ಈ ತಿಂಗಳು ನಡೆಯೋ ಎಸ್ ಎಸ್ ಎಲ್ ಸಿ ಪರೀಕ್ಷೆಗೆ ಮಂಡಳಿ ವಿಧಿಸಿರೋ ನಿಯಮಗಳ ಲಿಸ್ಟ್ ಇಲ್ಲಿದೆ

0
3395
sslc exams karnataka

ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಯಾವುದಕ್ಕೆ ಭಯ ಪಡ್ತಾರೋ ಇಲ್ವೋ, ಆದ್ರೆ ಪರೀಕ್ಷೆ ಬರೆಯೋ ದಿನ ಹಾಗೂ ಅದರ ಫಲಿತಾಂಶ ಬರೋ ದಿನದಲ್ಲಿ ಬಳಲಿ ಬೆಂಡಾಗಿರ್ತಾರೆ. ಹೌದು. ವಿದ್ಯಾರ್ಥಿಗಳು ವರ್ಷ ಪೂರ್ತಿ ಸ್ಕೂಲ್ ಹಾಗೂ ಕಾಲೇಜ್ ಗೆ ನಿರ್ಭಿತವಾಗಿ ಹೋಗ್ತಾರೆ. ಆದ್ರೆ ಈ ಪರೀಕ್ಷೆ ದಿನ ಬಂತು ಅಂದ್ರೆ ಸಾಕು, ದೇಶದಲ್ಲಿರೋ ಎಲ್ಲ ಸಮಸ್ಯೆಗಳು ನಮಗೆ ಬಂದಿವೆ ಅಂತ ಫೀಲ್ ಮಾಡ್ತಾರೆ .

ಅದ್ರಲ್ಲೂ ಈ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ಪರೀಕ್ಷೆ ಅನ್ನೋದು ಎಲ್ಲಾ ವಿದ್ಯಾರ್ಥಿಗಳಿಗೂ ತಮ್ಮ ಲೈಫ್ ಟರ್ನಿಂಗ್ ಪಾಯಿಂಟ್ ಆಗೋ ಕಾಲ. ಇದನ್ನ ಅವರು ಬಹಳಷ್ಟು ಜಾಗರೂಕರಾಗಿ ನಿರ್ವಹಿಸಬೇಕು. ಸ್ವಲ್ಪ ಅಡೆತಡೆಯಾದರೂ, ತಮ್ಮ ಭವಿಷ್ಯವೇ ಮುಳುಗಿ ಹೋಗುತ್ತೆ ಅನ್ನೋದು ಅವರ ಭಯ. ನಮ್ಮ ಪಿಯುಸಿ ವಿದ್ಯಾರ್ಥಿಗಳಿಗಿದ್ದ ತಲೆ ನೋವಂತೂ ಕಡಿಮೆ ಆಯಿತು. ಆದ್ರೆ ಈಗ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಶುರುವಾಗಿದೆ.

ಮಾರ್ಚ್ 21 ರಿಂದ ನಡೆಯಲಿರುವ ಎಸ್ ಎಸ್ ಎಲ್ ಸಿ ಪರೀಕ್ಷೆ

ಹೌದು ಇದೆ ತಿಂಗಳ 21ನೇ ತಾರೀಖಿನಿಂದ ಏಪ್ರಿಲ್ 4ನೇ ತಾರೀಖಿನ ವರೆಗೂ ಎಸ್ ಎಸ್ ಎಲ್ ಸಿ ಪರೀಕ್ಷೆ ನಡೆಯಲಿದೆ. ಈ ಬಾರಿ ಒಟ್ಟು 8,41,666 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಜೊತೆಗೆ 4651 ಜನ ವಿಕಲ ಚೇತನ ಮಕ್ಕಳು ನೋಂದಣಿ ಆಗಿದ್ದರೆ, 1451ಅರ್ಹ ವಿಕಲ ಚೇತನ ವಿದ್ಯಾರ್ಥಿಗಳಿಗೆ ಭಾಷಾ ವಿನಾಯಿತಿಯನ್ನ ನೀಡಲಾಗಿದೆ. ಜೊತೆಗೆ 480 ಅರ್ಹ ವಿದ್ಯಾರ್ಥಿಗಳಿಗೆ ಗಣಿತ ಹಾಗೂ ವಿಜ್ಞಾನ ವಿಷಯಗಳಿಗೆ ಬದಲಾಗಿ ಪರ್ಯಾಯ ವಿಷಯ ಬರೆಯುವ ಅವಕಾಶವನ್ನ ಮಾಡಿಕೊಡಲಾಗಿದೆ.

ಸಂಪೂರ್ಣ ಮಾಹಿತಿ ನೀಡಿದ ರಾಜ್ಯ ಪ್ರೌಢ ಶಿಕ್ಷಣ ಮಂಡಳಿ

ಎಸ್ ಎಸ್ ಎಲ್ ಸಿ ಪರೀಕ್ಷೆ ಹತ್ತಿರ ಬರುತ್ತಿರುವುದರಿಂದ ಶಿಕ್ಷಣ ಮಂಡಳಿ, ಹಲವಾರು ರೀತಿ ನಿಯಮಗಳನ್ನ ಜಾರಿಗೆ ತಂದಿದೆ. ಜೊತೆಗೆ ಪ್ರತಿಯೊಬ್ಬರೂ ಅದರ ಜವಾಬ್ದಾರಿಯನ್ನ ಹೊರಬೇಕು ಅಂತ ಮಂಡಳಿ ತಿಳಿಸಿದೆ. ಹೌದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಜಾಫರ್ ಹಾಗೂ ರಾಜ್ಯ ಪ್ರೌಢ ಶಿಕ್ಷಣ ಮಂಡಳಿ ನಿರ್ದೇಶಕಿ ವಿ ಸುಮಂಗಲ ಅವರು ಪರೀಕ್ಷಾ ನಿಯಮಗಳ ಬಗ್ಗೆ ತಿಳಿಸಿದ್ದಾರೆ.

ಹಾಜರಾತಿ ಕಡಿಮೆ ಇರುವ ವಿದ್ಯಾರ್ಥಿಗಳು ಪರೀಕ್ಷೆಯಿಂದ ದೂರ

ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ಪರೀಕ್ಷೆಗಳಲ್ಲಿ ಮುಖ್ಯವಾಗಿ ಹಾಜರಾತಿ ನೋಡ್ತಾರೆ. ಯಾಕಂದ್ರೆ ವಿದ್ಯಾರ್ಥಿಗಳು ಶಾಲೆಗೆ ಅಥವಾ ಕಾಲೇಜಿಗೆ ಸರಿಯಾಗಿ ಬಂದಿಲ್ಲ ಅಂದ್ರೆ ಅವರಿಗೆ ಪರೀಕ್ಷೆ ಬರೆಯಲು ಅವಕಾಶ ಕೊಡುವುದಿಲ್ಲ. ಅದೇ ರೀತಿ ಈ ಬಾರಿ ಹಾಜರಾತಿ ಕೊರತೆಯಿಂದಾಗಿ 10,572 ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯುವ ಅವಕಾಶವಿಲ್ಲ. ಹಾಗಾಗಿ ಅಂತ ವಿದ್ಯಾರ್ಥಿಗಳ ಆಲ್ ಟಿಕೆಟ್ ಕೂಡ ಮುದ್ರಣವಾಗಿಲ್ಲ.

ಪರೀಕ್ಷಾ ನಿಯಮಗಳು

ಸುಮಾರು 2847 ಪರೀಕ್ಷಾ ಕೇಂದ್ರಗಳಿದ್ದು, ಅವುಗಳಲ್ಲಿ 1057 ಕ್ಲಸ್ಟರ್ ಸಹಿತ ಹಾಗೂ 1698 ಕ್ಲಸ್ಟರ್ ಕೇಂದ್ರಗಳಿವೆ. ಜೊತೆಗೆ ಖಾಸಗಿ ಅಭ್ಯರ್ಥಿಗಳಿಗಾಗಿ ಜಿಲ್ಲಾ ಕೇಂದ್ರಗಳಲ್ಲಿ 92 ಪರೀಕ್ಷಾ ಕೇಂದ್ರಗಳನ್ನ ತೆರೆಯಲಾಗಿದೆ. ಅಲ್ಲದೆ 46 ಸೂಕ್ಷ್ಮ ಹಾಗೂ 7 ಅತಿ ಸೂಕ್ಷ್ಮ ಕೇಂದ್ರಗಳನ್ನ ಗುರುತಿಸಲಾಗಿದ್ದು, ಪ್ರತಿ ಪರೀಕ್ಷಾ ಕೇಂದ್ರದಲ್ಲಿ ಸ್ಥಾನಿಕ ಜಾಗೃತ ದಳ ಒಳಗೊಂಡಂತೆ ತಾಲೂಕು ಜಿಲ್ಲಾ ಹಂತಗಳಲ್ಲಿ ವಿಚಕ್ಷಣ ದಳ ಕಾರ್ಯ ನಿರ್ವಹಿಸಲಿದೆ. ಆಯಾ ಜಿಲ್ಲಾ ಪ್ರಾಶುಂಪಾಲರನ್ನ, ಆಯಾ ಜಿಲ್ಲಾ ಪರೀಕ್ಷಾ ಕಾರ್ಯದ ವೀಕ್ಷಕರಾಗಿ ನೇಮಕ ಮಾಡಲಾಗಿದೆ. ಯಾವುದೇ ಕಾರಣಕ್ಕೂ ಸ್ಮಾರ್ಟ್ ವಾಚ್, ಹಾಗೂ ಮೊಬೈಲ್ ಫೋನ್ ಬಳಕೆಗೆ ಅವಕಾಶ ನೀಡುವಂತಿಲ್ಲ ಎಂದು ತಿಳಿಸಿದ್ದಾರೆ. ಜೊತೆಗೆ 200 ಮೀಟರ್ ದೂರದಷ್ಟು ಜಾಗವನ್ನು ನಿಷೇಧಿತ ಪ್ರದೇಶ ಎಂದು, ಅಲ್ಲಿರುವ ಕೆಲವು ಬುಕ್ ಸ್ಟೋರ್ ಹಾಗೂ ಜೆರಾಕ್ಸ್ ಅಂಗಡಿಗಳನ್ನ ಮುಚ್ಚುವಂತೆ ಪರೀಕ್ಷಾ ಮಂಡಳಿ ಆದೇಶ ಹೊರಡಿಸಿದೆ.

ಮೌಲ್ಯಮಾಪನ

ಈ ತಿಂಗಳಲ್ಲಿ ನಡೆಯಲಿರುವ ಪರೀಕ್ಷೆ, ಮುಂದಿನ ತಿಂಗಳು 4ನೇ ತಾರೀಖಿಗೆ ಮುಗಿಯಲಿದೆ. ನಡೆದ ಪರೀಕ್ಷೆಯ ಮೌಲ್ಯಮಾಪನ ಏಪ್ರಿಲ್ 10 ರಿಂದ ಆರಂಭವಾಗಲಿದ್ದು, 34 ಶೈಕ್ಷಣಿಕ ಜಿಲ್ಲೆಗಳ 230 ಮೌಲ್ಯ ಮಾಪನ ಕೇಂದ್ರದಲ್ಲಿ, ಮೌಲ್ಯ ಮಾಪನ ನಡೆಯಲಿದೆ. ಮೌಲ್ಯ ಮಾಪನ ಸಮಯದಲ್ಲೂ ಕೆಲವು ನಿಬಂಧನೆಗಳನ್ನ ಮಾಡಲಾಗಿದೆ. ಸೂಕ್ಷ್ಮ ಸ್ಥಳಗಳಲ್ಲಿ ಸಿಸಿಟಿವಿ ಅಳವಡಿಕೆಯಾಗಿರಬೇಕು. ಯಾವುದೇ ಕಾರಣಕ್ಕೂ, ಅನುಮತಿ ಇಲ್ಲದೆ ಉತ್ತರ ಪತ್ರಿಕೆ ಕಟ್ಟನ್ನ ಬಿಚ್ಚಬಾರದು ಎಂದು ಈ ರೀತಿ ಕೆಲವು ನಿಯಮಗಳನ್ನ ಮಂಡಳಿ, ಮೌಲ್ಯ ಮಾಪನ ಮಾಡುವವರ ಮೇಲೆ ಏರಿದೆ.

ಪರೀಕ್ಷಾ ವೇಳಾಪಟ್ಟಿ

ಈಗಾಗಲೇ ಪರೀಕ್ಷಾ ವೇಳಾಪಟ್ಟಿಯನ್ನ ಪರೀಕ್ಷಾ ಮಂಡಳಿ ಬಿಡುಗಡೆ ಮಾಡಿದೆ.

ಮಾರ್ಚ್ 21ಕ್ಕೆ ಮೊದಲ ಭಾಷೆ (ಕನ್ನಡ)

ಮಾರ್ಚ್ 25ಕ್ಕೆ ಗಣಿತ

ಮಾರ್ಚ್ 27ಕ್ಕೆ ಎರಡನೇ ಭಾಷೆ (ಇಂಗ್ಲಿಷ್)

ಮಾರ್ಚ್ 29ಕ್ಕೆ ಸಮಾಜ ವಿಜ್ಞಾನ

ಏಪ್ರಿಲ್ 2ರಂದು ವಿಜ್ಞಾನ

ಏಪ್ರಿಲ್ 4ರಂದು ಮೂರನೇ ಭಾಷೆ (ಹಿಂದಿ)

ಚುನಾವಣೆ ಉದ್ದೇಶದಿಂದ ಮುಂಚೆಯೇ ನಡೆಯುತ್ತಿರುವ ಪರೀಕ್ಷೆ

ಹೌದು. ಲೋಕಸಭಾ ಚುನಾವಣೆ ಇರೋದ್ರಿಂದ ಎಸ್ ಎಸ್ ಎಲ್ ಸಿ ಪರೀಕ್ಷೆ ದಿನಾಂಕವನ್ನ ಬೇಗ ನಿಗಧಿ ಮಾಡಲಾಗಿದೆ. ಯಾಕಂದ್ರೆ ಪರೀಕ್ಷೆ ಅಂತ ಕೂತರೆ, ಚುನಾವಣೆಗೆ ತೊಂದರೆಯಾಗುತ್ತೆ ಅನ್ನೋ ಉದ್ದೇಶದಿಂದ ಪರೀಕ್ಷಾ ಮಂಡಳಿ ಪರೀಕ್ಷಾ ದಿನವನ್ನ ಹಾಗೂ ಮೌಲ್ಯ ಮಾಪನ ದಿನವನ್ನ ಬೇಗ ನಿಗಧಿಪಡಿಸಿದೆ. ಚುನಾವಣೆಗೋಸ್ಕರ ಸಕಲ ಸಿದ್ದತೆಗಳು ನಡೆಯೋ ಸಮಯದಲ್ಲಿ, ಪರೀಕ್ಷೆ ಯಾವುದೇ ಕಾರಣಕ್ಕೂ ಅಡ್ಡ ಆಗಬಾರದು ಹಾಗಾಗಿ, ಪರೀಕ್ಷಾ ಕೆಲಸವನ್ನ ಬೇಗ ಮುಗಿಸುವದಾಗಿ ರಾಜ್ಯ ಪ್ರೌಢ ಶಿಕ್ಷಣ ಮಂಡಳಿ ನಿರ್ದೇಶಕಿ ವಿ ಸುಮಂಗಲ ಅವರು ತಿಳಿಸಿದ್ದಾರೆ.

ಒಟ್ಟಿನಲ್ಲಿ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ಪರೀಕ್ಷೆಯನ್ನ ವಿದ್ಯಾರ್ಥಿಗಳು, ಯುದ್ಧದ ರೀತಿಯಲ್ಲಿ ತೆಗೆದುಕೊಂಡಿದ್ದಾರೆ. ಪಿಯುಸಿ ವಿದ್ಯಾರ್ಥಿಗಳ ಮುಖದಲ್ಲಿ ಈಗ ಸ್ವಲ್ಪ ಮಂದಹಾಸ ಬೀರಿದೆ. ಆದರೆ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಈಗ ಆತಂಕ ಶುರುವಾಗಿದೆ. ಒಟ್ಟಿನಲ್ಲಿ ಯಾವುದೇ ರೀತಿ ತೊಂದರೆಯಾಗದೆ ಪರೀಕ್ಷೆ ಸರಾಗವಾಗಿ ನಡೆಯಲಿ ಅನ್ನೋದು ಎಲ್ಲರ ಆಶಯವಾಗಿದೆ.

Comments

comments

LEAVE A REPLY

Please enter your comment!
Please enter your name here