ನಟ ಸಾರ್ವಭೌಮನ ಬಗೆಗಿನ ಯಾರೂ ಕೇಳಿರದ ವಿಶೇಷ ಸಂಗತಿಗಳು.

0
1603

ಏಪ್ರಿಲ್ 12 ಅಂದ್ರೆ ರಾಜ್ ಅಭಿಮಾನಿಗಳಿಗೆ ದುಃಖದ ದಿನ. ಯಾಕಂದ್ರೆ ಅವತ್ತು ಅಣ್ಣಾವ್ರು ನಮ್ಮನ್ನ ಅಗಲಿದ ದಿನ. ಹಾಗಾಗಿ ಏಪ್ರಿಲ್ 12 ಬಂದ್ರೆ ಸಾಕು, ರಾಜ್ ಅಭಿಮಾನಿಗಳಲ್ಲಿ ಅದೇನೋ ಒಂಥರಾ ಬೇಸರ. ಇವತ್ತು ಅವರು ನಮ್ಮಿಂದ ದೂರವಾದ ದಿನ. ಅವರ ಅಭಿಮಾನಿಗಳು ಅವರನ್ನ ನೆನೆದು ಇವತ್ತು ಸ್ಮರಿಸುತ್ತಿದ್ದಾರೆ. ಅಣ್ಣಾವ್ರ ಬಗ್ಗೆ ನಾವು ಎಷ್ಟೇ ತಿಳಿದುಕೊಂಡರೂ, ಇನ್ನೂ ತಿಳಿಯಬೇಕಾದ ಹಲವು ವಿಷಯಗಳಿರುತ್ತವೆ.

ಹೌದು. ಇವತ್ತು ಅವರ ಪುಣ್ಯ ತಿಥಿ. ಹಾಗಾಗಿ ಅವರನ್ನ ನೆನೆದು, ಅವರ ಬಗೆಗಿನ ಕೆಲವೊಂದು ವಿಷಯಗಳನ್ನ ನಾವು ನಿಮ್ಮ ತಿಳಿಸುತ್ತಿದ್ದೇವೆ.

ಸದಾ ಬಿಳಿ ಬಟ್ಟೆಯಲ್ಲಿ ಇರುತ್ತಿದ್ದ ಅಣ್ಣಾವ್ರು

ನಮ ಅಣ್ಣಾವ್ರು ಯಾವಾಗಲು ಸದಾ ಬಿಳಿ ಬಟ್ಟೆಯಲ್ಲಿ ಇರುತ್ತಿದ್ದರು. ಶೂಟಿಂಗ್ ಸಮಯದಲ್ಲಿ ಬಿಟ್ಟರೆ ಅವರು ಎಂದಿಗೂ ಬೇರೆ ಬಣ್ಣದ ಬಟ್ಟೆ ಹಾಕುತ್ತಿರಲಿಲ್ಲ. ಯಾವುದಾದರು ಸಭೆ, ಸಮಾರಂಭವಾದರೂ ಅವ್ರು ಬಿಳಿ ಬಟ್ಟೆಯಲ್ಲೇ ಹೋಗುತ್ತಿದ್ದರು. ಯಾರು, ಎಷ್ಟೇ ಹೇಳಿದರು ಅವರು ಬಣ್ಣದ ಅಂಗಿಗಳನ್ನ ತೊಡುತ್ತಿರಲಿಲ್ಲ. ಶೂಟಿಂಗ್ ಸಮಯದಲ್ಲಿ ಹಾಕುತ್ತಿದ್ದ ಬಟ್ಟೆಯನ್ನು ಅಷ್ಟೇ, ಶೂಟಿಂಗ್ ಮುಗಿದ ತಕ್ಷಣವೇ ತೆಗೆದು, ಅಲ್ಲೇ ಬಿಳಿ ಬಟ್ಟೆಯನ್ನ ಹಾಕಿಕೊಳ್ಳುತ್ತಿದ್ದರು.

ಕಲರ್ ಶರ್ಟ್ ಹಾಕಿಸಿದ ಛಾಯಾಗ್ರಾಹಕ

ಸದಾ ಯಾವಾಗಲು, ಬಿಳಿ ಬಟ್ಟೆ ಹಾಕುತ್ತಿದ್ದ ರಾಜ್ ಅವರಿಗೆ ಕಲರ್ ಶರ್ಟ್ ಹಾಕಿಸಲು ಛಾಯಾಗ್ರಾಹಕ ಅಶ್ವತ್ಥ ನಾರಾಯಣ ಅವರು ಬಹಳಷ್ಟು ಕಷ್ಟ ಪಟ್ಟಿದ್ದರು. 1988ರ ಇಸವಿಯಲ್ಲಿ ಅಶ್ವತ್ಥ ನಾರಾಯಣ ಅವ್ರಿಗೆ ರಾಜ್ ಕುಮಾರ್ ಅವರ ವಿಭಿನ್ನ ಫೋಟೋಗಳು ಬೇಕಿತ್ತು. ಯಾಕಂದ್ರೆ ಎಲ್ಲರ ಬಳಿಯೂ ರಾಜ್ ಅವರ ಬಿಳಿ ಬಣ್ಣದ ಫೋಟೋಗಳು ಮಾತ್ರ ಇದ್ದವು. ಕಲರ್ ಬಟ್ಟೆ ಫೋಟೋಗಳು ಯಾರ ಬಳಿಯೂ ಇರಲಿಲ್ಲ. ಹಾಗಾಗಿ ಅಶ್ವತ್ಥ ನಾರಾಯಣ ಹಾಗೂ ಸುಬ್ಬರಾವ್ ಅವರಿಗೆ ಕಲರ್ ಫೋಟೋ ಬೇಕಿತ್ತು. ಇದೆ ವಿಚಾರವಾಗಿ ಇಬ್ಬರು ಅಣ್ಣಾವ್ರ ಮನೆಗೆ ಹೋದರು. ಹೋದವರು ನಿಮ್ಮ ಕೆಲವೊಂದು ಫೋಟೋಗಳು ಬೇಕಿತ್ತು ಎಂದು ಹೇಳಿದಾಗ, ಅಣ್ಣಾವ್ರು ಧಾರಾಳವಾಗಿ ತೆಗೆದುಕೊಳ್ಳಿ ಎಂದರು. ಆದರೆ ಅವರಿಗೆ ಬೇಕಾಗಿದ್ದು, ಕಲರ್ ಫೋಟೋಗಳು.

ಸಂಕೋಚದಿಂದಲೇ ಕಲರ್ ಶರ್ಟ್ ಹಾಕಲು ಹೇಳಿದ ಅಶ್ವಥ್ ನಾರಾಯಣ್

ಬಿಳಿ ಬಟ್ಟೆ ಹಾಕಿದ್ದ ರಾಜ್ ಅವರಿಗೆ ಕಲರ್ ಶರ್ಟ್ ಹಾಕಿಕೊಳ್ಳಲು ಹೇಳಲು ಇವರು ತುಂಬಾ ಸಂಕೋಚ ಪಟ್ಟರು. ಸರ್ ಫೋಟೋ ಗೆ ಕಲರ್ ಶರ್ಟ್ ಹಾಕಿಕೊಳ್ಳಬಹುದಲ್ವಾ ಎಂದು ಸಂಕೋಚದಿಂದಲೇ ಕೇಳಿದರು. ಆದ್ರೆ ಇದಕ್ಕೆ ಉತ್ತರಿಸಿದ ರಾಜ್, ನಾನು ಶೂಟಿಂಗ್ ಸಮಯದಲ್ಲಿ ಬಿಟ್ಟರೆ, ನಾನು ಯಾವತ್ತೂ ಕಲರ್ ಶರ್ಟ್ ಹಾಕಿಕೊಳಲ್ಲ ಎಂದರು. ಆದರೆ ಇವರು ತುಂಬಾ ಕೇಳಿಕೊಂಡಿದ್ದರಿಂದ, ಹೋಗಿ ತಮ್ಮ ಅಳಿಯನ ಶರ್ಟ್ ಹಾಕಿಕೊಂಡು ಬಂದರು. ಪಾಪ ಅವರಿಗೆ ಆ ಬಟ್ಟೆ ಆಗುತ್ತಿರಲಿಲ್ಲ. ಆದರೂ ಅದರಲ್ಲೇ ಫೋಟೋ ತೆಗೆಯೋಕೆ ಹೇಳಿದರು. ಆದರೆ ಆ ಸಮಯದಲ್ಲಿ ಹೊರಗೆ ಮಳೆ ಬರುತ್ತಿತ್ತು. ಮಳೆ ಬರುತ್ತಿದೆ ಸರ್ ಎಂದಾಗ, ಅಯ್ಯೋ ಇದ್ಯಾವ ಮಳೆ, ಬನ್ನಿ ಫೋಟೋ ತೆಗೆದುಕೊಳ್ಳಿ ಎಂದು ಸರಾಗವಾಗಿ ಮಾತನಾಡುತ್ತ, ಮಳೆಯಲ್ಲೇ ಫೋಟೋ ತೆಗೆಸಿಕೊಂಡರು.

ರಾಜ್ ಅವರ ಕುಣಿತಕ್ಕೆ, ಸ್ಟೆಪ್ ಹಾಕಿದ ಕೋತಿ

ಚಿಕ್ಕಬಳ್ಳಾಪುರ ಸಮೀಪದ ನಂದಿಬೆಟ್ಟದಲ್ಲಿ ರಾಜ್ ಕುಮಾರ್ ಅಭಿನಯದ ಭೂಪತಿ ರಂಗ ಸಿನಿಮಾ ಹಾಡಿನ ಶೂಟಿಂಗ್ ನಡೆಯುತ್ತಿತ್ತು. ಹಾಡಿನಲ್ಲಿ ರಾಜ್ ಅವರಿಗೆ ಉದಯ ಚಂದ್ರಿಕಾ ಜೋಡಿಯಾಗಿದ್ದರು. ಯಾವಾಗಲು ಅಷ್ಟೇ ರಾಜ್ ಅವರ ಶೂಟಿಂಗ್ ಸಮಯದಲ್ಲಿ ಛಾಯಾಗ್ರಾಹಕರು ಅವರ ವಿಭಿನ್ನ ಫೋಟೋಗಳನ್ನ ತೆಗೆದುಕೊಳ್ಳುವ ಕಾರ್ಯದಲ್ಲಿ ಮುಳುಗಿರುತ್ತಿದ್ದರು. ಅದೇ ರೀತಿ ಈ ಸಿನಿಮಾದ ಚಿತ್ರೀಕರಣದ ವೇಳೆಯೂ, ಛಾಯಾಗ್ರಾಹಕ ಭವಾನಿ ಲಕ್ಷ್ಮೀನಾರಾಯಣ ಅವರು ಅಣ್ಣಾವ್ರ ಫೋಟೋ ತೆಗೆಯಲು ಮುಂದಾದರು. ಆದರೆ ಅಷ್ಟರಲ್ಲಿ ಅಲ್ಲಿಗೆ ಒಂದು ಕೋತಿ ಓಡಿಬಂತು.

ಅಣ್ಣಾವ್ರ ಮುಂದೆ ಸ್ಟೆಪ್ ಹಾಕಿದ ಕೋತಿ

ಕೋತಿ ಬಂದ ಕೂಡಲೇ, ಅಲ್ಲಿದ್ದ ಚಿತ್ರತಂಡದ ಹುಡುಗರು, ಅದನ್ನ ಓಡಿಸೋಕೆ ಮುಂದಾಗಿದ್ದಾರೆ. ಆದರೆ ಆ ಕೋತಿ ಜಪ್ಪಯ್ಯ ಅಂದ್ರು ಕಾಲು ತೆಗೆಯಲಿಲ್ಲ. ಅವರ ಕಾಲ ಬಳಿಯೇ ಸುತ್ತಾಡುತ್ತಿತ್ತು. ಕೋತಿಯನ್ನ ರಾಜ್ ಪ್ರೀತಿಯಿಂದ ಮಾತನಾಡಿಸಿದರು. ನಂತರ ಅದರ ಮುಂದೆಯೇ ಡಾನ್ಸ್ ಮಾಡೋಕೆ ಶುರು ಮಾಡಿದರು. ಅವರ ಡಾನ್ಸ್ ನೋಡಿದ, ಕೋತಿಯು ಸಹ ಎರಡು ಸ್ಟೆಪ್ ಹಾಕಿತು. ನಿಜಕ್ಕೂ ಆ ದೃಶ್ಯವನ್ನ ನೋಡೋಕೆ ಎರಡು ಕಣ್ಣು ಸಾಲದು ಅಂತಾರೆ, ಈ ಫೋಟೋ ತೆಗೆದ ಛಾಯಾಗ್ರಾಹಕರು.

ಈ ರೀತಿ ಕೆಲವ್ರು ಇಂದು ರಾಜ್ ಅವರ ಜೊತೆಗೆ ನಡೆದ ಕೆಲವೊಂದು ಘಟನೆಗಳನ್ನ ಮೆಲುಕು ಹಾಕುತ್ತಿದ್ದಾರೆ. ಯಾಕಂದ್ರೆ ಅವರ ನಟನೆ ಅಪಾರ. ಹಾಗಾಗಿ ಅವರ ನಟನೆಯ ಸಂದರ್ಭದಲ್ಲಿ ಅಥವಾ ಅವ್ರನ್ನ ಭೇಟಿಯಾದ ಕ್ಷಣದಲ್ಲಿ ಆಗಿರುವಂತಹ ಕೆಲವು ಸಿಹಿ ನೆನಪುಗಳನ್ನ ಹಂಚಿಕೊಳ್ಳುತ್ತಿದ್ದಾರೆ.

LEAVE A REPLY

Please enter your comment!
Please enter your name here