ನಾಗಸ್ವರದಿಂದ ಸ್ಯಾಕ್ಸೋಫೋನ್ ಚಕ್ರವರ್ತಿಯಾದ ಗೋಪಾಲನಾಥ್ ಕದ್ರಿ ಇನ್ನಿಲ್ಲ.

0
728

ನೊಂದ ಮನಸ್ಸನ್ನು ಸರಿ ಪಡಿಸುವ ಅಗಾದವಾದ ಶಕ್ತಿ ಸಂಗೀತದಲ್ಲಿ ಅಡಗಿರುತ್ತದೆ. ಖ್ಯಾತ ಸ್ಯಾಕ್ಸೋಫೋನ್ ವಾದಕರಾದ ಕದ್ರಿ ಗೋಪಾಲನಾಥ್ ಇಂದು ಬೆಳಿಗ್ಗೆ ಮಂಗಳೂರಿನ ಖಾಸಗಿ ಆಸ್ಪತೆಯಲ್ಲಿ ನಿಧನರಾಗಿದ್ದಾರೆ. ಸಂಗೀತ ಕ್ಷೇತ್ರಕ್ಕೆ ತುಂಬಲಾರದ ನಷ್ಟ ಅಂತಾನೆ ಹೇಳಬಹುದಾಗಿದೆ. ಸ್ಯಾಕ್ಸೋಫೋನ್ ವಾದನದಲ್ಲಿ ಇವರೇ ಕಿಂಗ್ ಆಗಿದ್ದರು. ಸ್ಯಾಕ್ಸೋಫೋನ್ ವಿದೇಶಿಯ ವಸ್ತುವಾಗಿದ್ದು, ಇದನ್ನು ಅಪ್ಪಟ್ಟ ದೇಶೀ ವಾದನವನ್ನಾಗಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಗೋಪಾಲನಾಥ್ ಅವರು ಮೂಲತಃ ನಾಗಸ್ವರ ವಾದಕರಾಗಿದ್ದರು. ಆದರೆ ನಾಗಸ್ವರ ವಾದಕರಿಂದ ಸ್ಯಾಕ್ಸೋಫೋನ್ ಎನ್ನುವ ಸಂಗೀತದ ಪ್ರಪಂಚದಲ್ಲಿ ಯಶಸ್ಸು ಪಡೆದುಕೊಂಡಿರುವ ಒಂದು ಪಯಣ ನಿಜಕ್ಕು ಸ್ಮರಣೀಯವಾದದ್ದು. ಮುಂದೆ ಓದಿ

ಬಾಲ್ಯದಿಂದಲೇ ಸಂಗೀತದ ಕಡೆಗೆ ಹೆಚ್ಚು ಒಲವಿತ್ತು

ಗೋಪಾಲನಾಥ್ ಅವರು 1948 ರಲ್ಲಿ, ಡಿಸೆಂಬರ್ 11 ರಂದು, ದಕ್ಷಿಣ ಕನ್ನಡ ಜಿಲ್ಲೆಯ ಸಜಿಪ ಗ್ರಾಮದ ಮಿತ್ತಕೆರೆಯಲ್ಲಿ ಜನಿಸುತ್ತಾರೆ. ಇವರ ತಾಯಿಯ ಹೆಸರು ಗಂಗಮ್ಮ, ತಂದೆ ತನಿಯಪ್ಪ ಪ್ರಖ್ಯಾತ ನಾಗಸ್ವರ ವಾದಕರಾಗಿದ್ದರು. ಮನೆಯಲ್ಲೇ ನಾದಸ್ವರದ ಸದ್ದು ಇದ್ದರಿಂದ ಗೋಪಾಲನಾಥ್ ಆ ನಾದಸ್ವರವನ್ನು ಕೇಳುತ್ತ ಬೆಳೆದಿದ್ದರು. ಇವರಿಗೆ ಬಾಲ್ಯದಿಂದಲೇ ಸಂಗೀತದ ಕಡೆಗೆ ಹೆಚ್ಚು ಒಲವಿತ್ತು. ತಂದೆಯಿಂದ ರಕ್ತಗತವಾಗಿ ಸಂಗೀತದ ಕಲೆ ಇವರಲ್ಲಿ ಅಡಗಿತ್ತು. ಆದ್ದರಿಂದ ತಂದೆಯೇ ಇವರಿಗೆ ಮೊದಲು ಗುರುವಾಗಿದ್ದರು. ತಂದೆಯಿಂದಾನೆ ನಾಗಸ್ವರ ಕಲಿತಿದ್ದು, ಅದರಲ್ಲಿಯೇ ಪಳಗುತ್ತಾರೆ.

ಸ್ಯಾಕ್ಸೋಫೋನ್ ಕಲಿಯಲೇಬೇಕೆಂದು ದೃಢ ಸಂಕಲ್ಪವನ್ನು ಮಾಡುತ್ತಾರೆ

ಕೇವಲ ನಾಗಸ್ವರವನ್ನು ಮಾತ್ರ ಇವರು ನುಡಿಸುತ್ತಿದ್ದರು. ಆದರೆ ಅಚಾನಕ್ಕಾಗಿ ಇವರ ಮನವು ಸ್ಯಾಕ್ಸೋಫೋನ್ ವಾದನದ ಕಡೆಗೆ ವಾಲುತ್ತದೆ. ಹೌದು ಮೈಸೂರಿನ ಅರಮನೆಯಲ್ಲಿದ್ದ ಸ್ಯಾಕ್ಸೋಫೋನ್ ನೋಡಿದ ಇವರು, ಆ ಕ್ಷಣದಲ್ಲಿಯೆ ಸ್ಯಾಕ್ಸೋಫೋನ್ ಕಲಿಯಲೇಬೇಕೆಂದು ದೃಢ ಸಂಕಲ್ಪವನ್ನು ಮಾಡುತ್ತಾರೆ. ಸುಮಾರು ಇಪತ್ತು ವರ್ಷದವರೆಗೂ ಕಠಿಣ ಪರಿಶ್ರಮ ಹಾಕಿ ಸ್ಯಾಕ್ಸೋಫೋನ್ ವಾದನದಲ್ಲಿ ಪರಿಣಿತಿ ಪಡೆದುಕೊಂಡಿದ್ದರು. ಗೋಪಾಲ ಕೃಷ್ಣ ಅಯ್ಯರ್ ಅವರಿಂದ ವಾದನವನ್ನು ಕಲಿತಿದ್ದು, ಕರ್ನಾಟಕ ಸಂಗೀತವನ್ನು ನುಡಿಸುವುದರಲ್ಲಿ ಪ್ರಾವೀಣ್ಯತೆ ಪಡೆದುಕೊಂಡಿದ್ದರು. ಚೆನ್ನೈ ನ ಟಿವಿ ಗೋಪಾಲಕೃಷ್ಣ ಅವರ ಒಡನಾಟದಿಂದ ಕದ್ರಿ ಗೋಪಾಲನಾಥ್ ಸಂಗೀತ ಕ್ಷೇತ್ರದಲ್ಲಿ ಸಾಧನೆ ಎಂಬ ಹೆಚ್ಚು ಅಂತರವಿರುವ ಶಿಖರವನ್ನು ಏರಿದ್ದರು.

ಅಂತಾರಾಷ್ಟ್ರೀಯ ಜಾಸ್ ಕಲಾವಿದ ಮಾರು ಹೋಗಿದ್ದರು

1980 ರಲ್ಲಿ ಮುಂಬೈ ನಲ್ಲಿ ನಡೆದ ಸಂಗೀತ ಕಾರ್ಯಕ್ರಮದಲ್ಲಿ ಇವರು ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ನೀಡಿದ ಪ್ರದರ್ಶನದಿಂದಾಗಿ ಅಂತಾರಾಷ್ಟ್ರೀಯ ಮಟ್ಟದವರೆಗೂ ಗುರುತಿಸಿಕೊಂಡಿದ್ದರು. ಮುಂಬೈ ನಲ್ಲಿ ಜಾಸ್ ಕಾರ್ಯಕ್ರಮದಲ್ಲಿ ಇವರು ತಮ್ಮ ಸಂಗೀತ ಕಲೆಯನ್ನು ಪ್ರದರ್ಶಿಸಿದ್ದರು. ಇವರ ವಾದನಕ್ಕೆ ಮರುಳಾದ ಕ್ಯಾಲಿಫೋರ್ನಿಯಾ ದೇಶದ, ಅಂತಾರಾಷ್ಟ್ರೀಯ ಜಾಸ್ ಕಲಾವಿದ ಜಾನ್ ಹ್ಯಾಂಡಿ ನನ್ನೊಂದಿಗೆ ಜುಗಲ್ಬಂದಿ ನಡೆಸುವಂತೆ ಆಹ್ವಾನ ನೀಡಿದ್ದರು. ಜಾಸ್ ಮತ್ತು ಕರ್ನಾಟಕ ಸಂಗೀತದ ಜುಗಲ್ಬಂದಿ ಜನರ ಮೆಚ್ಚುಗೆಗೆ ಪಾತ್ರವಾಗಿತ್ತು. ನಂತರ ಬರ್ಲಿನ್, ಪೆರುಗ್ವೆ, ಮೆಕ್ಸಿಕೋ, ಪ್ಯಾರಿಸ್, ಬಿಬಿಸಿ ಕಾನ್ಸರ್ಟ್ ಲಂಡನ್ ನಲ್ಲಿ ಜಾಸ್ ಕಾರ್ಯಕ್ರಮಗಳಲ್ಲಿ ಕದ್ರಿಯವರು ಪ್ರಸಿದ್ದಿಯನ್ನು ಪಡೆದುಕೊಂಡಿದ್ದರು.

ಪ್ರಶಸ್ತಿಗಳ ಸರಮಾಲೆ

ಭಾರತ ಸರ್ಕಾರದ ಪದ್ಮಶ್ರೀ, ಕೇಂದ್ರ ಸಂಗೀತ ನಾಟಕ ಅಕಾಡಮಿ, ತಮಿಳುನಾಡು ಸರಕಾರ ಕಲೈಮಾಮಮಣಿ,  ಕರ್ನಾಟಕ ಕಲಾಶ್ರೀ, ಗಾನಕಲಾ ಭೂಷಣ, ನಾದ ಗಂಧರ್ವ, ನಾದೋಪಾಸನ ಬ್ರಹ್ಮ ಸುನಾದ, ನಾದಕಲಾ ರತ್ನ, ನಾದಕಲಾನಿಧಿ, ಸಂಗೀತ ವಿದ್ಯಾರತ್ನ, ಸಂಗೀತ ರತ್ನ, ಶೃಂಗೇರಿ – ಮಂತ್ರಾಲಯ – ಅಹೋಬಿಲ ಮುಂತಾದ ಪೀಠಗಳಿಂದ ಸನ್ಮಾನ, ಕಂಚಿ ಕಾಮಕೋಠಿ ಆಸ್ಥಾನ ವಿದ್ವಾನ್, ಬೆಂಗಳೂರು ವಿಶ್ವವಿದ್ಯಾಲಯದ ಡಾಕ್ಟರೇಟ್ ಮುಂತಾದ ಅನೇಕ ಪ್ರಶಸ್ತಿ ಗೌರವಗಳು ಕದ್ರಿ ಗೋಪಾಲನಾಥ ಅವರ ಪಾಲಾಗಿವೆ.

ಸಂಗೀತ ಕ್ಷೇತ್ರಕ್ಕೆ ತುಂಬಲಾರದ ನಷ್ಟ

ಕದ್ರಿಯವರು ತಮಿಳು ಚಿತ್ರಕ್ಕಾಗಿ ಸ್ಯಾಕ್ಸೋಫೋನ್ ಅನ್ನು ನುಡಿಸಿದ್ದರು. ಎ ಆರ್ ರೆಹಮಾನ್ ಅವರ ಸಂಗೀತ ನಿರ್ದೇಶನದಲ್ಲಿ ಮೂಡಿ ಬಂದಿದ್ದ ಹಾಡಿಗೆ ಇವರು ಕಲ್ಯಾಣವಸ್ತಾನಂ ರಾಗ ಹೆಚ್ಚು ಜನಮನ್ನಣೆಗಳಿಸಿತ್ತು.

ಈ ಒಂದು ಚಿತ್ರಕ್ಕಾಗಿ ಕೆಲಸ ಮಾಡಿದ ನಂತರ ನಾನು ಸರಿಯಾಗಿ ರೈಲು ಮತ್ತು ಬಸ್ ಗಳಲ್ಲಿ ಓಡಾಡಲು ಸಾಧ್ಯವಾಗುತ್ತಿರಲಿಲ್ಲ ಎಂದು ಕದ್ರಿ ಅವರು ಹೇಳಿದ್ದರು. ಖ್ಯಾತ ಸಂಗೀತ ನಿರ್ದೇಶಕರಾದ ಮಣಿಕಾಂತ್ ಕದ್ರಿ ಇವರ ಪುತ್ರ. ಆರೋಗ್ಯದ ಸಮಸ್ಯೆಯಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಇಂದು ಬೆಳಿಗ್ಗೆ ನಿಧನರಾಗಿದ್ದಾರೆ.

LEAVE A REPLY

Please enter your comment!
Please enter your name here