ಕರ್ನಾಟಕದ ಈ 10 ಸ್ಥಳಗಳು, ಈ ಹತ್ತು ಖಾದ್ಯಗಳಿಗೆ ಪ್ರಮುಖವಾಗಿವೆ.

0
1995
karnatakada kadyagalu

ಪ್ರವಾಸವು ಸಾಮಾನ್ಯವಾಗಿ ಭೇಟಿ ನೀಡುವ ಸ್ಥಳಗಳ ಕುರಿತು ಐತಿಹಾಸಿಕ ಮಾಹಿತಿ, ಸ್ಥಳ ವಿಶೇಷ, ಅಲ್ಲಿನ ಸಂಸ್ಕೃತಿ ಸಂಪ್ರದಾಯಗಳ ಕುರಿತು ತಿಳಿಸುತ್ತದೆ. ಇದರಲ್ಲಿ ಅಲ್ಲಿ ದೊರೆಯುವ ಖಾದ್ಯಗಳೂ ಸಹ ಅಷ್ಟೆ ಮುಖ್ಯ. ಆಯಾ ಸ್ಥಳಗಳ ವಿಶೇಷ ತಿಂಡಿ ತಿನಿಸುಗಳು ಪ್ರವಾಸದ ಒಂದು ಮುಖ್ಯ ಗುಣಲಕ್ಷಣವಾಗಿರುತ್ತದೆ ಎಂದರೂ ತಪ್ಪಾಗಲಾರದು.

ಒಂದೊಂದು ಸ್ಥಳಗಳು ಒಂದೊಂದು ಬಗೆಯ ತಿಂಡಿ ತಿನಿಸುಗಳಿಗೆ ಜನಪ್ರೀಯವಾಗಿರುತ್ತವೆ. ಇದು ಹಿರಿಯರಿಂದ ಬಳುವಳಿಯಾಗಿ ಬಂದ ಖಾದ್ಯಗಳ ತಯಾರಿಕಾ ವಿಧಾನವಿರಬಹುದು ಅಥವಾ ಅಲ್ಲಿನ ವಾತಾವರಣದ ಗುಣ ಲಕ್ಷಣಗಳಿರಬಹುದು ಒಟ್ಟಾರೆ ಆ ಪ್ರದೇಶವು ಒಂದು ರೀತಿಯ ಸಿಹಿ ತಿಂಡಿಗೋ ಇಲ್ಲವೆ ಪೂರ್ಣ ಪ್ರಮಾಣದ ಊಟಗಳಿಗೊ ಅಥವಾ ಖಾರಯುಕ್ತ ತಿಂಡಿಗೋ ಹೆಚ್ಚು ಜನಪ್ರೀಯತೆ ಪಡೆದಿರುತ್ತವೆ.

ಬೆಂಗಳೂರು

ಮೊದಲಿಗೆ ನಮ್ಮ ನಾಡಿನ ರಾಜಧಾನಿ ನಗರ ಬೆಂಗಳೂರಿನಿಂದ ಪ್ರಾರಂಭಿಸೋಣ. ಹಾಗೆ ನೋಡಿದರೆ ಬೆಂಗಳೂರಿನಲ್ಲಿ ಎಲ್ಲ ಬಗೆಯ ಆಹಾರ ತಿಂಡಿಗಳು ಲಭ್ಯವಿದೆ. ಆದರೂ ಸಾಕಷ್ಟು ಬೆಂಗಳೂರಿನವರು ಅಥವಾ ಹೊರ ರಾಜ್ಯದವರು ಇಲ್ಲಿಗೆ ಬಂದಾಗ ಅವರಿಗೆ ವಿಶೇಷವಾಗಿ ಕಂಡುಬರುವ ಖಾದ್ಯಗಳೆಂದರೆ ಬಿಸಿಬೇಳೆ ಭಾತ್ ಹಾಗೂ ಚೌ ಚೌ ಭಾತ್. ಅಂದರೆ ಬೆಂಗಳೂರಿನಲ್ಲಿ ನೀವು ಎಲ್ಲೆ ಇದ್ದರೂ ಸಹ ಬೆಳಿಗ್ಗೆಯ ಫಲಾಹಾರದ ಸಂದರ್ಭದಲ್ಲಿ ಚಿಕ್ಕ ಪುಟ್ಟ ಹೋಟೆಲ್ ನಲ್ಲಿಯೂ ಸಹ ಈ ಖಾದ್ಯಗಳ ರುಚಿಯನ್ನು ಸವಿಯಬಹುದು.

ಬೆಳಗಾವಿ

ಬೆಳಗಾವಿ ಜಿಲ್ಲೆಯು ಕರ್ನಾಟಕದ ದೊಡ್ಡ ಹಾಗೂ ಪ್ರಮುಖ ಜಿಲ್ಲೆಗಳ ಪೈಕಿ ಒಂದಾಗಿದೆ. ಇದನ್ನು ಪ್ರೀತಿಯಿಂದ ಕುಂದಾ ನಗರಿ ಎಂದೂ ಸಹ ಕರೆಯಲಾಗುತ್ತದೆ. ಅಂದರೆ ಇಲ್ಲಿ ವಿಶೇಷವಾಗಿ ದೊರೆಯುವ ಕುಂದಾ ಎಂಬ ಸಿಹಿ ಖಾದ್ಯವು ಎಂತಹವರಾದರೂ ಸರಿಒಂದು ಸಲ ಬಾಯಿ ಚಪ್ಪರಿಸಿದರೆ ಸಾಕು ಅಂತಾರೆ. ಖಂಡಿತವಾಗಿಯೂ ಅದರ ಸ್ವಾದವನ್ನು ಜೀವಮಾನದಲ್ಲೆ ಮರೆಯುವಂತಿಲ್ಲ. ಸಾಮಾನ್ಯವಾಗಿ ಕುಂದಾ ನಗರದ ಎಲ್ಲ ಸಿಹಿ ಅಂಗಡಿ ಮುಗ್ಗಟ್ಟುಗಳಲ್ಲಿ ದೊರೆಯುತ್ತದೆ. ಅಲ್ಲದೆ ಕಾಲೇಜ್ ರಸ್ತೆಯಲ್ಲಿರುವ ಪುರೋಹಿತ್ ಸ್ವೀಟ್ ಮಾರ್ಟ್ ಅಂಗಡಿಯು ವಿಶೇಷವಾದ ಕುಂದಾ ಗ್ರಾಹಕರಿಗೆ ನೀಡುತ್ತದೆ. ಇದಲ್ಲದೆ ಇಲ್ಲಿ ದೊರೆಯುವ ಕಲಾಕಂದ್ ಹಾಗೂ ಮಂಡಿಗೆಗಳೂ ಸಹ ಅಷ್ಟೆ ರುಚಿಕರವಾಗಿರುತ್ತದೆ.

ಗೋಕಾಕ್

ಬೆಳಗಾವಿ ಜಿಲ್ಲೆಯ ಈಶಾನ್ಯ ಭಾಗಕ್ಕೆ ಸುಮಾರು 67 ಕಿ.ಮೀ ದೂರದಲ್ಲಿ ನೆಲೆಸಿದೆ ಗೋಕಾಕ ಪಟ್ಟಣ. ಈ ಪಟ್ಟಣ ಪ್ರಖ್ಯಾತವಾಗಿರುವುದು ತನ್ನಲ್ಲಿರುವ ಮೈ ಝುಮ್ಮೆನಿಸುವ ರುದ್ರ ಭಯಂಕರ ಜಲಪಾತದಿಂದಾಗಿ. ಈ ಜಲಪಾತವು ಗೋಕಾಕ್ ಫಾಲ್ಸ್ ಎಂದೆ ಪ್ರಸಿದ್ಧವಾಗಿದೆ. ಇಲ್ಲಿನ ಪ್ರಸಿದ್ದವಾದ ತಿಂಡಿ ಅಂದರೆ ಗೋಕಾಕ್ ಕರದಂಟು. ಇಲ್ಲಿನ ಸಿಹಿ ತಿಂಡಿಗೂ ಸಹ ಊರ ಹೆಸರು ಬರುವಂತೆ ಇಟ್ಟಿದ್ದಾರೆ. ಇಲ್ಲಿ ಈ ತಿಂಡಿ ತುಂಬಾ ವಿಶೇಷ.

ಧಾರವಾಡ

ಹುಬ್ಬಳ್ಳಿ ಧಾರವಾಡ ಅವಳಿ ನಗರಗಳು ಉತ್ತರ ಕರ್ನಾಟಕ ಭಾಗದ ವಾಣಿಜ್ಯ ನಗರಗಳಾಗಿವೆ. ಧಾರವಾಡ ನಗರವು ಒಂದು ಬೆಳೆಯುತ್ತಿರುವ ನಗರವಾಗಿದ್ದು ಸಾಕಷ್ಟು ಪ್ರವಾಸಿ ಆಕರ್ಷಣೆಗಳನ್ನು ಒಳಗೊಂಡಿದೆ. ಅಲ್ಲದೆ ಈ ಜಿಲ್ಲೆಯಲ್ಲಿ ಕೆಲವು ಐತಿಹಾಸಿಕ ಪ್ರಸಿದ್ಧ ತಾಣಗಳನ್ನೂ ಸಹ ಕಾಣಬಹುದು. ಧಾರವಾಡ ನಗರವು ಪ್ರಮುಖವಾಗಿ ತನ್ನಲ್ಲಿ ದೊರೆಯುವ ಪೇಢಾ (ಪೇಡೆ) ಎಂಬ ಸಿಹಿಯಾದ ಖಾದ್ಯಕ್ಕೆ ಬಲು ಪ್ರಸಿದ್ಧವಾಗಿದೆ. ಇದು ಕರ್ನಾಟಕದಾದ್ಯಂತ ಧಾರವಾಡ ಮಿಶ್ರಾ ಪೇಡೆಗಳೆಂದೆ ಖ್ಯಾತಿ ಪಡೆದಿದೆ.

ಉಡುಪಿ

ಉಡುಪಿ ಕರ್ನಾಟಕದ ಪ್ರಮುಖ ತೀರ್ಥ ಕ್ಷೇತ್ರಗಳ ಪೈಕಿ ಒಂದಾಗಿದೆ. ಇಲ್ಲಿರುವ ಶ್ರೀ ಕೃಷ್ಣ ಮಠವು ಭಕ್ತಾದಿಗಳನ್ನು ದೇಶದೆಲ್ಲೆಡೆಯಿಂದ ಅಪಾರವಾಗಿ ಸೆಳೆಯುತ್ತದೆ. ಉಡುಪಿಯು ತನ್ನದೆ ಆದ ವಿಶಿಷ್ಟ ಭೋಜನಕ್ಕೆ ಹೆಸರುವಾಸಿಯೂ ಸಹ ಆಗಿದೆ. ಇದನ್ನು ಉಡುಪಿ ಶೈಲಿಯ ವ್ಯಂಜನ ಎಂತಲೂ ಕರೆಯಲಾಗುತ್ತದೆ. ಅಲ್ಲದೆ ಈ ನಗರವು ತನ್ನಲ್ಲಿ ದೊರೆಯುವ ಗರಿ ಗರಿಯಾದ ಮಸಾಲೆ ದೋಸೆಗಳಿಗೆ ಅಪಾರ ಜನಮನ್ನಣೆ ಗಳಿಸಿದೆ. ಉಡುಪಿಗೆ ತೆರಳಿದ್ದಾಗ ಮಸಾಲೆ ದೋಸೆಯ ಸ್ವಾದವನ್ನು ಸವಿಯಲು ಮರೆಯದಿರಿ.

ಮಂಗಳೂರು

ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ನಗರವು ತನ್ನದೆ ಆದ ವಿಶಿಷ್ಟ ಸಂಸ್ಕೃತಿಯನ್ನು ಹೊಂದಿದೆ. ಈ ಕರಾವಳಿ ಪಟ್ಟಣವು ಸಮುದ್ರ ಜೀವಿ ಖಾದ್ಯಗಳಿಗೆ ಪ್ರಸಿದ್ಧವಾಗಿರುವುದಲ್ಲದೆ ವೈವಿಧ್ಯಮಯ ಶಾಖಾಹರ ಖಾದ್ಯಗಳಿಗೂ ಹೆಸರುವಾಸಿಯಾಗಿದೆ. ಅವುಗಳಲ್ಲಿ ಪ್ರಮುಖವಾಗಿ ಹೇಳಬೇಕೆಂದರೆ ಇಲ್ಲಿ ದೊರೆಯುವ ತುಸು ಸಿಹಿಯಾಗಿ ಸ್ವಾದ ಕೊಡುವ ಭಜ್ಜಿ ಹಾಗೂ ನೀರ್ದೊಸೆ ಅಥವಾ ನೀರು ದೋಸೆ. ಏಕೆಂದರೆ ಇದರ ರುಬ್ಬಿದ ಹಿಟ್ಟು ನೀರಿನಂತೆಯೆ ತೆಳುವಾಗಿರುತ್ತದೆ. ಇಲ್ಲಿನ ಪ್ರಮುಖ ಆಹಾರ ನೀರು ದೋಸೆ.

ಉತ್ತರ ಕರ್ನಾಟಕ (ಬಿಜಾಪುರ)

ಉತ್ತರ ಕರ್ನಾಟಕ ಭಾಗವು ತನ್ನದೆ ಆದ ವಿಶಿಷ್ಟ ವ್ಯಂಜನವನ್ನು ಹೊಂದಿದೆ. ಸಾಮಾನ್ಯವಾಗಿ ಬಕ್ರಿ (ಜೋಳದ ರೊಟ್ಟಿ) ಇಲ್ಲಿ ಬಹುವಾಗಿ ಊಟದಲ್ಲಿ ಬಳಸುತ್ತಾರೆ. ಇದಕ್ಕೆ ಜೊತೆಯಾಗಿ ತುಂಬುಗಾಯಿ ಅಥವಾ ಎಣ್ಣೆಗಾಯಿ ಮಾಡುತ್ತಾರೆ. ಬೆಳ್ಳುಳ್ಳಿ ಖಾರ, ಪಚಡಿ, ಹಸಿಯಾದ ಇರುಳ್ಳಿ ಹೋಳುಗಳು ಬಾಯಲ್ಲಿ ನೀರೂರಿಸುತ್ತವೆ. ಸಾಮಾನ್ಯವಾಗಿ ಉತ್ತರ ಕರ್ನಾಟಕದ ಬಹುತೇಕ ಎಲ್ಲ ಜಿಲ್ಲೆಗಳಲ್ಲೂ ಈ ಊಟವನ್ನು ಕಾಣಬಹುದಾಗಿದ್ದು ಅದರಲ್ಲೂ ವಿಶೇಷವಾಗಿ ಬಿಜಾಪುರ ಜಿಲ್ಲೆಯು ತನ್ನ ಉತ್ಕೃಷ್ಟ ಮಟ್ಟದ ಜೋಳದ ರೊಟ್ಟಿ ಊಟಕ್ಕಾಗಿ ಬಲು ಪ್ರಸಿದ್ಧಿ ಪಡೆದಿದೆ.

ದಾವಣಗೆರೆ

ದಾವಣಗೆರೆ ಅಂದ್ರೆ ಎಲ್ಲರಿಗೂ ನೆನಪಾಗೋದು ಬೆಣ್ಣೆ ದೋಸೆ. ಹೌದು ದಾವಣಗೆರೆ ಹೆಸರುವಾಸಿಯಾಗಿರುವುದೇ ಬೆಣ್ಣೆ ದೋಸೆಯಿಂದ. ಒಂದು ಕಾಲದಲ್ಲಿ ಇಲ್ಲಿನ ಬೆಣ್ಣೆ ದೋಸೆ ತಿನ್ನಲು ಜನರು ಎಲ್ಲೆಲ್ಲಿಂದಲೋ ಬರುತ್ತಿದ್ದರು. ಆದರೆ ನಂತರದ ದಿನಗಳಲ್ಲಿ ಅಲ್ಲಲ್ಲಿ ತಮ್ಮ ಹೋಟೆಲ್ ಪ್ರಾರಂಭಿಸೋಕೆ ಶುರು ಮಾಡಿದ್ರು. ಈಗ ರಾಜ್ಯದ ಎಲ್ಲ ಪ್ರಮುಖ ಮಹಾ ನಗರಗಳಲ್ಲಿ ದಾವಣಗೆರೆ ಬೆಣ್ಣೆ ದೊಸೆ ಒದಗಿಸುವ ಹೋಟೆಲುಗಳನ್ನು ಕಾಣಬಹುದು.

ಮೈಸೂರು

ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ ಎಂದೆ ಕರೆಯಲ್ಪಡುವ ಮೈಸೂರು ನಗರ ಪ್ರವಾಸಿ ವಿಶೇಷ ನಗರ. ಇಲ್ಲಿಗೆ ಸಾಕಷ್ಟು ದೇಶೀಯ ಹಾಗೂ ವಿದೇಶಿ ಪ್ರವಾಸಿಗರು ಭೇಟಿ ನೀಡುತ್ತಾರೆ., ಅದರಲ್ಲೂ ವಿಶೇಷವಾಗಿ ದಸರಾ ಸಮಯದಲ್ಲಿ ಬರುತ್ತಾರೆ. ಮೈಸೂರಿನ ವಿಶೇಷ ಖಾದ್ಯ ಅಂದ್ರೆ, ಮೈಸೂರ್ ಪಾಕ್. ಇಲ್ಲಿನ ಮೈಸೂರ್ ಪಾಕ್, ಬೇರೆಲ್ಲೂ ಸಿಗುವುದಿಲ್ಲ. ಯಾಕಂದ್ರೆ ಮೈಸೂರ್ ಪಾಕ್ ಇಲ್ಲಿಗೆ ಹೆಸರುವಾಸಿಯಾಗಿರೋದ್ರಿಂದ, ಇಲ್ಲಿನ ತಯಾರಿಕೆಯೇ ಬೇರೆ ಇರುತ್ತದೆ. ಮೈಸೂರ್ ಪಾಕ್ ಅಂದ್ರೆ, ಎಂಥವರಿಗೂ ಬಾಯಲ್ಲಿ ನೀರು ತರಿಸುತ್ತೆ.

ಮದ್ದೂರು

ಮಂಡ್ಯ ಜಿಲ್ಲೆಯಲ್ಲಿರುವ ಮದ್ದೂರಿನಲ್ಲಿ ವಡೆ ತುಂಬಾ ವಿಶೇಷ. ಇಲ್ಲಿ ಮಾಡುವ ವಡೆ ಅಂದ್ರೆ ಎಂಥವರೂ ಇಷ್ಟ ಪಡುತ್ತಾರೆ. ಯಾಕಂದ್ರೆ ಅಷ್ಟೊಂದು ರುಚಿಯಾಗಿ ವಡೆ ತಯಾರಿಸುತ್ತಾರೆ. ಅದಕ್ಕಿರುವ ಹೆಸರು ಮದ್ದೂರು ವಡೆ ಎಂದೇ. ಮೊದಲು ಈ ವಡೆ ರುಚಿ ಸವಿಯಬೇಕು ಅಂದ್ರೆ, ಅಲ್ಲಿಗೆ ಹೋಗಬೇಕಿತ್ತು. ಆದರೆ ದಿನ ಕಳೆದಂತೆ, ಬೇರೆಡೆಯೂ ಮಾಡಲು ಶುರು ಮಾಡಿದರು. ಅಂದ್ರೆ ಅಲ್ಲಿನವರೇ ಕೆಲವರು ಬೇರೆ ಸ್ಥಳಕ್ಕೆ ಬಂದಿದ್ದರಿಂದ, ಎಲ್ಲೆಡೆಯೂ ಮದ್ದೂರು ವಡೆ ಪ್ರಚಲಿತವಾಯಿತು.

ನಿಜಕ್ಕೂ ಕರ್ನಾಟಕವೇ ಒಂದು ವಿಶೇಷ. ಅದರಲ್ಲೂ ಅದರ ಜಿಲ್ಲೆಗಳು, ಜಿಲ್ಲೆಗಳಲ್ಲಿ ಸಿಗುವ ಖಾದ್ಯಗಳು ಇನ್ನೂ ವಿಶೇಷ. ಇವುಗಳನ್ನ ಸವೆಯಲು, ರುಚಿ ನೋಡಲು ಎಲ್ಲೆಲ್ಲಿಂದಲೋ ಜನರು ಬರುತ್ತಾರೆ. ಕರ್ನಾಟಕದಲ್ಲಿರೋ ಸ್ಥಳಗಳಿಗೆ ಮಾತ್ರ ಇತಿಹಾಸವಿಲ್ಲ. ಅಲ್ಲಿ ಸಿಗುವ ತಿಂಡಿ, ತಿನಿಸುಗಳಿಗೂ ಒಂದೊಂದು ರೀತಿಯ ವಿಶೇಷವಿದೆ.

LEAVE A REPLY

Please enter your comment!
Please enter your name here