ವರ್ಷ ಪೂರ್ತಿ ಯುಗಾದಿಗೆ ಕಾಯುವ ಜನ, ಈಗ ಬೆಳಿಗ್ಗೆ ಇಂದ ಮಟ್ಟನ್ ಅಂಗಡಿ ಮುಂದೆ ಕಾಯ್ತಿದ್ದಾರೆ.

0
1050
yugadi hosa todaku

ಹಿಂದೂಗಳಿಗೆ ಹೊಸ ವರ್ಷದ ಮೊದಲ ಹಬ್ಬ ಅಂದ್ರೆ ಅದು ಯುಗಾದಿ. ಯುಗಾದಿ ಹಬ್ಬ ಬಂತು ಅಂದ್ರೆ ಸಾಕು ಮನೆಯಲ್ಲಿ ಸಡಗರದ ವಾತಾವರಣ ಚೆಲ್ಲಿರುತ್ತೆ. ಪ್ರತಿಯೊಬ್ಬರ ಮನೆಯಲ್ಲೂ ಸಂಭ್ರಮ ತುಂಬಿರುತ್ತೆ. ಇಂತ ಯುಗಾದಿಯನ್ನ ಎಲ್ಲರೂ ಅದ್ದೂರಿಯಾಗಿ ಆಚರಿಸ್ತಾರೆ. ಹಬ್ಬದ ದಿನ ಒಬ್ಬಟ್ಟು, ಪಾಯಸ, ಕಜ್ಜಾಯ ಈ ರೀತಿ ಸಿಹಿ ಮಾಡಿ ತಿಂದ್ರೆ, ಇನ್ನೂ ಹಬ್ಬದ ಮಾರನೇ ದಿನ ಭರ್ಜರಿಯಾಗಿ ಬಾಡೂಟ ರೆಡಿ ಮಾಡ್ತಾರೆ.

ಹೌದು. ಹಬ್ಬದ ಮರುದಿನ ಆಚರಿಸುವ ಹೊಸ ತೊಡಕು ಎಲ್ಲರಿಗೂ ಅಚ್ಚುಮೆಚ್ಚು. ಹಬ್ಬದ ದಿನ ಸಿಹಿ ತಿಂದವರು, ಮಾರನೇ ದಿನಕ್ಕೋಸ್ಕರ ಕಾತುರದಿಂದ ಕಾಯ್ತಿರ್ತಾರೆ. ಯಾಕಂದ್ರೆ ನಮ್ಮ ಸಂಪ್ರದಾಯದ ಪ್ರಕಾರ ಹಬ್ಬ ಆದ ಮರುದಿನ ಹೊಸ ತೊಡಕು ಮಾಡುವುದು ವಾಡಿಕೆ. ಎಷ್ಟೋ ವರ್ಷಗಳಿಂದ ಈ ಸಂಪ್ರದಾಯವನ್ನ ನಡೆಸಿಕೊಂಡು ಬರುತ್ತಿದ್ದಾರೆ.

ಹೊಸ ತೊಡಕು

ಯುಗಾದಿ ಹಬ್ಬದ ಮಾರನೆಯ ದಿನವನ್ನು ವರ್ಷ ತೊಡಕು ಎಂದು ಆಚರಿಸಲಾಗುತ್ತದೆ. ವರ್ಷ ತೊಡಕು ಎನ್ನುವುದು ಹೊಸ ಕಾರ್ಯಗಳಿಗೆ ತೊಡಗಿಸಿಕೊಳ್ಳುವ ದಿನವಾಗಿದ್ದು, ಅಂದು ವರ್ಷಪೂರ್ತಿ ಯಾವುದೇ ತೊಡಕುಗಳು ಬಾರದಿರಲಿ ಎಂದು ದೇವರಲ್ಲಿ ಪ್ರಾರ್ಥಿಸಿಕೊಳ್ಳಲಾಗುತ್ತದೆ. ಹೀಗಾಗಿ ವರ್ಷ ತೊಡಕಿಗೂ ಯುಗಾದಿ ದಿನದಷ್ಟೇ ಪ್ರಾಮುಖ್ಯತೆ. ಈ ದಿನ ವಿವಿಧ ಬಗೆಯ ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮಗಳು, ವಿವಿಧ ರೀತಿಯ ಸ್ಪರ್ಧೆಗಳನ್ನು ನಡೆಸುವ ಮೂಲಕ ಮನರಂಜನೆಯನ್ನು ಪಡೆಯುತ್ತಾರೆ. ಅಂದು ಯಾವುದೇ ವ್ಯಕ್ತಿ ಒಳ್ಳೆಯ ಕೆಲಸ ಮಾಡಿದರೆ ಅದನ್ನು ವರ್ಷಪೂರ್ತಿ ಮಾಡುತ್ತಾನೆ ಹಾಗೂ ಅಂದು ದೊರೆತ ಸಂಪತ್ತು ವರ್ಷ ಪೂರ್ತಿ ದೊರೆಯುತ್ತಲೇ ಇರುತ್ತದೆ ಎಂಬ ನಂಬಿಕೆ ಇದೆ.

 

ಕುರಿ ಕೋಳಿಗೆ ಡಿಮ್ಯಾಂಡೋ ಡಿಮ್ಯಾಂಡು

ಯುಗಾದಿ ಹಬ್ಬದಲ್ಲಿ ಸಿಹಿ ತಿಂಡಿಗೆ ಬೇಕಾಗುವ ಸಾಮಗ್ರಿಗಳಿಗೆ ಯಾವ ಬೆಲೆ ಇರುತ್ತೋ, ಅದರ ಮರುದಿನ ಕುರಿ ಕೋಳಿಗೆ ಅದಕ್ಕಿಂತ ದುಬಾರಿ ಬೆಲೆ ಇರುತ್ತೆ. ಈ ದಿನ ಕುರಿ, ಕೋಳಿಗೆ ಇರೋ ಬೆಲೆ ಬೇರೆ ಯಾವ ದಿನವೂ ಇರಲ್ಲ. ಬೆಳಿಗ್ಗೆಯೇ ಎದ್ದು, ಅಂಗಡಿ ಮುಂದೆ ಸಾಲುಗಟ್ಟಿ ನಿಲ್ಲುತ್ತಾರೆ. ಹಳ್ಳಿಗಳಲ್ಲಿ ಕೆಲವರು ಹೊಸ ತೊಡಕಿಗೆ ಅಂತಾನೆ, ವರ್ಷದಿಂದ ಕುರಿ, ಕೋಳಿಯನ್ನ ಸಾಕ್ತಾರೆ. ಆದರೆ ನಗರದ ಜನರಿಂದ ಅದು ಕಷ್ಟ. ಹಾಗಾಗಿ ಇರೋ ಕೆಲಸ ಎಲ್ಲ ಬಿಟ್ಟು, ಹೊಸ ತೊಡಕಿನ ದಿನ ಮಟ್ಟನ್ ಅಂಗಡಿ ಮುಂದೆ ನಿಂತಿರ್ತಾರೆ.

ಗಗನಕ್ಕೇರಿದ ಬೆಲೆ

ಯಾವಾಗಲೂ ಈರುಳ್ಳಿ ಬೆಲೆ, ಟೊಮ್ಯಾಟೋ ಬೆಲೆ ಗಗನಕ್ಕೇರಿದೆ ಅಂತಾರೆ. ಆದ್ರೆ ಈ ದಿನ ಕುರಿ, ಕೋಳಿ ಬೆಲೆ ಕೇಳಿದ್ರೆ, ಎಂಥವರು ಸುಸ್ತಾಗ್ತಾರೆ. ಯಾಕಂದ್ರೆ ಗಗನವನ್ನೇ ಮೀರಿ ಹೋಗಿರುತ್ತೆ ಇವತ್ತಿನ ಬೆಲೆ. ಆದರೂ ಹೊಸ ತೊಡಕನ್ನ ಆಚರಿಸದೇ ಇರೋಕಾಗುತ್ತಾ. ಸಾಧ್ಯನೇ ಇಲ್ಲ. ರೇಟ್ ಎಷ್ಟಾದ್ರೆ ಏನಂತೆ. ಗ್ರ್ಯಾಂಡ್ ಆಗಿ ಹಬ್ಬ ಆಚರಿಸಬೇಕು ಅಂತಾರೆ ನಮ್ಮ ಜನ. ಅದಕ್ಕೋಸ್ಕರ, ಬೆಳಿಗ್ಗೆಯೇ ಹೋಗಿ ಸಾಲುಗಟ್ಟಿ ನಿಂತಿದ್ದಾರೆ ಚಿಕನ್ ಮಟನ್ ಅಂಗಡಿಗಳ ಮುಂದೆ.

ಒಟ್ಟಿನಲ್ಲಿ ಜನರು ಹೊಸ ತೊಡಕನ್ನ ಅದ್ದೂರಿಯಾಗಿ ಆಚರಿಸುತ್ತಿರೋದಂತೂ ನಿಜ. ಇದರ ಮಧ್ಯೆ ಮಟ್ಟನ್ ಅಂಗಡಿಯವರಿಗಂತೂ ಒಳ್ಳೆ ಲಾಭ. ಎಷ್ಟು ರೇಟ್ ಆದ್ರೂ ಇವತ್ತು ಮಾಂಸ ತಗೊಂಡ್ ಹೋಗ್ತಾರೆ ಅಂತ ಗೊತ್ತು. ಹಾಗಾಗಿ ಎಲ್ಲ ಅಂಗಡಿಗಳು ನಿನ್ನೆ ರಾತ್ರಿಯಿಂದಲೇ ಇದಕ್ಕೆ ಸಜ್ಜಾಗಿವೆ. ನಮ್ಮ ಜನರು ಅಷ್ಟೇ, ಬೆಳಗ್ಗಿನ ಜಾವದಿಂದಲೇ ಅಂಗಡಿಗಳ ಮುಂದೆ, ಸಾಲುಗಟ್ಟಿ ನಿಂತಿದ್ದಾರೆ.

LEAVE A REPLY

Please enter your comment!
Please enter your name here