ಣೆದುರೇ ಇವೆ.

ಒಂದು ಸಮಯದಲ್ಲಿ ದೊಡ್ಡ ಸಮುದಾಯವೊಂದರ ಬದಲಾವಣೆಯಲ್ಲಿ ಬಂಗಾರದ ಮನುಷ್ಯ ಚಿತ್ರ ಮಾಡಿದ ಕ್ರಾಂತಿ ಸಣ್ಣದ್ದೇನಲ್ಲ.ಬಂಗಾರದ ಮನುಷ್ಯ , ಅಬ್ಬಾ ಇಂದಿಗೂ ಈ ಹೆಸರು ಕೇಳಿದರೆ ಕನ್ನಡಿಗರ ಕಿವಿ ಅರಳುತ್ತದೆ. ಮೈ ನವಿರೇಳುತ್ತದೆ,“ಆಗದು ಎಂದು ಕೈ ಕಟ್ಟಿ ಕುಳಿತರೆ ಸಾಗದು ಕೆಲಸವೂ ಮುಂದೆ ಎಂಬ ನಾಣ್ಣುಡಿಯ ಸೂತ್ರದಾರ ಆ ರಾಜೀವಪ್ಪ ಕಣ್ಣೆದುರು ಬಂದು ಬಿಡುತ್ತಾರೆ. ಆ ಹಳ್ಳಿ, ಆ ಬಾವಿ. ಆ ಬಯಲು, ಆ ಹೊಲ, ಗದ್ದೆ ಇವೆಲ್ಲವೂ ಮಾಸಿಹೋಗದ ಬಣ್ಣದ ಚಿತ್ರಗಳಂತೆ ಕನ್ನಡಿಗರೆದುರು ನಿಂತುಬಿಟ್ಟಿವೆ.

ವಿಮರ್ಶಕರ ಮನವೊಲಿಸುವಲ್ಲಿ ಸೋತ ಬಂಗಾರದ ಮನುಷ್ಯ

7 ಸೆಪ್ಟೆಂಬರ್ 1972ರಲ್ಲಿ ಕನ್ನಡಿಗರ ಹೆಮ್ಮೆ ಡಾ. ರಾಜಕುಮಾರ್ ನಟನೆಯ ಈ ಸಿನಿಮಾ ತೆರೆಕಂಡಾಗ ಯಾರು ಸಹ ಅದು ವಿಶ್ವಮಟ್ಟದ ಅತ್ಯುನ್ನತ ಚಿತ್ರಗಳ ಸಾಲು ಸೇರಬಹುದೆಂದು ಊಹಿಸಿಯೂ ಇದ್ದಿರಲಿಕ್ಕಿಲ್ಲ. ಸಿನಿಮಾ ಬಿಡುಗಡೆಯಾಗಿ ಅಂದಿನ ಬರಹಗಾರರಿಂದ ಮತ್ತು ವಿಮರ್ಶಕರಿಂದ ಸಾಧಾರಣ ವಿಮರ್ಶೆ ಪಡೆದುಕೊಂಡಿತ್ತು. ಬರಹಗಾರರಾದ ಯು.ಆರ್.ಅನಂತಮೂರ್ತಿಯವರು “ಸಿನಿಮಾ ಯುವಕರಿಗೆ ತಪ್ಪುದಾರಿ ತೋರಿಸುತ್ತಿದ್ದೂ ರಾತ್ರೋರಾತ್ರಿ ನಾಯಕ ರಾಜೀವಪ್ಪನಂತೆ ಯಾರು ಬೇಕಾದರೂ ಶ್ರೀಮಂತರಾಗಬಹುದು ಎನ್ನುವಂತೆ ಬಿಂಬಿಸುತ್ತಿದೆ” ಎಂದು ಬರೆದಿದ್ದರು. ಆದರೆ ವಿಮರ್ಶೆಗಳ ಎದುರಲ್ಲಿಯೂ ಸಿನಿಮಾ ಕನ್ನಡ ಚಿತ್ರರಂಗ ಮಾತ್ರವಲ್ಲದೆ ಇಡೀ ಭಾರತ ಚಿತ್ರರಂಗದಲ್ಲೇ ಮೈಲಿಗಲ್ಲು ಸೃಷ್ಟಿಸಿಬಿಟ್ಟಿತು.

ಅತೀ ಹೆಚ್ಚು ದಿನಗಳು ಬೆಳ್ಳಿಪರದೆಯಲ್ಲಿ ಉಳಿದುಬಿಟ್ಟ ರಾಜೀವಪ್ಪ

ಬಂಗಾರದ ಮನುಷ್ಯ ಕನ್ನಡದಲ್ಲೇ ಅತೀ ಹೆಚ್ಚು ದಿನಗಳು ಪ್ರದರ್ಶನ ಕಂಡ ಹೆಗ್ಗಳಿಕೆಗೆ ಪಾತ್ರವಾಯಿತು. ಬೆಂಗಳೂರಿನಲ್ಲಿ 104 ವಾರಗಳು, ಮೈಸೂರಿನಲ್ಲಿ 60 ವಾರಗಳು, ಹಾಗು ಮಂಗಳೂರಿನಲ್ಲಿ  25 ವಾರಗಳು ಪ್ರದರ್ಶನ ಕಂಡು ಬೆಂಗಳೂರಿನ ಸ್ಟೇಟ್ಸ್ ಚಿತ್ರಮಂದಿರದಲ್ಲಿ 2 ವರ್ಷಗಳ ಕಾಲ ಪ್ರದರ್ಶನ ಕಂಡ ಏಕೈಕ ಕನ್ನಡ ಚಿತ್ರವೆಂಬ ಹೆಗ್ಗಳಿಕೆಗೆ ಪಾತ್ರವಾಯಿತು. ಈ ಚಿತ್ರದಲ್ಲಿನ ಡಾ.ರಾಜಕುಮಾರ್ ನಟನೆಯನ್ನು ಏಪ್ರಿಲ್ 2013 ರ ಭಾರತ ಚಿತ್ರರಂಗದ ಶತಮಾನೋತ್ಸವದಲ್ಲಿ ಫೋರ್ಬ್ಸ್ ಇಂಡಿಯಾದ “ಭಾರತದ 25 ಅತ್ಯುತ್ತಮ ನಟನೆ” ಸಾಲಿನಲ್ಲಿ ಸೇರಿಸಿತು.

ಕೇವಲ ಅತ್ಯುತ್ತಮ ಚಿತ್ರ ಎಂಬ ಹೆಗ್ಗಳಿಕೆ ಮಾತ್ರವಲ್ಲದೆ ಸಾಕಷ್ಟು ವಿಷಯಗಳಿಗೆ ಈ ಚಿತ್ರ ಇಂದಿಗೂ ಉದಾಹರಣೆಯಾಗಿದೆ .

ಅಂದಿನ ಹೊಸ ತಂತ್ರಜ್ಞಾನದ ಪರಿಚಯ

ಬಂಗಾರದ ಮನುಷ್ಯ ಚಿತ್ರ ಕಲ್ಲುಬಂಡೆಗಳನ್ನು ಬ್ಲಾಸ್ಟ್ ಮಾಡಿ ನೆಲಕ್ಕುರುಳಿಸಿ, ಅರ್ಥ್ ಮೂವರ್ಸ್ ಮುಖಾಂತರ ಭೂಮಿಯನ್ನು ಸಮ ಮಾಡುವ ತಂತ್ರಜ್ಞಾನ ಮತ್ತು ನೀರನ್ನು ಪಂಪ್ ಮುಖಾಂತರ ತಮ್ಮ ಗದ್ದೆಗಳಿಗೆ ಪೂರೈಸಿ ಉತ್ತಮ ಇಳುವರಿ ತಗೆಯುವ ಮಾದರಿಗಳನ್ನು ಜನರ ಮುಂದಿಟ್ಟಿತು.

ಸಹಕಾರಿ ಕೃಷಿ ಕುರಿತಾದಂತ ಮಾಹಿತಿ

ಸಹಕಾರಿ ಕೃಷಿಗೆ ಸಂಬಂಧ ಪಟ್ಟ ಒಂದು ದೃಶ್ಯವನ್ನು ಚಿತ್ರದಲ್ಲಿ ಅಳವಡಿಸಿ, ಆಗ ತಾನೇ ಕರ್ನಾಟಕದಲ್ಲಿ ಕಣ್ಣು ಬಿಡುತ್ತಿದ್ದ ಸಹಕಾರಿ ಕೃಷಿಯ ಮಾಹಿತಿಯನ್ನು ಸರಳವಾದ ಮಾರ್ಗದಲ್ಲಿ
ಜನಸಾಮಾನ್ಯರಿಗೂ ತಿಳಿಯುವಂತ ಭಾಷೆಯಲ್ಲಿ ಅರ್ಥೈಸಿಕೊಟ್ಟ ಹೆಗ್ಗಳಿಕೆಗೂ ಕೂಡ ಈ ಚಿತ್ರ ಪಾತ್ರವಾಯಿತು.

ಗ್ರಾಮೀಣ ಅಭಿವೃದ್ಧಿ , ಸಹಕಾರ ಚಳುವಳಿ , ಆಧುನಿಕ ವ್ಯವಸಾಯ ಪದ್ಧತಿ , ಸಮಾಜದ್ಲಲಿನ ಹೊಂದಾಣಿಕೆ, ಪ್ರೀತಿ, ಸಮರ್ಪಣಾತ್ಮಕ ಭಾವ, ನಿಯತ್ತು ಹೀಗೆ ನೂರಾರು ವಿಚಾರಗಳ ಒಳಗೊಂಡ ಮಹಾನ್ ಗ್ರಂಥದಂತೆ ಹಲವಾರು ಆಯಾಮಗಳಲ್ಲಿ ತನ್ನ ಛಾಪನ್ನು ಮೂಡಿಸಿತು.

 

ವಲಸೆ ಮತ್ತು ನಿರುದ್ಯೋಗ ಸಮಸ್ಯೆಗೆ ಪರಿಹಾರ ಮಾರ್ಗದರ್ಶಿ

ರೈತರು ಕೈ ತುಂಬಾ ಸಾಲ ಮಾಡಿ , ಕೆಲವೊಮ್ಮೆ ತೀರಿಸಲಾಗದಂತ ಪರಿಸ್ಥಿತಿಗೆ ಹೋಗಿ ಒದ್ದಾಡುತ್ತ ತಮ್ಮ ಮಕ್ಕಳು ಅವರ ಹಾಗೆ ಕಷ್ಟ ಪಡಬಾರದೆಂದು ಓದಿಸಿ ಪಟ್ಟಣಗಳಲ್ಲೇ ಕೆಲಸಕ್ಕೆ ಸೇರಿಸಿಬಿಡುತ್ತಿದ್ದ ಆ ಸಮಯದಲ್ಲಿ ಪ್ರದರ್ಶನ ಕಂಡ ಬಂಗಾರದ ಮನುಷ್ಯ ಚಿತ್ರವೂ ಅಂದಿನ ಯುವಕರಲ್ಲಿ ಆಶಾಕಿರಣ ಮೂಡಿಸಿ ಮರಳಿ ತಮ್ಮ ಹೊಲ-ಗದ್ದೆಗಳ ಕಡೆ ಬರುವಂತೆ ಮಾಡುವಲ್ಲಿ ಮಹತ್ತರ ಕಾರ್ಯ ಸಾಧಿಸಿಬಿಟ್ಟಿತು.

ಕನ್ನಡಿಗರ ಮನದಲ್ಲಿ ಇಂದಿಗೂ ಹಸಿರಾಗಿ ಉಳಿದಿರುವ ಬಂಗಾರದ ಮನುಷ್ಯ ಸಿನಿಮಾ ಕೇವಲ ಮನೋರಂಜನೆ ಮಾತ್ರವಲ್ಲ ಸಮುದಾಯದ ಏಳಿಗೆಯಲ್ಲಿ , ಶಿಕ್ಷಣದಲ್ಲಿ , ಸಹಬಾಳ್ವೆಯಲ್ಲಿಯೂ ಸಹ ಪಾತ್ರ ವಾಹಿಸಬಹುದೆಂದೂ ತೋರಿಸಿ ಕೊಟ್ಟಿತು.

LEAVE A REPLY

Please enter your comment!
Please enter your name here