ರಜೆಯನ್ನ ಮಸ್ತ್ ಮಜಾ ಮಾಡಬೇಕಾ. ಹಾಗಾದ್ರೆ ಕರ್ನಾಟಕದ ಈ ದ್ವೀಪಗಳಿಗೆ ಭೇಟಿ ನೀಡಿ.

0
1267
karnatakada dvipagalu

ನಮ್ಮ ಜನರಿಗೆ ರಜೆ ಬಂತು ಅಂದ್ರೆ ಸಾಕು, ಆ ಊರು, ಈ ಊರು ಅಂತ ಸುತ್ತೋಕೆ ಶುರು ಮಾಡ್ತಾರೆ. ಅದರಲ್ಲೂ ಯಾವಾಗಲೂ ಸುತ್ತಾಡೋರಿಗೆ, ಎಷ್ಟು ಸ್ಥಳಗಳಿದ್ದರು ಕಡಿಮೆ. ಅದೇ ರೀತಿ,ಇನ್ನೂ ಎಷ್ಟೋ ಕೆಲವರಿಗೆ ಸ್ಥಳಗಳ ಬಗ್ಗೆಯೇ ಗೊತ್ತಿರಲ್ಲ. ಎಲ್ಲಿಗೆ ಹೋಗೋದು ಅಂತ ಯೋಚನೆ ಮಾಡೋದ್ರಲ್ಲೇ ದಿನ ಕಳೆಯುತ್ತಾರೆ. ಅಂತವರಿಗೆ ನಮ್ಮ ಕರ್ನಾಟಕದಲ್ಲೇ, ಸುಂದರ ಸ್ಥಳಗಳಿವೆ. ಕಾಡು, ಮೇಡು, ನದಿ ಬೆಟ್ಟ ಅಂತ ಸುಂದರ ಜಾಗಗಳಿವೆ.

ಹೌದು. ಅದರ ಜೊತೆಗೆ ನಮ್ಮ ಕರ್ನಾಟಕ, ದ್ವೀಪಗಳಿಗೂ ಹೆಸರು ವಾಸಿಯಾಗಿದೆ. ಜನರನ್ನ ತನ್ನತ್ತ ಸೆಳೆಯುವಂತ ದ್ವೀಪಗಳು ನಮ್ಮಲ್ಲಿ ಹಲವಿವೆ. ಅವುಗಳನ್ನ ನೋಡಲು ಜನರು ಎಲ್ಲೆಲ್ಲಿಂದಲೋ ಬರುತ್ತಾರೆ. ದ್ವೀಪಗಳು ಅಥವಾ ನಡುಗಡ್ಡೆಗಳು ಸಾಮಾನ್ಯವಾಗಿ ನೀರಿನ ಮಧ್ಯದಲ್ಲಿರುವ ಭೂಪ್ರದೇಶಗಳಾಗಿವೆ. ಹಾಗಾಗಿ ತನ್ನ ಸುತ್ತಲೂ ನೀರಿನಿಂದ ಆವೃತವಾಗಿರುವ ಈ ದ್ವೀಪಗಳು ಪ್ರವಾಸಿ ದೃಷ್ಟಿಯಿಂದ ಜನರನ್ನು ಸೆಳೆಯುತ್ತಲೆ ಇರುತ್ತವೆ. ಇಂತಹ ಅನೇಕ ದ್ವೀಪಗಳನ್ನು ಅಥವಾ ನಡುಗಡ್ಡೆಗಳನ್ನು ಪ್ರಪಂಚದಾದ್ಯಂತೆ ಕಾಣಬಹುದು.ಜೊತೆಗೆ ಇವು ನಮ್ಮ ಕರ್ನಾಟಕದಲ್ಲೂ ಹೆಸರುವಾಸಿಯಾಗಿವೆ.

ಕರ್ನಾಟಕದ ದ್ವೀಪಗಳು

ಬಸವರಾಜದುರ್ಗ ದ್ವೀಪ

ಈ ಸುಂದರ ಹಾಗೂ ಮನಮೋಹಕ ದ್ವೀಪವು ಅರಬ್ಬೀ ಸಮುದ್ರದಲ್ಲಿ ಕಂಡುಬರುತ್ತದೆ. ಕರ್ನಾಟಕ ರಾಜ್ಯಕ್ಕೆ ಸಂಬಂಧಿಸಿದ ಈ ದ್ವೀಪವು ಉತ್ತರ ಕನ್ನಡ ಜಿಲ್ಲೆಯಲ್ಲಿದ್ದು, ಹೊನ್ನಾವರದ ಕಡಲ ತೀರದಿಂದ ಸಮುದ್ರದಲ್ಲಿ ನಾಲ್ಕು ಕಿ.ಮೀ ನಷ್ಟು ದೂರದಲ್ಲಿ ನೆಲೆಸಿದೆ. ಈ ನಡುಗಡ್ಡೆಯ ಭೂಪ್ರದೇಶದಲ್ಲಿ ಕೋಟೆಯಿರುವುದನ್ನು ಕಾಣಬಹುದು. ಹಾಗಾಗಿ ಇದಕ್ಕೆ ದುರ್ಗ ಎಂಬ ಹೆಸರನ್ನಿಟ್ಟಿದ್ದಾರೆ. ಈ ದ್ವೀಪದ ಸುತ್ತಲೂ ಗಟ್ಟಿ ಮುಟ್ಟಾದ ಬಂಡೆ ಕಲ್ಲುಗಳು ಆವರಿಸಿದ್ದರಿಂದ ಇದು ನೈಸರ್ಗಿಕವಾಗಿ ಕೋಟೆಯ ತಡೆ ಗೋಡೆಯ ಬುಡಕ್ಕೆ ರಕ್ಷಣೆಯನ್ನು ಒದಗಿಸಿದೆ. ಈ ದ್ವೀಪದ ಒಟ್ಟು ವಿಸ್ತಾರವು 19 ಹೆಕ್ಟೇರ್ ಗಳಷ್ಟಾಗಿದ್ದು, ಸಮುದ್ರದಿಂದ ಸುಮಾರು 45 ರಿಂದ 50 ಮೀ ಗಳಷ್ಟು ಎತ್ತರದಲ್ಲಿದೆ.

ನೇತ್ರಾಣಿ ದ್ವೀಪ

ಇದು ಅರಬ್ಬಿ ಸಮುದ್ರದಲ್ಲಿ ರೂಪಗೊಂಡಿರುವ ದ್ವೀಪವಾಗಿದೆ. ಇದು ಸಹ ಉತ್ತರ ಕನ್ನಡ ಜಿಲ್ಲೆಯಲ್ಲಿದ್ದು, ಪ್ರಖ್ಯಾತ ಧಾರ್ಮಿಕ ಪ್ರವಾಸಿ ಕೇಂದ್ರವಾದ ಮುರುಡೇಶ್ವರದಿಂದ ಸಮುದ್ರದಲ್ಲಿ ಹತ್ತು ನಾಟಿಕಲ್ ಮೈಲ್ಸ್ ಅಥವಾ 19 ಕಿ.ಮೀ ಗಳಷ್ಟು ದೂರದಲ್ಲಿದೆ. ಇದನ್ನು ಪಿಜನ್ ಐಲ್ಯಾಂಡ್ ಎಂಬ ಹೆಸರಿನಿಂದಲೂ ಸಹ ಕರೆಯಲಾಗುತ್ತದೆ. ಈ ದ್ವೀಪ ಹೃದಯದ ಆಕಾರದಲ್ಲಿದೆ. ಇಲ್ಲಿನ ವಿಶೇಷವೆಂದರೆ ಇಲ್ಲಿ ಸಾಕಷ್ಟು ಪಾರಿವಾಳಗಳು ಕಂಡುಬರುತ್ತವೆ. ಹಾಗಾಗಿ ಇದಕ್ಕೆ ಪಿಜನ್ ಐಲ್ಯಾಂಡ್ ಎಂಬ ಹೆಸರು ಬಂದಿದೆ. ಇನ್ನೊಂದು ವಿಶೇಷವೆಂದರೆ ಇದೊಂದು ಸ್ಕೂಬಾ ಡವಿಂಗ್ ಕೇಂದ್ರವೂ ಆಗಿದ್ದು ಹವಳದ ದ್ವೀಪವಾಗಿದೆ.

ಪಾವೂರು ಉಲಿಯಾ

ಇದೊಂದು ನೇತ್ರಾವತಿ ನದಿಯಲ್ಲಿ ರೂಪಗೊಂಡಿರುವ ಚಿಕ್ಕ ನಡುಗಡ್ಡೆ ದ್ವೀಪವಾಗಿದೆ. ಇಲ್ಲಿ ಅತಿ ಕಡಿಮೆ ಸಂಖ್ಯೆಯ ಕುಟುಂಬಗಳು ವಾಸಿಸುತ್ತವೆ. ಈ ನಡುಗಡ್ಡೆ ಮಂಗಳೂರು ನಗರದಿಂದ 12 ಕಿ.ಮೀ ದೂರದಲ್ಲಿದೆ. ಇದರ ಸುತ್ತಲೂ ನೇತ್ರಾವತಿ ನದಿ ಹರಿದಿದೆ. ವಿಶೇಷವೆಂದರೆ ಈ ನಡುಗಡ್ಡೆಯಲ್ಲಿ ಯಾವುದೆ ವಾಣಿಜ್ಯ ಕೇಂದ್ರಗಳಿಲ್ಲ. ಅಂಗಡಿ, ಆಸ್ಪತ್ರೆ, ಶಾಲೆಗಳಿಲ್ಲ. ವಿದ್ಯುತ್ ದೀಪಗಳೂ ಸಹ ಇಲ್ಲಿಲ್ಲ. ಒಂದು ಚರ್ಚ್ ಮಾತ್ರವಿದೆ.

ಶ್ರೀರಂಗಪಟ್ಟಣ

ಮೈಸೂರು ನಗರದಿಂದ ಕೇವಲ 15 ರಿಂದ 20 ಕಿ.ಮೀ ಗಳಷ್ಟೆ ದೂರದಲ್ಲಿರುವ ಶ್ರೀರಂಗಪಟ್ಟಣವು ಮಂಡ್ಯ ಜಿಲ್ಲೆಯಲ್ಲಿ ಬರುತ್ತದೆ. ಇದು ಒಂದು ದ್ವೀಪ ಪಟ್ಟಣವಾಗಿದೆ. ಏಕೆಂದರೆ ಇದರ ನಾಲ್ಕು ಬದಿಯಲ್ಲೂ ಕಾವೇರಿ ನದಿಯು ಹರಿದಿದೆ. ಶ್ರೀರಂಗಪಟ್ಟಣವು ಕಾವೇರಿ ನದಿಯ ಎರಡು ಕವಲುಗಳಿಂದ ನಿರ್ಮಾಣವಾದ ದ್ವೀಪದ ಊರಾಗಿದೆ. ಈ ದ್ವೀಪವು 13 .ಕಿ.ಮೀ ವಿಸ್ತೀರ್ಣವಿದ್ದು, ಮೈಸೂರಿಗೆ ತುಂಬ ಹತ್ತಿರದಲ್ಲಿದೆ. ಇದರ ಸಮೀಪದಲ್ಲೇ ಬಲಮುರಿ ಜಲಪಾತವಿದೆ. ಅದು ಬಹಳಷ್ಟು ಹೆಸರುವಾಸಿಯಾಗಿದೆ.

ಸೇಂಟ್ ಮೇರಿಯ ದ್ವೀಪ

ಉಡುಪಿಯ ಮಲ್ಪೆ ಕಡಲ ತೀರ ಪ್ರದೇಶದಲ್ಲಿ ಈ ದ್ವೀಪ ಕಂಡುಬರುತ್ತದೆ. ಸೇಂಟ್ ಮೇರಿಯ ದ್ವೀಪ ಸಮೂಹವು ಉಡುಪಿಯ ಪ್ರೇಕ್ಷಣೀಯ ಸ್ಥಳವಾಗಿದೆ. ವಿಶೇಷವೆಂದರೆ ಇಲ್ಲಿ ಕಂಡುಬರುವ ಬಸಾಲ್ಟ್ ಶಿಲಾ ರಚನೆಗಳು ಜ್ವಾಲಾಮುಖಿಯಿಂದ ರೂಪಿತವಾದ ರಚನೆಗಳಾಗಿವೆ. ಮಲ್ಪೆ ಕಡಲ ತೀರದಿಂದ ಆರು ಕಿ.ಮೀ ದೂರವಿರುವ ಈ ದ್ವೀಪ ಸಮೂಹಕ್ಕೆ ದೋಣಿಯಿಂದ ಮಾತ್ರವೆ ಹೋಗಲು ಸಾಧ್ಯ. ಇದನ್ನು ಕೋಕೋನಟ್ ದ್ವೀಪ ಎಂಬ ಹೆಸರಿನಿಂದಲೂ ಸಹ ಕರೆಯಲಾಗುತ್ತದೆ.

ನಿಸರ್ಗಧಾಮ

ನಿಸರ್ಗಧಾಮವು ಕಾವೇರಿ ನದಿಯಲ್ಲಿನ ಒಂದು ದ್ವೀಪವಾಗಿದೆ. ಕೊಡಗು ಜಿಲ್ಲೆಯ ಕುಶಾಲ ನಗರದಿಂದ ಸುಮಾರು 3 ಕಿ.ಮೀ ದೂರದಲ್ಲಿರುವ ಪ್ರಸಿದ್ಧ ಪ್ರವಾಸಿ ತಾಣ. ಇದೊಂದು ಪಾರಂಪರಿಕ ಪಾರ್ಕ್‌ ಆಗಿದ್ದು ಸುಮಾರು 35 ಎಕರೆ ವಿಸ್ತಾರದಲ್ಲಿ ಹರಡಿಕೊಂಡಿದೆ. ದೋಣಿ ವಿಹಾರವು ಇಲ್ಲಿ ಲಭ್ಯವಿದ್ದು ಪ್ರವಾಸಿಗರಿಗೆ ಹೆಚ್ಚಿನ ಸಂತಸವನ್ನು ಕರುಣಿಸುತ್ತದೆ. 90 ಮೀ ಉದ್ದದ ಸೇತುವೆಯನ್ನು ಮುಖ್ಯ ಭೂಮಿಗೆ ಸಂಪರ್ಕ ಕಲ್ಪಿಸಲು ನಿರ್ಮಿಸಲಾಗಿದೆ. ಇದರ ಮೂಲಕ ಕಾವೇರಿಯ ನದಿಯನ್ನು ಪ್ರವಾಸಿಗರು ದಾಟಬಹುದು.

ಇವು ನಮ್ಮ ಕರ್ನಾಟಕದಲ್ಲಿರುವ ಸುಂದರ ದ್ವೀಪಗಳಾಗಿವೆ. ರಜೆಯನ್ನ ಮಸ್ತ್ ಮಜಾ ಮಾಡಬೇಕೆಂದು ಕೊಂಡಿರುವವರು ಈ ದ್ವೀಪಗಳಿಗೆ ಹೋಗಬಹುದು. ಅಲ್ಲದೆ ಈ ದ್ವೀಪಗಳು ತನ್ನದೇ ಆದ ವಿಶೇಷತೆಯನ್ನ ಹೊಂದಿವೆ.

LEAVE A REPLY

Please enter your comment!
Please enter your name here