ಉಪೇಂದ್ರ ಎಂಬ ಹೆಸರು ಕನ್ನಡ ಚಿತ್ರ ರಂಗದಲ್ಲಿ ಒಂದು ಮೈಲಿಗಲ್ಲು ಎಂದರೆ ಖಂಡಿತಾ ಅತಿಶಯೋಕ್ತಿ ಅಲ್ಲ. ಇಂದು ಉಪೇಂದ್ರ ರವರು ರಾಜಕೀಯ ಪ್ರವೇಶ ಮಾಡಿ, ಒಂದು ಬದಲಾವಣೆ ತರುವ ನಿಟ್ಟಿನಲ್ಲಿ ಹೊಸ ಜವಾಬ್ದಾರಿ ಹೊತ್ತಿರುವುದು ನಿಮಗೆಲ್ಲ ಗೊತ್ತಿದೆ. ಆದರೆ ಅವರು ನಡೆದು ಬಂದ ಚಿತ್ರ ರಂಗದ ಹಾದಿಯನ್ನು ಮೆಲಕು ಹಾಕಿದರೆ , ಅವರು ಒಬ್ಬ ಕಿಂಗ್ ಅಂಡ್ ಕಿಂಗ್ ಮೇಕರ್ ಆಗಿ ಕನ್ನಡ ಚಿತ್ರರಂಗದಲ್ಲಿ ಸ್ಟಾರ್ ಆಗಿ ಬೆಳೆದು ಬಂದ ಹಾದಿ ಕಣ್ಣು ಮುಂದೆ ಬರುತ್ತದೆ..
ಉಪೇಂದ್ರ ರವರು ಎಷ್ಟೋ ಚಿತ್ರಗಳಲ್ಲಿ ತಮ್ಮ ಅಭಿನಯ ಚಾತುರ್ಯವನ್ನು ತೋರಿದ್ದರೂ, ನಮಗೆ ಇವರು ಹೆಚ್ಚು ಇಷ್ಟ ಆಗೋದು ತಮ್ಮ ನಿರ್ದೇಶನ ಮತ್ತು ವಿಭಿನ್ನ ಎನಿಸುವ ಆಲೋಚನೆಗಳಿಂದ. ಈ ಜಗತ್ತು ಹಿಂಗೇ ಯಾಕಿದೆ, ಹಂಗ್ಯಾಕೆ ಇರಬಾರದು ಎಂಬ ಕುತೂಹಲ ಮತ್ತು ಕ್ರಿಯಾಶೀಲತೆ , ಉಪೇಂದ್ರ ರವರನ್ನು ಇಂದಿಗೂ ಜೀವಂತವಾಗಿ ಇಡುತ್ತವೆ.
ಇಂದು ಉಪೇಂದ್ರ ಎಸ್ ಎನ್ ಆಕ್ಟರ್ ಅಲ್ಲದೆ ಒಬ್ಬ ಡೈರೆಕ್ಟರ್ ಆಗಿ, ಕಥೆಗಾರನಾಗಿ, ಮತ್ತು ಬಾಕ್ಸ್ ಆಫೀಸ್ ಕಿಂಗ್ ಆಗಿ ಮೆರೆದ ಆ ದಿನಗಳನ್ನು ಒಮ್ಮೆ ಅವಲೋಕಿಸುವ ಪ್ರಯತ್ನ. ಈ ಪ್ರಯಾಣದಲ್ಲಿ ಎಷ್ಟೋ ನವ ಪ್ರತಿಭೆಗಳು ಕನ್ನಡ ಚಿತ್ರ ರಂಗಕ್ಕೆ ಪರಿಚಯವಾಗಿದ್ದು, ಎಷ್ಟೋ ಚಿತ್ರಗಳು ದೇಶಾದ್ಯಂತ ಹೆಸರು ಮಾಡಿದ್ದು ಮತ್ತು ಈ ಉಪೇಂದ್ರ ಎಂಬ ಸಾಮಾನ್ಯ ಹುಡುಗ ರಿಯಲ್ ಸ್ಟಾರ್ ಆಗಿ ಬೆಳೆದ ಕಥೆಗಳೂ ಸೇರಿ ಕೊಂಡಿವೆ.
ಉಪೇಂದ್ರ ರವರು ನಿರ್ದೇಶಿಸಿದ 8 ಅದ್ಭುತ ಚಿತ್ರಗಳು / 8 Amazing Films directed by Upendra
ಜಗ್ಗೇಶ್ ರವರಿಗೆ ಬ್ರೇಕ್ ನೀಡಿದ ತರ್ಲೆ ನನ್ ಮಗ
ಉಪೇಂದ್ರ ರವರು ಕಾಶಿನಾಥ್ ಗರಡಿಯಲ್ಲಿ ಚಿತ್ರ ಕಥೆ ಮತ್ತು ಹಾಡುಗಳನ್ನು ಬರೀತಾ, ಚಿತ್ರ ರಂಗಕ್ಕೆ ಕಾಲಿಟ್ಟವರು. ಕಾಶಿನಾಥ್ ರವರ ಎಷ್ಟೋ ಚಿತ್ರಗಳಲ್ಲಿ, ಉಪೇಂದ್ರ ರವರು ಕೆಲಸ ಮಾಡಿದ್ದಾರೆ ಆದರೆ ಅವರು ನಿರ್ದೇಶಿಸಿದ ಮೊದಲ ಚಿತ್ರ ಎಂದರೆ, ಅದು ತರ್ಲೆ ನನ್ ಮಗ. ಈ ಚಿತ್ರದಲ್ಲಿ ಇವತ್ತಿನ ನವರಸ ನಾಯಕ ಜಗ್ಗೇಶ್ ರವರು ಮೊದಲ ಬಾರಿಗೆ ಹೀರೋ ಆಗಿ ಬಣ್ಣ ಹಚ್ಚುತ್ತಾರೆ. ಈ ಚಿತ್ರದ ನಂತರ ಜಗ್ಗೇಶ್ ರವರು ಮತ್ತೆ ಹಿಂದೆ ತಿರುಗಿ ನೋಡಲೇ ಇಲ್ಲ.
ತರ್ಲೆ ನನ್ ಮಗ, ಆ ಕಾಲಕ್ಕೆ ಒಂದು ವಿಭಿನ್ನವಾದ ಪ್ರಯತ್ನ ಎನ್ನಬಹುದು. ಚಿತ್ರದ ಸ್ಕ್ರೀನ್ ಪ್ಲೇ, ಸಂಭಾಷಣೆ, ಮತ್ತು ಚಿತ್ರದ ನಿರೂಪಣೆ ಅಂತ ಏನು ಕರೀತೀವಿ, ಅದು ನವೀನತೆಯಿಂದ ತುಂಬಿತ್ತು. ಕಮ್ಮಿ ಹಣದಲ್ಲಿ ಒಂದು ಒಳ್ಳೆ ಚಿತ್ರ ಹೇಗೆ ಮಾಡುವುದು ಎಂದು ಉಪೇಂದ್ರ ಆ ಕಾಲಕ್ಕೆ ತೋರಿಸಿದ್ದರು. ಈಗ ಶಾರ್ಟ್ ಬಜೆಟ್ ಚಿತ್ರಗಳ ಟ್ರೆಂಡ್ ಶುರುವಾಗಿದೆ ಎಂದು ಹೇಳುತ್ತಾರೆ ಆದರೆ ಉಪೇಂದ್ರರ ಪಾಲಿಗೆ ಮಾತ್ರ ಇದು ತುಂಬಾ ಹಳೆ ವಿಷಯ ಅಂತಾನೆ ಪರಿಗಣಿಸಬಹುದು.
ಕುಮಾರ್ ಗೋವಿಂದ್ ಇಂದು ನಮಗೆ ಚಿರ ಪರಿಚಯ ಅಂದರೆ ಅದು ‘ಶ್!!! ‘ ಸಿನೆಮಾದ ಮೂಲಕ
1993 ರಲ್ಲಿ ಬಿಡುಗಡೆ ಯಾದ ”ಶ್!!!’ ಒಂದು ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ಆಗಿತ್ತು. ಉಪೇಂದ್ರ ರವರ ನಿರ್ದೇಶನದಲ್ಲಿ ಮೂಡಿ ಬಂದ ಎರಡನೇ ಚಿತ್ರಕ್ಕೆ ಕುಮಾರ್ ಗೋವಿಂದ್ ಆಯ್ಕೆ ಆಗುತ್ತಾರೆ ಮತ್ತು ವಿಶೇಷ ಪಾತ್ರದಲ್ಲಿ ಕಾಶಿನಾಥ್ ಸಹ ಬಣ್ಣ ಹಚ್ಚುತ್ತಾರೆ. ಇಂದಿಗೂ ಈ ಚಿತ್ರವನ್ನು ರಾತ್ರಿ ಒಬ್ಬರೇ ಕೂತು ನೋಡಲು ಸ್ವಲ್ಪ ಕಷ್ಟ ಆಗಬಹುದು. ತುಂಬಾ ಗ್ರಾಫಿಕ್ಸ್ ಬಳಕೆ ಇಲ್ಲದೆ ನೈಜವಾಗಿ ಹೆದರಿಸುವ ‘ಶ್’ ತುಂಬಾ ದೊಡ್ಡ ಕಮರ್ಷಿಯಲ್ ಸಕ್ಸಸ್ ಅನ್ನು ಕಂಡಿತು.
‘ ಶ್ ‘ ಕನ್ನಡ ಚಿತ್ರ ರಂಗದಲ್ಲಿ ಒಂದು ಹೊಸಾ ಟ್ರೆಂಡ್ ಅನ್ನು ಹುಟ್ಟು ಹಾಕಿತ್ತು ಮತ್ತು ಕನ್ನಡದ ಕೆಲವೇ ಕೆಲವು ಹಾರರ್ ಸಿನಿಮಾ ಗಳಲ್ಲಿ ಈ ಚಿತ್ರವು ಜನರ ಫೇವರಿಟ್ ಎಂದು ಹೇಳಬಹುದು.. ಇನ್ನೊಂದು ಸಂಗತಿ ಎಂದರೆ, ಸಾಧು ಕೋಕಿಲ ರವರು ಸಂಗೀತ ನಿರ್ದೇಶಕರಾಗಿ ಕೆಲಸ ಮಾಡಿದ ಮೊದಲ ಚಿತ್ರವೂ ಇದೇ ಆಗಿದೆ.
ಅಂಬಿಯ ಆಪರೇಷನ್ ಅಂತ
ರೆಬೆಲ್ ಸ್ಟಾರ್ ಅಂಬರೀಷ್ ನಟಿಸಿದ್ದ ಅಂತ ಸಿನಿಮಾ ದ ಭಾಗ ಒಂದನ್ನು ರಾಜೇಂದ್ರ ಸಿಂಗ್ ಬಾಬು ರವರು ನಿರ್ದೇಶನ ಮಾಡಿದ್ದರು. ಈ ಸಿನಿಮಾ ಅಂಬಿ ಅವರಿಗೆ ದೊಡ್ಡ ಹೆಸರನ್ನು ತಂದು ಕೊಟ್ಟಿದ್ದು ನಿಮಗೆಲ್ಲ ಗೊತ್ತೇ ಇದೆ. ಈ ಸಿನೆಮಾದ ಭಾಗ ಎರಡು ಬರಬೇಕು ಎಂದು ಅಭಿಮಾನಿಗಳು ಒತ್ತಾಯಿಸಿದರು, ಬಾಬು ರವರು ಕಾರಣಾಂತರಗಳಿಂದ ಮಾಡಲಾಗುವುದಿಲ್ಲ. ಹೀಗಿರುವಾಗ ಉಪೇಂದ್ರ ರವರು ಆಪರೇಷನ್ ಅಂತ ಎಂಬ ಕಥೆ ಹಿಡಿದು ಅಂಬಿ ಬಳಿ ಹೋದಾಗ, ಅವರಿಗೆ ಗ್ರೀನ್ ಸಿಗ್ನಲ್ ಸಿಕ್ಕಿತು. ಈ ಸಿನೆಮಾ ರಾಜಕೀಯ ಮತ್ತು ಅಂಡರ್ ವರ್ಲ್ಡ್ ನ ಬೇಸ್ ಇಟ್ಟು ಕೊಂಡು ಮಾಡಲಾದ ಚಿತ್ರ. ಇದೂ ಸಹ ಕನ್ನಡ ಚಿತ್ರ ರಂಗದಲ್ಲಿ ಒಂದು ವಿಭಿನ್ನ ಪ್ರಯತ್ನ ಎಂದೇ ಹೇಳಬಹುದು.
ಓಂ ಎಂಬ ಭೂಗತ ಲೋಕದ ಕಥೆ
ಕನ್ನಡದಲ್ಲಿ ಅದೆಷ್ಟೋ ಹಿಟ್ ಚಿತ್ರಗಳು ಬಂದಿವೆ.. ಅದೆಷ್ಟೋ ಚಿತ್ರಗಳು ದಾಖಲೆಗಳನ್ನು ಬರೆದಿವೆ ಆದರೆ ಈ ‘ಓಂ’ ಅನ್ನೋ ಚಿತ್ರ ಈವತ್ತಿಗೂ ಒಂದು ದಾಖಲೆ ಅಂದರೆ ತಪ್ಪಾಗಲಾರದು. 1995 ರಲ್ಲಿ ಬಿಡುಗಡೆಯಾದ ‘ಓಂ’, ಉಪೇಂದ್ರ ಅವರ ನಿರ್ದೇಶನದಲ್ಲಿ ಮೂಡಿ ಬಂದ ಒಂದು ಕ್ಲಾಸಿಕ್ ಇಂಡಿಯನ್ ಸಿನಿಮಾ. ಇಂದಿಗೂ ಈ ಚಿತ್ರ ಬಂದರೆ ಸಾಕು ಜನ ಹುಚ್ಚೆದ್ದು ಮುಗಿಬೀಳ್ತಾರೆ ಅಂದರೆ ಅದಕ್ಕೆ ಕಾರಣ ಇದೆ. ಸುಮ್ನೆ ಅಲ್ಲ.
ಶಿವ್ ರಾಜಕುಮಾರ್ ಮುಖ್ಯ ಭೂಮಿಕೆ ಯಲ್ಲಿ ಇರುವ ಈ ಕಥೆಯನ್ನು, ಭೂಗತ ಪ್ರಪಂಚದ ಮಜಲುಗಳನ್ನು ಸರಾಸರಿಯಾಗಿ ಪ್ರೇಮದ ಲೇಪನೆಯಲ್ಲಿ ಹೇಳಲಾಗಿತ್ತು. ನಿಮಗೆ ಈಗಾಗಲೇ ಗೊತ್ತಿರುವ ಹಾಗೆ, ಓಂ ಮರು ಬಿಡುಗಡೆ ಯಾಗಿದ್ದು ಬರೋಬ್ಬರಿ 632 ನೇ ಸಾರಿ ಅಂಡ್ ಇದು ಇಡೀ ಭಾರತದ ಚಿತ್ರರಂಗದ ಇತಿಹಾಸದಲ್ಲೇ ಒಂದು ದಾಖಲೆ ಮತ್ತು ಮೈಲಿಗಲ್ಲು. ‘ಓಂ’ ಅಂತಹ ಚಿತ್ರ ಆಗುವುದು ಕೇವಲ ಒಂದು ಬಾರಿ ಅಂಡ್ ‘ಓಂ’ ನ ಮರುಸೃಷ್ಠಿ ಸ್ವತಃ ಉಪೇಂದ್ರ ಕೂಡ ಮಾಡಲಾಲರು. ಇದನ್ನು ಅವರೇ ಹೇಳಿರುವ ಹಾಗೆ, ” ಓಂ ಒಂದು ಅದ್ಬುತ. ಅದು ಆಯಿತು , ಆಯಿತು ಅಷ್ಟೇ. ನಾನೂ ಅದರ ಒಂದು ಭಾಗ ಎಂದು ಹೇಳಲು ಹೆಮ್ಮೆ ಪಡುತ್ತೇನೆ.”
ಮುಂದೆ ಓದಿ – ನಿಮಗೆ ಗೊತ್ತಿರದ ಮತ್ತು ಓದಲೇಬೇಕಾದ ‘ಓಂ’ ಚಿತ್ರದ ತೆರೆ ಹಿಂದಿನ 12 ರೋಚಕ ವಿಷಯಗಳು
‘ಎ’ ಎಂಬ ಉಲ್ಟಾ ಸ್ಕ್ರೀನ್ ಪ್ಲೇ ಚಿತ್ರ
ಉಪೇಂದ್ರ ರವರು ನಟ ನಾಗಿ ಅಂಡ್ ಹೀರೋ ಆಗಿ ಕೆಲಸ ಮಾಡಿದ ಮೊದಲ ಚಿತ್ರ ‘ಎ’. ಇದು ಒಂದು ಮಾನಸಿಕ ಮತ್ತು ಪ್ರೀತಿಯ ಎಳೆಯಲ್ಲಿ ಬರೆದ ಕಥೆ ಆಗಿದ್ದು, ಉಲ್ಟಾ ಸ್ಕ್ರೀನ್ ಪ್ಲೇ ಮತ್ತು ಅನೇಕ ಫ್ಲಾಶ್ ಬ್ಯಾಕ್ ಗಳಲ್ಲಿ ರೆಕಾರ್ಡ್ ಆದ ಮೊದಲ ಚಿತ್ರ ಎಂದು ಹೇಳಲಾಗುತ್ತದೆ. ಈ ಚಿತ್ರ ಬಂದಾಗ, ಜನರು ಹುಚ್ಚರಾಗಿದ್ದು ಮತ್ತು ಉಪೇಂದ್ರ ರವರನ್ನು ಒಬ್ಬ ಹುಚ್ಚ ಎಂದು ಕರೆದದ್ದು ಉಂಟು. ಈ ಸಿನಿಮಾ ವನ್ನು ಮೊದಲ ವೀಕ್ಷಣೆಯಲ್ಲೇ ಅರ್ಥ ಮಾಡಿಕೊಂಡವರು ತುಂಬಾ ವಿರಳ ಅಂತ ನೇ ಹೇಳಬಹುದು.
‘ಎ ‘ ನ ಹಾಡುಗಳು ತುಂಬಾ ಜನಪ್ರಿಯ ವಾದವು ಮತ್ತು ಗುರು ಕಿರಣ್ ಎಂಬ ಸಂಗೀತ ನಿರ್ದೇಶಕರನ್ನು ಪರಿಚಿಯಸಿದ ಕ್ರೆಡಿಟ್ಸ್ ಮತ್ತೆ ಉಪೇಂದ್ರ ರವರಿಗೆ ಸಲ್ಲುತ್ತದೆ.
ಭಯೋತ್ಪಾದನೆಯ ಕಥೆಯನ್ನು ಹೊತ್ತು ಬಂದ ‘ಸ್ವಸ್ತಿಕ್’
ರಾಘವೇಂದ್ರ ರಾಜಕುಮಾರ್ ನಟನೆಯಲ್ಲಿ ಮೂಡಿ ಬಂದ ಸ್ವಸ್ತಿಕ್ ಅನ್ನೋ ಚಿತ್ರ ಅಷ್ಟು ಹೆಸರು ಮಾಡದೆ ಹೋದರೂ, ಒಂದು ವಿಭಿನ್ನ ಕಥಾ ಹಂದರವನ್ನು ಹೊಂದಿದ್ದ ಚಿತ್ರ ಆಗಿತ್ತು . ಮೊದಲ ಬಾರಿ ಭಯೋತ್ಪಾದನೆ ಕಥೆಯನ್ನು ಹೇಳಲು ಹೊರಟ ಉಪೇಂದ್ರ ರವರು ಮತ್ತೆ ಉಲ್ಟಾ ಸ್ಕ್ರೀನ್ ಪ್ಲೇ ವನ್ನು ಚಿತ್ರದಲ್ಲಿ ಅಳವಡಿಸಿದ್ದರು. ಒಂದು ನಾನ್- ಲೀನಿಯರ್ ಶೈಲಿಯಲ್ಲಿ ಕಥೆ ಹೇಳುವ ಉಪೇಂದ್ರ ರವರ ಈ ಪ್ರಯತ್ನಕ್ಕೆ, ಜನರು ಮಾರು ಹೋಗಿದ್ದರು. ಈ ಚಿತ್ರಕ್ಕೆ ಎರಡು ಕರ್ನಾಟಕ ಸ್ಟೇಟ್ ಅವಾರ್ಡ್ಗಳು ಬಂದಿದ್ದು ಇದು ಉಪೇಂದ್ರ ರವರ ಪ್ರಯತ್ನಕ್ಕೆ ಸಿಕ್ಕ ಪ್ರೋತ್ಸಾಹ ಆಗಿತ್ತು.
ಸೈಕಲಾಜಿಕಲ್ ಥ್ರಿಲ್ಲರ್ ‘ ಉಪೇಂದ್ರ’
ಒಬ್ಬ ಮನುಷ್ಯನ ಮೂರು ತರಹದ ಭಾವನೆ ಗಳನ್ನೂ ಹೆಣ್ಣಿನ ರೂಪ ಕೊಟ್ಟು, ಸಮಾಜದ ಕೋರೆಗಳನ್ನು ಲೇವಡಿಸಿ ಬರೆದ ಕಥೆಯು ‘ಉಪೇಂದ್ರ’ ಎಂಬ ಟೈಟಲ್ ಹೊತ್ತು ತೆರೆಗೆ ಬರುತ್ತದೆ. ಇದು ಉಪೇಂದ್ರ ರವರು ಹೀರೋ ಆಗಿ ನಟಿಸಿದ ಎರಡನೇ ಚಿತ್ರ ವಾಗಿರುತ್ತದೆ.. ಬಾಲಿವುಡ್ ನ ರವೀನಾ ತಂಡಾನ್, ಕನ್ನಡದ ಪ್ರೇಮ ಹಾಗೂ ದಾಮಿನಿ ಮುಖ್ಯ ಭೂಮಿಕೆ ಯಲ್ಲಿ ಇರುವ ಈ ಚಿತ್ರ , ಕನ್ನಡದ ಬೆಸ್ಟ್ ಸೈಕಲಾಜಿಕಲ್ ಥ್ರಿಲ್ಲರ್ ಗಳಲ್ಲಿ ಒಂದು. ಹಾಗೆ ನೋಡಿದರೆ ಇಂತಹ ಪ್ರಯತ್ನಗಳು ಕನ್ನಡ ಚಿತ್ರ ರಂಗದಲ್ಲಿ ನಂತರ ದಿನಗಳಲ್ಲಿ ತುಂಬಾ ಬಂದವು ಮತ್ತು ಅದಕ್ಕೆ ಸ್ಪೂರ್ತಿ, ವನ್ಸ್ ಅಗೈನ್, ದಿ ರಿಯಲ್ ಸ್ಟಾರ್ ಉಪೇಂದ್ರ.
ಈ ಚಿತ್ರಕ್ಕೆ ಎರಡು ಫಿಲಂ ಫಾರ್ ಅವಾರ್ಡ್ ಗಳು ಬಂದವು (ಅತ್ಯತ್ತಮ ಚಿತ್ರ ಹಾಗು ಅತ್ಯುತ್ತಮ ಡೈರೆಕ್ಟರ್). ಇನ್ನೊಂದು ವಿಷಯ ಎಂದರೆ, ಜಪಾನೀಸ್ ಒಬ್ಬರು ಈ ಸಿನಿಮಾ ವನ್ನು ಬೆಂಗಳೂರಿನಲ್ಲಿ ನೋಡಿ, ಮೆಚ್ಚಿ ಕೊಂಡು, ಜಪಾನಿನ ಯೂಬರಿ ಇಂಟರ್ನ್ಯಾಷನಲ್ ಫಿಲಂ ಫೆಸ್ಟಿವಲ್ (೨೦೦೧) ನಲ್ಲಿ ಪ್ರದರ್ಶನ ಮಾಡುತ್ತಾರೆ.
ಸೂಪರ್ ಎಂಬ ಸೂಪರ್ ಡೂಪರ್ ಚಿತ್ರ
ಒಂದು ಸುಂದರ ಭಾರತದ ಕಲ್ಪನೆಯನ್ನು ಹೊತ್ತು ಬಂದ ಚಿತ್ರವೇ ಈ ಸೂಪರ್. ದಕ್ಷಿಣ ಭಾರತದ ಸ್ಟಾರ್ ನಟಿ, ನಯನ ತಾರಾ ಳನ್ನು ಕನ್ನಡಕ್ಕೆ ಮೊದಲ ಬಾರಿಗೆ ತಂದು, ಒಂದು ಹಿಟ್ ಚಿತ್ರವನ್ನು ನೀಡಿ, ಸೂಪರ್ ಕಮ್ ಬ್ಯಾಕ್ ಮಾಡುತ್ತಾರೆ ಉಪೇಂದ್ರ ರವರು. ಈ ಚಿತ್ರದ ಬಗ್ಗೆ ಹೆಚ್ಚು ವಿವರಣೆ ಬೇಕಿಲ್ಲ ಅನಿಸುತ್ತದೆ, ಅಷ್ಟರ ಮಟ್ಟಿಗೆ ಈ ಚಿತ್ರ ಹೆಸರು ಮಾಡಿತ್ತು ಮತ್ತು ಉಪೇಂದ್ರ ರವರ ಇವತ್ತಿನ ರಾಜಕೀಯದ ಎಂಟ್ರಿ ಗೂ ನಾಂದಿ ಹಾಡಿತ್ತು. ಈ ಚಿತ್ರದಲ್ಲಿ ಬರುವ ಪಾತ್ರದ ಹೆಸರುಗಳು , ಟೈಟಲ್ ಕಾರ್ಡ್ ನಲ್ಲಿ ತೋರಿದ ಕ್ರಿಯೇಟಿವಿಟಿ , ಊಹಿಸಲಾಗದ ಕಲ್ಪನೆ, ಎಲ್ಲವೂ ಅದ್ಭುತ.
ತಲೆ ಕೆಡಿಸಿದ ಉಪ್ಪಿ 2
ಸೂಪರ್ ಚಿತ್ರದ 5 ವರ್ಷಗಳ ನಂತರ ಉಪೇಂದ್ರ ರವರು ಮತ್ತೆ ನಿರ್ದೇಶಿಸಿದ ಚಿತ್ರವೇ ಈ ಉಪ್ಪಿ 2 – ಉಪೇಂದ್ರ ನ ಸೀಕ್ವೆಲ್. ಇದರಲ್ಲಿ ಉಪೇಂದ್ರ ರವರು ಮತ್ತೆ ಉಲ್ಟಾ ಸ್ಕ್ರೀನ್ ಪ್ಲೇ ಮತ್ತು ತಿರುಚಿ ಮಡಚಿದ ಕಥೆಯನ್ನು ತಂದಿದ್ದರು. ಸ್ವಲ್ಪ ಆದ್ಯಾತ್ಮ , ಸ್ವಲ್ಪ ಮಸಾಲೆ ಮತ್ತು ಸಿಕ್ಕಾ ಪಟ್ಟೆ ಕನ್ಫ್ಯೂಷನ್ ಇದ್ದ ಈ ಚಿತ್ರ ಇನ್ನೂ ಕೆಲವರಿಗೆ ಅರ್ಥ ಆಗ್ದೇ ಇರೋದು ಉಪೇಂದ್ರ ರವರ ವಿಶೇಷತೆ.
ಹೀಗೆ ಉಪೇಂದ್ರ ರವರು ನಿರ್ದೇಶನ ಮಾಡುತ್ತಾರೆ ಎಂದರೆ ಇಂದಿಗೂ ಅಷ್ಟೇ ಕ್ರೇಜ್ ಇಟ್ಟು ಕೊಂಡು ಅಭಿಮಾನಿಗಳು ಕಾಯುತ್ತಾರೆ. ಈ 8 ಚಿತ್ರಗಳು ಮತ್ತೆ ಮತ್ತೆ ಹೇಳುವುದು ಒಂದೇ – ಉಪೇಂದ್ರ ಒಬ್ಬ ಕಿಂಗ್ ಮೇಕರ್ ಎಂದು.
Get the Best of Metrosaga delivered to your inbox. Subscribe to Metrosaga and never miss an update from us.