ಬಿಲ್ಡ್ ಅಪ್ ಬೇಡ ನಾವು ಗೆಲ್ಲಬೇಕು, ಇಲ್ಲಿ ನಾವು ಗಲಾಟೆ ಮಾಡಲು ಬಂದಿಲ್ಲ ಎಂದು ಹೇಳಿದ ಜಗ್ಗೇಶ್

0
791

ಕನ್ನಡ ಚಿತ್ರರಂಗದಲ್ಲಿ ಅನೇಕ ಚಿತ್ರಗಳಲ್ಲಿ ನವರಸ ನಾಯಕ ಬಣ್ಣ ಹಚ್ಚಿದ್ದಾರೆ. ಜಗ್ಗೇಶ್ ಅವರು ಇಬ್ಬನಿ ಕರಗಿತು ಸಿನಿಮಾದ ಮೂಲಕ ಚಂದನವನಕ್ಕೆ ಪ್ರವೇಶಿಸುತ್ತಾರೆ. ಆನಂತರ ಬಂಡ ನನ್ನ ಗಂಡ ಹಾಗೂ ಉಪೇಂದ್ರ ಅವರು ನಿರ್ದೇಶಿಸಿದ ತರ್ಲೆ ನನ್ನ ಮಗ ಚಿತ್ರದಲ್ಲಿ ನಟಿಸುತ್ತಾರೆ. ಹೀಗೆ ಹಾಸ್ಯ ಪ್ರಧಾನವಾದ ಚಿತ್ರಗಳಿಗೆ ಇವರು ಹೆಚ್ಚು ಆದ್ಯತೆ ನೀಡುತ್ತಿದ್ದರು. ಕುಟುಂಬದ ಜೊತೆಗೆ ಹೋಗಿ ಇವರ ಸಿನಿಮಾವನ್ನು ವೀಕ್ಷಿಸಬಹುದಾಗಿತ್ತು. ಜನರು ಇವರನ್ನು ನವರಸ ನಾಯಕರೆಂದು ಕರೆಯುತ್ತಾರೆ. 9 ಬಗೆಯ ಹಾವ ಭಾವಗಳನ್ನು ಇವರು ಕರಗತ ಮಾಡಿರುವದರಿಂದ ಇವರನ್ನು ನವರಸ ನಾಯಕ ಎನ್ನುವ ಬಿರುದನ್ನು ನೀಡಿದ್ದಾರೆ. ಮುಂದೆ ಓದಿ.

ಪ್ರೀಮಿಯರ್ ಪದ್ಮಿನಿ 50 ದಿನವನ್ನು ಪೊರೈಸಿದೆ

ಇತ್ತೀಚಿನ ದಿನಗಳಲ್ಲಿ ಇವರ ಚಿತ್ರ ಹೆಚ್ಚಾಗಿ ಬಿಡುಗಡೆಯಾಗುತ್ತಿಲ್ಲ. ಒಂದೆರಡು ಚಿತ್ರಗಳು ಬಿಡುಗಡೆಯಾದರು ಜಗ್ಗೇಶ್ ಅವರ ಮೊದಲ ಶೈಲಿಯ ಸಿನಿಮಾಗಳ ಹಾಗೆ ಮೂಡಿ ಬರುತ್ತಿಲ್ಲ. ಸ್ವಲ್ಪ ದಿನಗಳ ಕೆಳಗೆ ಇವರ 8ಎಮೆಮ್ ಚಿತ್ರ ಬಿಡುಗಡೆಯಾಗಿತ್ತು, ಈ ಸಿನಿಮಾದಲ್ಲಿ ಜಗ್ಗೇಶ್ ಅವರು ಬಿಳಿ ಗಡ್ಡವನ್ನು ಬಿಟ್ಟಿದ್ದರು. ಆದರೆ ಸಿನಿಮಾ ಜನರ ನಿರೀಕ್ಷೆಯ ಮಟ್ಟವನ್ನು ತಲುಪಲಿಲ್ಲ. ಇವರು ನಟಿಸಿರುವ ಮತ್ತೊಂದು ಸಿನಿಮಾ ಪ್ರೀಮಿಯರ್ ಪದ್ಮಿನಿ ಜನರಿಗೆ ಇಷ್ಟವಾಗಿದೆ. ಈ ಚಿತ್ರದಲ್ಲಿ ಜಗ್ಗೇಶ್ ಅವರು ಪೋಷಕ ನಟನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಇವರ ಪಾತ್ರವೆ ಹೆಚ್ಚು ಪ್ರಾಮುಖ್ಯತೆ ಪಡೆದುಕೊಂಡಿದೆ. ಪ್ರೀಮಿಯರ್ ಪದ್ಮಿನಿ 50 ದಿನವನ್ನು ಪೊರೈಸಿದೆ. ಸಿನೆಮಾದ ಕುರಿತು ಹಲವು ವಿಚಾರಗಳನ್ನು ಹಂಚಿಕೊಳ್ಳುವ ಸಲುವಾಗಿ ಚಿತ್ರ ತಂಡ ಸುದ್ದಿ ಗೋಷ್ಠಿ ಏರ್ಪಡಿಸಿದ್ದರು.

ಮಾಲ್ ಗಳಿಂದ ಕನ್ನಡ ಚಿತ್ರರಂಗಕ್ಕೆ ಉಪಯೋಗವಾಗುತ್ತಿದೆ

ಕಾರ್ಯಕ್ರಮದಲ್ಲಿ ಮಾತನಾಡಿದ ಜಗ್ಗೇಶ್, ಖುಷಿ ಸಂಗತಿಗಳಿಗಿಂತ ಕಹಿ ಸಂಗತಿಗಳೇ ಜಾಸ್ತಿ ಹಂಚಿಕೊಂಡಿದ್ದಾರೆ. ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳ ವಿರುದ್ದ ಕೆಂಡ ಮಂಡಲವಾಗಿದ್ದಾರೆ. ಸಿನಿಮಾಗಳು 50-100 ದಿನ ಪೊರೈಸಿದೆ ಎಂದು ಹೇಳುತ್ತಾರೆ, ಆದರೆ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳಿಂದ ನಿರ್ಮಾಪಕರಿಗೆ ಹಣವೇ ಸಿಗುವುದಿಲ್ಲ ಎಂದು ಹೇಳುವ ಮೂಲಕ ಬೇಸರವನ್ನು ವ್ಯಕ್ತ ಪಡಿಸಿದ್ದಾರೆ. ಮಾಲ್ ಗಳಿಂದ ಕನ್ನಡ ಚಿತ್ರರಂಗಕ್ಕೆ ಉಪಯೋಗವಾಗುತ್ತಿದೆ. ಈಗ ಪ್ರೀಮಿಯರ್ ಪದ್ಮಿನಿ ಚಿತ್ರ ಕೂಡ ಹಣವನ್ನು ಬಾಚಿಕೊಂಡಿದೆ ಎಂದು ಹೇಳಿದ್ದಾರೆ. ಒಬ್ಬ ಕಮರ್ಷಿಯಲ್ ನಟನನ್ನು ನಿರ್ದೇಶಕರು ಪ್ರಯೋಗಾತ್ಮಕವಾಗಿ ತೋರಿಸಿದ್ದಾರೆ.

ಇನ್ಮುಂದೆ ನಾನು ಹಾಸ್ಯ ಪ್ರಧಾನವಾದ ಚಿತ್ರಗಳನ್ನು ಮಾಡುತ್ತೇನೆ

ಒಬ್ಬ ಕಲಾವಿದ ಒಂದೇ ಶೈಲಿಯ ಪಾತ್ರವನ್ನು ಮಾಡುತ್ತಿದ್ದರೆ ಅವನು ಬ್ರಾಂಡ್ ಆಗುವುದಲ್ಲದೆ, ಎತ್ತರಕ್ಕೆ ಬೆಳೆಯೋದಕ್ಕೆ ಸಾಧ್ಯವಾಗುವುದಿಲ್ಲ. ಬಣ್ಣ ಹಚ್ಚುವ ಪ್ರತಿಯೊಬ್ಬ ಕಲಾವಿದನಿಗು ಆಸೆ ಇದ್ದೆ ಇರುತ್ತದೆ. ಆದರೆ ಅಂತಹ ಪಾತ್ರಗಳನ್ನು ನಾನು ಮಾಡುವುದಿಲ್ಲ ಎಂದು  ಹೇಳಿದರೆ ನಿರ್ದೇಶಕರಿಗೆ ಬಹಳ ನೋವಾಗುತ್ತದೆ. ಇನ್ಮುಂದೆ ನಾನು ಹಾಸ್ಯ ಪ್ರಧಾನವಾದ ಚಿತ್ರಗಳನ್ನು ಮಾಡುತ್ತೇನೆ ಎಂದಿದ್ದಾರೆ. ನಾನು ಒಬ್ಬ ನಿರ್ಮಾಪಕ, ವಿತರಕರಿಗೆ ಚಿತ್ರರಂಗದ ಎಲ್ಲಾ ವಿವರಗಳು ಗೊತ್ತಿರುತ್ತದೆ. ನಮ್ಮ ಸಿನಿಮಾ ಎಷ್ಟು ಚಿತ್ರಮಂದಿರಗಳಲ್ಲಿ ಓಡಿದೆ ಎಂದು ಕೇಳುತ್ತಾರೆ. ಆದರೆ ರಾಜ್ಯದಲ್ಲಿ ಈಗ ಮೂರು ವರ್ಗದ ಚಿತ್ರ ಮಂದಿರಗಳು ಮಾತ್ರ ಇವೆ. ಸಾವಿರದಿಂದ 400ಕ್ಕೆ ಸಿಂಗಲ್ ಸ್ಕ್ರೀನ್ ಗಳು ಇಳಿದಿವೆ. ಮಾಲ್ ನಲ್ಲಿ 500-600 ಸ್ಕ್ರೀನ್ ಗಳು ಇವೆ. ಇನ್ನುಳಿದ ಚಿತ್ರಮಂದಿರಗಳು ರದ್ದಾಗಿ ಹೋಗಿವೆ.

ಹಣವನ್ನು ಸಂಪಾದಿಸಬೇಕೆ ಹೊರತು ಗಲಾಟೆ ಮಾಡಲು ಬಂದಿಲ್ಲ

ನಮ್ಮ ಸಿನಿಮಾ ಸಹ ಸಿಂಗಲ್ ಸ್ಕ್ರೀನ್ ನಲ್ಲಿ ಪ್ರದರ್ಶನವಾಗಲಿಲ್ಲ. ಗಾಂಧಿನಗರದ ಸ್ಕ್ರೀನ್ ಬಾಡಿಗೆ ಕೂಡ ಜಾಸ್ತಿಯಾಗಿದೆ. ಸಿನಿಮಾ 50 ದಿನ ಓಡಿದರು ಅದಕ್ಕೆ ಷೇರ್ ಸೊನ್ನೆ ಸುತ್ತುತ್ತಾರೆ. ಆದರೆ ಪೇಪರ್ ನಲ್ಲಿ ಮಾತ್ರ 50 ಡೇಸ್ 100 ಡೇಸ್ ಎಂದು ಹಾಕುತ್ತಾರೆ. ಹಾಗೆ ಹಾಕಿದ ಚಿತ್ರಗಳಿಗಿಂತ ಇಂತಹ ಚಿತ್ರಗಳೇ ಹೆಚ್ಚು ದುಡ್ಡು ಮಾಡುತ್ತದೆ. ನಮಗೆ ಇಂತಹ ಬಿಲ್ಡ್ ಅಪ್ ಬೇಡ, ನಮ್ಮ ಸಿನಿಮಾ ಜನರಿಗೆ ಇಷ್ಟವಾಗಬೇಕು, ನಾವು ಗೆಲ್ಲಬೇಕು. ನಾವು ಯಾರಿಗೂ ಇಲ್ಲಿ ಪೈಪೋಟಿ ನೀಡಲು ಬಂದಿಲ್ಲ. ಒಳ್ಳೆಯ ಚಿತ್ರ ಮಾಡಿ ಹಣವನ್ನು ಸಂಪಾದಿಸಬೇಕೆ ಹೊರತು ಗಲಾಟೆ ಮಾಡಲು ಬಂದಿಲ್ಲ. ಬುದ್ದಿವಂತ ತನಗೆ ಬಂದಿದ್ದನ್ನು ಡಂಗುರ ಹೊಡೆಯುವುದಿಲ್ಲ.

ನಮ್ಮ ಸಿನಿಮಾ ನೋಡಿ ಎಂದು ಭಿಕ್ಷೆ ಬೇಡುವುದಿಲ್ಲ

ತಮಿಳು ಮತ್ತು ಆಂಧ್ರದಲ್ಲಿ ಜನ ಕೇವಲ ಅವರ ಭಾಷೆಯ ಸಿನಿಮಾವನ್ನು ಮಾತ್ರ ನೋಡುತ್ತಾರೆ. ಅದಕ್ಕೆ ಅವರ ಸಿನಿಮಾಗಳಿಗೆ ಯಾವುದೆ ರೀತಿಯ ತೊಂದರೆಯಾಗುವುದಿಲ್ಲ. ಆದರೆ ಕರ್ನಾಟಕದಲ್ಲಿ ಯಾಕೆ ಕನ್ನಡ ಸಿನಿಮಾವನ್ನು ನೋಡಬೇಕೆಂದು ಹೇಳುತ್ತಾರೆ. ನೀವು ಯಾವ ಭಾಷೆಯ ಸಿನಿಮಾವಾದರು ನೋಡಿ. ನಾವು ನಿಮ್ಮ ಬಳಿ ಬಂದು ನಮ್ಮ ಸಿನಿಮಾ ನೋಡಿ ಎಂದು ಭಿಕ್ಷೆ ಬೇಡುವುದಿಲ್ಲ ಎಂದು ಜಗ್ಗೇಶ್ ಅವರು ಮಾತನಾಡಿದ್ದಾರೆ.

LEAVE A REPLY

Please enter your comment!
Please enter your name here