ತಿರುಪತಿ ತಿಮ್ಮಪ್ಪ ಈ ದಿನ ದೇವಾಲಯದಲ್ಲಿ ಇರೋದಿಲ್ಲ. ಹಾಗಾದ್ರೆ ತಿಮ್ಮಪ್ಪ ಅವತ್ತು ಹೋಗೋದಾದ್ರೂ ಎಲ್ಲಿಗೆ ನೀವೇ ನೋಡಿ

ನಮ್ಮಲ್ಲಿ ದೇವರುಗಳ ಸರಮಾಲೆಯೇ ಇದೆ. ಯಾರಾದ್ರೂ ನಮ್ಮ ಬಳಿ ಬಂದು ಈ ದೇವರನ್ನ ನೋಡಿದ್ರೆ, ಒಳ್ಳೇದಾಗುತ್ತೆ ಅಂತ ಹೇಳಿದ ಕೂಡಲೇ ಅಲ್ಲಿಗೆ ಹೋಗ್ತಿವಿ. ಹಾಗೆ ಇನ್ನೊಬ್ಫ್ರು ಸಿಕ್ಕಿ ಈ ದೇವರಿಗೆ ಇನ್ನೂ ಶಕ್ತಿ ಜಾಸ್ತಿ ಅಂತ ಹೇಳಿದ್ರೆ, ಆ ದೇವರಿಗೂ ಹೋಗ್ತಿವಿ. ಯಾಕಂದ್ರೆ ನಮ್ಮ ಜನರಿಗೆ ದೇವರ ಮೇಲೆ ಅಪಾರ ನಂಬಿಕೆ. ಜೊತೆಗೆ ನಮ್ಮ ಕಷ್ಟ ದೂರವಾದ್ರೆ ಸಾಕು ಅನ್ನೋದು ಭಕ್ತರಿಗಿರುತ್ತದೆ. ಹಾಗಾಗಿ ಆ ದೇವರು ಎಲ್ಲಾದ್ರೂ ಇರಲಿ ಹುಡುಕಿಕೊಂಡು ಹೋಗುತ್ತಾರೆ.

ಇದೆ ರೀತಿ ನಮ್ಮಲ್ಲಿ ಒಂದೊಂದು ದೇವಾಲಯಕ್ಕೂ ಒಂದೊಂದು ವಿಶೇಷವಿದೆ. ಕೆಲವೊಂದು ದೇವಾಲಯಗಳಂತೂ ಇತಿಹಾಸವನ್ನೇ ಸೃಷ್ಟಿಸಿವೆ. ಅದೇ ರೀತಿ ನಮ್ಮ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಬಳಿ ಒಂದು ದೇವಾಲಯವಿದೆ. ನಿಜಕ್ಕೂ ಆ ದೇವಾಲಯ ಒಂದು ಅದ್ಭುತವನ್ನೇ ಸೃಷ್ಟಿಸಿದೆ.

Advertisements

ಮಂಜುಗುಣಿ ದೇವಸ್ಥಾನ

ಹೌದು. ಶಿರಸಿ ಬಳಿ ಇರುವುದೇ ಈ ವೆಂಕಟರಮಣ ಹಾಗೂ ಪದ್ಮಾವತಿಯರ ದೇವಸ್ಥಾನ. ಸಹ್ಯಾದ್ರಿ ಶ್ರೇಣಿಯ ಮೇಲಿರುವ ಈ ಮಂಜುಗುಣಿ ದೇವಾಲಯವನ್ನ ಜನರು ಕರ್ನಾಟಕದ ತಿರುಪತಿ ಎಂದು ಕರೆಯುತ್ತಾರೆ. ಈ ದೇವಾಲಯ ಶಿರಸಿಯಿಂದ ಕುಮಟಾ ರಸ್ತೆಯಲ್ಲಿ ತೆರಳುವಾಗ 26 ಕಿ ಮೀ ದೂರದಲ್ಲಿ ಈ ದೇವಸ್ಥಾನ ಸಿಗುತ್ತದೆ. ಹಸಿರು ಹಾಸಿನ ಮಧ್ಯೆ ನೆಲೆಸಿರುವ ವೆಂಕಟೇಶನ ಕ್ಷೇತ್ರ ಮಹಿಮೆ ನಿಜಕ್ಕೂ ಎಲ್ಲರಲ್ಲೂ ಕುತೂಹಲ ಹುಟ್ಟಿಸುತ್ತದೆ. ಈ ಪ್ರದೇಶದಲ್ಲಿ ಯಾವಾಗಲು ದಟ್ಟವಾದ ಮಂಜು ಮುಸುಕಿರುತ್ತದೆ. ಹಾಗಾಗಿ  ಇದಕ್ಕೆ ಮಂಜುಗುಣಿ ಎಂಬ ಹೆಸರು ಬಂದಿದೆ.

ಇಲ್ಲಿ ಸುಂದರ ಕಲ್ಲಿನ ಕೆತ್ತನೆಗಳೊಂದಿಗೆ ಅಪರೂಪದ ಸಾಲಿಗ್ರಾಮಗಳು, ವಿಶಾಲ ರಥಬೀದಿ, ಸುಂದರ ಕೆತ್ತನೆಯ ಮರದ ಬೃಹತ್ ರಥ, ಗೋಶಾಲೆ, ಅಶ್ವಶಾಲೆ, ಮಾರುತಿ ದೇವಸ್ಥಾನ ಮತ್ತು ಶ್ರೀ ಚಕ್ರತೀರ್ಥ ಕೆರೆ ಇಲ್ಲಿನ ವಿಶೇಷ ಆಕರ್ಷಣೆಗಳಾಗಿವೆ.

ಇತಿಹಾಸ

ಸುಮಾರು 9 ನೇ ಶತಮಾನದಲ್ಲಿ ತಿರುಮಲ ಯೋಗಿಗಳು ತಿರುಪತಿಯಿಂದ ತೀರ್ಥಯಾತ್ರೆಗೆ ಹೊರಡುತ್ತಾರೆ. ಪ್ರಯಾಣದ ಸಮಯದಲ್ಲಿ ಯೋಗಿಗಳಿಗೆ ಧ್ಯಾನ ಮಾಡುವ ಮನಸಾಗುತ್ತದೆ. ಹಾಗಾಗಿ ಅವರು ಮಂಜುಗುಣಿಯಿಂದ 8 ಕಿಮೀ ದೂರದಲ್ಲಿರುವ ಗಿಳಿಲಗುಂದಿ ಊರಿನ ಕೊಳದ ಬಳಿ ತಪಸ್ಸು ಮಾಡಲು ಆರಂಭಿಸುತ್ತಾರೆ. ಆ ಸಮಯದಲ್ಲಿ ಶಂಖಚಕ್ರಧನುರ್ಬಾಣ ಧರಿಸಿದ ವೆಂಕಟೇಶ ವಿಗ್ರಹದ ದರ್ಶನವಾಗುತ್ತದೆ. ಆಗ ಅದನ್ನ ತಂದು ಮಂಜುಗುಣಿಯಲ್ಲಿ ಪ್ರತಿಷ್ಠಾಪಿಸುತ್ತಾರೆ. ಆ ಸಮಯದಲ್ಲಿ ಅದೇ ಊರಿನ ವ್ಯಕ್ತಿಯೊಬ್ಬರು ಅವರಿಗೆ ಸಿಗುತ್ತಾರೆ. ಆಗ ಅವರಿಗೆ ಯೋಗಿಗಳು ಹೇಳುತ್ತಾರೆ. ಈ ದೇವರು ಇಲ್ಲೇ ನೆಲೆಸಬೇಕು ಅಂತ. ಆಗ ಊರಿನವರು ಕೇಳುತ್ತಾರೆ. ಯಾವ ಕಾರಣದಿಂದ ಈ ಮಾತನ್ನ ಹೇಳುತ್ತಿದ್ದೀರಾ ಅಂತ. ಅದಕ್ಕೆ ಯೋಗಿಗಳು ನೀಡೋ ಉತ್ತರ, ವೆಂಕಟೇಶನು ದುಷ್ಟರೆಂಬ ಮೃಗಗಳ ಭೇಟೆಗಾಗಿ, ಪಾದುಕೆಗಳನ್ನ ಧರಿಸಿ, ಶಂಖಚಕ್ರ ಬಿಲ್ಲುಬಾಣಗಳನ್ನು ಹಿಡಿದು ಸಕಲ ಭೂಮಂಡಲದಲ್ಲಿ ಸಂಚರಿಸುತ್ತಿರುವಾಗ, ಮಂಜುಗುಣಿ ರಮ್ಯತೆಗೆ ಮನಸೋತು ಒಂದು ಹೆಜ್ಜೆಯನ್ನ ಮುಂದಿಡಲಾಗದೆ, ಇಲ್ಲೇ ನೆಲೆಸಲು ಬಯಸಿದ್ದಾನೆ. ಹಾಗಾಗಿ ಈ ದೇವನನ್ನ ಇಲ್ಲೇ ಪ್ರತಿಷ್ಠಾಪಿಸಬೇಕು ಅಂದಾಗ, ಆ ದೇವರನ್ನ ಅಲ್ಲೇ ಪ್ರತಿಷ್ಠಾಪಿಸುತ್ತಾರೆ.

Advertisements

ವಿಶೇಷತೆ

ಈ ದೇವಾಲಯದ ವಿಶೇಷತೆ ಬಹಳಷ್ಟಿದೆ. ಇದರ ಇನ್ನೊಂದು ವಿಶೇಷವೆಂದರೆ ಚೈತ್ರ ಪೂರ್ಣಿಮೆಯ ದಿನ ನಡೆಯುವ ಮಹಾ ರಥೋತ್ಸವಕ್ಕೆ  ಶ್ರೀ ವೆಂಕಟೇಶ ತಿರುಪತಿಯಿಂದ ಇಲ್ಲಿಗೆ ಬರುತ್ತಾನೆ ಎಂದು ಜನರು ನಂಬಿದ್ದಾರೆ. ಹಾಗಾಗಿ ಇದಕ್ಕೆ ಪುಷ್ಟಿ ಎಂಬಂತೆ ಅಂದು ತಿರುಪತಿಯಲ್ಲಿ ದೇವರಿಗೆ ಪೂಜೆ ಮಾಡುವುದಿಲ್ಲ. ಯಾಕಂದ್ರೆ ವೆಂಕಟೇಶ್ವರ ಮಂಜುಗುಣಿಯಲ್ಲಿ ಇರುತ್ತಾನೆ, ಹಾಗಾಗಿ ಇಲ್ಲಿ ಪೂಜೆ ಮಾಡುವುದು ಒಳ್ಳೆಯದಲ್ಲ ಅನ್ನೋದು ಜನರ ನಂಬಿಕೆ. ಶತಮಾನಗಳಿಂದಲೂ ಇದೆ  ಪದ್ದತಿಯನ್ನ ಅನುಸರಿಸುತ್ತಿದ್ದಾರೆ. ಈ ದೇವಸ್ಥಾನವು ಇತರ ದೇವಸ್ಥಾನಗಳಿಗಿಂತ ತುಂಬಾ ಭಿನ್ನವಾಗಿದ್ದು, ಉಳಿದ ದೇವಸ್ಥಾನಗಳಲ್ಲಿ ಕಂಡುಬರುವಂತೆ ಇಲ್ಲಿ ಮಂತ್ರಘೋಷಗಳಿಂದ ದೇವರನ್ನು ಪೂಜೆ ಮಾಡಲಾಗುವುದಿಲ್ಲ. ಬದಲಿಗೆ ಈ ವೆಂಕಟರಮಣ ಸ್ವಾಮಿಯನ್ನು ಮೌನವಾಗಿ ಪೂಜಿಸುವುದು ಇಲ್ಲಿನ ವಾಡಿಕೆ. ಇದು ತಿರುಮಲ ಸ್ವಾಮಿಗಳ ಅಣಿತಿಯಾಗಿದ್ದು, ಅವರ ಅಣತಿಯ ಮೇರೆಗೆ ಈ ಪದ್ಧತಿಯನ್ನು ರೂಢಿಸಿಕೊಂಡು ಬರಲಾಗಿದೆ.

ದೇವಾಲಯ

ಇಲ್ಲಿ ವಿಜಯನಗರ ಕಾಲಕ್ಕಿಂತ ಪೂರ್ವದ್ದೆನ್ನಲಾದ ಅನೇಕ ಸುಂದರ ಕೆತ್ತನೆಗಳು ದೇವಾಲಯದ ಒಳಾಂಗಣದಲ್ಲಿದೆ. ಮುಖಮಂಟಪ, ನವರಂಗ, ಅರ್ಧ ಮಂಟಪ ಹಾಗೂ ಗರ್ಭಗೃಹ ಒಳಗೊಂಡ ದೇವಾಲಯದ ನವರಂಗವನ್ನು ಉಡುಪಿಯ ವಾದಿರಾಜ ಯತಿಗಳು ನಿರ್ಮಿಸಿದ್ದಾರೆ. ಹೀಗಾಗಿ ದೇವಾಲಯ ನೋಡೋಕೆ ಬಲು ಸುಂದರವಾಗಿದೆ. ಜೊತೆಗೆ ಕಂಬಗಳ ಮೇಲೆ ಕಡಗೋಲು ಕೃಷ್ಣ ಹಾಗೂ ಹಯಗ್ರೀವ ಮೂರ್ತಿಗಳ ಕೆತ್ತನೆಗಳಿವೆ. ವೆಂಕಟೇಶನ ಪಕ್ಕದಲ್ಲಿ ಪದ್ಮಾವತಿ ನೆಲೆಸಿದ್ದಾಳೆ. ಪದ್ಮಾವತಿ ಅಮ್ಮನವರ ಗುಡಿ ವೆಂಕಟೇಶನ ಬಲಭಾಗದಲ್ಲಿದೆ. ಅಪರೂಪದ ಸಾಲಿಗ್ರಾಮಗಳು, ವಿಶಾಲ ರಥಬೀದಿ, ಸುಂದರ ಕೆತ್ತನೆಯ ಮರದ ರಥ ಇಲ್ಲಿನ ವಿಶೇಷ ಆಕರ್ಷಣೆಗಳಾಗಿವೆ. ಇಲ್ಲಿ ಇರುವ ಚಕ್ರತೀರ್ಥ ಕೆರೆ ಬಲು ಶಕ್ತಿಯುತವಾಗಿದೆ. ಅಂದ್ರೆ ಔಷಧೀಯ ಗುಣ ಹೊಂದಿರುವ ಮಂಜುಗುಣಿ ಚಕ್ರತೀರ್ಥ ಕೆರೆಯ ಜಲ ಚರ್ಮರೋಗ ನಿವಾರಕ ಗುಣ ಹೊಂದಿದೆ.

ಹರಕೆ ಹಾಗೂ ಉತ್ಸವಗಳು

ಈ ದೇವರಲ್ಲಿ ಭಕ್ತರು ಬೇಡೋ ಬೇಡಿಕೆಗಳನ್ನ ಈಡೇರುವಂತೆ ಮಾಡಲು, ವಿವಿಧ ರೀತಿಯಲ್ಲಿ ಹರಕೆಗಳನ್ನ ಕಟ್ಟಿಕೊಳ್ಳುತ್ತಾರೆ. ಅಕ್ಕಿ, ತೆಂಗಿನಕಾಯಿ, ನಾಣ್ಯ ತುಲಾಭಾರದ ಜೊತೆಗೆ ನಾಲಿಗೆ, ಕಾಲು ಹೀಗೆ ಶರೀರದ ವಿವಿಧ ಭಾಗಗಳ ಬೆಳ್ಳಿ, ಬಂಗಾರದ ಮುದ್ರಿಕೆಯನ್ನ ಹರಕೆ ಒಪ್ಪಿಸುವ ಪದ್ಧತಿ ಇಲ್ಲದೆ. ಭಾಗವತ ಸಂಪ್ರದಾಯದ ರೀತಿಯಲ್ಲಿ ಇಲ್ಲಿ ಪ್ರತಿನಿತ್ಯ ಪೂಜೆ ನಡೆಯುತ್ತದೆ. ದೇವಾಲಯದ ಒಳ ಪ್ರಾಂಗಣ ಭಕ್ತರ ನೆರವಿನಲ್ಲಿ ಎರಡು ಕೋಟಿ ರೂಪಾಯಿಗೂ ಅಧಿಕ ವೆಚ್ಚದಲ್ಲಿ ನಿರ್ಮಾಣಗೊಂಡಿದೆ. ಇಲ್ಲಿ ಚೈತ್ರ ಶುದ್ಧ ಚತುರ್ದಶಿಯ ದಿನ, ದೇವರ ವರ್ಧಂತಿ ಉತ್ಸವ ನಡೆಯುತ್ತದೆ. ಮಾರನೇ ದಿನ ಮಹಾ ರತೋತ್ಸವ, ಮೊದಲ ಐದು ದಿನ ಭಾರತದಲ್ಲೇ ಅಪರೂಪವಾದ ಯಾನ ಯಂತ್ರೋತ್ಸವ ಜರುಗುತ್ತದೆ. ಚಾತುರ್ಮಾಸ್ಯ ಪೂಜೆ, ಶ್ರೀಕೃಷ್ಣಜನ್ಮಾಷ್ಟಮಿ, ಗಣೇಶ ಚತುರ್ಥಿ, ಶರನ್ನವರಾತ್ರಿ ಇಲ್ಲಿನ ವಿಶೇಷ ಉತ್ಸವದ ದಿನಗಳಾಗಿವೆ.

Advertisements

ಈ ರೀತಿ ವೆಂಕಟೇಶ್ವರ ದುಷ್ಟರೆಂಬ ಮೃಗಗಳನ್ನ ಭೇಟೆಯಾಡಲು ಬಂದಾಗ, ಮಂಜುಗುಣಿ ಸೌಂದರ್ಯವನ್ನ ನೋಡಿ, ಇಲ್ಲೇ ನೆಲೆಸಲು ಇಷ್ಟ ಪಟ್ಟು, ಮಂಜುಗುಣಿಯಲ್ಲೇ ನೆಲೆಸಿದ್ದಾನೆ. ಇದೆ ಈ ದೇವಾಲಯದ ವಿಶೇಷವಾಗಿದೆ.