ತನ್ನ ಅಣ್ಣನಿಗಿರುವ ಪ್ರತಿಭೆಗಳನ್ನ ಜನರ ಮುಂದಿಟ್ಟು, ಪ್ರಚಾರ ನಡೆಸುತ್ತಿರುವ ಪ್ರಿಯಾಂಕಾ ಗಾಂಧಿ.

0
651

ಅಬ್ಬಾ. ಚುನಾವಣೆ ಅಂದ್ರೆ ಅದೆಂಥ ಗಲಿಬಿಲಿ, ತಲೆ ನೋವು, ಗೊಂದಲ. ನಿಜವಾಗಲೂ ಚುನಾವಣೆಯಲ್ಲಿ ಸ್ಪರ್ಧಿಸೋರಿಗೆ ತಲೆ ನೋವು ಬರುತ್ತೋ, ಇಲ್ವೋ ಗೊತ್ತಿಲ್ಲ. ಆದ್ರೆ ಅವರ ಗೊಂದಲಗಳನ್ನ ನೋಡಿದ್ರೆ ಮಾತ್ರ, ಬೇರೆಯವರಿಗೆ ತಲೆ ನೋವು ಬರೋದಂತು ಪಕ್ಕ.

ಯಾಕಂದ್ರೆ ಒಬ್ಬರ ಮೇಲೆ, ಇನ್ನೊಬ್ಬರು ದೂರು ಹೇಳ್ತಾನೆ ಇರ್ತಾರೆ. ಅವ್ರು ಸರಿ ಇಲ್ಲ, ನಿಮ್ಮ ಮತ ನಮಗೆ ನೀಡಿ ಅಂತ ಪ್ರಚಾರದ ಮೇಲೆ, ಪ್ರಚಾರ ಕೈಗೊಳ್ತಾರೆ. ಇದನ್ನೆಲ್ಲಾ ನೋಡೋ ಜನರಿಗೆ ಒಂದು ಕ್ಷಣ ತಲೆ ಬಿಸಿಯಾಗುತ್ತೆ. ಯಾರಿಗಪ್ಪಾ ವೋಟ್ ಹಾಕೋದು ಅಂತ. ನಿಜಕ್ಕೂ ಮತ ಹಾಕುವವರೇ ಗೊಂದಲಗಳಲ್ಲಿ ಮುಳುಗುತ್ತಿದ್ದಾರೆ. ಈಗ ಇಲ್ಲೂ ಸಹ ಇಂಥ ಮಾತುಗಳು ಬಂದಿವೆ.

ತನ್ನ ಅಣ್ಣನ ಪರ ಪ್ರಚಾರ ಮಾಡಿದ ಪ್ರಿಯಾಂಕಾ ಗಾಂಧಿ

ರಾಹುಲ್ ಅವರು ಕೇರಳದ ವಯನಾಡಿನಲ್ಲಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ್ದಾರೆ. ಹಾಗಾಗಿ ಅಲ್ಲಿ ಮೊನ್ನೆ ಅದ್ದೂರಿಯಾಗಿ ಮೊದಲ ಪ್ರಚಾರ ರ್ಯಾಲಿ ನಡೆಸಿದ್ದಾರೆ. ರ್ಯಾಲಿಯಲ್ಲಿ ಪ್ರಿಯಾಂಕಾ ಅವ್ರು ಸಹ ಭಾಗಿಯಾಗಿದ್ದರು. ಪ್ರಚಾರದಲ್ಲಿ ರಾಹುಲ್ ಅವರ ಬಗ್ಗೆ ಮಾತನಾಡಿದ ಪ್ರಿಯಾಂಕಾ, ತಮ್ಮ ಅಣ್ಣನ ಬಗ್ಗೆ ಮನಮಿಡಿಯುವಂತ ಮಾತುಗಳನ್ನಾಡುವುದರ ಮೂಲಕ, ಜನರ ಮನ ಗೆಲ್ಲುವ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಜೊತೆಗೆ ರಾಹುಲ್ ಅವರಿಗಿರುವ ಪ್ರತಿಭೆ, ಅವರ ಮನಸ್ಸು ಹಾಗೂ ಅವರ ವ್ಯಕ್ತಿತ್ವದ ಬಗ್ಗೆ ತಿಳಿಸಿದ್ದಾರೆ.

ತಮ್ಮ ಅಣ್ಣನ ಪ್ರತಿಭೆಯನ್ನ ಜನತೆಯ ಮುಂದಿಟ್ಟ ಪ್ರಿಯಾಂಕಾ ಗಾಂಧಿ

ಪ್ರಚಾರದ ಸಮಯದಲ್ಲಿ ರಾಹುಲ್ ಗಾಂಧಿ ಅವರಿಗಿರುವ ಕೆಲವು ಹವ್ಯಾಸಗಳು ಹಾಗೂ ಅವರಿಗಿರುವ ಪ್ರತಿಭೆಯನ್ನೂ ಸಹ ಪ್ರಿಯಾಂಕಾ, ಜನರ ಮುಂದೆ ಹೇಳಿದರು. ನನ್ನ ಅಣ್ಣನಿಗೆ ಹಿಂದೂ ಧರ್ಮದ ಮಹಾಕಾವ್ಯಗಳು ಹಾಗೂ ಪುರಾಣಗಳು ಗೊತ್ತಿವೆ. ಆತ ಕರಾಟೆಯಲ್ಲಿ ಬ್ಲಾಕ್ ಬೆಲ್ಟ್, ಅತ್ಯುತ್ತಮ ಡ್ರೈವರ್ ಹಾಗೂ ಉತ್ತಮ ಚಾರಣಿಗ ಎಂದು ಜನರಿಗೆ ತಿಳಿಸಿದರು. ಇಂಥ ವ್ಯಕ್ತಿ ನನಗೆ ಅಣ್ಣನಾಗಿರುವುದು ನನಗೆ ಹೆಮ್ಮೆ ತರುವ ವಿಷಯವಾಗಿದೆ. ಈಗ ಆತನನ್ನ ನಿಮ್ಮ ಜವಾಬ್ದಾರಿಗೆ ನೀಡುತ್ತಿದ್ದೇನೆ. ನೀವೆ ಅವನಿಗೆ ಎಲ್ಲ. ಆತನನ್ನ ಹರಸಿ, ಕಾಪಾಡಬೇಕಾಗಿರುವುದು ನೀವೆ ಎಂದು, ತಮ್ಮ ಅಣ್ಣನ ಬಗೆಗಿನ ಸಿಹಿ ಮಾತುಗಳನ್ನಾಡಿದರು.

ನನ್ನ ಅಣ್ಣ ಎಲ್ಲವನ್ನೂ ಸಹಿಸಿಕೊಳ್ಳುವ ವ್ಯಕ್ತಿ

ನನ್ನ ಅಣ್ಣನ ಮನಸ್ಸು ತುಂಬಾ ನಿಷ್ಕಲ್ಮಶ. ಆತನ ಮನಸ್ಸಿನಲ್ಲೂ, ಯಾರಿಗೂ ಕೆಟ್ಟದ್ದನ್ನ ಬಯಸಿಲ್ಲ. ಆದರೆ ಆತನಿಗೆ ಮಾತ್ರ ಪ್ರಧಾನಿ ಮೋದಿ ಸೇರಿದಂತೆ, ಹಲವು ಬಿಜೆಪಿ ನಾಯಕರು ಅವಮಾನಿಸಿದ್ದಾರೆ. ಆದರೆ ಆತ ಅದೆಲ್ಲವನ್ನೂ ಸಹಿಸಿಕೊಂಡಿದ್ದಾನೆ. ನನ್ನ ಅಣ್ಣನಿಗೆ ಮಾತ್ರವಲ್ಲ ನನ್ನತಾಯಿ, ಹಾಗೂ ನನ್ನ ಕುಟುಂಬದವರ ವಿರುದ್ಧವೂ ವಾಗ್ದಾಳಿ ನಡೆಸಿದ್ದಾರೆ. ಆದ್ರೆ ಅದ್ಯಾವುದನ್ನೂ ನನ್ನ ಅಣ್ಣ ಗಂಭೀರವಾಗಿ ತೆಗೆದುಕೊಂಡಿಲ್ಲ. ಈಗಲೂ ಅವರೆಲ್ಲರನ್ನೂ ಆತ್ಮೀಯವಾಗಿ ಕಾಣುತ್ತಾರೆ. ಇದೇ ಅವರಲ್ಲಿರುವ ದೊಡ್ಡ ಗುಣ. ಇದೊಂದೆ ಗುಣ ಸಾಕು, ನಮ್ಮ ಅಣ್ಣ ಎಂಥ ವ್ಯಕ್ತಿ ಅಂತ ಹೇಳಲು ಎಂದು ಸಾರಿ ಸಾರಿ ಪ್ರಚಾರದಲ್ಲಿ ಹೇಳಿದರು.

ನನ್ನ ಅಣ್ಣ ಗೆಲ್ಲುತ್ತಾನೆ ಅನ್ನೋ ನಂಬಿಕೆ ನನಗಿದೆ

ರ್ಯಾಲಿಯಲ್ಲಿ ಮಾತನಾಡಿದ ಪ್ರಿಯಾಂಕಾ ಗಾಂಧಿ, ನನ್ನ ಅಣ್ಣ ಗೆದ್ದೇ ಗೆಲ್ಲುತ್ತಾನೆ ಅನ್ನೋ ನಂಬಿಕೆ ನನಗಿದೆ. ಯಾಕಂದ್ರೆ ನನ್ನ ಅಣ್ಣನ ಬಗ್ಗೆ ಎಲ್ಲವನ್ನೂ ತಿಳಿದವರು ನೀವು. ನಮಗೆ ಆಗದೆ ಇರುವವರು ನಮ್ಮ ಬಗ್ಗೆ ಟೀಕಿಸುತ್ತಾರೆ. ಆದ್ರೆ ನೀವು ಅದ್ಯಾವುದನ್ನೂ ನಂಬಬೇಡಿ. ನನ್ನ ಅಣ್ಣನನ್ನ ನಿಮ್ಮ ಮಡಿಲಿಗೆ ಹಾಕುತ್ತಿದ್ದೀನಿ. ನೀವೆ ಆತನಿಗೆ ಎಲ್ಲ, ಆತನನ್ನ ಗೆಲ್ಲಿಸುವ ಜವಾಬ್ದಾರಿ ನಿಮ್ಮ ಮೇಲಿದೆ ಎಂದು ವಯನಾಡಿನ ಜನತೆಗೆ ತಿಳಿಸಿದರು.

ಒಟ್ಟಿನಲ್ಲಿ ರಾಹುಲ್ ಗಾಂಧಿ ಜೊತೆ ಅವರ ತಂಗಿ ಪ್ರಿಯಾಂಕಾ ಗಾಂಧಿಯೂ ಸಹ ಪ್ರಚಾರದ ಅಬ್ಬರದಲ್ಲಿ ತೊಡಗಿದ್ದಾರೆ. ತನ್ನ ಅಣ್ಣನ ಗೆಲುವಿಗಾಗಿ ಶ್ರಮಿಸುತ್ತಿದ್ದಾರೆ. ನೋಡಬೇಕು ಗೆಲುವಿನ ವಿಜಯಮಾಲೆ ಯಾರಿಗೆ ದೊರೆಯಲಿದೆ ಅಂತ.

LEAVE A REPLY

Please enter your comment!
Please enter your name here