ಹುಲಿಯಂತೆ ಅಬ್ಬರಿಸುತ್ತಿರುವ ಪಡ್ಡೆಹುಲಿ. ಇದೇ ತಿಂಗಳಲ್ಲಿ ಬರಲಿದೆ ತೆರೆ ಮೇಲೆ.

0
1092
paddehuli

ಸ್ಯಾಂಡಲ್ ವುಡ್ ನಲ್ಲಿ ಯಾಕೋ ಇತ್ತೀಚಿಗೆ ಸೌಂಡ್ ಹೆಚ್ಚಾಗಿದೆ. ಯಾಕಂದ್ರೆ ಶುಕ್ರವಾರ ಆಯಿತು ಅಂದ್ರೆ ಸಾಕು, ಒಂದರ ಹಿಂದೆ ಒಂದು ಸಿನಿಮಾಗಳು ರಿಲೀಸ್ ಆಗುತ್ತಿವೆ. ನಾ ಮುಂದು, ತಾ ಮುಂದು ಅಂತ ಪೈಪೋಟಿ ಕೊಡ್ತಿದ್ದಾರೆ ನಮ್ಮ ನಾಯಕರು.

ಆದ್ರೆ ನಾವ್ಯಾರಿಗೂ ಕಮ್ಮಿ ಇಲ್ಲ ಅಂತ ಹೊಸಬರು ತಮ್ಮ ಅಬ್ಬರ ಶುರು ಮಾಡಿದ್ದಾರೆ. ಹೌದು ಇತ್ತೀಚಿಗೆ ಸ್ಯಾಂಡಲ್ ವುಡ್ ನಲ್ಲಿ ಹೊಸ ಮುಖಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿವೆ. ಜೊತೆಗೆ ಅವರ ಸಿನಿಮಾಗಳು ಕೂಡ ಸಖತ್ ಹಿಟ್ ಆಗುತ್ತಿವೆ. ಈಗ ಅದಕ್ಕೆ ಮತ್ತೊಂದು ಸಾಕ್ಷಿಯಾಗಿ ಮತ್ತೊಂದು ಹುಲಿ ಎಂಟ್ರಿ ಕೊಡುತ್ತಿದೆ.

ಎಂಟ್ರಿ ಕೊಡ್ತಿದೆ ಪಡ್ಡೆಹುಲಿ

ಈಗ ಎತ್ತ ನೋಡಿದರೂ ಪಡ್ಡೆಹುಲಿಯದ್ದೇ ಅಬ್ಬರ. ಸಾಮಾನ್ಯವಾಗಿ ಸ್ಟಾರ್ ಸಿನಿಮಾಗಳು ಬಿಡುಗಡೆಗೂ ಮುನ್ನ ಎಲ್ಲೆಡೆ ಸಂಚಲನ ಸೃಷ್ಟಿಸೋದು ಮಾಮೂಲು ವಿದ್ಯಮಾನ. ಆದರೆ ಹೊಸ ಹುಡುಗ ಹೀರೋ ಆಗಿ ಪರಿಚಯವಾಗುವ ಮೊದಲ ಚಿತ್ರದಲ್ಲಿಯೇ ಈ ಪಾಟಿ ಅಬ್ಬರಿಸೋದು ನಿಜಕ್ಕೂ ಅಪರೂಪದ ಬೆಳವಣಿಗೆ. ಅಂಥಾದ್ದೊಂದು ಅಪರೂಪದ ಪಲ್ಲಟಗಳ ಜೊತೆಯೇ ಪಡ್ಡೆಹುಲಿ ಚಿತ್ರ ತೆರೆ ಕಾಣಲು ಅಣಿಯಾಗಿದೆ. ನಿರ್ಮಾಪಕ ಕೆ ಮಂಜು ಅವರ ಪುತ್ರ ಶ್ರೇಯಸ್ ನಾಯಕನಾಗಿ ಅದ್ದೂರಿ ಎಂಟ್ರಿ ಕೊಡುತ್ತಿರುವ ಚಿತ್ರ ಪಡ್ಡೆಹುಲಿ. ಎಂ. ರಮೇಶ್ ರೆಡ್ಡಿಯವರು ತೇಜಸ್ವಿನಿ ಎಂಟರ್ ಪ್ರೈಸಸ್ ಲಾಂಛನದಡಿಯಲ್ಲಿ ನಿರ್ಮಾಣ ಮಾಡಲಾಗಿದೆ.

ಪಡ್ಡೆಹುಲಿಯಲ್ಲಿ ನಾಯಕನಾಗಿ ಅಬ್ಬರಿಸಿರುವ ಶ್ರೇಯಸ್

ನಿರ್ಮಾಪಕ ಕೆ ಮಂಜು ಅವರ ಪುತ್ರ ಶ್ರೇಯಸ್ ನಾಯಕನಾಗಿ ಈ ಚಿತ್ರದಲ್ಲಿ ಫುಲ್ ಮಿಂಚಿದ್ದಾರೆ. ಗುರುದೇಶಪಾಂಡೆ ನಿರ್ದೇಶನ ಮಾಡಿರೋ ಈ ಸಿನಿಮಾ ಮೂಲಕ ಶ್ರೇಯಸ್ ಮಾಸ್ ಲುಕ್ಕಿನಲ್ಲಿ ಕಂಗೊಳಿಸಿದ್ದಾರೆ. ಈ ಚಿತ್ರದಲ್ಲಿ ನಾಯಕ ಶ್ರೇಯಸ್ ಪಕ್ಕಾ ವಿಷ್ಣುಭಕ್ತನಾಗಿ ನಟಿಸಿದ್ದಾರೆ. ಈಗಾಗಲೇ ಹಾಡುಗಳಲ್ಲಿ ವಿಷ್ಣು ಗೆಟಪ್ಪಿನಲ್ಲಿಯೇ ನಟಿಸೋ ಮೂಲಕ ಶ್ರೇಯಸ್ ಸಾಹಸ ಸಿಂಹನ ಸಮಸ್ತ ಅಭಿಮಾನಿಗಳ ಪ್ರೀತಿಗೂ ಪಾತ್ರರಾಗಿದ್ದಾರೆ. ಅವರಿಗೆ ನಾಯಕಿಯಾಗಿ ನಿಶ್ವಿಕಾ ನಾಯ್ಡು ಅಭಿನಯಿಸಿದ್ದಾರೆ.

ಇದೆ ತಿಂಗಳಲ್ಲಿ ತೆರೆ ಮೇಲೆ ಬರಲಿದೆ ಪಡ್ಡೆಹುಲಿ

ಚಿತ್ರ ಇದೇ ಏಪ್ರಿಲ್ ಹತ್ತೊಂಬತ್ತರಂದು ಬಿಡುಗಡೆಯಾಗಲಿದೆ. ಚಿತ್ರದ ಮೇಲೆ ಅಭಿಮಾನಿಗಳಿಗೆ ಈಗಾಗಲೇ ನಿರೀಕ್ಷೆ ಹೆಚ್ಚಾಗಿದ್ದು, ಸಿನಿಮಾ ಬಿಡುಗಡೆಯಾಗುವುದಕ್ಕೆ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಈ ಹಿಂದೆ ರಾಜಾಹುಲಿ ಎಂಬ ಸೂಪರ್ ಹಿಟ್ ಚಿತ್ರ ಕೊಟ್ಟಿದ್ದ ಗುರುದೇಶಪಾಂಡೆಯವರು ಪಡ್ಡೆಹುಲಿಯನ್ನೂ ನಿರ್ದೇಶನ ಮಾಡಿದ್ದಾರೆ. ರಾಜಾಹುಲಿ ಚಿತ್ರದ ಮೂಲಕ ರಾಕಿಂಗ್ ಸ್ಟಾರ್ ಯಶ್ ಅವರೇ ಶೈನಪ್ ಆಗಿದ್ದರು. ಇದೀಗ ಪಡ್ಡೆಹುಲಿಯ ಮೂಲಕ ಶ್ರೇಯಸ್ ಎಂಬ ಮತ್ತೋರ್ವ ಮಾಸ್ ಹೀರೋನ ಆಗಮನವಾಗೋದು ಖಾತರಿಯಾಗಿದೆ.

ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ನೆಚ್ಚಿನ ತಾರೆಯರು

ಈ ಚಿತ್ರವನ್ನು ಪ್ರತಿಯೊಂದು ರೀತಿಯಲ್ಲಿಯೂ ಆಕರ್ಷಕವಾಗಿ ರೂಪಿಸುವಲ್ಲಿ ಗುರು ದೇಶಪಾಂಡೆ ಶ್ರಮ ವಹಿಸಿದ್ದಾರೆ. ಪಡ್ಡೆಹುಲಿಯ ಆಕರ್ಷಣೆಗಳು ಹಲವಾರಿವೆ. ಅದರಲ್ಲಿ ಪಾತ್ರವರ್ಗವೂ ಪ್ರಧಾನವಾಗಿ ಸೇರಿಕೊಳ್ಳುತ್ತದೆ. ಕ್ರೇಜಿಸ್ಟಾರ್ ರವಿಚಂದ್ರನ್ ಮತ್ತು ಸುಧಾರಾಣಿ ಪಡ್ಡೆಹುಲಿಗೆ ವಿಭಿನ್ನ ಪಾತ್ರಗಳ ಮೂಲಕ ಸಾಥ್ ಕೊಟ್ಟಿದ್ದಾರೆ. ಅದೇ ರೀತಿ ರಕ್ಷಿತ್ ಶೆಟ್ಟಿ ಕೂಡಾ ಪಾತ್ರವೊಂದಕ್ಕೆ ಜೀವ ತುಂಬಿದ್ದಾರೆ. ರಕ್ಷಿತ್ ಇಲ್ಲಿ ಯಾವ ಪಾತ್ರ ಮಾಡಿದ್ದಾರೆಂಬ ಕುತೂಹಲ ಅವರ ಅಭಿಮಾನಿಗಳಲ್ಲಿದೆ. ಈ ಬಗ್ಗೆ ಚಿತ್ರತಂಡ ಒಂದು ಅಚ್ಚರಿಯ ಸಂಗತಿಯನ್ನು ಬಿಟ್ಟು ಕೊಟ್ಟಿದೆ. ಆ ಪ್ರಕಾರವಾಗಿ ನೋಡೋದಾದರೆ, ರಕ್ಷಿತ್ ಕಿರಿಕ್ ಪಾರ್ಟಿಯ ಪ್ರಸಿದ್ಧ ಪಾತ್ರವಾದ ಕರ್ಣನಾಗಿಯೇ ನಟಿಸಿದ್ದಾರೆ. ಅವರ ಪಾತ್ರವಿಲ್ಲಿ ಕಿರಿಕ್ ಪಾರ್ಟಿಯ ಮುಂದುವರೆದ ಭಾಗದಂತಿದೆಯಂತೆ.

ಚಿತ್ರದಲ್ಲಿ ಬರೋಬ್ಬರಿ ಹನ್ನೊಂದು ಹಾಡುಗಳಿದ್ದು, ಪ್ರೇಕ್ಷಕರನ್ನ ಈಗಾಗಲೇ ತನ್ನತ್ತ ಸೆಳೆದುಕೊಂಡಿದೆ. ಪ್ರತಿಯೊಂದು ಹಾಡೂ ಕೂಡಾ ತನ್ನದೇ ರೀತಿಯಲ್ಲಿ ಮೋಡಿ ಮಾಡಿ ಟ್ರೆಂಡಿಂಗ್ ನಲ್ಲಿದೆ. ಇಂಥಾ ಹಾಡುಗಳ ಮೂಲಕವೇ ನಾಯಕ ಶ್ರೇಯಸ್ ಕೂಡಾ ಶೈನಲ್ ಆಗಿದ್ದಾರೆ. ಅದೇ ರೀತಿ ಅವರಿಗೆ ಜೋಡಿಯಾಗಿ ಹೆಜ್ಜೆ ಹಾಕುವ ಮೂಲಕ ನಿಶ್ವಿಕಾ ನಾಯ್ಡು ಕೂಡಾ ಮನಗೆದ್ದಿದ್ದಾರೆ. ಒಟ್ಟಿನಲ್ಲಿ ಇವರು ಅಭಿಮಾನಿಗಳನ್ನ ಎಷ್ಟರ ಮಟ್ಟಿಗೆ ಗೆಲ್ಲುತ್ತಾರೆ ಅನ್ನೋದು ಏಪ್ರಿಲ್ ಹತ್ತೊಂಬತ್ತರಂದು ತಿಳಿಯಲಿದೆ.

LEAVE A REPLY

Please enter your comment!
Please enter your name here