ನಮ್ಮ ಜನರಿಗೆ ಅದೇನೋ ರಜೆ ಸಿಕ್ತು ಅಂದ್ರೆ ಸಾಕು, ಎಲ್ಲಿಗಾದ್ರೂ ಹೋಗ್ಬೇಕು ಅಂತ ಅನ್ಸುತ್ತೆ. ಹಾಗಾಗಿ ಆ ರಾಜ್ಯ, ಈ ದೇಶ ಅಂತ ಹೋಗ್ತಾರೆ. ಆದ್ರೆ ನಮ್ಮ ಕರ್ನಾಟಕಲ್ಲೇ ಕಣ್ಮನ ತಣಿಸುವಂತ ಸ್ಥಳಗಳಿವೆ. ಹೌದು. ನಮ್ಮಲ್ಲೇ ನೋಡಲು ಸಾಕಾಗದಷ್ಟು ಜಾಗಗಳಿವೆ. ಬೆಟ್ಟ, ಗುಡ್ಡ, ಪ್ರಕೃತಿಯನ್ನ ತುಂಬಿಕೊಂಡಿರೋ ಹಲವು ಸುಂದರ ತಾಣಗಳಿವೆ.
ಕೋಲಾರ. ಈ ಜಿಲ್ಲೆ ಸಾಮಾನ್ಯವಾಗಿ ಎಲ್ಲರಿಗೂ ಗೊತ್ತು. ಯಾಕಂದ್ರೆ ಇಲ್ಲಿ ನೋಡುವಂತ ಸ್ಥಳಗಳು ಬಹಳಷ್ಟಿವೆ. ಹಾಗಾಗಿ ಇಲ್ಲಿಗೆ ಜನರು ಪ್ರತಿದಿನ ಬರುತ್ತಲೇ ಇರುತ್ತಾರೆ. ಇಲ್ಲಿ ಇರುವ ಸ್ಥಳಗಳೆಂದರೆ, ಅಂತರಗಂಗೆ, ಕೋಲಾರಮ್ಮ ದೇವಸ್ಥಾನ, ಸೋಮೇಶ್ವರ ದೇವಸ್ಥಾನ, ಮಾರ್ಕಂಡೇಯ ದೇವಸ್ಥಾನ, ತೆರಹಳ್ಳಿ ಕೋಟಿಲಿಂಗೇಶ್ವರ. ಇಷ್ಟು ಸ್ಥಳಗಳು ಇಲ್ಲಿ ಪ್ರೇಕ್ಷಣೀಯ ಜಾಗಗಳಾಗಿವೆ. ಆದ್ರೆ ಇಲ್ಲಿ ಬರೋ ಅಂತರಗಂಗೆ ಮಾತ್ರ ತುಂಬಾ ಪವಿತ್ರವಾದ ಸ್ಥಳ. ಯಾಕಂದ್ರೆ ಇಲ್ಲಿ ಭೂಮಿಯಿಂದಲೇ ಗಂಗೆ ಬರುವುದನ್ನ ನೋಡಬಹುದು. ಹಾಗಾಗಿ ಇದು ತುಂಬಾ ಪವಿತ್ರವಾದ ಸ್ಥಳವಾಗಿದೆ.
ಇತಿಹಾಸ
ಅಂತರಗಂಗೆ ಬೆಟ್ಟವನ್ನು ದಕ್ಷಿಣ ಕಾಶಿ ಕ್ಷೇತ್ರ ಎಂದು ಕರೆಯಲಾಗುತ್ತದೆ. ದೇವಾಲಯದಲ್ಲಿ ಬಸವನ ಬಾಯಿಯಿಂದ ನಿರಂತರವಾಗಿ ಹರಿಯುವ ನೆಲದಡಿಯ ನೀರು ಮೀರುವ ಒಂದು ಕೊಳ ಇದೆ. ಈ ಕೊಳದಲ್ಲಿ ಯಾವಾಗಲೂ ಗಂಗೆ ತುಂಬಿ ಹರಿಯುತ್ತಲೇ ಇರುತ್ತಾಳೆ. ಇಲ್ಲಿ ಭಗೀರಥನು ಧೀರ್ಘಕಾಲ ತಪಸ್ಸು ಮಾಡಿ ಗಂಗೆಯನ್ನ ಒಲಿಸಿಕೊಂಡು, ಬಳಿಕ ಅದನ್ನ ಶಿವನ ಜಟೆಯ ಭೂಮಿಗೆ ಇಳಿಸಿಕೊಂಡ ಎಂಬ ಪ್ರತೀತಿಯಿದೆ. ಅಷ್ಟೇ ಅಲ್ಲ ಈ ಬೆಟ್ಟವು ಪರಶುರಾಮ ಹಾಗು ಜಮದಗ್ನಿಗೆ ಸೇರಿದ ಬೆಟ್ಟ ಅನ್ನೋ ದಂತ ಕಥೆ ಇದೆ. ಈ ನೀರನ್ನ ಕುಡಿದರೆ ಪಾಪ ಪರಿಹಾರವಾಗುತ್ತೆ ಅನ್ನೋದು ಜನರ ನಂಬಿಕೆ. ಹಾಗಾಗಿ ಈ ನೀರನ್ನ ಕುಡಿಯುವುದಕ್ಕೋಸ್ಕರ ಎಲ್ಲೆಲ್ಲಿಂದಲೋ ಜನರು ಬರುತ್ತಾರೆ. ಕಾಯಿಲೆ ಇರುವಂತ ವ್ಯಕ್ತಿಗಳಿಗೆ ಈ ನೀರನ್ನ ಕುಡಿಸಿದರೆ, ಆ ಕಾಯಿಲೆ ವಾಸಿಯಾಗುತ್ತೆ. ಜೊತೆಗೆ ಈ ತೀರ್ಥವನ್ನ ಮನೆಗೆ ಪ್ರೋಕ್ಷಣೆ ಮಾಡಿದರೆ, ಮನೆ ಸಮೃದ್ಧಿಯಾಗಿರುತ್ತೆ ಅನ್ನೋದು ಇಲ್ಲಿನ ವಾಡಿಕೆ. ಹಾಗಾಗಿ ಇಲ್ಲಿಗೆ ಬರುವ ಜನರು, ಅವರು ತೀರ್ಥ ಕುಡಿದು, ನಂತರ ಯಾವುದಾದರು ಬಾಟಲಿಯಲ್ಲಿ ಮನೆಗೆ ತೆಗೆದುಕೊಂಡು ಹೋಗುತ್ತಾರೆ.
ಸಂಶೋಧನೆಗಿಳಿದ ವಿಜ್ಞಾನಿಗಳು
ಹೌದು. ಇಲ್ಲಿರುವ ನಂದಿ ಬಾಯಲ್ಲಿ ಯಾವಾಗಲು ನೀರು ಬರುತ್ತಲೇ ಇರುತ್ತೆ. ಯಾವ ಕಾಲಕ್ಕೂ ಇಲ್ಲಿ ನೀರು ನಿಂತಿಲ್ಲ. ಹಾಗಾಗಿ ಈ ವಿಷಯ ತಿಳಿದ ವಿಜ್ಞಾನಿಗಳು, ಇದೆಲ್ಲಾ ಸುಳ್ಳು. ಎಲ್ಲಿಂದಲೂ ನೀರು ಬರಲ್ಲ. ಯಾರೋ ನೀರಿನ ಸಂಪರ್ಕ ಮಾಡಿರಬೇಕು ಅಂತ ಹೇಳಿದ್ರು. ಅದಕ್ಕೊಸಕರ ನಾವು ಇದನ್ನ ಕಂಡುಹಿಡಿಯುತ್ತೀವಿ ಅಂತ ವಿಜ್ಞಾನಿಗಳು ಸಂಶೋಧನೆ ಮಾಡಿದ್ರು. ಆದ್ರೆ ಸಂಶೋಧನೆಗಿಳಿದ ವಿಜ್ಞಾನಿಗಳಿಗೆ ದೊರಕಿದ್ದು ಸೋಲು. ಯಾಕಂದ್ರೆ ನೀರನ್ನ ಭೂಮಿಗೆ ಕಳಿಸುತ್ತಿರೋದು ಆ ದೇವರು. ಹೀಗಿರುವಾಗ ವಿಜ್ಞಾನಿಗಳು ಯಾವ ಸಂಶೋಧನೆ ಮಾಡಿದ್ರು, ಅಲ್ಲಿ ಯಾವ ಪ್ರಯೋಜನವೂ ಆಗಲ್ಲ. ನಂತರ ವಿಜ್ಞಾನಿಗಳಿಂದಲೂ ಇದು ಸತ್ಯ ಅಂತ ಸಾಬೀತಾಯಿತು.
ಟ್ರಕ್ಕಿಂಗ್ ಪ್ರಿಯರಿಗೆ ಹೇಳಿ ಮಾಡಿಸಿದ ಜಾಗ
ಟ್ರಕ್ಕಿಂಗ್ ಪ್ರಿಯರಿಗೆ ಅಂತರಗಂಗೆ ಹೇಳಿ ಮಾಡಿಸಿದ ಜಾಗವಾಗಿದೆ. ಹೌದು. ಇದು ಟ್ರಕ್ಕಿಂಗ್ ಗೆ ಒಳ್ಳೆ ಸ್ಥಳ. ಈ ಅಂತರಗಂಗೆ ಗೆ ಹೋಗಲು ಮೆಟ್ಟಿಲುಗಳಿವೆ. ನೇರವಾಗಿ ಅಂತರಗಂಗೆ ತಲುಪುತ್ತೀವಿ ಅನ್ನೋರು, ಮೆಟ್ಟಿಲು ಬಳಸಬಹುದು. ಇಲ್ಲ, ನಾವು ಪ್ರಕೃತಿ ಸೊಬಗನ್ನ ಅನುಭವಿಸಬೇಕು ಅನ್ನೋರಿಗೆ ಇದು ಒಳ್ಳೆ ಜಾಗ. ಅಂತರಗಂಗೆ ಸುತ್ತ ಮುತ್ತ ಸಂಪೂರ್ಣ ಕಾಡಿದೆ. ಹಾಗಾಗಿ ಕಾಡು, ಮೇಡು ಸುತ್ತಿಯೂ ಸಹ ಹೋಗಬಹುದು. ಕಾಡಿನಿಂದ ಹೋಗುವವರು ಅಲ್ಲಿರುವ ಗುಹೆಗಳು, ಹಾಗೂ ಕಲ್ಲಿನಿಂದ ಕಟ್ಟಿರುವ ಕೆಲವು ಹಳೆ ಮಂಟಪಗಳನ್ನ ನೋಡಬಹುದು. ಯಾಕಂದ್ರೆ ಇಲ್ಲಿ ಮಂಟಪಗಳು ಬಹಳಷ್ಟು ಹಳೆಯದಾಗಿರೋದ್ರಿಂದ ಅನೀಕ ವಿಷಯಗಳು ದೊರೆಯುತ್ತವೆ. ಸಂಶೋಧನೆ ಮಾಡೋರಿಗೆ ಈ ಕಾಡು ತುಂಬಾ ಚೆನ್ನಾಗಿದೆ.
ಪರಿಸರ ಹಾಗೂ ವಿಶೇಷತೆ
ಹಸಿರು ಬಣ್ಣದ ಸೀರೆಯನ್ನುಟಿರುವಂತೆ ಕಾಣುವ ಈ ಪ್ರದೇಶ ಪೈರು ಪಚ್ಚೆಗಳು ಮತ್ತು ಮರ ಗಿಡಗಳಿಂದ ಕೂಡಿ ಕಂಗೊಳಿಸತ್ತದೆ. ಇಲ್ಲಿ ಅನೇಕ ನಿಗೂಢಗಳನ್ನ ಹೊಂದಿರುವ ಸ್ಥಳಗಳಿವೆ. ಅಂತರಗಂಗೆ ಬೆಟ್ಟವು ಚಾರಣ, ಪರ್ವತಾರೋಹಣ, ರಾತ್ರಿ ಸಂಚರಣೆ ಹಾಗು ಸಾಹಸ ಚಟುವಟಿಕೆಗಳನ್ನು ಮಾಡಲು ಪರಿಪೂರ್ಣ ಸ್ಥಳವಾಗಿದೆ. ಇಲ್ಲಿನ ಪ್ರಕೃತಿ ಯಾವಾಗಲೂ ಹಸಿರು ಹೊದಿಕೆಯನ್ನ ಹೊತ್ತಿರುವ ರೀತಿಯಲ್ಲಿ ಕಾಣುತ್ತದೆ. ಇಲ್ಲಿನ ಇನ್ನೊಂದು ವಿಶೇಷವೆಂದರೆ, ಇಲ್ಲಿ ಯಾವ ಗಿಡವು ಒಣಗುವುದಿಲ್ಲ ಅನ್ನೋದು. ಯಾಕಂದ್ರೆ ಈ ಅಂತರಗಂಗೆ ಜಾಗದಲ್ಲಿ, ಗಂಗೆ ಯಾವಾಗಲೂ ಉಕ್ಕಿ ಹರಿಯುವುದರಿಂದ ಕಾಡು, ಮೇಡುಗಳಿಗೂ ಹೋಗಿ ಅದು ತಲುಪುತ್ತೆ. ಹಾಗಾಗಿ ಇಲ್ಲಿನ ಯಾವ ಗಿಡ, ಮರಗಳು ಒಣಗುವುದಿಲ್ಲ. ಬದಲಿಗೆ ದಿನದಿಂದ ದಿನಕ್ಕೆ ಬಹಳಷ್ಟು ಸಮೃದ್ಧಿಯಾಗಿ ಕಾಣುತ್ತದೆ.
ವಿಸ್ಮಯ
ಕೋಲಾರ ಅಂದ ತಕ್ಷಣ ಎಲ್ಲರಿಗು ಗೊತ್ತಾಗುತ್ತೆ. ಇದೊಂದು ಬರಪೀಡಿತ ಜಿಲ್ಲೆ ಅಂತ. ಹೌದು ವರ್ಷದ 365 ದಿನಗಳಲ್ಲಿ ಇಲ್ಲಿ ಮಳೆಯಾಗೋದು ಮಾತ್ರ ಕೇವಲ 45 ದಿನ ಮಾತ್ರ. ಇಲ್ಲಿನ ಜನರಿಗೆ ನೀರಿನ ಕೊರತೆ ಬಹಳಷ್ಟಿದೆ. ಆದ್ರೆ ಊರಿಗೆ ನೀರಿನ ಬರವಿದ್ದರೂ, ನಂದಿ ಬಾಯಲ್ಲಿ ಮಾತ್ರ ಯಾವಾಗಲೂ ನೀರು ಬರುತ್ತಲೇ ಇರುತ್ತೆ. ನಿಜಕ್ಕೂ ಇದು ನೋಡುಗರಿಗೆ ಹಾಗು ಕೇಳುಗರಿಗೆ ಆಶ್ಚರ್ಯವಾದರೂ, ಇದು ನಿಜ. ಇಡೀ ಕೋಲಾರಕ್ಕೆ ಬರವಿದ್ದರೂ, ಅಂತರಗಂಗೆ ಗೆ ಮಾತ್ರ ಬರವಿಲ್ಲ. ವರ್ಷಪೂರ್ತಿ ನೀರು ಹರಿಯುತ್ತಲೇ ಇರುತ್ತೆ.
ಈ ರೀತಿ ಕೋಲಾರ ಹಲವು ವಿಶೇಷ ಸ್ಥಳಗಳನ್ನ ಹೊಂದಿದೆ. ಇನ್ನು ಇಲ್ಲಿನ ಕೋಟಿ ಲಿಂಗೇಶ್ವರ ಕೂಡ ಅದ್ಭುತ ಸ್ಥಳ. ಎಲ್ಲಿ ನೋಡಿದರು ಲಿಂಗಗಳೇ ಕಾಣೋ ಈ ಸ್ಥಳವನ್ನ ನೋಡಲು ಪ್ರತಿದಿನ ಸಾವಿರಾರು ಜನ ಬರುತ್ತಾರೆ. ಹಲವು ಪುಣ್ಯ ಕ್ಷೇತ್ರಗಳು ಹಾಗೂ ಪ್ರವಾಸಿ ತಾಣಗಳನ್ನ ಈ ಕೋಲಾರ ಜಿಲ್ಲೆ ಹೊಂದಿದೆ. ಆದ್ರೆ ಇಲ್ಲಿಗೆ ಬರುವವರು ಮೊದಲಿಗೆ ಅಂತರಗಂಗೆ ಗೆ ಭೇಟಿ ನೀಡಿ, ನಂತರ ಉಳಿದ ಜಾಗಗಳಿಗೆ ಭೇಟಿ ನೀಡಬೇಕು ಅನ್ನೋದು ವಾಡಿಕೆಯಾಗಿದೆ. ಆದರೆ ಇದರ ಬಗ್ಗೆ ತಿಳಿದಿರುವವರು ಇದೆ ಕ್ರಮವನ್ನ ಅನುಸರಿಸುತ್ತಾರೆ. ನೀವು ಸಹ ಅಂತರಗಂಗೆ ನೀರನ್ನ ಕುಡಿಯಬೇಕೆ ಹಾಗಾದ್ರೆ ಈಗಲೇ ಅಂತರಗಂಗೆ ಗೆ ಭೇಟಿ ನೀಡಿ, ತೀರ್ಥ ಕುಡಿದು ಪಾಪ ಕಳೆದುಕೊಳ್ಳಿ.