ಹೆಣ್ಣು ಅಂದ್ರೆ ಕೇವಲ ಮನೆ ಕೆಲಸ ಮಾಡಿಕೊಂಡು, ಮನೇಲಿ ಇರೋಕೆ ಮಾತ್ರ ಹೆಣ್ಣು ಇರೋದು ಅಂತ ಆಗಿನ ಕಾಲದಲ್ಲಿ ಹೇಳ್ತಿದ್ರು. ಆದ್ರೆ ಬರಬರುತ್ತಾ ಹೆಣ್ಣು ಅಂದ್ರೆ ಏನು, ಆಕೆಗಿರುವ ಶಕ್ತಿ ಎಂಥದ್ದು ಎಂಬುದು ಎಲ್ಲರಿಗೂ ತಿಳಿಯುತ್ತದೆ. ಹೌದು. ಯಾವಾಗ ಹೆಣ್ಣು ಮನೆಯಿಂದ ಹೊರಗೆ ಬಂದು ದುಡಿಯಲು ಶುರು ಮಾಡಿದಳೋ, ಆಗಿಂದ ಎಲ್ಲ ಕ್ಷೇತ್ರದಲ್ಲೂ ಆಕೆ ತನ್ನನ್ನು ತಾನು ಗುರುತಿಸಿಕೊಂಡಿದ್ದಾಳೆ. ಹೌದು. ಶಿಕ್ಷಕಿ, ಪೊಲೀಸ್, ವಕೀಲೆ, ಗಗನಸಖಿ ಇತ್ಯಾದಿ ಕೆಲಸಗಳಲ್ಲಿ ಹೆಣ್ಣು ಶ್ರಮ ವಹಿಸಿ ದುಡಿಯುತ್ತಿದ್ದಾಳೆ. ಆದರೆ ಕೆಲವು ಕಡೆ ಈಗಲೂ ಹೆಣ್ಣು ಮಕ್ಕಳಿಗೆ ವಿದ್ಯಾಭ್ಯಾಸ ಸಿಗುವುದು ಕಷ್ಟವಾಗಿದೆ. ಆದ್ರೆ ಇಲ್ಲೊಬ್ಬ ಬುಡಕಟ್ಟು ಜನಾಂಗದ ಹುಡುಗಿ, ಯಾವುದಕ್ಕೂ ಚಿಂತಿಸದೆ ಕಷ್ಟಪಟ್ಟು ಓದಿ, ಪೈಲೆಟ್ ಆಗಿದ್ದಾಳೆ.
ಬುಡಕಟ್ಟು ಜನಾಂಗದ ಮೊದಲ ಮಹಿಳಾ ಪೈಲಟ್
ಹೆಣ್ಣು ಮನಸು ಮಾಡಿದರೆ ಏನು ಬೇಕಾದರೂ ಸಾಧನೆ ಮಾಡುತ್ತಾಳೆ ಅನ್ನೋದಕ್ಕೆ ನಮ್ಮಲ್ಲಿ ಹಲವರು ಸಾಕ್ಷಿ ಇದ್ದಾರೆ. ಈಗ ಅವರ ಸ್ಥಾನಕ್ಕೆ ಇವರು ಸಹ ಸೇರಿಕೊಂಡಿದ್ದಾರೆ. ಹೌದು. ಒಡಿಶಾ ರಾಜ್ಯದ ಬುಡಕಟ್ಟು ಜನಾಂಗದ 27 ವರ್ಷದ ಮಹಿಳೆ ಅನುಪ್ರಿಯಾ ಲಾಕ್ರಾ. ಇವರು ಒಡಿಶಾದ ಮಲ್ಕಂಗಿರಿ ಜಿಲ್ಲೆಯ ಬುಡಕಟ್ಟು ಜನಾಂಗದ ಮೊದಲ ಮಹಿಳಾ ಪೈಲಟ್ ಆಗಿದ್ದಾರೆ. ಮಲ್ಕಂಗಿರಿ ನಕ್ಸಲ್ ಪೀಡಿತ ಪ್ರದೇಶವಾಗಿದ್ದು, ಹಿಂದುಳಿದ ಜಿಲ್ಲೆ ಕೂಡ ಹೌದು. ಅಲ್ಲಿ ಉನ್ನತ ಶಿಕ್ಷಣ ಹಲವರಿಗೆ ಕನಸಾಗಿಯೇ ಉಳಿದುಬಿಟ್ಟಿದೆ. ಆದರೆ ಅನುಪ್ರಿಯಾ ಈ ವಿಷಯದಲ್ಲಿ ಸ್ವಲ್ಪ ವಿಭಿನ್ನ. ಆಕೆಗೆ ತನ್ನ ಗುರಿ ತಲುಪಲು ಯಾವ ಸಮಸ್ಯೆಯೂ ಅಡ್ಡಿಯಾಗಲಿಲ್ಲ. ಚಿಕ್ಕವಯಸ್ಸಿನಲ್ಲೇ ಪೈಲಟ್ ಆಗಬೇಕೆಂಬ ಮಹತ್ವದ ಕನಸು ಹೊತ್ತಿದ್ದ ಬುಡಕಟ್ಟು ಜನಾಂಗದ ಅನುಪ್ರಿಯಾ 7 ವರ್ಷಗಳ ಸತತ ಪರಿಶ್ರಮದ ಬಳಿಕ ತನ್ನ ಗುರಿ ಮುಟ್ಟಿದ್ದಾಳೆ.
ಸತತ ಪ್ರಯತ್ನದಿಂದ ಗುರಿ ಸಾಧಿಸಿದ ಅನುಪ್ರಿಯಾ
ಅನುಪ್ರಿಯಾ ತಂದೆ ಮರಿನಿಯಾಸ್ ಲಾಕ್ರಾ ಒಡಿಶಾ ಪೊಲೀಸ್ ಠಾಣೆಯಲ್ಲಿ ಹವಾಲ್ದಾರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಆಕೆಯ ತಾಯಿ ಜಮಾಯ್ ಯಾಶ್ಮಿನ್ ಲಾಕ್ರಾ ಗೃಹಿಣಿಯಾಗಿದ್ದಾರೆ. ಅನುಪ್ರಿಯಾ ತನ್ನ ಮೆಟ್ರಿಕ್ಯುಲೇಷನ್ ವಿದ್ಯಾಭ್ಯಾಸವನ್ನು ಮಲ್ಕಂಗಿರಿಯಲ್ಲಿ ಮತ್ತು ಸೆಕೆಂಡರಿ ಉನ್ನತ ಶಿಕ್ಷಣವನ್ನು ಸೆಮಿಲಿಗುಡದಲ್ಲಿ ಪೂರ್ಣಗೊಳಿಸಿದ್ದಾರೆ. 27 ವರ್ಷದ ಅನುಪ್ರಿಯಾ ಸದ್ಯದಲ್ಲೇ ಖಾಸಗಿ ವಿಮಾನ ಸಂಸ್ಥೆಯೊಂದಕ್ಕೆ ಕೋ-ಪೈಲಟ್ ಆಗಿ ವೃತ್ತಿಗೆ ಸೇರಲಿದ್ದಾರೆ. ವಿಮಾನಯಾನ ಅಕಾಡೆಮಿಗೆ ಸೇರಿದ 7 ವರ್ಷಗಳ ನಂತರ ಲಕ್ರಾ ಈ ಸಾಧನೆ ಮಾಡಿದ್ದಾರೆ. ಇನ್ನು ಅವರ ಈ ಸಾಧನೆಗೆ ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು ಶ್ಲಾಘಿಸಿದ್ದಾರೆ. “ಬುಡಕಟ್ಟು ಜನಾಂಗದ ಅನುಪ್ರಿಯಾ ಮಾಡಿರುವ ಸಾಧನೆಯನ್ನು ಕೇಳಿ ತುಂಬಾ ಸಂತೋಷವಾಗುತ್ತಿದೆ. ಆಕೆಯ ಯಶಸ್ಸು, ಸಾಧನೆ ಹಲವರಿಗೆ ಮಾರ್ಗದರ್ಶನವಾಗಲಿದೆ. ಅನುಪ್ರಿಯಾಳ ಕಠಿಣ ಶ್ರಮ ಮತ್ತು ಸಮರ್ಪಣಾ ಮನೋಭಾವದಿಂದ ಗುರಿ ಮುಟ್ಟಲು ಸಾಧ್ಯವಾಗಿದೆ,” ಎಂದು ಸಿಎಂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ನಿಜಕ್ಕೂ ಅನುಪ್ರಿಯಾ ಸಾಧನೆ ನೋಡಿದರೆ ನಿಜಕ್ಕೂ ಸಂತೋಷವಾಗುತ್ತದೆ. ಯಾಕಂದ್ರೆ ಬುಡಕಟ್ಟು ಕುಟುಂಬದಲ್ಲಿ ಹೆಣ್ಣು ಮಕ್ಕಳಿಗೆ ವಿದ್ಯಾಭ್ಯಾಸ ಸಿಗುವುದೇ ಕಡಿಮೆ. ಆದರೆ ಅನುಪ್ರಿಯಾ ಅದ್ಯಾವುದನ್ನೂ ಲೆಕ್ಕಿಸದೆ, ತಮ್ಮ ಗುರಿಯನ್ನು ಮುಟ್ಟಿದ್ದಾರೆ. ನಿಜಕ್ಕೂ ಅವರ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಲೇಬೇಕು.