ನಮ್ಮೊಳಗಿನ ತಾಕತ್ತು ಗೊತ್ತಾಗಬೇಕೆಂದಾದರೆ ಬೆಟ್ಟಗುಡ್ಡಗಳನ್ನು ಹತ್ತಬೇಕು! ಹತ್ತುವುದು ಎಂದರೆ ಯಾವುದೇ ವಾಹನದಲ್ಲಿ ಅಲ್ಲ, ಚಾರಣ ಮಾಡಿ. ಯಾವುದೇ ಬೆಟ್ಟವನ್ನು ಏರಿ ಅಲ್ಲಿನ ಸೊಬಗನ್ನು ಸವಿದಾಗ ಉಂಟಾಗುವ ಒಂದು ಸಾರ್ಥಕತೆಯ ಭಾವವನ್ನು ಅನುಭವಿಸಿಯೇ ತಿಳಿಯಬೇಕು. ಅದರಲ್ಲೂ ಬೆಟ್ಟವನ್ನು ಹೇಗೋ ಹತ್ತಿಬಿಡಬಹುದು ಇಳಿಯುವುವಾಗ ಮಾತ್ರ ಕಾಲುಗಳು ಮಾತಡತೊಡಗುತ್ತವೆ. ಹೀಗಾಗಿ ಹತ್ತಿ ಇಳಿಯುದು ಅನ್ನುವುದೇ ಸೂಕ್ತ. ಅಂತಹ ಎಷ್ಟೋ ಚಾರಣ ತಾಣಗಳು ಕರ್ನಾಟಕದಲ್ಲಿ ಹೇರಳವಾಗಿವೆ. ಸಮಯದ ಅಭಾವದಿಂದಲೋ ಇಲ್ಲವೇ ಇಚ್ಚಾ ಶಕ್ತಿಯ ಕೊರತೆಯಿಂದಲೋ ಅವುಗಳನ್ನು ಅಳೆಯುವ ಗೋಜಿಗೆ ಹೋಗದೆ ನಮಗೆ ನಾವೇ ಮೋಸ ಮಾಡಿಕೊಳ್ಳುತ್ತೇವೆ! ಅಂತಹ ಕೆಲವು ತಾಣಗಳ ಮಾಹಿತಿ ಇಲ್ಲಿದೆ.
ಮುಳ್ಳಯ್ಯನ ಗಿರಿ
ಗಿರಿಗಳಿಂದಲೇ ಆವೃತವಾಗಿರುವ ಚಿಕ್ಕಮಗಳೂರಿನಲ್ಲಿ ಇರುವ ಈ ಬೆಟ್ಟ ರಮಣೀಯವಾಗಿದೆ. ಇದರ ಪದತಲದಲ್ಲಿ ಚಿಕ್ಕಮಗಳೂರು ಇದೆ. ೧೯೩೦ ಮೀಟರ್ (೬೩೧೭ ಅಡಿ) ಎತ್ತರದಲ್ಲಿರುವ ಮುಳ್ಳಯ್ಯನ ಗಿರಿ ಕರ್ನಾಟಕದ ಅತಿ ಎತ್ತರದ ಶಿಖರ ಎಂಬುದು ಎಷ್ಟೋ ಜನರಿಗೆ ಗೊತ್ತಿಲ್ಲ. ವೈವಿಧ್ಯಮಯವಾದ ಸಸ್ಯ ಹಾಗೂ ಪ್ರಾಣಿ ಸಂಕುಲಗಳಿಗೆ ನೆಲೆಯಾಗಿರುವ ಈ ತಾಣ ಚಾರಣಕ್ಕೆ ಹೇಳಿಮಾಡಿಸಿದಂತಿದೆ. ಚಾರಣ ಮಾಡಲು ಸರ್ಪದ ಹಾದಿ ಎನ್ನುವ ಮತ್ತೊಂದು ಕಾಲು ದಾರಿ ಕೂಡ ಇದೆ. ದೇವಾಲಯದಿಂದ ಸ್ವಲ್ಪ ಕೆಳಗೆ ಹೋದರೆ ಎರಡು ನೈಸರ್ಗಿಕ ಗುಹೆಗಳಿವೆ. ಇವುಗಳಲ್ಲಿ ತೆರಳಿದರೆ ಮುಳ್ಳಯ್ಯ ಸ್ವಾಮಿಗಳ ದೇವಾಲಯದ ಗರ್ಭ ಗುಡಿಯವರೆಗೆ ಹೋಗುತ್ತದೆ ಎಂದು ಪ್ರತೀತಿ. ಮುಳ್ಳಯ್ಯನಗಿರಿ ಬೆಟ್ಟದಿಂದ ಕಾಣುವ ನೋಟವು ಬಹು ಸುಂದರ. ಇಲ್ಲಿಂದ ಹತ್ತಿರದಲ್ಲೇ ಕುದುರೆಮುಖ ಹಾಗೂ ಕೆಮ್ಮಣ್ಣುಗುಂಡಿ ಪರ್ವತಗಳೂ ಇವೆ.
ನಂದಿ ಬೆಟ್ಟ
ಬೆಂಗಳೂರಿಗರ ಹೃದಯಕ್ಕೆ ತುಂಬಾ ಹತ್ತಿರ ಈ ಬೆಟ್ಟ. ಯಾಕಂದರೆ ಬೆಂಗಳೂರಿಗೂ ಇದು ತುಂಬಾ ಹತ್ತಿರದಲ್ಲಿದೆ (೪೫ ಕಿಲೋಮೀಟರು). ನಂದಿ ಬೆಟ್ಟ ಅಥವಾ ನಂದಿ ದುರ್ಗ ಅಂತ ಕರೆಸಿಕೊಳ್ಳುವ ಇಲ್ಲಿ ಒಂದು ಪುರಾತನ ಕಾಲದ ಕೋಟೆ ಇದೆ. ಇದು ಭಾರತದ ದಕ್ಷಿಣಭಾಗದಲ್ಲಿರುವ ಕರ್ನಾಟಕ ರಾಜ್ಯದ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಇರುವ ಗಿರಿಧಾಮ. ಚಿಕ್ಕಬಳ್ಳಾಪುರ ಪಟ್ಟಣದಿಂದ ೧೦ ಕಿ.ಮಿ ದೂರದಲ್ಲಿದೆ. ಈ ಬೆಟ್ಟವು ಮೂರು ಪಟ್ಟಣಗಳ ಮಧ್ಯೆ ನೆಲೆಸಿದೆ. ಚಾರಣಕ್ಕೋ ಯೋಗ್ಯವಾಗಿರುವ ಈ ಬೆಟ್ಟದಲ್ಲಿ ಜನರು ಯಾವಾಗಲೂ ಕಿಕ್ಕಿರಿದು ತುಂಬಿರುತ್ತಾರೆ.
ಸ್ಕಂದಗಿರಿ
ನಂದಿಬೆಟ್ಟಕ್ಕೆ ಹತ್ತಿರದಲ್ಲೇ ಇರುವ ಈ ಬೆಟ್ಟ ಚಾರಣಕ್ಕೆ ಹೇಳಿ ಮಾಡಿಸಿದ್ದು. ಕಡಿದಾದ ರಸ್ತೆಯಲ್ಲಿ ನಡೆದು ಶಿಖರಕ್ಕೆ ತಲುಪಿದರೆ ಮುಂಜಾನೆಯ ದಟ್ಟ ಮೋಡಗಳು ಸುತ್ತಲೂ ಆವರಿಸಿಕೊಂಡಿರುವ ದೃಶ್ಯ ನೋಡಿದವರೇ ಪುಣ್ಯವಂತರು. ಅಕ್ಟೋಬರ್ – ನವೆಂಬರ್ ಸಮಯದಲ್ಲಿ ಈ ರೀತಿಯ ದೃಶ್ಯ ತುಂಬಾ ಸಾಮಾನ್ಯ. ಆದೆರೆ ಕೆಲವು ಸಲ ಅದು ಕಾಣದೆ ನಿರಾಸೆಯನ್ನೂ ಉಂಟು ಮಾಡುತ್ತದಾದರೂ ಅಲ್ಲಿಂದ ಕಾಣುವ ಪಕ್ಷಿನೋಟ ಅದ್ಭುತ.
ಬಿಳಿಗಿರಿರಂಗನ ಬೆಟ್ಟ
ಬೆಂಗಳೂರಿನಿಂದ 240 ಕಿ.ಮೀಟರ್ ದೂರದಲ್ಲಿರುವ ಬಿಳಿಗಿರಿ ರಂಗನ ಬೆಟ್ಟ, ಸಮುದ್ರ ಮಟ್ಟದಿಂದ 1552 ಮೀಟರ್ ಎತ್ತರದಲ್ಲಿದೆ. ಈ ಕ್ಷೇತ್ರಕ್ಕೆ ಬಿಳಿಗಿರಿ ಎಂದು ಹೆಸರು ಬರಲು ಬೆಟ್ಟದಲ್ಲಿ ಬಿಳಿಯ ಬಣ್ಣದ ಶಿಲೆಗಳಿರುವುದೇ ಕಾರಣ. ನಿಸರ್ಗರಮಣೀಯವಾದ ಬೆಟ್ಟದಲ್ಲಿ ನವರಂಗ, ಮುಖಮಂಟಪದಿಂದ ಕೂಡಿದ ಬಿಳಿಗಿರಿರಂಗನ ಪುರಾತನ ದ್ರಾವಿಡಶೈಲಿಯ ದೇವಾಲಯವಿದೆ. ಬೆಟ್ಟವನ್ನು ಪ್ರವೇಶಿಸುತ್ತಲೇ ಅಪ್ಪಿಕೊಳ್ಳುವ ತಂಗಾಳಿ ಮನಸೂರೆಗೊಳ್ಳುತ್ತದೆ. ಎಲ್ಲಿ ನೋಡಿದರೂ ಕಾಣುವ ರಮಣೀಯ ಪ್ರಕೃತಿ ಸೌಂದರ್ಯ, ಕಾಡಿನಂಚಿನ ಸೋಲಿಗರ ಜೋಪಡಿಗಳು, ಅರಣ್ಯದಲ್ಲಿ ಚಂಗನೆ ಓದುವ ಜಿಂಕೆಗಳು ಮನಸ್ಸಿಗೆ ಮುದ ನೀಡುತ್ತವೆ.
ಕೊಡಚಾದ್ರಿ
ಕೊಡಚಾದ್ರಿ ಬೆಟ್ಟ ಸಾಲುಗಳು ಕರ್ನಾಟಕ ರಾಜ್ಯದ ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ಇವೆ. ಇದರಲ್ಲಿ ಕೊಡಚಾದ್ರಿ ಬೆಟ್ಟದ ಎತ್ತರ ಸಮುದ್ರ ಮಟ್ಟದಿಂದ ಸುಮಾರು ೧೩೪೩ ಮೀ. ಕೊಡಚಾದ್ರಿ ಬೆಟ್ಟವು ಪ್ರಸಿದ್ದ ಯಾತ್ರಾ ಸ್ಥಳವಾದ ಕೊಲ್ಲೂರು ಮೂಕಾಂಬಿಕ ದೇವಸ್ಥಾನದ ಹಿನ್ನೆಲೆಯಲ್ಲಿ ಇದ್ದು ಪ್ರಕೃತಿ ಪ್ರಿಯರಿಗೆ ಹಾಗು ಚಾರಣಿಗರಿಗೆ ಹೇಳಿ ಮಾಡಿಸಿದ ಜಾಗ. ಕೊಡಚಾದ್ರಿಯ ಸುತ್ತ ಮುತ್ತ ಇರುವುದು ಸಹ್ಯಾದ್ರಿಯ ವಿಶಿಷ್ಟ ನಿತ್ಯ ಹರಿದ್ವರ್ಣ ಅರಣ್ಯ. ಭಾರತದ ಅತಿ ಹೆಚ್ಚು ಮಳೆ ಬೀಳುವ ಈ ಪರ್ವತ ಶ್ರೇಣಿಯಲ್ಲಿ ಬೆಳೆದಿರುವ ಮಳೆಕಾಡು ರಮಣೀಯವಾಗಿದೆ. ಕೊಡಚಾದ್ರಿಯ ತುದಿಯಲ್ಲಿ ನಿಂತು ನೋಡಿದರೆ, ನಾಲ್ಕೂದಿಕ್ಕಿನಲ್ಲಿ ನಿಬಿಡಾರಣ್ಯವು ಹರಡಿರುವ ದೃಶ್ಯ ಕಾಣುತ್ತದೆ.
ಭೀಮನ ಗುಡ್ಡ
ಶಿರಸಿಯಿಂದ ಸುಮಾರು ೨೯ ಕಿಲೋಮೀಟರು ದೂರದ ಲಕುಂದ ಹಳ್ಳಿಯ ಹತ್ತಿರವಿರುವ ಈ ಬೆಟ್ಟದಿಂದ ಕಾಣುವ ವಿಹಂಗಮ ನೋಟ ತುಂಬಾ ಅಪರೂಪದ್ದು. ಈ ಬೆಟ್ಟದಿಂದ ಸುತ್ತಲೂ ಕಾಣುವ ಅರಣ್ಯ ಮನಮೋಹಕ. ಬಳುಕುತ್ತ ಸಾಗುವ ಅಘನಾಶಿನಿ ನದಿಯ ನೋಟ ಮೈಮರೆಸುತ್ತದೆ. ಇದಲ್ಲದೆ ಸೂರ್ಯಾಸ್ತ ಹಾಗೂ ಸೂರ್ಯೋದಯದ ದೃಶ್ಯವನ್ನೂ ಇಲ್ಲಿ ಕಣ್ತುಂಬಿಕೊಳ್ಳಬಹುದು. ಮಳೆಗಾಲದ ಸಮಯದಲ್ಲಿ ಹಸಿರನ್ನು ಹೊದ್ದು ನಳನಳಿಸುವ ಈ ಪ್ರದೇಶ ಚಳಿಗಾಲದ ಸಮಯದಲ್ಲಿ ಇಬ್ಬನಿಯಿಂದ ಆವೃತವಾಗಿ ಇನ್ನೊಂದು ರೀತಿಯ ಚೆಲುವನ್ನು ಸೃಷ್ಟಿಸುತ್ತದೆ!
ದೇವರಾಯನದುರ್ಗ
ದೇವರಾಯನದುರ್ಗ ತುಮಕೂರಿನಿಂದ ೧೬ ಕಿ.ಮೀ. ದೂರದಲ್ಲಿದೆ. ತುಮಕೂರಿನಿಂದ ೧೦ ಕಿ.ಮೀ. ದಾಟಿದರೆ , ದೇವರಾಯನದುರ್ಗ ಕಾಡು ಗೋಚರಿಸುತ್ತದೆ. ಹತ್ತಿರದಲ್ಲೆ ದುರ್ಗದಹಳ್ಳಿ ಎಂಬ ಹಳ್ಳಿಯಲ್ಲಿ ೮ ನೇ ಶತಮಾನದ ಶಂಕರಾಚಾರ್ಯರು ಕಟ್ಟಿರುವ ಸುಂದರವಾದ ದೇವಾಲಯವಿದೆ. ಹಾಗೆಯೇ ಸಮೀಪದಲ್ಲಿ “ನಾಯಕನ ಕೆರೆ” ಎಂಬ ಸುಂದರ ಮತ್ತು ಮನೋಹರವಾದ ಕೆರೆ ಇದೆ. ಇಲ್ಲಿನ ಬೆಟ್ಟದ ಮೇಲೆ ಯೋಗ ನರಸಿಂಹ ಮತ್ತು ಭೋಗ ನರಸಿಂಹರ ದೇವಾಲಯಗಳಿವೆ, ಹಳೆಯ ಕೋಟೆ ಇದೆ. ದೇವರಾಯನದುರ್ಗದ ಸಮೀಪವಿರುವ ನಾಮದ ಚಿಲುಮೆ ಒಂದು ಪ್ರೇಕ್ಷಣೀಯ ಸ್ಥಳವಾಗಿದೆ.
ಶ್ರೀ ರಾಮದೇವರ ಬೆಟ್ಟ
ರಾಮನಗರದಿಂದ ಸುಮಾರು ೩ ಕಿಲೋಮೀಟರ್ ದೂರದಲ್ಲಿದೆ. ಈ ಬೆಟ್ಟವು ಅರಣ್ಯಪ್ರದೇಶದ ವ್ಯಾಪ್ತಿಗೆ ಬರುತ್ತದೆ. ರಮೇಶ್ ಸಿಪ್ಪಿ ನಿರ್ದೇಶನದ ಪ್ರಸಿದ್ಧ ಚಿತ್ರ ಶೋಲೆಯನ್ನು ಇಲ್ಲಿಯೇ ಚಿತ್ರಿಕರಿಸಲಾಗಿದೆ. ರಾಮದೇವರ ಬೆಟ್ಟದಿಂದ ೨೦ ಚದುರ ಕಿಲೋಮೀಟರು ವ್ಯಾಪ್ತಿಯ ಪ್ರದೇಶವನ್ನು ರಣಹದ್ದುಗಳ ರಕ್ಷಿತ ತಾಣವೆಂದು ಘೋಷಿಸಲಾಗಿದೆ.
ಇನ್ನೂ ಈ ಪಟ್ಟಿಗೆ ಬೆಂಗಳೂರು ಸುತ್ತ ಮುತ್ತಲಿನ ಮಾಕಳಿದುರ್ಗ ಮತ್ತು ಕುಂತಿ ಬೆಟ್ಟ ವನ್ನೂ ಸಹ ಸೇರುತ್ತವೆ. ನಿಸರ್ಗದ ಒಡಲಲ್ಲಿ ಹಾಯಾಗಿರುವ ಈ ತಾಣಗಳನ್ನು ಹೆಚ್ಚು ಹೆಚ್ಚು ಪ್ರವಾಸಿಗರು ಭೇಟಿಕೊಟ್ಟು ಅವುಗಳ ಶಾಂತಿಗೆ ಭಂಗ ಮಾಡುವುದೂ ಉಂಟು. ಹಾಗೆ ಹೋದ ಪ್ರವಾಸಿಗರು ಎಲ್ಲೆಂದರಲ್ಲಿ ತಮ್ಮ ಜೊತೆಗೆ ಒಯ್ದ ಪ್ಲಾಸ್ಟಿಕ್ ಹೆಮ್ಮಾರಿ ಹಾಗೂ ಇತರ ಕಸಗಳನ್ನು ಅಲ್ಲಿಗೂ ಪಸರಿಸಿ ವಾಪಸಾಗುತ್ತಾರೆ. ಇದರಿಂದ ಅಲ್ಲಿನ ಪರಿಸರ ಹಾಳಾಗುತ್ತದೆ. ಅಷ್ಟೇ ಅಲ್ಲದೆ ಕುಡಿತ ಮೊಜಿಗೂ ಈ ತಾಣಗಳನ್ನು ಬಳಸಿಕೊಂಡು ಇನ್ನೂ ಹೊಲಸಾಗಿಸುತ್ತಾರೆ. ಸರಕಾರ ಇಂತಹ ತಾಣಗಳಲ್ಲಿ ಸೂಕ್ತ ಕಸವಿಲೆವಾರಿಯ ವ್ಯವಸ್ಥೆ ಮಾಡಿದರೂ ಕೂಡ ಈ ಸುಂದರ ಪರಿಸರವನ್ನು ಸಂರಕ್ಷಿಸುವ ಹೊಣೆ ನಮ್ಮೆಲ್ಲರದೇ ಅಲ್ಲವೇ?
ಓದಿ: 10 ಬಗೆಯ ಬಾಯಲ್ಲಿ ನೀರೂರಿಸುವಂತಹ ಉತ್ತರ ಕರ್ನಾಟಕದ ಸ್ಪೆಷಲ್ ತಿಂಡಿಗಳು – ತಿಂದವರೇ ಪುಣ್ಯವಂತರು