ಸೈಬರ್ ಕೆಫೆ ಮತ್ತು ಜಿಮ್ ನಲ್ಲಿ ಕೆಲಸ ಮಾಡಿದ ಹುಡುಗ ಈಗ ವಿದ್ಯಾರ್ಥಿಗಳ ನೆರವಿಗೆ ನಿಂತಿದ್ದಾರೆ

0
763

ಎಸ್ ಎಸ್ ಎಲ್ ಸಿ ಯಲ್ಲಿ ಫೇಲಾದ ಕಾರಣದಿಂದಾಗಿ ಅದೆಷ್ಟೋ ವಿದ್ಯಾರ್ಥಿಗಳು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದರು. ಆದರೆ ಇಲ್ಲಿ ಒಬ್ಬ ವ್ಯಕ್ತಿಯ ಜೀವನವನ್ನು ನೋಡುತ್ತಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಿರಲಿ ಅದರ ಬಗ್ಗೆ ಆಲೋಚನೆಯು ಮಾಡಲಾರರು ಅಂತಾನೆ ಹೇಳಬಹುದಾಗಿದೆ. ಆ ವ್ಯಕ್ತಿಯ ಹೆಸರು ಚಿದಾನಂದ ಮೂರ್ತಿ ಅಂತ. ಇವರು 10 ನೆ ತರಗತಿಯಲ್ಲಿ ಓದುತ್ತಿದ್ದು, ಒಂದು ದಿನ ಫಲಿತಾಂಶ ಹೊರ ಬಿದ್ದಿತ್ತು. ಇನ್ನು ಇವರ ಸಹಪಾಠಿಗಳು ಫಸ್ಟ್ ಕ್ಲಾಸ್, ಸೆಕೆಂಡ್ ಕ್ಲಾಸ್ ನಲ್ಲಿ ಪಾಸ್ ಆಗಿದ್ದರು. ಗೆಳೆಯರ ಖುಷಿಯೊಳಗೆ ಭಾಗಿ ಆಗೋಣ ಎಂದರೆ ಇವರು ಮೂರು ವಿಷಯಗಳಲ್ಲಿ ಗೋತಾ ಹೊಡೆಯುವ ಮೂಲಕ ಫೇಲ್ ಆಗಿದ್ದರು.

ಸೈಬರ್ ಕೆಫೆ ಮತ್ತು ಜಿಮ್ ನಲ್ಲಿ ಕೆಲ ತಿಂಗಳ ಕಾಲ ಕೆಲಸವನ್ನು ಮಾಡಿದ್ದರು

ಫೇಲ್ ಆಗಿರವುದರಿಂದ ಸಮಾಜ ಇವರನ್ನು ನೋಡುವ ಒಂದು ದೃಷ್ಟಿಕೋನವೆ ಬದಲಾಗಿ ಹೋಗಿತ್ತು. ಜೀವನದ ಮುಂದಿನ ದಾರಿ ಕಾಣದಂತೆ ಆಗಿತ್ತು. ತಮ್ಮ ಅಜ್ಜಿ ಮನೆಯಲ್ಲಿ ಓದುತ್ತಿದ್ದು, ಅವರಿಗೆ ಹೇಗೆ ಮುಖ ತೋರಿಸುವುದೆಂದು ಬಹಳ ಗಾಬರಿಗೆ ಒಳಗಾಗಿದ್ದರು. ಮುಂದೇನು ಎನ್ನುವಷ್ಟರಲ್ಲಿ ಸೈಬರ್ ಕೆಫೆ ಮತ್ತು ಜಿಮ್ ನಲ್ಲಿ ಕೆಲ ತಿಂಗಳ ಕಾಲ ಕೆಲಸವನ್ನು ಮಾಡಿದ್ದರು. ಬರುವ ದುಡ್ಡು ಜೀವನೋಪಾಯಕ್ಕೆ ಸಾಲದೆ ಇದ್ದಾಗ ತಮ್ಮ ಹುಟ್ಟೂರಾದ ದೊಡ್ಡಬಳ್ಳಾಪುರದ ಕಡೆಗೆ ಪಯಣವನ್ನು ಬೆಳೆಸುತ್ತಾರೆ. ಆಗ ಇವರಿಗೆ ಕಣ್ಣಿಗೆ ಬಿದ್ದಿದ್ದು ಸಂವಾದ ಎನ್ನುವ ಸಂಸ್ಥೆ. ಅದೇಗೆ ನೀವು ಫೇಲ್ ಆಗ್ತೀರಾ ನಾವು ನೋಡುತ್ತೀವಿ ಎಂದು ಆತಮವಿಶ್ವಾಸ ಮತ್ತು ಸ್ಥೈರ್ಯವನ್ನು ಆ ಸಂಸ್ಥೆಯವರು ನೀಡಿದ್ದರಂತೆ.

ಸಂವಾದ ಸಂಸ್ಥೆ ಹೊಸ ತಿರುವನ್ನು ತಂದು ಕೊಟ್ಟಿತ್ತು

ಸಂಸ್ಥೆಯಲ್ಲಿ ಕೆಲ ಅಧ್ಯಾಪಕರು ವಿದ್ಯಾರ್ಥಿಗಳಿಗೆ ಉಚಿತವಾಗಿ ಪಾಠವನ್ನು ಮಾಡುತ್ತಿದ್ದರು. ಚಿದಾನಂದ ಬಾಳಿಗೆ ಹೊಸ ತಿರುವು ಕೊಟ್ಟಿದ್ದು, ಒಂದು ತಿಂಗಳ ಕಾಲ ಇದೆ ಸಂಸ್ಥೆಯಲ್ಲಿ ಕಳೆಯುತ್ತಾರೆ. ಸಂವಾದ ಸಂಸ್ಥೆ ಕೇವಲ ಪಾಠಗಳಿಗೆ ಮಾತ್ರ ಸೀಮಿತವಾಗಿರಲಿಲ್ಲ ವಿದ್ಯಾರ್ಥಿಗಳ ಕೈ ನಲ್ಲಿ ಪುಸ್ತಕಗಳನ್ನು ಕೊಟ್ಟು ಓದಿಸಿ, ಆ ಪುಸ್ತಕದ ಕುರಿತು ಹೇಗೆ ಮಾತನಾಡಬೇಕೆಂಬ ರುಚಿಯನ್ನು ವಿದ್ಯಾರ್ಥಿಗಳಿಗೆ ಹಚ್ಚಿಸಿದ್ದರು. ಕರ್ನಾಟಕ ಸಾಹಿತ್ಯ ಭಂಡಾರದ ಹಿಂದಿರುವ ಶ್ರೇಷ್ಠ ಕವಿಗಳಾದ ಕಾರಂತರು, ಲಂಕೇಶ್, ತೇಜಸ್ವಿ ಕುವೆಂಪು ಅವರ ಪರಿಚಯ ಪುಸ್ತಕಗಳ ಮುಖಾಂತರ ಆಗಿತ್ತು. ಬದುಕು ಕಟ್ಟಿಕೊಳ್ಳುವ ಕಲೆ, ಪರಿಸರ, ಸಮಾಜ ಸೇವೆ ಹೀಗೆ ಹಲವಾರು ವಿಷಯಗಳ ಕುರಿತು ಭೋದನೆಯನ್ನು ಮಾಡಿದ್ದರು.

ಪ್ರತಿಭೆಯನ್ನು ದುಡ್ಡು ಕೊಟ್ಟು ಖರೀದಿಸುವುದಕ್ಕೆ ಸಾಧ್ಯವೇ ಇಲ್ಲ

ಇಂತಹ ಹಲವಾರು ಚಟುವಟಿಕೆಗಳಲ್ಲಿ ಚಿದಾನಂದ ಭಾಗಿಯಾಗಿದ್ದು, ಸಂವಾದ ತಂಡದ ಸದಸ್ಯರಾಗಿದ್ದರು. ಎಸ್ ಎಸ್ ಎಲ್ ಸಿ ಪರೀಕ್ಷೆ ಕಟ್ಟಿ ಪಾಸ್ ಮಾಡಿಕೊಂಡಿದ್ದರು. ಹಾಗಂತ ಸಂಸ್ಥೆಯವರ ಜೊತೆ ಒಡನಾಟವನ್ನು ಕಳೆದುಕೊಂಡಿರಲಿಲ್ಲ. ನಂತರ ಐಟಿಐ ಕೋರ್ಸ್ ಮಾಡಿಕೊಂಡು ಖಾಸಗಿ ಸಂಸ್ಥೆಯಲ್ಲಿ ಕೆಲಸವನ್ನು ಸಹ ಗಿಟ್ಟಿಸಿಕೊಂಡಿದ್ದರು. ಆದರೆ ಒಂದು ದಿನ ಸಂವಾದ ಸಂಸ್ಥೆ ಅಚಾನಕ್ಕಾಗಿ ಮುಚ್ಚಿ ಹೋಗಿತ್ತು. ಈ ಸಮಾಜ ವಿದ್ಯಾರ್ಥಿಗಳನ್ನು ಯಾಕೆ? ಅಂಕದಿಂದ ಮಾತ್ರ ಅಳೆಯುತ್ತೆ. ಪ್ರತಿಭೆಯಿಂದ ಅಳಿಯಬೇಕು. ಅಂಕಗಳನ್ನು ಬೇಕಾದರೆ ನಾವು ಶುಲ್ಕವನ್ನು ಕಟ್ಟಿ ಪಡೆದುಕೊಳ್ಳಬಹುದು, ಆದರೆ ಪ್ರತಿಭೆಯನ್ನು ದುಡ್ಡು ಕೊಟ್ಟು ಖರೀದಿಸುವುದಕ್ಕೆ ಸಾಧ್ಯವೇ ಇಲ್ಲ ಎನ್ನುವ ಮನಸ್ಥಿತಿಯಲ್ಲಿ ಇವರಿದ್ದರು. ಮುಂದೆ ಏನು ಮಾಡಿದರು?. ಓದಿ

ಫೇಲ್ ಆದ ವಿದ್ಯಾರ್ಥಿಗಳಿಗೆ ಸ್ಫೂರ್ತಿ ನೀಡುವ ಸಂದೇಶ

ತಮ್ಮ ಆಪ್ತ ಸ್ನೇಹಿತರ ಸಹಾಯದಿಂದ ಯುವ ಸಂಚಲನ ಎನ್ನುವ ಹೊಸ ಸಂಸ್ಥೆಯನ್ನು ಪ್ರಾರಂಭಿಸುತ್ತಾರೆ. ಫೇಲ್ ಆದ ವಿದ್ಯಾರ್ಥಿಗಳ ಮನಸ್ಸಿಗೆ ಧೈರ್ಯ ತುಂಬುವುದು ಈ ಸಂಸ್ಥೆಯ ಮುಖ್ಯ ನಿಲುವಾಗಿತ್ತು. ಆದ್ದರಿಂದ ಪರೀಕ್ಷೆಯ ಫಲಿತಾಂಶದ ಹಿಂದಿನ ದಿನ ದೊಡ್ಡಬಳ್ಳಾಪುರದ ಗಲ್ಲಿಗಲ್ಲಿಯಲ್ಲೂ ಸೈಕಲ್ ಗಳ ಮೂಲಕ ಶಾಲಾ ಕಾಲೇಜಿಗೆ ಭೇಟಿ ಕೊಟ್ಟು, ನೀವು ಫೇಲ್ ಆಗಿಬಿಟ್ಟರೆ ಅಲ್ಲಿಗೆ ನಿಮ್ಮ ಬದುಕು ಅಂತ್ಯವಾಗುವುದಿಲ್ಲ. ಜೀವಂತವಾಗಿದ್ದರೆ ಇಂತಹ ಸಾವಿರಾರು ಪರೀಕ್ಷೆಗಳನ್ನು ಬರೆಯಬಹದು ಎಂದು ಹೇಳಿ ವಿದ್ಯಾರ್ಥಿಗಳ ಮನದಲ್ಲಿ ಆತ್ಮವಿಶ್ವಾಸವನ್ನು ತುಂಬುವ ಕೆಲಸ ಕಳೆದ ಎಂಟು ವರ್ಷಗಳಿಂದಲೂ ಮಾಡುತ್ತ ಬರುತ್ತಿದ್ದಾರೆ.

30-40 ಫೇಲಾದ ವಿದ್ಯಾರ್ಥಿಗಳು ಪಾಸಾಗುತ್ತಿದ್ದಾರೆ

ಇನ್ನು ಇವರು ಸ್ಪೋಕನ್ ಇಂಗ್ಲಿಷ್ ಸಂಸ್ಥೆಯನ್ನು ಸಹ ಶುರು ಮಾಡಿದ್ದು, ಇದರಿಂದ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತಿದೆ. ಪರಿಸರ ಸಮಾಜ ಸೇವೆ, ಕಲೆ ಮತ್ತು ಸಾಹಿತ್ಯದ ಕುರಿತು ಹೆಚ್ಚಾಗಿ ಗಮನಹರಿಸಬೇಕೆಂದು ವಿದ್ಯಾರ್ಥಿಗಳಿಗೆ ಹೇಳುತ್ತ ಬರುತ್ತಿದ್ದಾರೆ. ಫೇಲ್ ಆಗುವ ವಿದ್ಯಾರ್ಥಿಗಳು ಕೊಂಚವು ಧೈರ್ಯ ಗಡದೆ ಮತ್ತೊಮ್ಮೆ ಪರೀಕ್ಷೆ ಕಟ್ಟಿ ಪಾಸ್ ಆಗುತ್ತಿದ್ದಾರೆ. ಕಳೆದ 8 ವರ್ಷಗಳಿಂದ ವರ್ಷಕ್ಕೆ ಕನಿಷ್ಠ ಎಂದರೂ, 30-40 ಫೇಲಾದ ವಿದ್ಯಾರ್ಥಿಗಳು ಪಾಸಾಗುತ್ತಿದ್ದಾರೆ. ಚಿದಾನಂದ ಅವರು ಸಂಶೋಧನಾ ಸಂಸ್ಥೆಯ ಉದ್ಯೋಗಿಯಾಗಿದ್ದು, ಅಲ್ಲಿ ಕೆಲಸ ಮುಗಿಸಿದ ನಂತರ ತಮ್ಮ ಬಿಡುವಿನ ಸಮಯವನ್ನು ಸಮಾಜ ಸೇವೆಗೆಂದೆ ಮುಡಿಪಾಗಿಟ್ಟಿದ್ದಾರೆ. ನಿಜಕ್ಕು ಇವರ ಕಾರ್ಯವನ್ನು ನಾವು ಮೆಚ್ಚಿಕೊಳ್ಳಬೇಕಾಗಿದೆ.

LEAVE A REPLY

Please enter your comment!
Please enter your name here