10 ಬಗೆಯ ಬಾಯಲ್ಲಿ ನೀರೂರಿಸುವಂತಹ ಉತ್ತರ ಕರ್ನಾಟಕದ ಸ್ಪೆಷಲ್ ತಿಂಡಿಗಳು – ತಿಂದವರೇ ಪುಣ್ಯವಂತರು

0
19005
north karnataka special

ಉತ್ತರ ಕರ್ನಾಟಕದಲ್ಲಿ ಹುಟ್ಟಿ-ಬೆಳೆದು ಕಾರಣಾಂತರಗಳಿಂದ ಬೆಂಗಳೂರಿಗೋ ಇಲ್ಲವೇ ಪ್ರಪಂಚದ ಇತರ ಯಾವುದೇ ಜಾಗಕ್ಕೆ ವಲಸೆ ಹೋದವರಿಗೆ, ಅಲ್ಲಿನ ತಿಂಡಿ ತಿನಿಸುಗಳ ಕೊರತೆ ತೀವ್ರವಾಗಿ ಕಾಡುತ್ತದೆ. ಅದು ಮಿರ್ಚಿ-ಬಜಿ ಇರಬಹುದು, ಎಣ್ಣಗಾಯಿ ಪಲ್ಯಾ ಅಥವಾ ಶೇಂಗಾ ಹಿಂಡಿ! ಎಲ್ಲವೂ ಒಂಥರಾ ಅಡಿಕ್ಷನ್ ಇದ್ದಂಗೆ. ಅಲ್ಲಿನ ಖಾದ್ಯಗಳ ಒಂದು ಸಾಮಾನ್ಯ ಲಕ್ಷಣ ಅಂದರೆ ಖಾರ ಮತ್ತು ಬೆಳ್ಳುಳ್ಳಿ. ಅಲ್ಲಿನ ವಿಶೇಷ ಪದಾರ್ಥಗಳಲ್ಲಿ ಕೆಲವು ಇಲ್ಲಿವೆ.

ಜೋಳದ ರೊಟ್ಟಿ:

ತಲತಲಾಂತರದಿಂದ ಉಪಯೋಗಿಸಲ್ಪಡುವ ಜೋಳದ ರೊಟ್ಟಿ ದೇಹಕ್ಕೂ ಒಳ್ಳೆಯದು ಹಾಗು ರುಚಿಯೂ ಹೌದು. ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಸಾದವರವರೆಗೆ ಎಲ್ಲರ ದೇಹ ಪ್ರಕೃತಿಗೂ ಒಗ್ಗುವಂತಹದು. ಇದು ತುಂಬಾ ಸರಳವಾಗಿ ಜೀರ್ಣವಾಗುವುದು ಅದಕ್ಕೆ ಕಾರಣ. ಜೋಳ ಅಷ್ಟೇ ಅಲ್ಲ, ಸಜ್ಜೆ ಹಾಗೂ ಎಳ್ಳು ಮಿಶ್ರಿತ ರೊಟ್ಟಿಯೂ ತುಂಬಾ ರುಚಿಕರವಾಗಿರುತ್ತೆ. ಮೆತ್ತಗಿನ ರೊಟ್ಟಿಯನ್ನು ಬೆಂಕಿಯಲ್ಲಿ ಹದವಾಗಿ ಸುಟ್ಟು ಗಟ್ಟಿ ಮಾಡುವ ರೊಟ್ಟಿಯನ್ನೂ ಕೂಡ ಮಾಡುತ್ತಾರೆ. ಅವಕ್ಕೆ ಕಡಕ್ ರೊಟ್ಟಿ ಅಥವಾ ಕಟಿ ರೊಟ್ಟಿ ಅಂತ ಹೆಸರು. ಅವನ್ನು ಕೆಲವು ತಿಂಗಳವರೆಗೂ ಇಟ್ಟು ತಿನ್ನಬಹುದು.

ರೊಟ್ಟಿಗೆ ಯಾವುದೇ ಪಲ್ಯ ಆದೀತು. ಅದರೂ ಬದನೆಕಾಯಿ, ಹೀರೆಕಾಯಿ, ಕೆಲವು ಸೊಪ್ಪಿನ ಹಾಗೂ ಕಾಳುಪಲ್ಯೆಗಳು ಇದರ ಜೊತೆಗೆ ತುಂಬಾ ಹೊಂದುತ್ತವೆ. ರೊಟ್ಟಿಯನ್ನು ಕೈಯಿಂದ ತಟ್ಟಿ ಮಾಡಿದರೇನೆ ಚೆನ್ನಾಗಿರುತ್ತದೆ. ಆದರೆ ಹಾಗೆ ಕೈಯಿಂದ ಮಾಡುವವರ ಸಂಖ್ಯೆ ಬರಬರುತ್ತ ಕಡಿಮೆಯಾಗುತ್ತಿದೆ. ಆ ಕಾರಣದಿಂದ ಈಗೀಗ ರೊಟ್ಟಿ ಮಾಡುವ ಯಂತ್ರಗಳು ಹೆಚ್ಚುತ್ತಿವೆ.

north karnataka special

ಎಣ್ಣೆಗಾಯಿ ಅಥವಾ ತುಂಬಗಾಯಿ ಪಲ್ಯ:

ಚಿಕ್ಕ ಎಳೆಯ ಬದನೇಕಾಯಿಗಳ ಹೊಟ್ಟೆ ಬಗೆದು ಅದರಲ್ಲಿ ಉಪ್ಪು-ಖಾರ-ಹಸಿಕೊಬ್ಬರಿಯನ್ನು ಬಳಸಿ ತಯಾರಿಸಿದ ಮಸಾಲೆಯನ್ನು ತುಂಬಿ, ಸ್ವಲ್ಪ ಜಾಸ್ತಿಯೇ ಅನ್ನುವಷ್ಟು ಎಣ್ಣೆ ಬಳಸಿ ತಯಾರಿಸುವ ಪಲ್ಯ ಇದು. ಜೋಳದ ರೊಟ್ಟಿಗೆ ತುಂಬಾ ಹತ್ತಿರದ ನೆಂಟ! ರೊಟ್ಟಿಯ ಜೊತೆಗೆ ಎಣ್ಣೆಗಾಯಿ ಪಲ್ಯ, ಜೊತೆಗೊಂದಿಷ್ಟು ಈರುಳ್ಳಿ, ಮೆಣಸಿನಕಾಯಿ, ಶೇಂಗಾ ಚಟ್ನಿ ಮತ್ತು ಶೇಂಗಾ ಎಣ್ಣೆ ಇದ್ದು ಬಿಟ್ಟರೆ ಸ್ವರ್ಗಕ್ಕೆ ಮೂರೆ ಗೇಣು.

north karnataka special

ಶೇಂಗಾ ಚಟ್ನಿ / ಹಿಂಡಿ

ಶೇಂಗಾ ಅಥವಾ ನೆಲಗಡಲೆಯನ್ನು ಒಳ್ಳಿನಲ್ಲಿ ಕುಟ್ಟಿ, ಖಾರದಪುಡಿ ಹಾಗೂ ಬೆಳ್ಳುಳ್ಳಿಯನ್ನು ಹದವಾಗಿ ಕಲಸಿ ಮಾಡುವ ಈ ಚಟ್ನಿ ಪುಡಿ ಎಲ್ಲಾ ರೊಟ್ಟಿ, ಅನ್ನದ ಜೊತೆಗೆ ಹೊಂದುತ್ತದೆ. ಇದರ ರುಚಿಯನ್ನು ತಿಂದವರೇ ಬಲ್ಲರು. ಇದನ್ನು ಒಳ್ಳಿನಲ್ಲಿ ಕುಟ್ಟಿ ಮಾಡಿದಾಗಿನ ರುಚಿ ಮಿಕ್ಸರಿನಲ್ಲಿ ಮಾಡಿದಾಗ ಬರುವುದಿಲ್ಲವಾದರೂ ಅದಕ್ಕೂ ಒಂದು ವಿಭಿನ್ನ ಬಗೆಯ ರುಚಿ ಇರುತ್ತದೆ. ಇದು ಯಾವುದೇ ಪಲ್ಯ ಇಲ್ಲದಿದ್ದಾಗಲೂ ಉಪಯೋಗಿಸುವಂತಹ ಒಂದು ಪದಾರ್ಥ.

north karnataka special
Source: Very good recipes

ರಂಜಕ

ಕೆಂಪು ಮೆಣಸಿನಕಾಯಿಯನ್ನು ಒಂದಿಷ್ಟು ಮೆಂತೆಯೊಂದಿಗೆ ರುಬ್ಬಿ ಮಾಡುವ ಚಟ್ನಿ ಇದು. ಇದನ್ನೂ ಕೂಡ ರೊಟ್ಟಿ ಹಾಗು ಅನ್ನದ ಜೊತೆಗೆ ಬಳಸಬಹುದು. ಇದರಲ್ಲಿ ಬಳಸುವ ಮೆಣಸಿನಕಾಯಿಯ ಮೇಲೆ ಇದರ ಖಾರದ ಪ್ರಮಾಣ ನಿರ್ಧಾರವಾಗುತ್ತದೆ. ಅತಿ ಖಾರ ತಿನ್ನುವವರು ರಂಜಕದ ಮೇಲೆ ತುಂಬಾ ಅವಲಂಬಿತರಾಗಿರುತ್ತಾರೆ.

north karnataka special
Source: UCBlog.info

ಮಂಡಿಗೆ

ಹೆಚ್ಚಾಗಿ ಮದುವೆಗಳಲ್ಲಿ ಮಾಡುವ ಈ ಸಿಹಿ ಪದಾರ್ಥ ತಿನ್ನಲು ತುಂಬಾ ರುಚಿಕರ. ಇದನ್ನು ತಯಾರಿಸಲು ತುಂಬಾ ಪರಿಣಿತ ಅಡಿಗೆಯವರು ಬೇಕು. ಹಿಟ್ಟಿನ ಕಣಕವನ್ನು ಕೈಯನ್ನೇ ಬಳಸಿ ತುಂಬಾ ದೊಡ್ಡ ವರ್ತುಲಾಕಾರಕ್ಕೆ ತರುವುದು ಅಷ್ಟು ಸುಲಭದ ಮಾತಲ್ಲ. ಕಬ್ಬಿಣದ ಬುಟ್ಟಿಯನ್ನು ಬೆಂಕಿಯ ಮೇಲೆ ಬುಡಮೇಲಾಗಿ ಇಟ್ಟು ಮಂಡಿಗೆಯನ್ನು ಬೇಯಿಸಲಾಗುತ್ತದೆ. ಇದೆ ಕಾರಣಕ್ಕೆ ಇದನ್ನು ಮಾಡುವುದು ಸ್ವಲ್ಪ ಕಷ್ಟದ ಕೆಲಸ. ತಿನ್ನುವುದು ಮಾತ್ರ ಸುಲಭ! ಇದರೊಟ್ಟಿಗೆ ತುಪ್ಪ, ಸಕ್ಕರೆ ಪುಡಿ ಹಾಗೂ ಹಾಲು ಹಾಕಿಕೊಂಡು ತಿನ್ನುವ ಸಂಭ್ರಮವನ್ನು ಅನುಭವಿಸಿಯೇ ತಿಳಿಯಬೇಕು. ಇದು ಧಾರವಾಡ-ಬೆಳಗಾವಿ ಸುತ್ತಮುತ್ತ ಹೆಚ್ಚು ಜನಪ್ರಿಯ.

north karnataka special
Source: Outlook

ಝುಣಕದ ವಡಿ

ಇದು ಸ್ವಲ್ಪಮಟ್ಟಿಗೆ ಗುಜರಾತಿನ ಧೋಕ್ಲಾವನ್ನು ಹೋಲುತ್ತದಾದರೂ ಇದರ ರುಚಿ ಅದಕ್ಕಿಂತ ಭಿನ್ನ. ಇದನ್ನೂ ಕೂಡ ಕಡಲೆ ಹಿಟ್ಟಿನಲ್ಲೇ ಮಾಡುತ್ತಾರೆ. ಝುಣಕ ಅನ್ನುವುದು ಕಡಲೆಹಿಟ್ಟಿನಲ್ಲೇ ಮಾಡಿದ ದ್ರವರೂಪದ ಪದಾರ್ಥವಾದರೆ ವಡೆ ಘನ ರೂಪದಲೀರುತ್ತದೆ. ಇದೆ ಕಾರಣಕ್ಕೆ ಈ ಹೆಸರು. ಇದನ್ನು ಹೆಚ್ಚಾಗಿ ರೊಟ್ಟಿ ಹಾಗೂ ಚಪಾತಿಯ ಜೊತೆಗೆ ತಿನ್ನಬಹುದು. ಬರಿಯ ವಡೆ ಕೂಡ ನಾಲಿಗೆಗೆ ರುಚಿಯಾಗಿರುತ್ತದೆ.

north karnataka special
Source: Youtube

ಮಿರ್ಚಿ-ಗಿರಿಮಿಟ್ಟು

ಉತ್ತರಕರ್ನಾಟಕಕ್ಕೆ ಕಳಸಪ್ರಾಯದಂತೆ ಇರುವ ತಿನಿಸೆಂದರೆ ಇದೆ! ಚುರುಮುರಿ ಅಥವಾ ಕಳ್ಳೆಪುರಿಗೆ ವಿಶೇಷವಾಗಿ ತಯಾರಿಸಿದ ಗೊಜ್ಜನ್ನು ಸೇರಿಸಿ ಗಿರಿ ಗಿರನೆ ಕಲಸಿ (ಅದಕ್ಕೆ ಗಿರಿಮಿಟ್ಟು ಅಂತಾರೇನೋ!), ಸ್ವಲ್ಪ ಪುಟಾಣಿ ಹಿಟ್ಟು ಬೆರೆಸಿದರೆ ಗಿರಿಮಿಟ್ಟು ರೆಡಿ. ಅದನ್ನು ಹಾಗೆಯೇ ತಿನ್ನುವುದು ಮಾಹಾಪಾಪ! ಅದರ ಜೊತೆಗೆ, ಮೆಣಸಿನಕಾಯಿಗೆ ಕಡಲೆಹಿಟ್ಟನ್ನು ಹಚ್ಚಿ ಕರಿದಿರುವ ಮಿರ್ಚಿಯ ಜೊತೆಗೆ ತಿಂದರೇನೆ ಮಜಾ. ಮಿರ್ಚಿಯನ್ನು ತಿಂದು ರೂಡಿಯಿಲ್ಲದವರು ಜೊತೆಗೆ ಕುಡಿಯಲು ನೀರಿಟ್ಟು ಕುಳಿತುಕೊಳ್ಳುವುದು ಒಳ್ಳೆಯದು. ಯಾಕಂದರೆ ಅಪ್ಪಿತಪ್ಪಿ ಉತ್ಸಾಹದಲ್ಲಿ ಬಾಯಲ್ಲಿ ಮಿರ್ಚಿಯಲ್ಲಿನ ಮೆಣಸಿನಕಾಯಿ ಕಡಿದುಬಿಟ್ಟರೆ ಗತಿ ಏನು?

north karnataka special

ಬದನೇಕಾಯಿ ಭಜಿ

ಬದನೆಕಾಯಿಯನ್ನು ವೃತ್ತಾಕಾರದಲ್ಲಿ ಹೆಚ್ಚಿ ಅದರ ಒಡಲಲ್ಲಿ ಖಾರದ ಮಸಾಲೆ ತುಂಬಿ ಕಡಲೆಹಿಟ್ಟಿನಲ್ಲಿ ಅದ್ದಿ ಎಣ್ಣೆಯಲ್ಲಿ ಕರಿದು ಮಾಡುವ ತಿನಿಸು. ಇದು ಗದಗಿನಲ್ಲಿ ತುಂಬಾ ವರ್ಲ್ಡ್ ಫೇಮಸ್! ಇದನ್ನು ಹಾಗೆಯೇ ತಿನ್ನಬಹುದು. ಜೊತೆಯಲ್ಲಿ ಗಿರಿಮಿಟ್ಟು, ಖಾರದ ಮಂಡಕ್ಕಿ ಇದ್ದರೆ ಇನ್ನೂ ಉತ್ತಮ.

ಶೇಂಗಾ ಹೋಳಿಗಿ:

ಶೇಂಗಾ ಅಥವಾ ನೆಲಗಡಲೆಯನ್ನು ಯಾವುದೇ ಪದಾರ್ಥಕ್ಕೆ ಹಾಕಿದರೂ ಅದರ ರುಚಿಯನ್ನು ಹೆಚ್ಚಿಸುವುದೇ ಅದರ ಮೂಲಗುಣ. ಅಂಥದರಲ್ಲಿ ಬೆಲ್ಲದ ಜೊತೆಗೆ ಸೇರಿಸಿದರಂತೂ ಇನ್ನೂ ಸ್ವಾದಿಷ್ಟ. ಶೇಂಗಾ ಹೋಳಿಗೆಯಲ್ಲಿ ಇದೆ ಜೋಡಿ ಇರುವುದರಿಂದಲೇ ಈ ಹೋಳಿಗೆ ಇಷ್ಟೊಂದು ಹಿಟ್! ಮೊದಲೆಲ್ಲ ಶೇಂಗಾ ಹೋಳಿಗೆಯನ್ನು ಶೀಗೆ ಹುಣ್ಣಿಮೆಯಲ್ಲಿ ಹೆಚ್ಚಾಗಿ ಮಾಡುತ್ತಿದ್ದರಾದರೂ ಈಗದು ಎಲ್ಲಾ ಸೀಸನ್ ಗಳಲ್ಲೂ ಲಭ್ಯ.

north karnataka special
Source: Tripoto

ಮಾದಲಿ/ಮಾದ್ಲಿ:

ಗೋದಿಯ ಚಪಾತಿಯನ್ನು ಪುಡಿ ಮಾಡಿ, ಬೆಲ್ಲ, ಶೇಂಗಾ, ಪುಟಾಣಿ ಮತ್ತು ಒಣ ಕೊಬ್ಬರಿಯನ್ನು ಬಳಸಿ ಮಾಡುವ ಸಿಹಿ ಪದಾರ್ಥವಿದು. ಮಾದಲಿಯನ್ನು ಉತ್ತರ ಕರ್ನಾಟಕದ ಜನರು ಹಬ್ಬ ಹರಿದಿನಗಳಲ್ಲಿ ಸಿಹಿತಿನಿಸಾಗಿ ತಯಾರಿಸುತ್ತಾರಾದರೂ ಸಾಮಾನ್ಯ ದಿನಗಳಲ್ಲೂ ಕೂಡ ಊಟದ ಜೊತೆಗೆ ತಿನ್ನಲು ಇಷ್ಟ ಪಡುತ್ತಾರೆ. ಚಪಾತಿ ಎಷ್ಟು ಹಳೆಯದಿರುತ್ತೋ ಅಷ್ಟು ಚೆನ್ನಾಗಿ ಮಾದಲಿಗೆ ರುಚಿ ಬರುತ್ತದೆ. ಇದೆ ಕಾರಣದಿಂದ ಕೆಲವೊಮ್ಮೆ ತಂಗಳು ಚಪಾತಿ ಕೂಡ ಮಾದ್ಲಿ ಆಗಿ ಬದಲಾಗಿ, ಬೆಂಗಳೂರಿಗರ ಮನೆಯ ತಂಗಳ ಅನ್ನದ ಚಿತ್ರಾನ್ನದಂತೆ ತಾಟಿನಲ್ಲಿ ವಿಜ್ರಂಭಿಸುತ್ತದೆ!

north karnataka special

ಇವು ಉತ್ತರ ಕರ್ನಾಟಕ ಭಾಗದ ವಿಶೇಷ ತಿನಿಸುಗಳಲ್ಲಿ ಕೆಲವು ಮಾತ್ರ. ಇಡಿ ಭಾರತ ದೇಶ ವೈವಿಧ್ಯಮಯವಾಗಿರುವಂತೆ ಕರ್ನಾಟಕದಲ್ಲೂ ಕೂಡ ತಿಂಡಿ ತಿನಿಸುಗಳ ಪ್ರಾದೇಶಿಕ ವಿಧಗಳು ಅನೇಕ. ಅದರಲ್ಲೂ ಉತ್ತರ ಕರ್ನಾಟಕದ ಜನತೆ ತಮ್ಮ ಸ್ವಂತಿಕೆಯ ಜೊತೆಗೆ ಸುತ್ತಲಿನ ರಾಜ್ಯಗಳ ವಿಶೇಷ ಭಕ್ಷ್ಯಗಳನ್ನು ಕೂಡ ತಮ್ಮದಾಗಿಸಿಕೊಂಡು ಇನ್ನೂ ಹಲವಾರು ಹೊಸ ಬಗೆಯ ತಿಂಡಿ ತಿನಿಸುಗಳನ್ನು ಸೃಷ್ಟಿ ಮಾಡಿ ಬಹು ವರ್ಷಗಳಿಂದ ಅವುಗಳನ್ನು ಆಸ್ವಾದಿಸುತ್ತಿದ್ದಾರೆ. ಉತ್ತರ ಕರ್ನಾಟಕಕ್ಕೆ ಹೋಗಿಯೂ ಈ ತಿನಿಸುಗಳನ್ನು ಚಪ್ಪರಿಸದೆ ಬಂದರೆ ನಿಮಗೇ ನಷ್ಟ ಅಷ್ಟೇ!

Featured image credits – Archana’s Kitchen.

Follow MetroSaga – Kannada on Facebook if you don’t want to miss our Kannada Articles.

Comments

comments

[jetpack_subscription_form]
SHARE
Previous article14 Popular Travel Destinations In North Karnataka You Should Definitely Explore
Next articleBenefits of using amber stone jewellery
mm
ಲೇಖಕರ ಹಲವಾರು ಹಾಸ್ಯ ಬರಹಗಳು ಹಾಗು ಕತೆಗಳು ನಾಡಿನ ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. 'ಎಲ್ಲರಂಥವನಲ್ಲ ನನ್ನಪ್ಪ' ಹಾಗು 'ಅಪ್ಪರೂಪ' ಇವರು ಸಂಪಾದಿಸಿದ ಕೃತಿಗಳು. ಸುಮಾರು ೨೦ ವರ್ಷ software ಉದ್ದಿಮೆಯಲ್ಲಿ ಭಾರತ ಹಾಗು ಅಮೆರಿಕೆಯಲ್ಲಿ ವಿವಿಧ ಹುದ್ದೆಗಳನ್ನು ನಿರ್ವಹಿಸಿದ ಇವರು ಕಳೆದ ಎರಡು ವರ್ಷಗಳಿಂದ ಜಲಕೃಷಿ/hydroponics ತರಬೇತಿ ನೀಡುವ 'ಬೆಳೆಸಿರಿ' ಸಂಸ್ಥೆಯನ್ನು ಹುಟ್ಟು ಹಾಕಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಸಿನಿಮಾ ಹಾಗೂ ರಂಗಭೂಮಿ ಇವರ ಇತರ ಹವ್ಯಾಸಗಳು.

LEAVE A REPLY

Please enter your comment!
Please enter your name here