ಮೂಡಿಗೆರೆಯ ಮಾಯಾವಿ ಪೂರ್ಣಚಂದ್ರ ತೇಜಸ್ವಿ ಅವರು ನಡೆದು ಬಂದ ದಾರಿ

0
1694
purnachandra tejasvi

ಪೂರ್ಣ ಚಂದ್ರ ತೇಜಸ್ವಿ ಅಂದ್ರೆ ಯಾರಿಗೆ ಗೊತ್ತಿಲ್ಲ ಹೇಳಿ. ಪ್ರತಿಯೊಬ್ಬರಿಗೂ ಅವರು ಗೊತ್ತು. ಯಾಕಂದ್ರೆ ತಮ್ಮ ಕವಿತೆ, ಸಾಹಿತ್ಯ ಹಾಗೂ ಕಾದಂಬರಿಗಳಿಂದ ಎಲ್ಲರನ್ನೂ ಸೆಳೆದಿದ್ದಾರೆ. ಇವರು ಕನ್ನಡ ಪ್ರಮುಖ ಸಾಹಿತಿಗಳಲ್ಲೊಬ್ಬರು. ತೇಜಸ್ವಿ ಅವರು ರಾಷ್ಟ್ರಕವಿ ಕುವೆಂಪು ಅವರ ಪುತ್ರ ಹಾಗೂ ಕನ್ನಡ ನವ್ಯ ಸಾಹಿತ್ಯದ ಪ್ರಮುಖ ಲೇಖಕ ಹಾಗೂ ಸ್ವತಂತ್ರ ಪ್ರವೃತ್ತಿಯ ಬರಹಗಾರರು. ಅಬಚೂರಿನ ಪೋಸ್ಟಾಫೀಸು ಕಥಾ ಸಂಕಲನದ ಮೂಲಕ ಬಂಡಾಯ ಸಾಹಿತ್ಯವನ್ನು ಇವರು ಪ್ರಾರಂಭಿಸಿದರು.

ಏಪ್ರಿಲ್ 5. ಇಂದು ಅವರು ನಮ್ಮನ್ನ ಅಗಲಿದ ದಿನ. ಹೌದು. ಏಪ್ರಿಲ್ 5 2007ರಂದು ಮಧ್ಯಾಹ್ನ 2 ಗಂಟೆಗೆ ಹೃದಯಾಘಾತದಿಂದ ನಿಧನ ಹೊಂದಿದರು. ಆಗ ಅವರ ವಯಸ್ಸು 69 ವರ್ಷವಾಗಿತ್ತು. ಇಂತ ಕವಿಯನ್ನ ನೋಡಲು ಆಗುವುದಿಲ್ಲ ಅಂತ ಎಲ್ಲರು ಹೇಳುತ್ತಾರೆ. ಅವರ ಬಗೆಗಿನ ಕೆಲ ತುಣುಕುಗಳು ಇಲ್ಲಿವೆ.

ಜೀವನ

ತೇಜಸ್ವಿ ಅವರು, ರಾಷ್ಟ್ರಕವಿ ಕುವೆಂಪು ಹಾಗೂ ಹೇಮಾವತಿ ಅವರ ಪುತ್ರ. ಇವರು 1938 ಸೆಪ್ಟೆಂಬರ್ 8ರಂದು ಶಿವಮೊಗ್ಗ ಜಿಲ್ಲೆಯ ಕುಪ್ಪಳ್ಳಿಯಲ್ಲಿ ಜನಿಸಿದರು. ಅಲ್ಲಿಂದ ತಮ್ಮ ವಿದ್ಯಾಭ್ಯಾಸವನ್ನ ಆರಂಭಿಸಿದ ಇವರು, ನಂತರ ಮೈಸೂರಿನ ಮಹಾರಾಜಾ ಕಾಲೇಜಿನಲ್ಲಿ ಪದವಿ ಪಡೆದರು. ನಂತರ ವಿಶ್ವವಿದ್ಯಾನಿಲಯದಿಂದ ಕನ್ನಡದಲ್ಲಿ ಎಂ ಎ ಪದವಿಯನ್ನ ಪಡೆದರು.

ವೃತ್ತಿ

ಇವರಿಗೆ ಕಥೆ ಕಾದಂಬರಿ ಹಾಗೂ ಓದು ಅಂದ್ರೆ ಬಹಳ ಇಷ್ಟ ಇತ್ತು. ಹಾಗಾಗಿ ಇವರನ್ನ ನೋಡಿದ ಮನೆಯವರಿಗೆ ಇವರು ಅಧ್ಯಾಪಕರಾಗುತ್ತಾರೆ ಅಂತ ಅಂದುಕೊಂಡಿದ್ದರು. ಆದ್ರೆ ತೇಜಸ್ವಿ ಅವರಿಗೆ ಅದೆಲ್ಲಾ ಇಷ್ಟವಿರಲಿಲ್ಲ. ಸ್ನಾತಕೋತ್ತರ ಪದವಿಯ ನಂತರ ಓರಗೆಯ ಇತರೆ ಬರಹಗಾರರಂತೆ ಅಧ್ಯಾಪಕ ವೃತ್ತಿಯನ್ನ ಬಯಸದೆ ಮೂಡಿಗೆರೆಯಲ್ಲಿ ಕೃಷಿ ಮಾಡುವ ನಿರ್ಧಾರ ಮಾಡಿದರು. ಕೃಷಿಯ ಜತೆಜತೆಗೆ ಅಗಾಧವಾದ ಸಾಹಿತ್ಯದ ಕೃಷಿ ಮಾಡಿದರು.

ಆಸಕ್ತಿ

ಇವರಿಗೆ ಓದು, ಬರಹ ಅಂದ್ರೆ ತುಂಬಾ ಇಷ್ಟ ಇತ್ತು. ಆದರೆ ಅದರ ಉದ್ಯೋಗವನ್ನಾಧರಿಸೋದು ಅವರಿಗೆ ಇಷ್ಟ ಇರಲಿಲ್ಲ. ಇವರಿಗೆ ಸಾಹಿತ್ಯದ ಜೊತೆಗೆ ವ್ಯವಸಾಯ, ಛಾಯಾಚಿತ್ರಗ್ರಹಣ ಹಾಗೂ ಬೇಟೆಯಲ್ಲಿ ಹೆಚ್ಚಿನ ಆಸಕ್ತಿಯಿತ್ತು. ಜೊತೆಗೆ ರೈತರ ಚಳುವಳಿಗಳಲ್ಲಿ ತಮ್ಮನ್ನ ತೊಡಗಿಸಿಕೊಂಡಿದ್ದರು. ಹಾಗಾಗಿ ರೈತರಿಗೆ ಸಂಬಂಧಪಟ್ಟ ಯಾವುದೇ ಹೋರಾಟ ಅಥವಾ ಚಳುವಳಿಗಳಿದ್ದರೆ, ಹೋಗಿ ಮುಂದೆ ನಿಲ್ಲುತ್ತಿದ್ದರು.

ವೈವಾಹಿಕ ಬದುಕು

ತೇಜಸ್ವಿ ಅವರು ರಾಜೇಶ್ವರಿ ಎಂಬುವವರನ್ನ ವಿವಾಹವಾಗುತ್ತಾರೆ. ಇವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಸುಸ್ಮಿತಾ ಹಾಗೂ ಈಶಾನ್ಯೆ. ಇಬ್ಬರು ಮಕ್ಕಳು ಸಾಫ್ಟ್ ವೇರ್ ಪರಿಣತರು.

ಸಾಹಿತ್ಯ ಕೃಷಿ

ಕವಿತೆ, ನಾಟಕ, ಕಾದಂಬರಿ, ಕತೆ ಮೊದಲಾದ ಸಾಹಿತ್ಯಕ ಪ್ರಕಾರಗಳಲ್ಲಿ ಬರೆದಿದ್ದಾರೆ. ಹಲವಾರು ಆಂಗ್ಲ ಕೃತಿಗಳನ್ನು ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ನಾಲ್ಕು ದಶಕಗಳ ಕಾಲ ಕಥೆ, ಕಾದಂಬರಿಗಳ ಮೂಲಕ, ವಿಜ್ಞಾನದ ವಿಸ್ಮಯಗಳ ಮೂಲಕ ತೇಜಸ್ವಿಯವರು ಕನ್ನಡ ಸಾಹಿತ್ಯಕ್ಕೆ ಆನೇಕ ಮಹತ್ವಪೂರ್ಣ ಕೃತಿಗಳನ್ನು ನೀಡಿದ್ದಾರೆ. ಇದರಲ್ಲಿ ಕೀಟಗಳು, ಪ್ರಾಣಿಗಳು, ನದಿಕೊಳ್ಳಗಳು, ಕಾಡುಗಳು, ಬೇಟೆಯ ವೈವಿಧ್ಯತೆಯ ಬಗ್ಗೆ ಹಲವಾರು ವಿಷಯಗಳು ಒಳಗೊಂಡಿವೆ.

ಕಥೆ ಹಾಗೂ ಕಾದಂಬರಿಗಳು

ಇವರು ಹಲವಾರು ಕಥೆ ಕಾದಂಬರಿಗಳನ್ನ ಬರೆದಿದ್ದಾರೆ. ಅವೆಲ್ಲವೂ ನಿಜಕ್ಕೂ ಓದುಗರ ಮನಸ್ಸನ್ನ ಸೂರೆಗೊಂಡಿವೆ. ಇವರು ಬರೆದಿರುವ ಕಾದಂಬರಿಗಳಲ್ಲಿ ಕೆಲವು ಮಾತ್ರ ಎಲ್ಲರನ್ನು ಈಗಲೂ ನಿದ್ದೆ ಕೆಡಿಸುತ್ತಿದೆ. ಕರ್ವಾಲೋ, ಚಿದಂಬರ ರಹಸ್ಯ, ಜುಗಾರಿ ಕ್ರಾಸ್, ಮಾಯಾಲೋಕ. ಹಾಗೂ ಅವರು ಬರೆದಿರುವ ಕವನ ಕಥಾಸಂಕಲನವಾದ ಅಬಚೂರಿನ ಪೋಸ್ಟ್ ಆಫೀಸ್ ಹಾಗೂ ಕಿರುಗೂರಿನ ಗಯ್ಯಾಳಿಗಳು ಸಂಕಲನಗಳು ಬಹಳ ಅದ್ಭುತವಾಗಿವೆ. ಇನ್ನೂ ಅವರ ಆತ್ಮಕಥನವಾಗಿರುವ ಅಣ್ಣನ ನೆನಪಿನಲ್ಲಿ ಸಂಪೂರ್ಣವಾಗಿ ಅವರ ಮನದಾಳದ ಮಾತನ್ನ ಬರೆದಿದ್ದಾರೆ.

ಪ್ರಶಸ್ತಿಗಳು

ಇವರು ಬರೆದಿರುವ ಕಥೆ ಕಾದಂಬರಿಗೆ ಹಲವಾರು ಪ್ರಶಸ್ತಿಗಳು ಲಭಿಸಿವೆ.

ಚಿದಂಬರ ರಹಸ್ಯ :- ಪತ್ತೇದಾರಿ ವಿಧಾನದ ವಸ್ತು ಹೊಂದಿದ್ದು ಈ ಕಾದಂಬರಿಗೆ ವರ್ಷದ ಉತ್ತಮ ಕೃತಿ ಬಹುಮಾನ ದೊರೆತುದಲ್ಲದೆ, 1987ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರಕಿದೆ.

ಪಂಪ ಪ್ರಶಸ್ತಿ :- 2001ರಲ್ಲಿ

ರಾಜ್ಯೋತ್ಸವ ಪ್ರಶಸ್ತಿ

ಕರ್ನಾಟಕ ಸಾಹಿತ್ಯ ಅಕಾಡೆಮಿ ವತಿಯಿಂದ ಗೌರವ ಪ್ರಶಸ್ತಿ

ಪೂರ್ಣಚಂದ್ರ ತೇಜಸ್ವಿ ಅವರು ಬರೆದಿರುವ ಅಬಚೂರಿನ ಪೋಸ್ಟಾಫೀಸು“, “ತಬರನ ಕಥೆಕೃತಿಗಳು ಚಲನಚಿತ್ರಗಳಾಗಿ ರಾಷ್ಟ್ರ ಪ್ರಶಸ್ತಿ ಗಳಿಸಿವೆ.

ಕುಬಿ ಮತ್ತು ಇಯಾಲ (ಕಥೆ)ಚಿತ್ರವು ರಾಜ್ಯ ಪ್ರಶಸ್ತಿ ಸಿಕ್ಕಿದೆ.

ನಿಧನ

ತಮ್ಮ ಕಥೆ, ಕಾದಂಬರಿಯಿಂದ ಇಷ್ಟು ಅಭಿಮಾನಿಗಳನ್ನ ಹಾಗೂ ಪ್ರಶಸ್ತಿಗಳನ್ನ ಪಡೆದಿದ್ದ ಇವರು,ಇದ್ದಕ್ಕಿದ್ದಂತೆ ಹೃದಯಾಘಾತವಾಗಿ ಏಪ್ರಿಲ್ 5 2007ರಂದು ನಿಧನ ಹೊಂದುತ್ತಾರೆ. ಇವರ ಸಾವು ನಿಜಕ್ಕೂ ಇವರ ಮನೆಯವರಿಗೆ ನುಂಗಲಾರದ ತುತ್ತಾಗುತ್ತದೆ.

ಈ ರೀತಿ ಒಬ್ಬ ಅದ್ಬುತ ಸಾಹಿತಿಯನ್ನ ಕಳೆದುಕೊಂಡದ್ದು ನಮ್ಮ ಕನ್ನಡಿಗರ ದುರಾದೃಷ್ಟ. ಸದ್ಯಕ್ಕೆ ಇವರ ಧರ್ಮಪತ್ನಿ ತೇಜಸ್ವಿಯವರ ನೆನಪಲ್ಲೇ, ಅವರ ಪ್ರೀತಿಯ ಮನೆ ಮೂಡಿಗೆರೆಯಲ್ಲಿ ವಾಸಿಸುತ್ತಿದ್ದಾರೆ.

LEAVE A REPLY

Please enter your comment!
Please enter your name here