10 ಪ್ರಸಿದ್ಧ ಹಾಗೂ ತನ್ನದೇ ಆದ ವೈಶಿಷ್ಟ್ಯ ಹೊಂದಿರುವ ಕರ್ನಾಟಕದ ಪುರಾತನ ದೇವಾಲಯಗಳು

oldest temples of karnataka

ಭಾರತ ದೇಶ ಎಷ್ಟೋ ಧರ್ಮಗಳಿಗೆ ತಾಯಿ. ಅದರಲ್ಲೂ ಹಿಂದೂ ಧರ್ಮದಲ್ಲಿರುವಷ್ಟು ದೇವರುಗಳು ಬೇರೆ ಧರ್ಮದಲ್ಲಿ ಇಲ್ಲ. ಇದೆ ಕಾರಣಕ್ಕೆ ದೇವಾಲಯಗಳೂ ಕೂಡ ಹೆಚ್ಚಾಗಿಯೇ ಕಟ್ಟಲ್ಪಟ್ಟಿವೆ. ಅದರಲ್ಲೂ ಕರ್ನಾಟಕದಲ್ಲಿ ಅಸಂಖ್ಯಾತ ಪುರಾತನ ದೇವಾಲಯಗಳಿವೆ. ಎಷ್ಟೋ ದೇವಾಲಯಗಳು ಅನನ್ಯವಾಗಿವೆ. ಅವುಗಳ ವಾಸ್ತುಶಿಲ್ಪ ಆಯಾ ಕಾಲಘಟ್ಟಕ್ಕೆ ಅನುಗುಣವಾಗಿ ತನ್ನದೇ ಒಂದು ವಿಶಿಷ್ಟ ಛಾಪು ಮೂಡಿಸಿವೆ. ಆದರೆ ಪ್ರಸಿದ್ಧವಾದವು ಕೆಲವು ಮಾತ್ರ. ಎಷ್ಟೋ ಜನರಿಗೆ ಗೊತ್ತೇ ಇರದ ಕೆಲವು ವಿಶಿಷ್ಟ ದೇವಾಲಯಗಳೂ ಇವೆ. ಪ್ರಸಿದ್ಧವಾದವುಗಳೊಂದಿಗೆ ಅಂತಹ ಕೆಲವು ಎಲೆಯ ಮರೆಯ ಕಾಯಿಯಂತಿರುವ ಸ್ಥಳಗಳನ್ನು ಪರಿಚಯಿಸುವುದು ಈ ಲೇಖನದ ಉದ್ದೇಶ.

ಸೋಮೇಶ್ವರ ದೇವಸ್ಥಾನ (ಲಕ್ಷ್ಮೇಶ್ವರ)

ಗದಗ ಜಿಲ್ಲೆಯ ಲಕ್ಷ್ಮೆಶ್ವರ ಹಲವಾರು ಪುರಾತನ ದೇವಸ್ಥಾನ, ಜೈನ ಬಸದಿ ಹಾಗೂ ಮಸಿದಿಗಳಿಗೆ ಹೆಸರುವಾಸಿ ತಾಣ. ಇಲ್ಲಿರುವ ಸೋಮೇಶ್ವರ ದೇವಸ್ಥಾನ ತುಂಬಾ ಅಪರೂಪದ್ದು. ಇದು ಕೂಡ ಶಿವನ ದೇವಾಲಯವಾಗಿದ್ದು, ಇಲ್ಲಿ ಶಿವಲಿಂಗದ ಬದಲು ಅವನ ಮೂರ್ತಿ ಇದೆ. ಭಾರತದಲ್ಲಿ ಕೆಲವೇ ಕೆಲವು ದೇವಾಲಯಗಳಲ್ಲಿ ಈ ರೀತಿ ಇದೆ. ನಂದಿಯ ಮೇಲೆ ಕುಳಿತಿರುವ ಶಿವ – ಪಾರ್ವತಿಯರ ಮೂರ್ತಿ ನೋಡಲು ನಯನ ಮನೋಹರ. ಈ ಮೂರ್ತಿಗಳನ್ನು ಭಕ್ತರು ಸೌರಷ್ಟ್ರದಿಂದ ತಂದು ಇಲ್ಲಿ ಪ್ರತಿಷ್ಟಾಪಿಸಿದ ಕಾರಣದಿಂದ ಮೂರ್ತಿಯನ್ನು ಸೌರಾಷ್ಟ್ರ ಸೋಮೇಶ್ವರ ಅಂತಲೂ ಕರೆಯುತ್ತಾರೆ. ೧೧ ನೆ ಶತಮಾದಲ್ಲಿ ಚಾಲುಕ್ಯರ ಆಳ್ವಿಕೆಯಲ್ಲಿ ನಿರ್ಮಿತವಾದ ದೇವಾಲಯವಿದು. ಇದರ ಸುತ್ತಲಿನ ಗೋಡೆಯನ್ನು ಪೆಡಸುಕಲ್ಲಿನಲ್ಲಿ (ಗ್ರಾನೈಟ್) ಕಟ್ಟಲಾಗಿದೆ. ದೇವಸ್ಥಾನದ ಆವರಣದಲ್ಲಿ ಭವ್ಯವಾದ, ಬೃಹತ್ ತೆರೆದ ಬಾವಿ ಇದೆ.

Advertisements

oldest temples of karnataka

ಶಂಖ ಬಸದಿ (ಲಕ್ಷ್ಮೇಶ್ವರ)

ಮೊದಲೇ ಹೇಳಿದಂತೆ ಲಕ್ಷ್ಮೇಶ್ವರ ತುಂಬಾ ಐತಿಹಾಸಿಕ ಮಹತ್ವವನ್ನು ಪಡೆದಿದ್ದು ಇದು ಜೈನರ ಪ್ರಮುಖ ಕೇಂದ್ರವಾಗಿತ್ತು. ಇಲ್ಲಿ ಸುಂದರವಾಗಿ ಕೆತ್ತಲ್ಪಟ್ಟ ಹಲವಾರು ಜೈನ ಬಸದಿಗಳು ಇವೆ. ಉತ್ಖನನ ಕಾರ್ಯ ಕೈಗೊಂಡರೆ ಇನ್ನೂ ಎಷ್ಟೋ ಜಿನಾಲಯ, ದೇವಾಲಯಗಳು ಇಲ್ಲಿ ಸಿಗಬಹುದು ಎಂಬುದು ತಜ್ಞರ ಅಭಿಪ್ರಾಯ. ಶಂಖ ಬಸದಿ ೮ ನೆ ಶತಮಾನದಲ್ಲಿ ಚಾಲುಕ್ಯ ಶೈಲಿಯಲ್ಲಿ ನಿರ್ಮಿತವಾದ ಜಿನಾಲಯ. ಕಲ್ಯಾಣಿ ಚಾಲುಕ್ಯರ ಕಾಲದಲ್ಲಿ ನಿರ್ಮಾಣಗೊಂಡ ಕೆಲವು ಜಿನಾಲಯಗಳಲ್ಲಿ ಇದು ಒಂದು. ಕೆಲವು ವರ್ಷ ಶಿಥಿಲಾವಸ್ಥೆಯಲ್ಲಿದ್ದ ಈ ಕಟ್ಟಡ ನಂತರ ಹಲವು ಬಾರಿ ಪರಿವರ್ತನೆಗಳನ್ನು ಕಂಡಿದೆ. ಶಂಖವು ೨೨ ನೆ ತೀರ್ಥಂಕರರಾದ ನೆಮಿನಾಥರ ಲಾಂಛನ.

oldest temples of karnataka

ವಿರೂಪಾಕ್ಷ ದೇವಸ್ಥಾನ (ಹಂಪಿ)

ಬಳ್ಳಾರಿ ಜಿಲ್ಲೆಯಲ್ಲಿರುವ ಹಂಪಿ ಯಾರಿಗೆ ಗೊತ್ತಿಲ್ಲ? ಅಲ್ಲಿರುವ ಪುರಾತನ ಸ್ಮಾರಕಗಳು ಒಂದಕ್ಕಿಂತ ಒಂದು ಮಿಗಿಲಾಗಿವೆ. ಅದರಲ್ಲಿ ತುಂಬಾ ಪ್ರಸಿದ್ಧವಾದ ದೇವಾಲಯವೇ ವಿರೂಪಾಕ್ಷ ಸ್ವಾಮಿ ದೇವಸ್ಥಾನ. ಈ ದೇವಾಲಯದ ಇತಿಹಾಸ ಏಳನೇ ಶತಮಾನದಷ್ಟು ಹಳೆಯದು. ಆಗ ಚಿಕ್ಕದಾಗಿದ್ದ ದೇವಾಲಯ ಮುಂದೆ ವಿಜಯನಗರದ ಆಳ್ವಿಕೆಯಲ್ಲಿ ಬೃಹದ್ರೂಪ ಪಡೆದು ಪ್ರಸಿದ್ಧಿ ಪಡೆಯಿತು. ಇದನ್ನು ಕಟ್ಟಿಸಿದ ಶ್ರೇಯ ವಿಜಯನಗರ ಸಾಮ್ರಾಜ್ಯದ ಎರಡನೇ ದೇವರಾಯರ ಆಳ್ವಿಕೆಯಲ್ಲಿ ೨ ನೆ ಅಧಿಪತಿಯಾಗಿದ್ದ ಲಕನಾ ದಂಡೇಶ ಅವರಿಗೆ ಸಲ್ಲುತ್ತದೆ. ಈ ದೇವಾಲಯದಲ್ಲಿ ಶಿವನನ್ನು ಪ್ರತಿಷ್ಟಾಪನೆಗೊಳಿಸಲಾಗಿದೆ. ಈ ದೇವಸ್ಥಾನ UNESCO ಅವರಿಂದ ವಿಶ್ವದ ಸಾಂಸ್ಕ್ರತಿಕ ತಾಣ ಎಂದು ಮಾನ್ಯತೆ ಪಡೆದಿರುವುದು ಹೆಮ್ಮೆಯ ವಿಷಯ.

hampi unexplored
ದೇವಾಲಯದ ಹಿಂಭಾಗದಲ್ಲಿ ಇರುವ ಉಲ್ಟಾ ಗೋಪುರದ ವಿಸ್ಮಯ (ಪಿನ್ ಹೋಲ್ ಎಫೆಕ್ಟ್ )

ಚೆನ್ನಕೇಶವ ದೇವಸ್ಥಾನ (ಬೇಲೂರು)

ಕೇಶವ ಅಥವಾ ವಿಜಯನಾರಾಯಣ ದೇವಾಲಯ ಅಂತಲೂ ಕರೆಯಲ್ಪಡುವ ಈ ದೇವಾಲಯ, ಶಿಲಾಬಾಲಿಕೆಯರ ಶಿಲ್ಪಗಳಿಗೆ ಪ್ರಸಿದ್ಧವಾದ ಹಾಸನ ಜಿಲ್ಲೆಯ ಬೇಲೂರಿನಲ್ಲಿದೆ. ಈ ದೇವಸ್ಥಾನದ ಪ್ರಮುಖ ಆಕರ್ಷಣೆ ಇದರ ವಿಶಾಲವಾದ ಆವರಣ. ಅದ್ಭುತ ಶಿಲ್ಪಗಳ ತಾಣವಾಗಿರುವ ಇಲ್ಲಿ ಚೆನ್ನಕೇಶವ ಸ್ವಾಮಿಯ ದೇವಸ್ಥಾನದ ಜೊತೆಗೆ ಸೌಮ್ಯನಾಯಕಿ ಅಮ್ಮನವರ ದೇವಸ್ಥಾನ, ರಂಗನಾಯಕಿ ಅಮ್ಮನವರ ದೇವಸ್ಥಾನ ಮತ್ತು ಕಪ್ಪೆಚೆನ್ನಿಗರಾಯನ ದೇವಸ್ಥಾನಗಳೂ ನೋಡುಗರನ್ನು ಆಕರ್ಷಿಸುತ್ತವೆ. ಇದಲ್ಲದೇ ಮಖ್ಯ ದೇವಸ್ಥಾನದ ಹೊರಭಾಗದಲ್ಲಿರುವ ಶಿಲಾಬಾಲಿಕೆಯಾರ ಶಿಲ್ಪಗಳು, ದೇವಸ್ಥಾನದ ಒಳಾಂಗಣದ ಕಂಬಗಳು ಮತ್ತು ದೇವಾಲಯದ ಗೋಪುರ ನೋಡಲು ಎರಡು ಕಣ್ಣು ಸಾಲವು.

Advertisements

oldest temples of karnataka

ಭೂತನಾಥ ದೇವಸ್ಥಾನ (ಬಾದಾಮಿ)

ಬಂಡೆಗಲ್ಲನ್ನು ಮೆಣವೇನೋ ಎಂಬಂತೆ ಸಲಿಸಾಗಿ ಕಡೆದು ಸೃಷ್ಟಿಸಿರುವ ಮೆಣಬಸದಿಗಳಿಗೆ ಪ್ರಸಿದ್ಧವಾಗಿರುವ ಬಾದಾಮಿಯಲ್ಲಿರುವ ಇನ್ನೊಂದು ಪ್ರಮುಖ ಆಕರ್ಷಣೆ ಭೂತನಾಥ ದೇವಾಲಯ. ದೂರದಿಂದ ನೋಡಿದರೆ ಸರೋವರದಲ್ಲಿ ತೇಲುತ್ತಿರುವ ಹಾಗೆ ಭಾಸವಾಗುವ ಶಿವನ ಈ ದೇವಾಲಯ ಭೂತನಾಥ ದೇವಾಲಯಗಳ ಎರಡು ಪ್ರಮುಖ ಪುಣ್ಯಕ್ಷೇತ್ರಗಳಲ್ಲಿ ಒಂದು. ಇದು ಏಳನೇ ಹಾಗೂ ಹನ್ನೊಂದನೇ ಶತಮಾನದಲ್ಲಿ ಕ್ರಮವಾಗಿ ಬಾದಾಮಿ ಹಾಗೂ ಕಲ್ಯಾಣಿ ಚಳುಕ್ಯರಿಂದ ಕಟ್ಟಲ್ಪಟ್ಟದ್ದು. ದೇವಾಲಯದ ಹಿಂಭಾಗದಲ್ಲಿ ಜೈನ ಮತ್ತು ವಿಷ್ಣು ಅವತಾರಗಳನ್ನು ಕಲ್ಲುಗಳಲ್ಲಿ ಕೆತ್ತಿದ್ದಾರೆ.

oldest temples of karnataka

ಕೇದಾರೇಶ್ವರ ದೇವಸ್ಥಾನ (ಬಳ್ಳಿಗಾವಿ)

ಈ ಐತಿಹಾಸಿಕ ದೇವಾಲಯ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನಲ್ಲಿರುವ ಬಳ್ಳಿಗಾವಿಯಲ್ಲಿದೆ. ಈ ಶಿವನ ದೇವಸ್ಥಾನಕ್ಕೆ ಕೇದಾರನಾಥ ಅಂತಲೂ ಕರೆಯುತ್ತಾರೆ. ಇದು ಹನ್ನೊಂದನೇ ಶತಮಾದಲ್ಲಿ ನಿರ್ಮಿಸಲ್ಪಟ್ಟಿದ್ದು. ಇದು ಕಲ್ಯಾಣಿ ಚಾಲುಕ್ಯರ ಕಾಲದಲ್ಲಿ ಪ್ರಾರಂಭವಾಗಿ ಹೊಯ್ಸಳರ ಕಾಲದಲ್ಲಿ ಪೂರ್ಣಗೊಂಡಿತು. ಈ ದೇವಾಲಯದ ಕಟ್ಟಡ ತ್ರಿಕೂಟ ಮಾದರಲ್ಲಿಯಲ್ಲಿದೆ. ಅಂದರೆ ಮೂರು ಗೋಪುರಗಳನ್ನೋಳಗೊಂಡಿದೆ. ಆ ಮೂರು ಗೋಪುರಗಳು ಪೂರ್ವ, ಉತ್ತರ ಮತ್ತು ದಕ್ಷಿಣಾಭಿಮುಖವಾಗಿವೆ ಮೂರೂ ಗೋಪುರಗಳು ೬ ಕಂಬಗಳಿಂದ ನಿರ್ಮಿತವಾದ ಪ್ರಾಂಗಣಕ್ಕೆ ತೆರೆದುಕೊಳ್ಳುತ್ತವೆ. ಅದಕ್ಕೆ ಮಹಾಮಂಟಪ ಎಂಬ ಹೆಸರು. ಅದೇ ಮುಂದುವರಿದು ವಿಶಾಲವಾದ ಸಭಾಮಂಟಪಕ್ಕೆ ಸೇರುತ್ತದೆ.

oldest temples of karnataka

ಅಮೃತೇಶ್ವರ ದೇವಸ್ಥಾನ (ಅಣ್ಣಿಗೇರಿ)

ಹಳೆಯ ಶಾಸನಗಳಲ್ಲಿ ದಕ್ಷಿಣದ ವಾರಾಣಸಿ ಎಂದೇ ಉಲ್ಲೇಖಿಸಲ್ಪಟ್ಟ ಊರು ಅಣ್ಣಿಗೇರಿ. ಇದು ಆದಿ ಕವಿ ಪಂಪನ ಜನ್ಮಸ್ಥಳ. ಕಲಚೂರಿ ವಂಶದ ದೊರೆ ಬಿಜ್ಜಳನ ಹಾಗೂ ಚಾಲುಕ್ಯರ ದೊರೆ ನಾಲ್ಕನೇ ಸೋಮೇಶ್ವರನ ರಾಜಧಾನಿಯಾಗಿಯೂ ಹಾಗೂ ಹೊಯ್ಸಳ ದೊರೆ ವೀರ ಬಲ್ಲಾಳನ ಉಪರಾಜಧಾನಿಯಾಗಿಯೂ ಅಣ್ಣಿಗೇರಿ ಪ್ರಸಿದ್ಧಿ ಪಡೆದಿತ್ತು. ಬಳಪದ ಕಲ್ಲಿನಲ್ಲಿ ನಿರ್ಮಿಸಲ್ಪಟ್ಟ ಮೊದಲ ದೇವಾಲಯ ಇದು. ಈ ದೇವಾಲಯ ೭೬ ಕಂಬಗಳ ಆಧಾರದ ಮೇಲೆ ನಿಂತಿದೆ. ಅಮೃತೇಶ್ವರ ದೇವಸ್ಥಾನದ ಗೋಡೆಗಳ ಮೇಲೆ ತುಂಬಾ ಸುಂದರವಾದ ಕೆತ್ತನೆಗಳಿವೆ.

Advertisements

oldest temples of karnataka

ವೀರನಾರಾಯಣ ದೇವಸ್ಥಾನ (ಗದಗ)

ಗದುಗಿನ ವೀರನಾರಾಯಣ ಎಂದೇ ಪ್ರಸಿದ್ಧವಾದ ಈ ದೇವಸ್ಥಾನವನ್ನು ಹೆಸರಾಂತ ಶಿಲ್ಪಿ ಜಕಣಾಚಾರಿ ಕೆತ್ತಿದ್ದೆಂದು ಉಲ್ಲೇಖಗಳಿವೆ. ಹೊಯ್ಸಳ ರಾಜ ವಿಷ್ಣುವರ್ಧನ ತಾನು ಹಿಂದೂ ಧರ್ಮವನ್ನು ಅಪ್ಪಿಕೊಂಡ ಬಳಿಕ ಕಟ್ಟಿಸಿದ ಐದು ವಿಷ್ಣು ದೇವಾಲಯಗಳಲ್ಲಿ ಇದೂ ಒಂದು. ಗದುಗಿನ ಮಹಾಭಾರತ ಅಥವಾ ಕರ್ಣಾಟ ಭಾರತ ಕಥಾಮಂಜರಿಯನ್ನು ರಚಿಸಿದ ಕುಮಾರವ್ಯಾಸ (ಗದುಗಿನ ನಾರಣಪ್ಪ) ಇದೇ ದೇವಸ್ಥಾನದಲ್ಲಿ ಕುಳಿತು ಮಹಾಭಾರತವನ್ನು ರಚಿಸಿದನೆಂದು ಹೇಳಲಾಗುತ್ತದೆ. ಆತ ದೇವಸ್ಥಾನದ ಯಾವ ಕಂಬದ ಕೆಳಗೆ ಕುಳಿತು ಪ್ರತಿದಿನ ಮಹಾಭಾರತ ಬರೆಯುತ್ತಿದ್ದನೋ ಇವತ್ತಿಗೂ ಅದು ಕುಮಾರವ್ಯಾಸ ಕಂಬವೆಂದೇ ಪ್ರಸಿದ್ದಿಯಾಗಿದೆ. ಇಂದಿಗೂ ಪೂಜೆಗೊಳ್ಳುತ್ತಿರುವ ಈ ದೇವಸ್ಥಾನದ ಮೂಲ ವಿಗ್ರಹ ಕೈಯಲ್ಲಿ ಚೆಂಡನ್ನು ಹಿಡಿದಿದೆ. ದೇವಾಲಯದ ಗೋಪುರದ ಗೋಡೆಯ ಮೇಲೆ ಮಿಥುನ ಶಿಲ್ಪಗಳಿವೆ.

oldest temples of karnataka

ಬ್ರಹ್ಮೇಶ್ವರ ದೇವಸ್ಥಾನ (ಕಿಕ್ಕೇರಿ)

ಈ ದೇವಾಲಯ ೧೨ ನೆ ಶತಮಾನದಲ್ಲಿ ನಿರ್ಮಿತವಾಗಿದ್ದು ಹೊಯ್ಸಳ ವಾಸ್ತುಶಿಲ್ಪಕ್ಕೆ ಮಾದರಿಯಂತಿದೆ. ಇದು ಮಂಡ್ಯ ಜಿಲ್ಲೆಯ ಕಿಕ್ಕೇರಿ ಗ್ರಾಮದಲ್ಲಿದೆ. ಹೊಯ್ಸಳರ ಕಾಲದ ಹಲವಾರು ಶಾಸನಗಳು ಇಲ್ಲಿ ಲಭ್ಯವಾಗಿದೆ. ಸಾಮಾನ್ಯವಾಗಿ ಹೊಯ್ಸಳರು ದೇವಾಲಯವನ್ನು ಕಟ್ಟೆಯೊಂದನ್ನು ನಿರ್ಮಿಸಿ ಅದರ ಮೇಲೆ ದೇವಾಲಯ ನಿರ್ಮಾಣ ಮಾಡುತ್ತಿದ್ದರು. ಆದರೆ ಈ ದೇವಾಲಯ ಅದಕ್ಕೆ ಅಪವಾದವೆಂಬಂತೆ ಕಟ್ಟೆಯಿಲ್ಲದೆ ಭೂಮಿಯಲ್ಲಿನ ಅಡಿಪಾಯದ ಮೇಲೆಯೇ ಕಟ್ಟಲ್ಪಟ್ಟಿದೆ. ಇದು ಒಂದೇ ಗೋಪುರವಿರುವ (ಏಕಕೂಟ) ದೇವಾಲಯವಾಗಿದೆ. ಇಲ್ಲಿ ತುಂಬಾ ಸೂಕ್ಷ್ಮ ಕೆತ್ತನೆಗಳಿವೆ.

oldest temples of karnataka

ಮಂಜುಗುಣಿ ದೇವಸ್ಥಾನ (ಶಿರಸಿ)

ಉತ್ತರ ಕನ್ನಡ ಜಿಲ್ಲೆಯ ಶ್ರಿರಸಿ ತಾಲೂಕಿನಲ್ಲಿರುವ ಮಂಜುಗುಣಿಯಲ್ಲಿ ಇರುವ ವೆಂಕಟರಮಣ ಮತ್ತು ಪದ್ಮಾವತಿಯರ ದೇವಸ್ಥಾನ ಮಂಜುಗುಣಿ ದೇವಸ್ಥಾನ ಎಂದೇ ಪ್ರಸಿದ್ಧವಾಗಿದೆ. ಮಲೆನಾಡಿನ ತಪ್ಪಲಲ್ಲಿರುವ ಈ ತಾಣದಲ್ಲಿ ಚಳಿಗಾಲದಲ್ಲಿ ದಟ್ಟವಾದ ಮಂಜು ಅವರಿಕೊಳ್ಳುವುದರಿಂದ ಈ ಹೆಸರು ಬಂದಿದೆ. ಸುಂದರ ಕಲ್ಲಿನ ಕೆತ್ತನೆಗಳಿವೆ. ವೆಂಕಟರಮಣ ದೇವಾಲಯದ ವಾಸ್ತುಶಿಲ್ಪ ವಿಜಯನಗರದ ಶೈಲಿಯಲ್ಲಿದೆ ಹಾಗೂ ಸಂಪೂರ್ಣ ಕಲ್ಲುಗಳಿಂದ ನಿರ್ಮಾಣಗೊಂಡಿದೆ. ಅಪರೂಪದ ಸಾಲಿಗ್ರಾಮಗಳು, ವಿಶಾಲ ರಥಬೀದಿ, ಸುಂದರ ಕೆತ್ತನೆಯ ಮರದ ಬೃಹತ್ ರಥ, ಗೋಶಾಲೆ, ಅಶ್ವಶಾಲೆ ಮತ್ತು ಶ್ರೀ ಚಕ್ರತೀರ್ಥ ಕೆರೆ ಇಲ್ಲಿನ ವಿಶೇಷ ಆಕರ್ಷಣೆಗಳಾಗಿವೆ. ಚೈತ್ರ ಪೂರ್ಣಿಮೆಯ ದಿನ ನಡೆಯುವ ಮಹಾ ರಥೋತ್ಸವವು ಇಲ್ಲಿನ ಮುಖ್ಯವಾದ ವಾರ್ಷಿಕ ಉತ್ಸವವಾಗಿದೆ. ಈ ಸ್ಥಳವು ಪ್ರಸಿದ್ಧ ಪ್ರವಾಸಿ ತಾಣವಾದ ಯಾಣಕ್ಕೆ ತುಂಬಾ ಹತ್ತಿರದಲ್ಲಿದೆ.

Advertisements

oldest temples of karnataka

ಇನ್ನೂ ನಮ್ಮ ಧರ್ಮಸ್ಥಳದ ಮಂಜುನಾಥ ಸ್ವಾಮಿ ದೇವಾಲಯ ಆಗಲಿ, ಶೃಂಗೇರಿ ಶಾರದೆಯ ಸನ್ನಿಧಾನ ವಾಗಲಿ ಅಥವಾ ಕುಕ್ಕೆಯ ಸುಬ್ರಮಣ್ಯ ದೇವಾಲಯವಾಗಲಿ, ಈ ರಾಜ್ಯ ದೇಗುಲಗಳ ನಾಡೇ ಸರಿ.

ಇಂತಹ ಸುಂದರ ದೇವಸ್ಥಾನಗಳ ಭವ್ಯತೆ ಹಾಗೂ ಸೊಗಸನ್ನು ಅಲ್ಲಿಗೆ ಹೋಗಿಯೇ ಅನುಭವಿಸಬೇಕು. ನಮ್ಮ ಸಂಸ್ಕೃತಿ, ಪರಂಪರೆಗಳ ಕನ್ನಡಿಯಂತಿರುವ ಅವುಗಳನ್ನು ಸಂರಕ್ಷಿಸಿಕೊಂಡು ಹೋಗುವುದೇ ನಮ್ಮ ದೊಡ್ಡ ಜವಾಬ್ದಾರಿ. ಎಷ್ಟೋ ಪುರಾತನ ದೇವಾಲಯಗಳು ಹೊರಗಿನವರ ದಾಳಿಯಿಂದ ಸ್ವಲ್ಪ ಮಟ್ಟಿಗೆ ಧ್ವಂಸಗೊಂಡಿವೆಯಾದರೂ ಅದಕ್ಕೂ ಮಿಗಿಲಾಗಿ ಹಾಳು ಮಾಡಿರುವವರು ನಮ್ಮವರೇ ವಿಕೃತ ಮನಸ್ಸಿನ ಜನರು. ಅವರಿಂದ ಈ ಸ್ಮಾರಕಗಳನ್ನು ರಕ್ಷಣೆ ಮಾಡುವುದು ಇನ್ನೂ ದೊಡ್ಡ ಸವಾಲು!

ನಮ್ಮ ಹೊಸ Facebook ಪುಟ Metrosaga – Kannada ವನ್ನು ಲೈಕ್ ಮಾಡಿ. ಇಲ್ಲಿ ನಿಮಗೆ ನಾಡಿನ ಭಾಷೆ , ಸಂಸ್ಕೃತಿ, ಸಾಹಿತ್ಯ, ಮತ್ತು ಸಿನಿಮಾದ ಬಗ್ಗೆ ಉತ್ತಮವಾದ ಮಾಹಿತಿ ದೊರೆಯುತ್ತದೆ.