ಈ ದೇವಸ್ಥಾನಗಳಿಗೆ ಭೇಟಿ ನೀಡಿದರೆ ನೀವು ತಬ್ಬಿಬ್ಬಾಗೋದಂತೂ ನಿಜ. ಯಾಕಂದ್ರೆ ಅಂತ ವಿಸ್ಮಯಗಳು ಇಲ್ಲಿವೆ.

0
1225

ಶಂಕರ ಶಶಿಧರ ಗಜ ಚಾರ್ಮನ್ಬ್ಯಾರ ಗಂಗಾಧರ ಹರನೇ, ಸುಂದರ ಸ್ಮರಹರ ಗೌರಿ ಮನೋಹರ ಜಯ ಪರಮೇಶ್ವರನೇ.ಈ ಸಾಲು ಎಲ್ಲರನ್ನು ಒಂದು ಕ್ಷಣ ಮೈ ಮರೆಸುವಂತೆ ಮಾಡುತ್ತೆ. ಹೌದು. ಈ ಜಗಧೀಶನ ಸ್ಮರಣೆ ಮಾಡುತ್ತಿದ್ದರೇ, ಪ್ರತಿಯೊಬ್ಬರಿಗೂ ಹಾಗೆಯೇ ಎನಿಸುತ್ತೆ. ಯಾಕಂದ್ರೆ ನಮ್ಮಲ್ಲಿ ಶಿವನ ಆರಾಧಕರು ಬಹಳಷ್ಟು ಮಂದಿ ಇದ್ದಾರೆ. ಅವರಿಗೆ ಶಿವನ ಸ್ಮರಣೆ ಮಾಡುತ್ತಿದ್ದರೇ, ಜಗತ್ತಿನಲ್ಲಿ ಭೂಕಂಪ ಸಂಭವಿಸಿದರೂ ತಲೆ ಕೆಡಿಸಿಕೊಳ್ಳುವುದಿಲ್ಲ.

ಯಾಕಂದ್ರೆ ಭೂಮಿ ಮೇಲೆ ಒಂದು ಹುಲ್ಲು ಕಡ್ಡಿ ಅಲುಗಾಡಬೇಕಾದರೂ, ಅದಕ್ಕೆ ಆ ಶಂಕರನ ಅಪ್ಪಣೆ ಇರಬೇಕು ಅಂತ ನಂಬಿರೋರು ನಮ್ಮಲ್ಲಿರುವ ಜನರು. ಹಾಗಾಗಿ ಎಲ್ಲದನ್ನು ಶಿವಮಯ ಎನ್ನುತ್ತಾರೆ. ಹಾಗಾಗಿ ನಮ್ಮಲ್ಲಿ ಗಲ್ಲಿಗೊಂದರಂತೆ ಶಿವನ ದೇವಾಲಯಗಳಿವೆ. ಪ್ರತಿದಿನ ಪೂಜೆ ಮಾಡಿ, ತಮ್ಮ ಇಷ್ಟಾರ್ಥಗಳನ್ನ ಜನರು ಸಿದ್ಧಿಸಿಕೊಳ್ಳುತ್ತಿದ್ದಾರೆ. ಹಾಗಾಗಿ ನಮ್ಮಲ್ಲಿ ಶಿವನ ದೇವಾಲಯಗಳಿಗೆ ಬಹಳ ಬೇಡಿಕೆಯಿದೆ. ಹಾಗಾದ್ರೆ ಭಾರತದ ಪ್ರಸಿದ್ಧ ರಹಸ್ಯಮಯ ಶಿವನ ದೇವಾಲಯಗಳು ಎಲ್ಲೆಲ್ಲಿವೆ ಅಂತ ನಾವು ನಿಮಗೆ ತಿಳಿಸ್ತೀವಿ ನೋಡಿ.

ರಹಸ್ಯಮಯ ಶಿವನ ದೇವಾಲಯಗಳು

ಒಮ್ಮೊಮ್ಮೆ ಮಾತಿನಲ್ಲಿ ಚಿದಂಬರ ರಹಸ್ಯಎಂದು ಹೇಳುವುದನ್ನು ನೀವು ಗಮನಿಸಿರಬಹುದು. ಏಕೆ ಈ ರೀತಿ ಹೇಳುತ್ತಾರೆಂದು ನಿಮಗೇನಾದರೂ ಗೊತ್ತೆ? ಹೌದು ಕೆಲ ವಿಷಯಗಳು ಎಷ್ಟು ರಹಸ್ಯಮಯವಾಗಿರುತ್ತವೆ ಎಂದರೆ ಬಹುಶಃ ಇಂದಿನ ವಿಜ್ಞಾನಕ್ಕೂ ಅದನ್ನು ಭೇದಿಸಲು ಸಾಧ್ಯವಿಲ್ಲ. ಭಾರತದಲ್ಲಿ ಕೆಲವು ರಹಸ್ಯಮಯ ಸ್ಥಳಗಳಿದ್ದು ಪ್ರವಾಸಿ ದೃಷ್ಟಿಯಿಂದ ಕುತೂಹಲ ಕೆರಳಿಸುತ್ತವೆ. ಆ ದೇವಾಲಯಗಳು ಹೆಚ್ಚಾಗಿ ಶಿವನಿಗೆ ಸಂಬಂಧಿಸಿದ್ದು ಹಲವು ನಿಗೂಢತೆಗಳಿಂದ ಕೂಡಿವೆ.

ಅಮರನಾಥ

ಅಮರನಾಥ ಯಾತ್ರೆಯು ಭಾರತದಲ್ಲಿ ಹಿಂದುಗಳು ಮಾಡುವ ಅತಿ ಪ್ರಸಿದ್ಧ ಹಾಗೂ ಶ್ರೇಷ್ಠ ಪುಣ್ಯ ಯಾತ್ರೆಗಳಲ್ಲಿ ಒಂದಾಗಿದೆ. ಇಲ್ಲಿನ ಶಿವಲಿಂಗ ವರ್ಷದ ನಿರ್ದಿಷ್ಟ ಸಮಯದಲ್ಲಿ ಮಂಜುಗಡ್ಡೆಯ ರೂಪದಲ್ಲಿ ಒಡಮೂಡುತ್ತದೆ. ಈ ಬೃಹತ್ತಾದ ಗುಹೆಯಲ್ಲಿ ಶಿವಲಿಂಗದ ಎತ್ತರವು ಚಂದ್ರನ ಸ್ಥಿತಿಗತಿಗಳು ಬದಲಾದಂತೆ ಬದಲಾಗುತ್ತದಂತೆ. ಅಲ್ಲದೆ ಈ ಗುಹಾಲಯದಲ್ಲೆ ಶಿವನು ಪಾರ್ವತಿ ದೇವಿಗೆ ಅಮರತ್ವದ ಮಂತ್ರವನ್ನು ಹೇಳಿದ್ದನಂತೆ ಹಾಗೂ ಆ ಸಮಯದಲ್ಲಿ ಎರಡು ಪಾರಿವಾಳದ ಮೊಟ್ಟೆಗಳು ಆ ಮಂತ್ರ ಕೇಳಿ ಅಮರವಾದವಂತೆ. ಇಂದಿಗೂ ಮಧ್ಯರಾತ್ರಿಯ ಸಮಯದಲ್ಲಿ ಆ ಪಾರಿವಾಳಗಳು ಇಲ್ಲಿ ಬಂದು ಸಮಯ ಕಳೆದು ಹೋಗುತ್ತವೆ ಎಂದು ನಂಬಲಾಗಿದೆ.

ಗವಿಪುರಂ

ಬೆಂಗಳೂರಿನ ಗವಿಪುರಂ ಬಡಾವಣೆಯಲ್ಲಿರುವ ಗವಿ ಗಂಗಾಧರೇಶ್ವರನ ದೇವಾಲಯವು ತನ್ನದೆ ಆದ ವಿಸ್ಮಯವನ್ನು ಹೊಂದಿದೆ. ಬಂಡೆಯೊಂದನ್ನು ಕೆತ್ತಿ ಗುಹೆಯೊಳಗೆ ನಿರ್ಮಿಸಲಾದ ಶಿವಾಲಯ ಇದಾಗಿದ್ದು ಸಾಕಷ್ಟು ವಿಶೇಷತೆಯನ್ನು ಹೊಂದಿದೆ. ಇಲ್ಲಿ ಮಕರ ಸಂಕ್ರಾಂತಿ ದಿನದಂದು ಸಂಜೆಯಾಗುತ್ತಿದ್ದಂತೆ ಶಿವಲಿಂಗದ ಮುಂದಿರುವ ನಂದಿಯ ಕೊಂಬುಗಳ ಮಧ್ಯದಿಂದ ಸೂರ್ಯ ರಶ್ಮಿಯು ನೇರವಾಗಿ ಶಿವಲಿಂಗದ ಮೇಲೆ ಬಿದ್ದು ಗರ್ಭಗುಡಿಯು ತೋಜೋಮಯವಾಗಿ ಬೆಳಗುತ್ತದೆ. ಇದನ್ನ ನೋಡಲು ಲಕ್ಷಾಂತರ ಭಕ್ತರು ಕಾದು ಕುಳಿತಿರುತ್ತಾರೆ. ಇದು ಇಲ್ಲಿನ ವಿಷೇಶವಾಗಿದೆ.

ಲೇಪಾಕ್ಷಿ

ಆಂಧ್ರಪ್ರದೇಶ ರಾಜ್ಯದ ಅನಂತಪುರ ಜಿಲ್ಲೆಯ ಹಿಂದುಪುರದಿಂದ ಹದಿನೈದು ಕಿ.ಮೀ ದೂರದಲ್ಲಿರುವ ಲೇಪಾಕ್ಷಿಯು ಐತಿಹಾಸಿಕವಾಗಿ, ಧಾರ್ಮಿಕವಾಗಿ ಮಹತ್ವ ಪಡೆದ ಸ್ಥಳ. ಶಿವ, ನಂದಿ ಹಾಗೂ ವೀರಭದ್ರನ ದೇವಾಲಯಗಳಿಗೆ ಹೆಸರುವಾಸಿಯಾದ ಲೇಪಾಕ್ಷಿಯಲ್ಲಿ ಹ್ಲವು ವೈಭವೋಪೇತ ದೇವಾಲಯಗಳ ರಚನೆಗಳು, ಶಿವಲಿಂಗಗಳು ಹಾಗೂ ಕಂಬಗಳನ್ನು ಕಾಣಬಹುದಾಗಿದೆ. ಇಲ್ಲಿ ಕಂಡುಬರುವ ಜೋತಾಡುವ ಕಂಬ ಅಥವಾ ಹ್ಯಾಂಗಿಂಗ್ ಪಿಲ್ಲರ್ ಪ್ರಮುಖವಾಗಿ ಗಮನಸೆಳೆಯುತ್ತದೆ. ಯಾವ ಆಧಾರವೂ ಇಲ್ಲದೆ ಇಂದಿಗೂ ನೆಲಕ್ಕೆ ತಾಗದೆ ನಿಂತಿರುವುದು ಬಲು ವಿಸ್ಮಯಕರವೆನಿಸುತ್ತದೆ.

ದಾರಾಸುರಂ

ಚೋಳರ ಇಂದಿಗೂ ಜೀವಂತವಿರುವ ಮಹಾನ್ ದೇವಾಲಯಗಳಲ್ಲಿ ಐರಾವತೇಶ್ವರ ದೇವಾಲಯವೂ ಸಹ ಒಂದು. ತಮ್ಜಾವೂರಿನ ಕುಂಭಕೋಣಂ ಬಳಿಯಿರುವ ದಾರಾಸುರಂ ಎಂಬ ಪಟ್ಟಣದಲ್ಲಿ ಈ ದೇವಾಲಯವಿದೆ. ಇಲ್ಲಿರುವ ಸಂಗೀತದ ಸ್ವರಗಳನ್ನು ಹೊರಡಿಸುವ ಮೆಟ್ಟಿಲುಗಳು ಇಂದಿಗೂ ಅಚ್ಚರಿಯ ವಿಷಯವಾಗಿದೆ. ಇದರ ಹಿಂದಿನ ರಹಸ್ಯವನ್ನು ಇಂದಿಗೂ ನಿಖರವಾಗಿ ತಿಳಿಯಲಾಗಿಲ್ಲ. ಎಲ್ಲ ಏಳು ಸಂಗೀತದ ಸ್ವರಗಳನ್ನು ಒಂದೊಂದು ಮೆಟ್ಟಿಲುಗಳ ಮೇಲೆ ಬಡಿದಾಗ ಕೇಳಬಹುದು.

ಮಾಯಾಹೊಂಡ

ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಗುಬ್ಬಿಗ ಎಂಬ ಗ್ರಾಮದ ವ್ಯಾಪ್ತಿಯಲ್ಲಿ ಈ ಗುಳಿ ಗುಳಿ ಶಂಕರ ಮಾಯಾ ಹೊಂಡವಿದೆ. ಇಲ್ಲಿನ ವಿಶೇಷ ಅಂದ್ರೆ ಈ ಹೊಂಡದಲ್ಲಿ ಯಾವಾಗಲು ನೀರು ಸದಾ ಕಾಲ ತುಂಬಿ ಹರಿಯುತ್ತಲೇ ಇರುತ್ತೆ. ಜೊತೆಗೆ ಇಲ್ಲಿನ ಇನ್ನೊಂದು ಪವಾಡ ಅಂದ್ರೆ, ಇಲ್ಲಿಗೆ ಬರುವ ಭಕ್ತರು ತಮ್ಮ ಹರಕೆ ನೆರೆವೇರುವುದಕ್ಕೋಸ್ಕರ ಈ ನೀರಿನಲ್ಲಿ ಬಿಲ್ವ ಪತ್ರೆಯನ್ನ ಬಿಡುತ್ತಾರೆ. ಅದು ನೆರವೇರುತ್ತೆ ಅನ್ನೋದಾದರೆ, ನೀರಿನಲ್ಲಿ ತೇಲುತ್ತೆ. ಒಂದು ವೇಳೆ ಆ ಬೇಡಿಕೆ ಈಡೇರುವುದಿಲ್ಲ ಅನ್ನೋದಾದ್ರೆ, ಪತ್ರೆ ನೀರಿನಲ್ಲಿ ಮುಳುಗುತ್ತೆ. ಇದೆ ಇಲ್ಲಿನ ವಿಶೇಷವಾಗಿದೆ.

ಚಿದಂಬರಂ

ಪ್ರಮುಖವಾಗಿ ಇಲ್ಲಿರುವ ತಿಲ್ಲೈ ನಟರಾಜನ ದೇವಸ್ಥಾನವು ಪಟ್ಟಣದ ಪ್ರಮುಖ ಆಕರ್ಷಣೆಯಾಗಿದೆ. ಈ ಶಿವನ ದೇವಾಲಯವು ಶೈವರ ಪಾಲಿಗೆ ಅತ್ಯಂತ ಪ್ರಮುಖ ದೇವಾಲಯವಾಗಿದ್ದು ಪಂಚಭೂತಗಳ ಪೈಕಿ ಆಕಾಶವನ್ನು ಪ್ರತಿನಿಧಿಸುತ್ತದೆ. ಈ ದೇವಾಲಯದಲ್ಲಿ ಶಿವನನ್ನು ನಟರಾಜನ ರೂಪದಲ್ಲಿ ನರ್ತಿಸುತ್ತಿರುವ ಭಂಗಿಯಲ್ಲಿ ಪೂಜಿಸಲಾಗುತ್ತದೆ ಹಾಗೂ ಈ ರೀತಿಯ ಏಕೈಕ ದೇವಾಲಯವಾಗಿ ಇದು ಪ್ರಸಿದ್ಧಿಯನ್ನು ಪಡೆದಿದೆ. ಅಲ್ಲದೆ ಈ ದೇವಾಲಯದ ಕುರಿತು ಹಲವಾರು ರಹಸ್ಯಮಯ ನಂಬಿಕೆಗಳು ತಳುಕು ಹಾಕಿಕೊಂಡಿವೆ.

ಉಜ್ಜಯಿನಿ

ಅಬ್ಬಾ ಈ ದೇವಾಲಯವಂತೂ ಒಂದು ರೀತಿಯ ವಿಚಿತ್ರ ಭಾವನೆಯನ್ನು ಮೂಡಿಸುತ್ತದೆ. ಮಧ್ಯ ಪ್ರದೇಶದ ಉಜ್ಜಯಿನಿಯಲ್ಲಿ ಶಿವನಿಗೆ ಮುಡಿಪಾದ ಕಾಲ ಭೈರವನ ದೇವಾಲಯವಿದು. ಅಷ್ಟ ಭೈರವರಲ್ಲಿ ಪ್ರಮುಖನಾದ ಕಾಲಭೈರವ ಶಿವನ ಅತ್ಯಂತ ಉಗ್ರರೂಪವೂ ಹೌದು. ಉಜ್ಜಯಿನಿಯಲ್ಲಿರುವ ಮಹಾಕಾಲೇಶ್ವರ ದೇವಾಲಯದ ನಂತರ ಸಾಮಾನ್ಯವಾಗಿ ಭಕ್ತರು ಕಾಲಭೈರವನ ದರ್ಶನ ಪಡೆಯುತ್ತಾರೆ. ಕಾಲಭೈರವನಿಗೆ ಮುಖ್ಯವಾಗಿ ಇಲ್ಲಿ ಮದ್ಯವನ್ನು ಅರ್ಪಿಸಬೇಕು!! ಹೌದು. ಅರಚಕನು ಒಂದು ತಟ್ಟೆಯಲ್ಲಿ ಭಕ್ತರು ನೀಡಿದ ಮದ್ಯವನ್ನು ಹಾಕಿ ಕಾಲಭೈರವನ ಮುಂದೆ ಹಿಡಿದಾಗ ಅರ್ಧ ಮದ್ಯವು ಹೀರಲ್ಪಡುವುದನ್ನು ನೋದಬಹುದಂತೆ! ಉಳಿದ ಸ್ವಲ್ಪ ಪ್ರಮಾಣವನ್ನು ಭಕ್ತರಿಗೆ ಪ್ರಸಾದವಾಗಿ ಅದನ್ನು ನೀಡಲಾಗುತ್ತದೆ.

ಮಲ್ಲೇಶ್ವರಂ

1997 ರಲ್ಲಿ ಮಲ್ಲೇಶ್ವರಂನ ಕಾಡು ಮಲ್ಲೇಶ್ವರನ ದೇವಾಲಯದ ಎದುರು ರಸ್ತೆ ನಿರ್ಮಾಣಕ್ಕೆಂದು ಭೂಮಿ ಅಗೆಯುವಾಗ ನಂದಿಯ ವಿಗ್ರಹವೊಂದು ದೊರಕಿತು. ತಕ್ಷಣ ಭಾರತೀಯ ಪುರಾತತ್ವ ಇಲಾಖೆಯವರು ಬಂದು ಇಲ್ಲಿ ಸಮಗ್ರ ಉತ್ಖನನ ಮಾಡಿ ದೇವಾಲಯವೊಂದನ್ನೆ ಹೊರತೆಗೆದರು. ಅದೆ ದಕ್ಷಿಣ ಮುಖ ನಂದಿ ತೀರ್ಥ. ಇಲ್ಲಿರುವ ನಂದಿಯ ಬಾಯಿಯಿಂದ ನೀರು ಸದಾ ಜಿನುಗುತ್ತಿರುತ್ತದೆ. ಅಲ್ಲದೆ ಹಾಗೆ ಬಾಯಿಂದ ಹೊರಬರುವ ನೀರು ನೇರವಾಗಿ ಶಿವಲಿಂಗದ ಮೇಲೆ ಬಿದ್ದು ನಂತರ ಅದರ ಕೆಳಗಿರುವ ಕಲ್ಯಾಣಿಯಲ್ಲಿ ಶೇಖರಗೊಳ್ಳುತ್ತದೆ. ಈ ನೀರು ಶಕ್ತಿಶಾಲಿಯಾಗಿದ್ದು ಸಕಲ ಚರ್ಮ ರೋಗಗಳನ್ನು ಗುಣಪಡಿಸುತ್ತದೆ ಎಂದು ನಂಬಲಾಗಿದೆ, ಅಲ್ಲದೆ ನಂದಿ ಮುಖದಿಂದ ಬರುವ ನೀರಿನ ಮೂಲವನ್ನು ಇಂದಿಗೂ ಕಂಡುಹಿಡಿಯಲಾಗಿಲ್ಲವಂತೆ.

ಈ ರೀತಿ ಕೆಲವು ಶಿವನ ದೇವಾಲಯಗಳು ತನ್ನ ವಿಸ್ಮಯಕಾರಿ ಶಕ್ತಿಯಿಂದಲೇ ಬಹಳಷ್ಟು ಪ್ರಸಿದ್ದಿ ಪಡೆದಿವೆ. ದಿನಬೆಳಗಾದರೆ ಇಲ್ಲಿಗೆ ಸಾವಿರಾರು ಜನ ಭಕ್ತರು ಬಂದು, ತಮ್ಮ ಇಷ್ಟಾರ್ಥಗಳನ್ನ ಬೇಡಿ, ನೆರವೇರಿಸಿಕೊಳ್ಳುತ್ತಿದ್ದಾರೆ.

LEAVE A REPLY

Please enter your comment!
Please enter your name here