400 ವರ್ಷಗಳಿಂದ ಧರ್ಮಸ್ಥಳದಲ್ಲಿ ಅನ್ನ ದಾಸೋಹ. ಇದು ಹೆಗ್ಡೆ ಅವರು ಹಂಚಿಕೊಂಡಿರುವ ಇಂಟರೆಸ್ಟಿಂಗ್ ಸ್ಟೋರಿ

0
2310
veerendra hegde

ವೀಕೆಂಡ್ ವಿಥ್ ರಮೇಶ್ ಕಾರ್ಯಕ್ರಮ ಮತ್ತೆ ಶುರುವಾಗುತ್ತೆ ಅಂದ ಕೂಡಲೇ, ಅತಿಥಿಗಳನ್ನ ಕರೆಸೋ ವಿಷಯದಲ್ಲಿ ಅಭಿಮಾನಿಗಳು ದೊಡ್ಡ ಲಿಸ್ಟ್ ನ್ನ ಇಟ್ಟಿದ್ದರು. ಅದರಂತೆ ರಮೇಶ್ ಅರವಿಂದ್ ಅವರು ಕೂಡ, ಅವರನ್ನ ಕರೆಸುವುದಾಗಿ ತಿಳಿಸಿದ್ದರು. ಅಭಿಮಾನಿಗಳು, ಕಳೆದ ಹಿಂದಿನ ಎಪಿಸೋಡ್ ಗಳಲ್ಲೇ ಈ ವ್ಯಕ್ತಿಯನ್ನ ಕರೆಸಬೇಕೆಂದು ಹೇಳಿದ್ದರು. ಆದ್ರೆ ಕಾರಣಾಂತರಗಳಿಂದ ಅವರನ್ನ ಕರೆಸೋಕೆ ಆಗಿರಲಿಲ್ಲ. ಆದರೆ ಈ ಬಾರಿ ಅವರು ಕಾರ್ಯಕ್ರಮಕ್ಕೆ ಬಂದಿದ್ದು, ಅದರಲ್ಲೂ ಮೊದಲ ಅತಿಥಿಯಾಗಿ ಬಂದಿದ್ದು ಎಲ್ಲರಿಗೂ ಸಂತಸ ತಂದಿದೆ.

ಹೌದು. ಧರ್ಮಸ್ಥಳದ ಧರ್ಮಾಧಿಕಾರಿಯಾದಂತ ವೀರೇಂದ್ರ ಹೆಗ್ಗಡೆ ಅವರನ್ನ ಆ ಆಸನದಲ್ಲಿ ಕೂರಿಸಬೇಕು ಅನ್ನೋದು ಎಲ್ಲರ ಆಸೆಯಾಗಿತ್ತು. ಅದರಂತೆ, ರಮೇಶ್ ಅರವಿಂದ್ ಅವರನ್ನ ಕಾರ್ಯಕ್ರಮಕ್ಕೆ ಕರೆಸಿದರು. ಕಾರ್ಯಕ್ರಮಕ್ಕೆ ಬಂದಿದ್ದ, ವೀರೇಂದ್ರ ಹೆಗ್ಗಡೆ ಅವರು, ತಮ್ಮ ಬಗ್ಗೆ ಹೇಳುವದಕ್ಕಿಂತ, ತಾನು ನಿತ್ಯ ಪೂಜೆ ಮಾಡುವ ಹಾಗೂ ತಾನು ಬದುಕುತ್ತಿರುವ ಪುಣ್ಯ ಕ್ಷೇತ್ರವಾದ ಧರ್ಮಸ್ಥಳದ ಬಗ್ಗೆ ತಿಳಿಸಿದರು.

ಧರ್ಮಸ್ಥಳದ ಅನ್ನದಾಸೋಹದ ಬಗ್ಗೆ ತಿಳಿಸಿದ ವೀರೇಂದ್ರ ಹೆಗ್ಗಡೆ ಅವರು

ಅನ್ನಕ್ಕಿಂತ ದೇವರಿಲ್ಲ ಅಂತ ಎಲ್ಲರೂ ಹೇಳ್ತಾರೆ. ಯಾಕಂದ್ರೆ ಅನ್ನ ದೈವ ರೂಪ. ಅನ್ನವಿಲ್ಲ ಎಂದರೆ, ಯಾರಿಂದಲೂ ಬದುಕಲು ಆಗುವುದಿಲ್ಲ. ಅನ್ನಪೂರ್ಣೇಶ್ವರಿ ನಮಗೆ ಬದುಕಲು ಅನ್ನ ನೀಡಿದ್ದಾಳೆ. ಅದೇ ಅನ್ನದಾಸೋಹವನ್ನ ಧರ್ಮಸ್ಥಳದಲ್ಲಿ, ಪ್ರಸಾದವಾಗಿ ಸ್ವೀಕರಿಸುತ್ತಾರೆ. ಹೌದು. ಹೊರಗಡೆ ನಮಗೆ ಅನ್ನ ಅಂದ್ರೆ, ಅದು ಅನ್ನ ಅಷ್ಟೆ. ಆದ್ರೆ ಇಲ್ಲಿ ಅನ್ನವೇ ಪ್ರಸಾದ. ಇಲ್ಲಿ ಅದನ್ನ ನಂಬಿಕೊಂಡು ಬದುಕುತ್ತಿರೋರು ಬಹಳಷ್ಟು ಜನರಿದ್ದಾರೆ. ಇಲ್ಲಿನ ಅನ್ನದಾಸೋಹದ ಮಹಿಮೆ, ಅಂತಿಂತದ್ದಲ್ಲ. ಕೇಳುಗರನ್ನ ಆಶ್ಚರ್ಯ ಪಡಿಸುತ್ತದೆ.

400 ವರ್ಷಗಳಿಂದ ನಡೆಯುತ್ತಿರುವ ಅನ್ನದಾಸೋಹ

ಸುಮಾರು 400 ವರ್ಷಗಳ ಹಿಂದೆ ಇಲ್ಲಿ ಅನ್ನದಾಸೋಹ ಶುರುವಾಗಿತ್ತು. ಆಗಿಂದ, ಇಲ್ಲಿನವರೆಗೂ ಅನ್ನದಾಸೋಹ ನಿಂತಿಲ್ಲ. ಎಷ್ಟೇ ಕಷ್ಟ ಬಂದರೂ, ಏನೇ ತೊಂದರೆಯಾದರೂ, ಪ್ರಸಾದ ನೀಡುವುದನ್ನ ಮಾತ್ರ ನಿಲ್ಲಿಸಿಲ್ಲ. ಎರಡನೇ ಮಹಾಯುದ್ಧದ ಸಮಯದಲ್ಲಿ ತುಂಬಾ ಸಮಸ್ಯೆ ಬಂತು. ಆಗಲೂ ನಿಲ್ಲಲಿಲ್ಲ. ನಂತರ 1975-76ರಲ್ಲಿ ಅಕ್ಕಿಯನ್ನ ಸಾಗಾಣಿಕೆ ಮಾಡಬಾರದೆಂಬ ಕಾನೂನು ಬಂತು. ಆಗಲೂ ಅನ್ನದಾಸೋಹ ನಡೆಯಿತು. ಹೀಗೆ ಎಂಥದ್ದೇ ಕಷ್ಟ ಬಂದರೂ, ಧರ್ಮಸ್ಥಳದಲ್ಲಿ ಮಾತ್ರ ಪ್ರಸಾದ ವಿನಿಯೋಗ ಮಾಡುವುದನ್ನ ನಿಲ್ಲಿಸಿಲ್ಲ.

ವರ್ಷಕ್ಕೆ 66 ಲಕ್ಷದ 40 ಸಾವಿರ ಜನ ಪ್ರಸಾದ ಸ್ವೀಕರಿಸುತ್ತಾರೆ

ನಿಜಕ್ಕೂ ನಮ್ಮೆಲ್ಲರನ್ನೂ ಕಾಡುವ ಪ್ರಶ್ನೆ ಅಂದ್ರೆ ಒಂದೆ. ಪ್ರತಿದಿನ ಅಥವಾ ವರ್ಷಕ್ಕೆ ಇಲ್ಲಿ ಎಷ್ಟು ಜನ ಊಟ ಮಾಡಬಹುದು ಅಂತ. ಯಾಕಂದ್ರೆ ಯಾವಾಗ ಬಂದರೂ, ಇಲ್ಲಿ ಅನ್ನದಾಸೋಹ ನಡೆಯುತ್ತಲೇ ಇರುತ್ತದೆ. ಹಾಗಾದ್ರೆ, ಇಲ್ಲಿ ಪ್ರಸಾದ ಸ್ವೀಕರಿಸುವ ಜನರು ಎಷ್ಟು ಎಂದು. ಆ ಗೊಂದಲಕ್ಕೆ ನಮ್ಮ ವೀರೇಂದ್ರ ಹೆಗ್ಗಡೆ ಅವರು ತೆರೆ ಎಳೆದಿದ್ದಾರೆ. ಹೌದು. ಇಲ್ಲಿ ವರ್ಷಕ್ಕೆ ಪ್ರಸಾದ ಸ್ವೀಕರಿಸುವವರ ಸಂಖ್ಯೆ, ಲಕ್ಷಗಳನ್ನೇ ದಾಟುತ್ತದೆ. ಕಳೆದ 2017 – 18ರಲ್ಲಿ ಶ್ರೀಕ್ಷೇತ್ರದಲ್ಲಿ ಸುಮಾರು 66 ಲಕ್ಷದ 40 ಸಾವಿರ ಜನರು ಊಟ ಮಾಡಿದ್ದಾರೆ. ಅಷ್ಟೊಂದು ಜನಕ್ಕೆ ಅನ್ನದಾಸೋಹ ಮಾಡಿದ ಗೌರವ ಧರ್ಮಸ್ಥಳಕ್ಕೆ ಸೇರುತ್ತದೆ.

ದಿನಕ್ಕೆ 50 ರಿಂದ 60 ಕ್ವಿಂಟಾಲ್ ಅಕ್ಕಿ ಬೇಕಾಗುತ್ತದೆ

ಧರ್ಮಸ್ಥಳದಲ್ಲಿ ಪ್ರತಿದಿನ ಅನ್ನದಾಸೋಹಕ್ಕೆ 50 ರಿಂದ 60 ಕ್ವಿಂಟಾಲ್ ಅಕ್ಕಿ ಬೇಕಾಗುತ್ತದೆ. ಇಲ್ಲಿ ಪ್ರತಿ 20 ನಿಮಿಷಕ್ಕೂ ಊಟ ಬಡಿಸಲಾಗುತ್ತದೆ. ಮಧ್ಯಾಹ್ನ ಮತ್ತು ರಾತ್ರಿ ಭಕ್ತಾಧಿಗಳಿಗೆ ಪ್ರಸಾದ ನೀಡಲಾಗುತ್ತದೆ. ಹಾಗಾಗಿ ಇಲ್ಲಿ ದಿನಕ್ಕೆ ಒಟ್ಟು 30 ರಿಂದ 50 ಸಾವಿರ ಜನರು ಊಟ ಮಾಡುತ್ತಾರೆ. ಮೊದಲಿಗೆ ಭೋಜನಾ ಶಾಲೆಯಲ್ಲಿ 300ರಿಂದ 400 ಜನ ಊಟಕ್ಕೆ ಕೂರಬಹುದಿತ್ತು. ಆದ್ರೆ ಈಗ ಭೋಜನಾ ಶಾಲೆಯನ್ನ ವಿಸ್ತಾರವಾಗಿ ಮಾಡಲಾಗಿದೆ. ಹಾಗಾಗಿ ಈಗ ಸುಮಾರು 3000 ಸಾವಿರ ಜನ ಊಟಕ್ಕೆ ಕೂರಬಹುದು. ಅಲ್ಲದೆ ಇನ್ನೊಂದು ವಿಶೇಷ ಅಂದ್ರೆ, ಇಲ್ಲಿ ಇದುವರೆಗೂ ಅಡಿಗೆಗೆ ಕಟ್ಟಿಗೆಯನ್ನ ಬಳಸಿಲ್ಲ. ಬದಲಿಗೆ ಆಧುನಿಕ ತಂತ್ರಜ್ಞಾನದ ಮೂಲಕ ಅಡಿಗೆ ಮಾಡಲಾಗುತ್ತಿದೆ. ಅಡಿಗೆ ಮಾಡುವುದರಲ್ಲೂ ಹಾಗೂ ಬಡಿಸುವುದರಲ್ಲೂ ಬಹಳಷ್ಟು ಶುಚಿತ್ವ ಕಾಪಾಡಲಾಗುತ್ತದೆ ಎಂದು ತಿಳಿಸಿದರು.

ಈ ರೀತಿ ತಮ್ಮ ಬಗ್ಗೆ ಹೆಚ್ಚಾಗಿ ಹೇಳಿಕೊಳ್ಳದೆ, ತಾನು ನಂಬಿರುವ ದೈವ ಸನ್ನಿಧಿಯಾದ, ಶ್ರೀ ಕ್ಷೇತ್ರ ಧರ್ಮಸ್ಥಳದ ಬಗ್ಗೆ, ಹಾಗೂ ಅಲ್ಲಿ ನಡೆಯುವ ಅನ್ನದಾಸೋಹದ ಬಗ್ಗೆ ತಿಳಿಸಿದರು. ನಿಜಕ್ಕೂ ಈ ಕಾರ್ಯಕ್ರಮದಿಂದ ಸಾಮಾನ್ಯ ಜನರಿಗೆ ಹಲವು ವಿಷಯ ತಿಳಿದಂತಾಗಿದೆ.

LEAVE A REPLY

Please enter your comment!
Please enter your name here