ಕೆ.ಪಿ.ಜೆ.ಪಿ ಪಕ್ಷದ ಘೋಷಣೆಯ ನಂತರ ಉಪೇಂದ್ರ ಪಾಳ್ಯದಲ್ಲಿ ಏನು ನಡೆಯುತ್ತಿದೆ ಎಂಬ ಕುತೂಹಲ ಎಲ್ಲರ ಮನದಲ್ಲಿ ಮನೆಮಾಡಿದೆ. ಒಂದು ಕಡೆ ಮೊದಲ ಬಾರಿಗೆ ರಾಜಕೀಯ ವಿಚಾರವಾಗಿ ಕಣಕ್ಕಿಳಿಯಲಿರುವ ಉಪೇಂದ್ರ ಒಂದು ಕಡೆ ಆದರೆ ಇನ್ನೊಂದು ಕಡೆ ಹೇಗೆ ಇವರು ಚುನಾವಣೆಗೆ ತಾಯಾರಾಗುತ್ತಿದ್ದ್ದಾರೆ ಎಂಬ ಪ್ರಶ್ನೆ ಎಲ್ಲರಲ್ಲೂ ಸಹಜವಾಗಿ ಮೂಡಿದೆ. ಇತ್ತೀಚೆಗೆ ಪಕ್ಷದ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ ಕೆ.ಪಿ.ಜೆ.ಪಿ ಪಕ್ಷ, ಹೊಸ ಭರವಸೆಯನ್ನು ಮೂಡಿಸಿರುವದಂತೂ ನಿಜ. ಈ ವಿಷಯವಾಗಿ ಉಪೇಂದ್ರ ಅವರು ‘ಒನ್ ಇಂಡಿಯಾ ‘ ಗೆ ನೀಡಿದ ಸಂದರ್ಶನದ ಭಾಗವನ್ನು ನಿಮ್ಮ ಮುಂದೆ ಇಡಲು ಪ್ರಯತ್ನಿಸಿದ್ದೇವೆ.
ದೊಡ್ಡ ಪಕ್ಷಗಳ ಆರ್ಭಟದ ಮಧ್ಯೆ ಉಪೇಂದ್ರರ ಪಕ್ಷವು ಹೇಗೆ ಜನರನ್ನು ತಲುಪುತ್ತಿದೆ?
ಹಾಗೆ ನೋಡಿದರೆ ಮೈಲೇಜ್ ಸ್ವಲ್ಪ ಕಮ್ಮಿ ಅಂತ ನೇ ಭಾವಿಸಿದರೂ ಇದನ್ನು ನಾನು ಮೊದಲೇ ಊಹಿಸಿದ್ದೆ. ಪ್ರತಿ ಬಾರಿ, ಹೇಳುವ ವಿಚಾರವನ್ನು ಆಳವಾಗಿ ಹೇಳುವ ಪ್ರಯತ್ನ ಮಾಡುತ್ತಿದ್ದೇವೆ. ಹೇಳುವ ರೀತಿ ಮತ್ತು ಬಗೆಯ ಬಗ್ಗೆ ಆಲೋಚನೆ ನಡೆಸಿದ್ದೇವೆ ಮತ್ತು ಆ ರೀತಿ ಹೇಳುತ್ತೇವೆ.
ಪಕ್ಷದ ಕೆಲಸದ ಹೇಗೆ ಸಾಗುತ್ತಿದೆ?
ಮಾಹಿತಿ ಸಂಗ್ರಹಣೆ ಕೆಲಸ ನಡೆಯುತ್ತಿದೆ. ಜನರ ಮುಂದೆ ಬೊಗಳೆ ಬಿಡಲು ಆಗುವುದಿಲ್ಲ, ಆದ ಕಾರಣ ಸೂಕ್ತ ಮಾಹಿತಿ ಇಟ್ಟುಕೊಂಡು ಜನರ ಮುಂದೆ ಬರಲು ನಿರ್ಧರಿಸಿದ್ದೇವೆ. ಹಲವು ವೆಬ್ಸೈಟ್ ಗಳ ಮೂಲಕ ಮಾಹಿತಿ ಸಂಗ್ರಹಣೆ ಆಗುತ್ತಿದೆ ಮತ್ತು ಇಲಾಖೆಯ ಹಿರಿಯ ಅಧಿಕಾರಿಗಳು, ವೈದ್ಯರು, ಮತ್ತು ಶಿಕ್ಷಣ ತಜ್ನ್ಯರನ್ನು ಭೇಟಿ ಮಾಡಿ ವ್ಯವಸ್ಥೆಯ ಬಗ್ಗೆ ತಿಳಿದು ಕೊಳ್ಳುತ್ತಿದ್ದೇವೆ.
ನಿಮ್ಮ ಪಕ್ಷ ಸಲಹೆಗಳಿಗೆ ಓಪನ್ ಇದೆಯಾ?
ಹೌದು. ಮೊದಲಿನಿಂದಲೂ ನಾನು ಸಲಹೆಗಳಿಗೆ ಮುಕ್ತ ಆಹ್ವಾನವನ್ನು ನೀಡಿದ್ದೇನೆ. ಯಾರು ಬೇಕಾದರೂ ತಮ್ಮ ಸಲಹೆಗಳನ್ನು ಕೊಡಬಹುದು ಮತ್ತು ನಾವು ಅದನ್ನು ಪರಿಗಣಿಸುತ್ತೇವೆ. ಇದರ ಹೊರತಾಗಿ ಐ.ಎ.ಸ್ ಮತ್ತು ಐ.ಪಿ.ಸ್ ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸಿದ್ದೇವೆ ಮತ್ತು ಸೂಕ್ತ ಸಲಹೆಗಳನ್ನು ಪಡೆಯುತ್ತಿದ್ದೇವೆ.
ಪಕ್ಷದ ಆರಂಭದಿಂದ ನೀವು ಕಂಡ ವ್ಯಕ್ತಿಗಳ ಬಗ್ಗೆ, ಎದುರಿಸಿದ ಘಟನೆಗಳ ಬಗ್ಗೆ ಹೇಳುತ್ತೀರಾ?
ಘಟನೆಗಳು ನೂರಾರು. ಪಕ್ಷದ ಘೋಷಣೆಯ ಸಮಯದಿಂದ ಹಿಡಿದು ಅಪ್ಲಿಕೇಶನ್ ಮಾಡುವುದರಿಂದ, ಒಳ್ಳೆ ಸ್ಪಂದನೆ ಸಿಕ್ಕಿದೆ. ವ್ಯಕ್ತಿಗಳ ಹೆಸರಿನ ಪಟ್ಟಿ ತುಂಬಾ ದೊಡ್ಡಗಿದೆ ಮತ್ತು ಎಲ್ಲರನ್ನೂ ನೆನಪಿಸಿ ಕೊಳ್ಳಬೇಕಾಗುತ್ತದೆ. ಒಂದೊಂದು ಹಂತದಲ್ಲಿ ಒಬ್ಬಬ್ಬರು ಜೊತೆಯಾಗಿರುವುದು ವಿಶೇಷ.
ಓದಿ – ಉಪೇಂದ್ರರ ಪಕ್ಷದ ಪ್ರಣಾಳಿಕೆಯನ್ನು ನೋಡಿ ಬೆಚ್ಚಿ ಬಿದ್ದರಾ ರಾಜ್ಯದ ಮೋದಿ ಭಕ್ತರು??
ನಿಮ್ಮ ಪಕ್ಷವು ನಗರದಲ್ಲಿ ಹೆಚ್ಚು ಮತ ಸೆಳೆಯುವ ಬಿ.ಜೆ.ಪಿ ಗೆ ಹೊಡೆತ ಕೊಡುವ ಮಾತಿದೆ. ಇದರ ಬಗ್ಗೆ?
ನನಗೆ ಯಾರ ಮತವನ್ನೂ ಕೀಳುವ ಆಲೋಚನೆ ಇಲ್ಲ. ಹಾಗೆ ಮಾಡುವ ಹಾಗಿದ್ದರೆ ನಾನು ಇಲ್ಲಿಗೆ ಬರುತ್ತಲೇ ಇರಲಿಲ್ಲ. ನನ್ನ ಉದ್ದೇಶ ಯಾವುದಾದರೂ ಒಂದು ಪಕ್ಷಕ್ಕೆ ಅಧಿಕಾರ ಸಿಗಬೇಕು. ಅಂಥ ವ್ಯವಸ್ಥೆಯನ್ನು ಹಾಳು ಮಾಡುವ ಉದ್ದೇಶವಿಲ್ಲ.
ಜನರಿಂದ ನೀವು ಏನನ್ನು ನಿರೀಕ್ಷೆ ಮಾಡುತ್ತಿದ್ದೀರಿ?
ನಾನೊಂದು ಅಡುಗೆ ಮಾಡಿದ್ದೀನಿ. ಒಂದು ಸ್ಪೂನ್ ನಲ್ಲಿ ತಿಂದು ರುಚಿ ನೋಡಿ, ಹೇಗಿದೆ ಅಂತ ಹೇಳಿ. ನಿಮ್ಮೆಲ್ಲರ ಅಭಿಪ್ರಾಯ ತಿಳಿಸಿ. ಇಷ್ಟವಾದರೆ ಮತ ಹಾಕಿ. ನಾಲ್ಕು ಜನಕ್ಕೆ ತಿಳಿಸಿ.
ನಿಮ್ಮ ಪಕ್ಷ ಜನರನ್ನು ತಲುಪುತ್ತಿದೆ ಅಂತ ನಿಮಗೆ ಅನ್ಸಿದೆಯಾ? ಕೆ.ಪಿ.ಜೆ.ಪಿ ಯಾ ಸ್ಟ್ರಾಟೆಜಿ ಏನು ?
ಜನರಿಗೆ ತಲುಪುವುದು ಒಂದು ಬಗೆ, ತಲುಪಿದಂತೆ ತೋರಿಸಿಕೊಳ್ಳುವುದು ಒಂದು ಬಗೆ. ತುಂಬ ವರ್ಷದಿಂದ ನಡೆದುಕೊಂಡು ಬಂದಿರುವುದು ತೋರಿಸಿಕೊಳ್ಳುವುದೇ. ಅಂದಹಾಗೆ ಎಷ್ಟು ಕೆಲಸ ಮಾಡಿದ್ದಾರೆ, ಈ ಬಗ್ಗೆ ದಾಖಲೆ ಮುಂದಿಟ್ಟಿದ್ದಾರಾ? ಎಷ್ಟು ಬಜೆಟ್ ಇತ್ತು, ಖರ್ಚಾಗಿದ್ದೆಷ್ಟು ಇದೆಲ್ಲ ತಿಳಿಸಬೇಕು ಅಲ್ವಾ?
ಕಂಟೆಂಟ್ ಗಟ್ಟಿ ಇದ್ದರೆ ಜನರೇ ಅದನ್ನು ತೆಗೆದುಕೊಂಡು ಹೋಗ್ತಾರೆ. ನಮ್ಮ ಉದ್ದೇಶ- ವಿಚಾರ ಗಟ್ಟಿಯಿದೆ. ಅದು ಇಷ್ಟವಾದರೆ ಅವರೇ ಮುಂದಕ್ಕೆ ತಲುಪಿಸುತ್ತಾರೆ. ನಮಗೆ ಅಬ್ಬರ ಬೇಡ. ವಿಚಾರ ಬೇಕು.
ನೀವು ಯಾವ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತೀರಾ? ಕ್ಯಾಂಡಿಡೇಟ್ಸ್ ಯಾವಾಗ ಅನೌನ್ಸ್ ಮಾಡುತ್ತೀರಾ?
ಅದಕ್ಕಿನ್ನೂ ಸಮಯವಿದೆ. ನನ್ನ ಚುನಾವಣೆ ಕ್ಷೇತ್ರದ ಬಗ್ಗೆ ನಿರ್ಧರಿಸಿಲ್ಲ. ಮೊದಲು ಹೊಸಬರಿಗೆ, ಸಮರ್ಥರಿಗೆ ಅವಕಾಶ. ನಂತರ ಉಳಿದ ಕ್ಷೇತ್ರದಲ್ಲಿ ನಾನು ಸ್ಪರ್ಧೆ ಮಾಡುತ್ತೇನೆ. ಕ್ಯಾಂಡಿಡೇಟ್ ಘೋಷಣೆ ಸಧ್ಯದಲ್ಲೇ ಆಗುತ್ತದೆ.
ಕೃಪೆ: ಒನ್ ಇಂಡಿಯಾ