ತೇಜಸ್ವಿ ಸೂರ್ಯ ಅವರಿಗೆ ಟಿಕೆಟ್ ನೀಡಲು ಕಾರಣಗಳೇನು? ಯಾರ ಪಾಲಾಗಲಿದೆ ಬೆಂಗಳೂರು ದಕ್ಷಿಣ.

0
1631

ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆ ಪಕ್ಷ ಪಕ್ಷಗಳ ನಡುವೆ ಜಿದ್ದಾಜಿದ್ದಿ ಏರ್ಪಟ್ಟಿದೆ. ನಾ ಮುಂದು, ತಾ ಮುಂದು ಅಂತ ಕಣಕ್ಕಿಳಿಯುತ್ತಿದ್ದಾರೆ. ಚುನಾವಣೆ ಹತ್ತಿರ ಬಂದರೂ, ಇನ್ನು ಕೆಲವೊಂದು ಪಕ್ಷಗಳಲ್ಲಿರುವ ಗೊಂದಲ ಮುಗಿದಿಲ್ಲ. ಯಾವ ಕ್ಷೇತ್ರಕ್ಕೆ ಯಾರನ್ನ ನಿಲ್ಲಿಸೋದು. ಯಾವ ಅಭ್ಯರ್ಥಿ ನಿಂತರೆ ಗೆಲುವು ನಮ್ಮದಾಗುತ್ತೆ ಅನ್ನೋದನ್ನ ನೋಡ್ತಿದ್ದಾರೆ.
ಈ ಕಾರಣದಿಂದಲೇ ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಭಾರಿ ಗೊಂದಲ ಏರ್ಪಟ್ಟಿತ್ತು. ಆದರೆ ಆ ಗೊಂದಲಕ್ಕೆ ಬಿಜೆಪಿ ಯವರು ರಾತ್ರೋರಾತ್ರಿ ತೆರೆ ಎಳೆದಿದ್ದಾರೆ.

ಣಕ್ಕಿಳಿದಿದ್ದಾರೆ ತೇಜಸ್ವಿ ಸೂರ್ಯ

ಭಾರೀ ಕುತೂಹಲಕ್ಕೆ ಕಾರಣವಾಗಿದ್ದ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ತೇಜಸ್ವಿ ಸೂರ್ಯ ಅವ್ರಿಗೆ ಬಿಜೆಪಿ ಮಣೆ ಹಾಕಿದೆ. ನಿಜಕ್ಕೂ ಸಾಮಾನ್ಯರಿಗೆ ತೇಜಸ್ವಿ ಅವರದ್ದು ಹೊಸ ಮುಖ. ಆದರೂ ಬಿಜೆಪಿ ಹೊಸಬರಿಗೆ ಅವಕಾಶ ನೀಡಿರುವುದು ನಿಜಕ್ಕೂ ಆಶ್ಚರ್ಯದ ವಿಷಯವಾಗಿದೆ. ವೃತ್ತಿಯಲ್ಲಿ ವಕೀಲರಾಗಿರುವ ತೇಜಸ್ವಿ ಸೂರ್ಯ ಬಿಜೆಪಿ ಯುವ ಮೋರ್ಚಾದ ಉಪಾಧ್ಯಕ್ಷ ಕೂಡ ಹೌದು. ತಮ್ಮ ಹಿಂದುತ್ವ ವಾದದ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಸಾಮಾಜಿಕ ಜಾಲತಾಣ ಹಾಗೂ ಸಾರ್ವಜನಿಕ ಭಾಷಣಗಳಲ್ಲಿ ಮೋದಿ ಬಗ್ಗೆ ಅಪಸ್ವರ ಎತ್ತಿದವರ ವಿರುದ್ಧ ತೊಡೆ ತಟ್ಟಿ ನಿಂತಿದ್ದರು ಈ ತೇಜಸ್ವಿ ಸೂರ್ಯ.

ತೇಜಸ್ವಿನಿ ಅವರಿಗೆ ಟಿಕೆಟ್ ನೀಡುವ ನಿರೀಕ್ಷೆಯಿತ್ತು

ಬೆಂಗಳೂರು ದಕ್ಷಿಣಕ್ಕೆ ಈ ಭಾರಿ ತೇಜಸ್ವಿನಿ ಅವರಿಗೆ ಟಿಕೆಟ್ ಸಿಗುತ್ತದೆ ಎಂದು ಎಲ್ಲರೂ ನಿರೀಕ್ಷೆ ಹೊಂದಿದ್ದರು. ಯಾಕಂದ್ರೆ ತೇಜಸ್ವಿನಿ ಅವರು ಅನಂತ್ ಕುಮಾರ್ ಅವರ ಪತ್ನಿ. ಅನಂತ್ ಕುಮಾರ್ ಅವರು ಮೊದಲು ಈ ಕ್ಷೇತ್ರದಲ್ಲಿ ಸತತ 6 ಬಾರಿ ಪ್ರತಿನಿಧಿಸಿದ್ದರು. ಹಾಗಾಗಿ ಅನಂತ್ ಕುಮಾರ್ ಪತ್ನಿ ತೇಜಸ್ವಿನಿಗೆ ಇಲ್ಲಿ ಟಿಕೆಟ್ ನೀಡಲಾಗುತ್ತದೆ ಎನ್ನಲಾಗಿತ್ತು. ಜೊತೆಗೆ ತೇಜಸ್ವಿನಿ ಸರ್ಕಾರಿಯೇತರ ಕೆಲಸಗಳ ಮೂಲಕ ಹೆಚ್ಚು ಗುರುತಿಸಿಕೊಂಡಿದ್ದರು. ಹೀಗಾಗಿ ಬೆಂಗಳೂರು ದಕ್ಷಿಣ ಕ್ಷೇತ್ರಕ್ಕೆ ರಾಜ್ಯ ನಾಯಕರು ತೇಜಸ್ವಿನಿ ಹೆಸರನ್ನ ಮಾತ್ರ ಶಿಫಾರಸ್ಸು ಮಾಡಿದ್ದರು. ಇದಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರು ಕೂಡ ಮುಕ್ತ ಮನಸ್ಸಿನಿಂದ ತೇಜಸ್ವಿನಿ ಬೆಂಬಲಕ್ಕೆ ನಿಂತಿದ್ದರು. ಹೀಗಾಗಿ ರಾಜ್ಯ ನಾಯಕರ ಒಮ್ಮತದ ಮೇರೆಗೆ ಬೆಂಗಳೂರು ದಕ್ಷಿಣ ಕ್ಷೇತ್ರಕ್ಕೆ ತೇಜಸ್ವಿನಿ ಅನಂತ್ ಕುಮಾರ್ ಹೆಸರನ್ನ ಘೋಷಣೆ ಮಾಡುವುದು ಮಾತ್ರ ಬಾಕಿ ಉಳಿದಿತ್ತು. ಆದರೆ ಬಿಜೆಪಿಯ ಈ ನಡೆ ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ.

ತೇಜಸ್ವಿನಿ ಅವರು ಬೆಂಗಳೂರು ದಕ್ಷಿಣದಿಂದ ಸ್ಪರ್ಧಿಸುತ್ತಾರೆ ಅನ್ನೋ ಮಾತಿನ ಹಿಂದೆಯೇ, ಕಳೆದ 4 ದಿನಗಳಿಂದ ಲೆಕ್ಕಾಚಾರ ಬದಲಾಗಿತ್ತು. ಬೆಂಗಳೂರು ದಕ್ಷಿಣದಿಂದ ನರೇಂದ್ರ ಮೋದಿ ಅವರು ಸ್ಪರ್ಧಿಸಲಿದ್ದಾರೆ ಎನ್ನುವ ವಿಚಾರವೂ ಹರಿದಾಡಿ ತಣ್ಣಗಾಗಿತ್ತು. ಇದರಿಂದ ವಿರೋಧ ಪಕ್ಷಗಳ ನಾಯಕರಲ್ಲಿ ಆತಂಕವನ್ನು ತಂದಿಟ್ಟಿತ್ತು

ರಾತ್ರೋರಾತ್ರಿ ಅಭ್ಯರ್ಥಿ ಹೆಸರು ಘೋಷಣೆ ಮಾಡಿದ ಬಿಜೆಪಿ

ನಿನ್ನೆ ಸಂಜೆ ವರೆಗೂ ಬೆಂಗಳೂರು ದಕ್ಷಿಣದಿಂದ ಅಭ್ಯರ್ಥಿ ಹೆಸರು ಘೋಷಣೆ ಆಗಿರಲಿಲ್ಲ. ಯಾಕಂದ್ರೆ ಎಲ್ಲರೂ ತೇಜಸ್ವಿನಿಯವರೇ ಫೈನಲ್ ಅಂತ ತಿಳಿದಿದ್ದರು. ಆದ್ರೆ ಬಿಜೆಪಿ ರಾತ್ರೋರಾತ್ರಿ ತೇಜಸ್ವಿ ಸೂರ್ಯ ಅವರ ಹೆಸರನ್ನ ಘೋಷಣೆ ಮಾಡಿದೆ. ಹಿಂದುತ್ವ ಹಾಗೂ ತಮ್ಮ ಮಾತಿನ ಮೂಲಕ ಗುರುತಿಸಕೊಂಡಿರುವ ತೇಜಸ್ವಿ ಸೂರ್ಯ ಅವರಿಗೆ ಟಿಕೆಟ್ ನೀಡಿದ್ದು, ಅನಂತ್ ಕುಮಾರ್ ಬಣದವರಿಗೆ ಶಾಕ್ ನೀಡಿದೆ. ತೇಜಸ್ವಿ ಸೂರ್ಯ, ಬಿಎಸ್ ಯಡಿಯೂರಪ್ಪ ಅವರಿಗೆ ಬಲು ಆಪ್ತರು. ಅಲ್ಲದೇ ಬಸವನಗುಡಿಯಲ್ಲಿ ಮೂರೂ ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ರವಿಸುಬ್ರಮಣ್ಯ ಅವರ ಸೋದರ ಕೂಡ.

ಹಲವು ವರ್ಷಗಳಿಂದ ಕಾಂಗ್ರೆಸ್ ಗೆ ಸಿಗದ ಬೆಂಗಳೂರು ದಕ್ಷಿಣ

ಬೆಂಗಳೂರು ದಕ್ಷಿಣ 1977ರಿಂದ ಕಾಂಗ್ರೆಸ್ ತೆಕ್ಕೆಗೆ ಸರಿಯಾಗಿ ಸಿಕ್ಕಿಲ್ಲ. 1989ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಿನ ಕೇಕೆ ಹಾಕಿದ್ದು ಬಿಟ್ಟರೆ ಕಾಂಗ್ರೆಸ್ ಗೆ ಇಲ್ಲಿ ಗೆಲುವು ಸಾಧ್ಯವಾಗಲೇ ಇಲ್ಲ. ಮಾಜಿ ಮುಖ್ಯಮಂತ್ರಿ ಆರ್. ಗುಂಡೂರಾವ್ ಭಾರೀ ಅಂತರದಿಂದ ಗೆದ್ದಿದ್ದರು. 1991ರಿಂದಲೂ ಈ ಕ್ಷೇತ್ರ ಬಿಜೆಪಿ ತೆಕ್ಕೆಯಲ್ಲೇ ಇದೆ. ಮೊದಲಿನಿಂದಲೂ ಈ ಕ್ಷೇತ್ರದಲ್ಲಿ ಬಿಜೆಪಿ, ಬ್ರಾಹ್ಮಣ ಅಭ್ಯರ್ಥಿಯನ್ನೇ ಕಣಕ್ಕೆ ಇಳಿಸುತ್ತಿದೆ. ಇನ್ಫೋಸಿಸ್ ನ ಸಹ ಸಂಸ್ಥಾಪಕ ಹಾಗೂ ಆಧಾರ್ ಯೋಜನೆ ಆರಂಭಿಸಿದ ನಂದನ್ ನಿಲೇಕಣಿ 2004ರಲ್ಲಿ ಅನಂತ್ ಕುಮಾರ್ ವಿರುದ್ಧ ಸ್ಪರ್ಧಿಸಿ ಸೋಲಿನ ಕಹಿ ಉಂಡಿದ್ದರು.

ಹಲವು ವರ್ಷಗಳಿಂದಲೂ ಬೆಂಗಳೂರು ದಕ್ಷಿಣ ಬಿಜೆಪಿ ತೆಕ್ಕೆಯಲ್ಲಿದೆ. ಆಗಿಂದಲೂ ಅದನ್ನ ಯಾರಿಂದಲೂ ಕಸಿದುಕೊಳ್ಳಲು ಆಗಿಲ್ಲ. ಹಾಗಾಗಿ ಈ ಬಾರಿಯೂ ಇಲ್ಲಿ ಬಿಜೆಪಿ ಗೆಲ್ಲಲ್ಲಿದೆ ಎನ್ನುವುದಕ್ಕೆ ಅನುಮಾನ ಉಳಿದಿಲ್ಲ. ತೇಜಸ್ವಿ ಸೂರ್ಯ ಕೂಡ ಬ್ರಾಹ್ಮಣ ಕುಟುಂಬದಿಂದ ಬಂದವರು. ಈ ಕ್ಷೇತ್ರವನ್ನು ಪ್ರತಿನಿಧಿಸಿ ಗೆದ್ದ 10ನೇ ಬ್ರಾಹ್ಮಣ ಅಭ್ಯರ್ಥಿ ಎನ್ನುವ ಖ್ಯಾತಿಗೆ ತೇಜಸ್ವಿ ಪಾತ್ರರಾಗಲಿದ್ದಾರಾ ಅನ್ನೋದು ಮೇ 23ರಂದು ಉತ್ತರ ಕಂಡುಕೊಳ್ಳಬೇಕು.

LEAVE A REPLY

Please enter your comment!
Please enter your name here