ನಮ್ಮ ಕರ್ನಾಟಕ ಸಾಂಸ್ಕೃತಿಕ ಕಲೆಗಳ ನಾಡು. ಶಿಲ್ಪ ನೆಲೆಗಳ ಬೀಡು. ಇಂತ ಒಂದು ಸುಂದರ ತಾಣವನ್ನ ನಾವು ಎಲ್ಲಿಯೂ ನೋಡಲು ಆಗುವುದಿಲ್ಲ. ಯಾಕಂದ್ರೆ ನಮ್ಮಲ್ಲಿ ಇರುವ ವೈಭವ ಅಂತದ್ದು. ನೀನು ಎಲ್ಲಿಂದ ಬಂದರು, ನಮ್ಮವನೇ ಎಂದು ಪ್ರೀತಿಸುವ ರಾಜ್ಯ ನಮ್ಮದು.
ನಮ್ಮಲ್ಲಿ ಹಬ್ಬ, ಹರಿದಿನ ಗಳನ್ನ ಹೆಚ್ಚಾಗಿ ಆಚರಿಸುತ್ತಾರೆ. ಒಂದೊಂದು ಹಬ್ಬಕ್ಕೂ, ಹಾಗೂ ಒಂದೊಂದು ಆಚರಣೆಗೂ ವಿಶೇಷ ಅರ್ಥವಿದೆ. ಇಂತ ಅರ್ಥ ಗರ್ಭಿತವಾದ ಆಚರಣೆಗಳಾವುವು, ಹಾಗೆ ಅವುಗಳನ್ನ ಎಲ್ಲಿ ಆಚರಿಸ್ತಾರೆ ಅಂತ ನಾವು ನಿಮಗೆ ತಿಳಿಸ್ತೀವಿ ನೋಡಿ.
ಕನ್ನಡ ರಾಜ್ಯೋತ್ಸವ
ಕನ್ನಡ ರಾಜ್ಯೋತ್ಸವವನ್ನ ಪ್ರತಿವರ್ಷ ನವಂಬರ್ 1 ರಂದು ಆಚರಿಸಲಾಗುತ್ತದೆ. ಮೈಸೂರು ರಾಜ್ಯವು 1956ರ ನವಂಬರ್ 1ರಂದು ನಿರ್ಮಾಣವಾದುದರ ಸಂಕೇತವಾಗಿ ಈ ರಾಜ್ಯೋತ್ಸವವನ್ನ ಆಚರಿಸಲಾಗುತ್ತದೆ. ದಕ್ಷಿಣ ಭಾರತದ ಎಲ್ಲಾ ಕನ್ನಡ ಭಾಷೆ–ಮಾತನಾಡುವ ಪ್ರದೇಶಗಳನ್ನು ವಿಲೀನಗೊಳಿಸಿ ಒಂದು ರಾಜ್ಯವನ್ನು ಘೋಷಣೆ ಮಾಡಿದ ಈ ದಿನವನ್ನು ಕನ್ನಡಿಗರು ನಾಡಹಬ್ಬವನ್ನಾಗಿ ಆಚರಿಸುತ್ತಾರೆ. ವಿಶ್ವದಾದ್ಯಂತ ಕನ್ನಡಿಗರು ಇದನ್ನ ಆಚರಿಸುತ್ತಾರೆ. ಸಾಧನೆ ಮಾಡಿದವರಿಗೆ ಕರ್ನಾಟಕ ಸರ್ಕಾರದಿಂದ ರಾಜ್ಯೋತ್ಸವ ಪ್ರಶಸ್ತಿ ಪ್ರಧಾನ ಮಾಡಲಾಗುತ್ತದೆ.
ಕಂಬಳ ಹಬ್ಬ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಂಬಳಕ್ಕೆ ತನ್ನದೇ ಆದ ವಿಶೇಷ ಸ್ಥಾನ ಮಾನವಿದೆ. ಕಂಬಳವು ನಿಯಮಬದ್ಧವಾಗಿ, ಅತ್ಯಂತ ವೈಭೋಗದಿಂದ ನಡೆಯುವ, ಜಾನುವಾರು ಮತ್ತು ಜನರಿಂದ ತುಂಬಿ ತುಳುಕುವ ಕರಾವಳಿ ಕನ್ನಡಿಗರ ಹಬ್ಬವೆಂದರೆ ಅತಿಶಯೋಕ್ತಿಯ ಮಾತಲ್ಲ. ಈ ಕಂಬಳ ಗದ್ದೆಯ ಇನ್ನೊಂದು ವಿಶೇಷವೇನೆಂದರೆ, ಹರಕೆ ಸಲ್ಲಿಸುವವರು ಕಂಬಳದ ದಿನ ರಾಶಿ ರಾಶಿ ಸಂಖ್ಯೆಯಲ್ಲಿ ಬರುತ್ತಾರೆ. ಜಾನುವಾರುಗಳಿಗೆ ಯಾವುದಾದರು ಕಾಯಿಲೆ, ಅಸೌಖ್ಯ ಬಂದರೂ ಕಂಬಳದ ಗದ್ದೆಗೆ ಇಳಿಸುತ್ತೇನೆಂದು ಹರಕೆ ಹೊತ್ತರೆ ಅದು ತಕ್ಷಣ ಗುಣಮುಖವಾಗುತ್ತದೆ ಮತ್ತು ಮನುಷ್ಯನ ಮೈಮೇಲೆ ಆಗುವ ಚಮಕಲು, ಬಿಳಿಕಲೆ ಮುಂತಾದ ಅನೇಕ ಕಾಯಿಲೆಗಳೂ ವಾಸಿಯಾಗಲು ಇಲ್ಲಿಗೆ ಹರಕೆ ಹೊರುತ್ತಾರೆ. ಕಂಬಳದ ದಿನ ಬಂದು ಗದ್ದೆಯ ಕಂಟ(ಅಂಚು) ದ ಸುತ್ತಲೂ ಬೆಳ್ತಕ್ಕಿ ಹಾಕಲಾಗುವುದು. ಇದಕ್ಕೆ “ಸುತ್ತಕ್ಕಿ ತಳುವುದು” ಎಂಬ ಹೆಸರು. ಕಂಬಳಗದ್ದೆ ಇಳಿದು ಹೋಗುವುದೂ ಸಹ ಒಂದು ಹರಕೆ. ಇದು ಕಂಬಳದ ದೇವರ ವಿಶೇಷವಾಗಿರುತ್ತದೆ.
ಯುಗಾದಿ ಹಬ್ಬ
ಯುಗಾದಿ ಹಬ್ಬ ಅಂದ್ರೆ ನಮ್ಮ ಜನರಿಗೆ ಅದೇನೋ ಒಂಥರಾ ಸಂಭ್ರಮ. ಯಾಕಂದ್ರೆ ಪಟ್ಟಣದವರಿಗೆ ಜನವರಿ 1 ಹೊಸ ವರ್ಷವಾದ್ರೆ, ಹಳ್ಳಿ ಜನತೆಗೆ ಯುಗಾದಿ ಹಬ್ಬವೇ ಹೊಸ ವರ್ಷ. ಹಾಗಾಗಿ ಆ ದಿನ ಬಂತು ಅಂದ್ರೆ ಸಾಕು, ಎಗ್ಗಿಲ್ಲದ ಸಿರಿ ಎಲ್ಲೆಡೆ ಮನೆ ಮಾಡಿರುತ್ತೆ. ಪ್ರತಿಯೊಬ್ಬರು ಮೈಗೆ ಎಣ್ಣೆ ಹಚ್ಚಿ, ಸ್ನಾನ ಮಾಡಿ ನಂತರ ದೇವಸ್ಥಾನಕ್ಕೆ ಹೋಗಿ ಬಂದು ಮನೆಯಲ್ಲಿ ಸಿಹಿ ತಯಾರಿಸುತ್ತಾರೆ. ಇನ್ನೊಂದು ಹಬ್ಬದ ವಿಶೇಷ ಅಂದ್ರೆ ಅದು ಚಂದ್ರನನ್ನ ನೋಡುವುದು. ಯುಗಾದಿಯಲ್ಲಿ ಬೇವು, ಬೆಲ್ಲ ತಿಂದು ಚಂದ್ರನನ್ನ ನೋಡಿದರೆ, ನಾವು ಮಾಡಿರುವ ಪಾಪ ಹೊರಟು ಹೋಗುತ್ತದೆ ಅನ್ನೋದು ನಮ್ಮ ನಂಬಿಕೆ, ಹಾಗಾಗಿ ನಮ್ಮಲ್ಲಿ ಯುಗಾದಿಯೇ ಹೊಸ ವರ್ಷದ ಹಬ್ಬ.
ಪೊಂಗಲ್ ಹಬ್ಬ
ಕನ್ನಡಿಗರು ಇದನ್ನ ಸಂಕ್ರಾಂತಿ ಹಬ್ಬವನ್ನಾಗಿ ಆಚರಿಸಿದರೆ, ತಮಿಳು ನಾಡಿನಲ್ಲಿ ಇದು ಕೃಷಿಕರ ಹಬ್ಬವಾಗಿ ಆಚರಿಸಲ್ಪಡುತ್ತದೆ. ಉತ್ತಮ ಆದಾಯ ಬೆಳೆ ನೀಡಿದುಕ್ಕಾಗಿ ಸೂರ್ಯ ದೇವನಿಗೆ ‘ಪೊಂಗಲ್‘ ಪೂಜೆಸಲ್ಲಿಸಿ ಕೃತಜ್ಞತೆ ಸಲ್ಲಿಸುವುದು ಇಲ್ಲಿ ಸಂಪ್ರದಾಯ. ವಿಶೇಷವಾಗಿ ಬೆಳೆ ಖಟಾವಿನ ಸಂಭ್ರಮ ಸೂಚಿಸುವ ಈ ಪೊಂಗಲ್, ಒಗ್ಗೂಡಿ ಸಂಭ್ರಮಿಸುವ ಸಮೃದ್ಧಿಯ ಆಚರಣೆಯಾಗಿದೆ. ಪರಸ್ಪರ ಉಡುಗೊರೆ ನೀಡುವುದು. ಸಮೃದ್ಧಿ ನೀಡಿದ ದೇವರಿಗೆ ಪೂಜೆ ಕೈಗೊಳ್ಳುವುದು, ಪ್ರಾರ್ಥನೆಗಳು, ಇತ್ಯಾದಿಗಳೊಂದಿಗೆ, ದಿನದ ವಿಶೇಷವಾದ ಬೇಯಿಸಿದ ಅಕ್ಕಿ, ಅನ್ನದ ಖಾದ್ಯ ತಿಂಡಿಗಳೂ ಇರುತ್ತವೆ. ಸಮೃದ್ಧಿಯ ಸಂಕೇತವಾಗಿರುವ ಪೊಂಗಲ್ ಪ್ರತಿ ವರ್ಷ ಎರಡನೇ ಬೆಳೆಯ ಕಟಾವಿನ ಹಂಗಾಮಿನಲ್ಲಿ ಫಸಲು ಕೂಡಿಸಿ ಹರ್ಷಾಚರಣೆಯ ಸಂತೋಷವಾಗಿ ಆಚರಿಸಲ್ಪಡುತ್ತದೆ. ಇತರೆ ರಾಜ್ಯಗಳಲ್ಲಿ ಇದು ಸಂಕ್ರಾಂತಿ ಅಥವಾ ಮಕರ ಸಂಕ್ರಾಂತಿ ಎಂಬ ಹೆಸರಲ್ಲಿ ವಿವಿಧ ರೀತಿಯ ವಿಧಿ ವಿಧಾನಗಳ ಮೂಲಕ ಆಚರಿಸಲ್ಪಡುತ್ತದೆ.
ವೈರಮುಡಿ ಹಬ್ಬ
ಮೇಲುಕೋಟೆಯಲ್ಲಿ ವರ್ಷಕ್ಕೊಮ್ಮೆ ನಡೆಯುವ ಈ ವೈರಮುಡಿ ಉತ್ಸವ ನಿಜಕ್ಕೂ ಅದ್ಬುತ. ಇದನ್ನ ನೋಡಲು ಸಾವಿರಾರು ಜನ ಭಕ್ತರು ಬರುತ್ತಾರೆ. ಮೇಲುಕೋಟೆಯ ವಿಶ್ವ ವಿಖ್ಯಾತ ಶ್ರೀ ಚಲುವ ನಾರಾಯಣಸ್ವಾಮಿ ಗೆ ಪ್ರತಿವರ್ಷ ವಜ್ರ ಖಚಿತ ವೈರಮುಡಿ ಕಿರೀಟ ಧಾರಣೆ ಮಾಡಲಾಗುತ್ತೆ. ಆ ದಿನ ಖಜಾನೆಯಿಂದ ವೈರಮುಡಿ ಹಾಗೂ ರಾಜಮುಡಿ ಕಿರೀಟಗಳನ್ನ ತಂದು ಉತ್ಸವ ಮೂರ್ತಿಗೆ ಅರ್ಪಿಸುತ್ತಾರೆ. ಶ್ರೀದೇವಿ, ಭೂದೇವಿ ಸಮೇತ ಹೂವಿನ ಪಲ್ಲಕ್ಕಿಯಲ್ಲಿ ವಿರಾಜಮಾನನಾಗಿದ್ದ ಚೆಲುವನನ್ನು ನೋಡಲು ಎಲ್ಲೆಲ್ಲಿಂದಲೋ ಜನರು ಬರುತ್ತಾರೆ. ಇಲ್ಲಿ ಇದು ವಿಶೇಷವಾದ ಹಬ್ಬ ಹಾಗೂ ಉತ್ಸವವಾಗಿದೆ. ಯಾಕಂದ್ರೆ ಇದನ್ನ ಐಲ್ಲಿ ಹಬ್ಬದಂತೆಯೇ ಆಚರಿಸುತ್ತಾರೆ.
ಮೈಸೂರು ದಸರಾ
ದಸರಾ ನಮಗೆಲ್ಲ ನಾಡ ಹಬ್ಬವಿದ್ದಂತೆ. ದಸರಾ ಅಂದ ತಕ್ಷಣ ನಮಗೆಲ್ಲಾ ನೆನಪಾಗೋದು ಅಂದ್ರೆ, ತಾಯಿ ಚಾಮುಂಡೇಶ್ವರಿ ಮಹಿಷಾಸುರನನ್ನ ಕೊಲ್ಲುತ್ತಾಳೆ. ಅದರ ಅಂಗವಾಗಿ ದಸರಾ ಮಾಡುತ್ತೀವಿ, ಹಾಗಾಗಿ ತಾಯಿಯನ್ನ ಅಂಬಾರಿಯಲ್ಲಿಟ್ಟು ಮೆರವಣಿಗೆ ಮಾಡುತ್ತೀವಿ ಅಂತ. ಹೌದು ಇದು ನಿಜ. ಆದ್ರೆ ಈಗ ತಾಯಿಯನ್ನ ಆನೆ ಮೇಲೆ ಕೂರಿಸಿ ಮೆರವಣಿಗೆ ಮಾಡುತ್ತಿದ್ದೀವಿ. ಅಂದ್ರೆ ಈ ಹಿಂದೆ ಮಹಾರಾಜರೇ ಆನೆ ಮೇಲೆ ಕೂತು ಮೆರವಣಿಗೆಗೆ ಹೋಗುತ್ತಿದ್ದರು. ಏನೇ ಆಗಲಿ ಬೆಟ್ಟದ ಮೇಲೆ ನೆಲಸಿರುವ ನಮ್ಮ ತಾಯಿ 9 ದಿನಗಳ ಕಾಲ ವಿವಿಧ ರೂಪಗಳನ್ನ ತಾಳಿ, ಮಹಿಷಾಸುರನನ್ನ ಕೊಲ್ಲುತ್ತಾಳೆ. ಅದೇ ಅಂಗವಾಗಿ ನಮ್ಮಲ್ಲಿ ನವರಾತ್ರಿ ಮಾಡುತ್ತೇವೆ.
ಮಹಾ ಮಸ್ತಕಾಭಿಷೇಕ
ಬಾಹುಬಲಿ ಅಥವಾ ಗೊಮ್ಮಟೇಶ್ವರ, ಜೈನ ಧರ್ಮದಲ್ಲಿ ಮೂಡಿ ಬರುವ ಪ್ರಸಿದ್ಧ ಹೆಸರು. ಶ್ರವಣ ಬೆಳಗೊಳದಲ್ಲಿ ಚಾಮುಂಡರಾಯ ಕೆತ್ತಿಸಿದ 58 ಅಡಿ ಎತ್ತರದ ಏಕಶಿಲಾ ಬಾಹುಬಲಿ ಪ್ರತಿಮೆ ಇರುವುದು. ಸುಮಾರು 12 ವರ್ಷಗಳಿಗೊಮ್ಮೆ ಈ ಪ್ರತಿಮೆಗೆ ಮಹಾ ಮಸ್ತಕಾಭಿಷೇಕವನ್ನು ನೆರವೇರಿಸಲಾಗುತ್ತದೆ. ಇದನ್ನ ನೋಡಲು ಲಕ್ಷಾಂತರ ಭಕ್ತರು ವಿಂದ್ಯಗಿರಿ ಬೆಟ್ಟ ಹತ್ತಿ ಬರುತ್ತಾರೆ. ಇಲ್ಲಿನ ಜನರಿಗೆ ಇದೆ ಪ್ರಮುಖವಾಗಿದೆ. ಇದು ಸುಮಾರು 12 ವರ್ಷಗಳಿಗೊಮ್ಮೆ ಮಾಡುವುದರಿಂದ ಇದನ್ನ ಹಬ್ಬದಂತೆ ಆಚರಿಸುತ್ತಾರೆ.
ತುಲಾ ಸಂಕ್ರಮಣ
ಕಾವೇರಿಯು ಭಾರತದ ದಕ್ಷಿಣದಲ್ಲಿರುವ ಒಂದು ಮುಖ್ಯ ನದಿ. ಇದು ಕರ್ನಾಟಕದ ನೈಋತ್ಯ ಕೊನೆಯಲ್ಲಿರುವ ಕೊಡಗು ಜಿಲ್ಲೆಯ ಬ್ರಹ್ಮಗಿರಿ ಬೆಟ್ಟಸಾಲುಗಳಲ್ಲಿರುವ ತಲಕಾವೇರಿಯಲ್ಲಿ ಹುಟ್ಟುತ್ತದೆ. ಅಲ್ಲಿಂದ ಹುಟ್ಟಿದ ನದಿ ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ಹರಿದು, ಬಂಗಾಳ ಕೊಲ್ಲಿಯನ್ನು ಸೇರುವದು. ಈ ನದಿಯನ್ನು ಹಿಂದೂಗಳು ದೇವರೆಂದು ಪೂಜಿಸುವರು. ವರ್ಷಕ್ಕೊಮ್ಮೆ ಕಾವೇರಿ ಸಂಕ್ರಮಣವನ್ನು ಹಬ್ಬವನ್ನಾಗಿ ತುಲಾ ಸಂಕ್ರಮಣದಂದು ಆಚರಿಸಲಾಗುತ್ತದೆ. ಸೂರ್ಯನು ತುಲಾ ರಾಶಿಯನ್ನು ಪ್ರವೇಶಿಸುವ ದಿನದಂದು, ಅಂದರೆ ಸಾಮಾನ್ಯವಾಗಿ ಅಕ್ಟೋಬರ್ 17ರಂದು, ಒಂದು ನಿಯತ ಕಾಲದಲ್ಲಿ ತೀರ್ಥೋದ್ಭವವುಂಟಾಗುತ್ತದೆ. ತಲಕಾವೇರಿಯಲ್ಲಿರುವ ಒಂದು ಸಣ್ಣ ಕುಂಡಿಕೆಯಲ್ಲಿ ಈ ಮುಹೂರ್ತದಲ್ಲಿ ನೀರು ಭೂಮಿಯೊಳಗಿನಿಂದ ಚಿಲುಮೆಯಂತೆ ಮೇಲೆ ಉಕ್ಕಿ ಹರಿಯುತ್ತದೆ. ಅದನ್ನು ಸಾವಿರಾರು ಜನ ವೀಕ್ಷಿಸಿ, ಕುಂಡಿಕೆಯ ಕೆಳಗಿನ ಸಣ್ಣ ಕೊಳದಲ್ಲಿ ಮಿಂದು, ತೀರ್ಥವನ್ನು ತೆಗೆದುಕೊಂಡು ಹೋಗುತ್ತಾರೆ.
ಹಂಪಿ ಉತ್ಸವ
ಬಳ್ಳಾರಿಯಲ್ಲಿ ಹಂಪಿ ಉತ್ಸವವನ್ನ ಅದ್ದೂರಿಯಾಗಿ ಆಚರಿಸುತ್ತಾರೆ. ಇಲ್ಲಿನ ಜನರಿಗೆ ಇದು ಪ್ರಮುಖ ಹಬ್ಬದಂತಾಗಿದೆ. 1988ರಲ್ಲಿ ಮೊಟ್ಟ ಮೊದಲ ಬಾರಿಗೆ ಹಂಪಿ ಉತ್ಸವವನ್ನ ಆಚರಿಸಲಾಗಿತ್ತು. ಅಂದಿನಿಂದ ಇಲ್ಲಿಯ ವರೆಗೂ ಅದನ್ನ ಸಂಭ್ರಮದಿಂದ ಆಚರಿಸುತ್ತಿದ್ದಾರೆ. ಇದಕ್ಕೂ ಮುನ್ನ ದಾಸಶ್ರೇಷ್ಠರೂ, ಮನುಕುಲದ ಸಾಮಾಜಿಕ ಚಿಕಿತ್ಸಕರೂ ಆದ ಕನಕ–ಪುರಂದರರ ಉತ್ಸವ ನಡೆಯುತ್ತಿತ್ತು. ಆದರೆ ಈಗ ಈ ಉತ್ಸವ ನಡೆಯುತ್ತಿದೆ. ಜನರ ಭಾವನೆಗಳನ್ನು ಪರಸ್ಪರ ಪ್ರೀತಿ, ಪ್ರೇಮ, ಸಾಮರಸ್ಯದೊಂದಿಗೆ ಸಮೀಕರಿಸುವುದು ಈ ಉತ್ಸವದ ಉದ್ದೇಶವಾಗಿದೆ.
ಗೊಡಚಿ ರಥೋತ್ಸವ
ಉತ್ತರ ಕರ್ನಾಟಕದ ಧರ್ಮಸ್ಥಳವೆಂದೇ ಖ್ಯಾತಿ ಪಡೆದ ತಾಲೂಕಿನ ಗೊಡಚಿ ವೀರಭದ್ರೇಶ್ವರ ರಥೋತ್ಸವ ವರ್ಷಕ್ಕೊಮ್ಮೆ ನಡೆಯುತ್ತದೆ. ಈ ಜಾತ್ರೆ ಬಳುವಳಿಕಾಯಿ ಹಾಗೂ ಬೋರೆಹಣ್ಣಿಗೆ ಹೆಸರುವಾಸಿ. ಒಟ್ಟು 5 ದಿನ ನಡೆಯುವ ಜಾತ್ರೆಯಲ್ಲಿ ಲಕ್ಷಾಂತರ ಭಕ್ತರು ಭಾಗವಹಿಸುತ್ತಾರೆ. ದಕ್ಷ ಬ್ರಹ್ಮನ ಸಂಹಾರ ಮಾಡಲೆಂದು ಪರಶಿವನ ಅನುಗ್ರಹದಿಂದ ಅವತರಿಸಿದ ವೀರಭದ್ರೇಶ್ವರ ದಕ್ಷ ಬ್ರಹ್ಮ ಸಂಹಾರಕ್ಕಾಗಿ ರೌದ್ರಾವತಾರ ತಾಳಿ ಹೋರಾಡಿದ ವೀರ ಎಂಬುದನ್ನು ಇತಿಹಾಸ ಹೇಳುತ್ತದೆ. ಹಾಗಾಗಿ ಇಲ್ಲಿ ಗೊಡಚಿ ರತೋತ್ಸವವನ್ನ ಮಾಡಲಾಗುತ್ತದೆ.
ಈ ರೀತಿ ನಮ್ಮ ಕರ್ನಾಟಕದಲ್ಲಿ ಇನ್ನು ಹತ್ತು, ಹಲವಾರು ರೀತಿಯ ಆಚರಣೆಗಳಿವೆ. ನಮ್ಮ ಜನರು ಅವುಗಳನ್ನೆಲ್ಲಾ, ಹಬ್ಬದಂತೆ ಆಚರಿಸುತ್ತಾರೆ.