ಕನ್ನಡಕ್ಕೆ ಒಬ್ಬನೇ ರಾಜ್ ಕುಮಾರ್ (Raj kumar). ಹೌದು, ಕನ್ನಡ ಎಂದು ಕೂಡಲೇ ಮೇರು ಧ್ವನಿಯಲ್ಲಿ ಪ್ರತಿಧ್ವನಿಸುವ ಅತ್ಯಂತ ಜನಪ್ರಿಯ ಹೆಸರು ಅಂದರೆ ಅದು ಡಾ. ರಾಜಕುಮಾರ್. ತೆರೆಯ ಮೇಲೆಯೂ ಮತ್ತು ತೆರೆಯ ಹಿಂದೆಯೂ, ಕರ್ನಾಟಕದ ಸಂಸ್ಕೃತಿ ಮತ್ತು ಪರಂಪರೆಯನ್ನು ಸಮರ್ಥವಾಗಿ ಕಟ್ಟಿದ ಮತ್ತು ಬೆಳೆಸಿದ ನಾಯಕ ಎಂದು ರಾಜ್ ರನ್ನು ಗುರುತಿಸಿದರೆ ಅದು ಬಹುಷಃ ತಪ್ಪಾಗಲಾರದು. ರಾಜಕುಮಾರ್ ಬಗ್ಗೆ ವಿಶೇಷವಾಗಿ ಹೇಳುವ ಪ್ರಮೇಯ ವಿಲ್ಲ ಏಕೆಂದರೆ ಅವರು ಎಲ್ಲರ ಜನ ಮಾನಸದಲ್ಲಿ ಅಚ್ಚಳಿಯದೆ ಉಳಿದು ಹೋಗಿದ್ದಾರೆ. ಇಂದು ಕನ್ನಡದ ನೆಚ್ಚಿನ ನಟನ ಬಗ್ಗೆ ಕೆಲವು ಮಾಹಿತಿಗಳನ್ನು ನಿಮ್ಮ ಮುಂದೆ ಪ್ರಸ್ತುತ ಪಡಿಸಲು ಇಷ್ಟ ಪಡುತ್ತೇವೆ. ಸಾಮಾನ್ಯವಾಗಿ ನೀವು ರಾಜ್ ಕುಮಾರರ ಬಗ್ಗೆ ಕೇಳಿರುತ್ತೀರಿ ಮತ್ತು ಓದಿರುತ್ತೀರಿ ಆದರೆ ಕೆಲವು ವಿಷಯಗಳನ್ನು ಅಷ್ಟಾಗಿ ಪ್ರಚಲಿತವಾಗಿರುವುದಿಲ್ಲ. ಈ ಬರಹದ ಮೂಲಕ ನಾವು ನಿಮಗೆ ರಾಜಕುಮಾರ್ ಬಗ್ಗೆ ಗೊತ್ತಿರದ ಅಥವಾ ಗಮನಿಸದ ವಿಷಯಗಳನ್ನು ಹೇಳವು ಪ್ರಯತ್ನವನ್ನು ಮಾಡಿದ್ದೇವೆ. ಮುಂದೆ ಓದಿ.
Kentucky Colonel ಪ್ರಶಸ್ತಿ ಪಡೆದ ಭಾರತದ ಏಕೈಕ ನಟ
1985 ರಲ್ಲಿ, ಕೆಂಟುಕಿ ನ ಗವರ್ನರ್, ಯುನೈಟೆಡ್ ಸ್ಟೇಟ್ಸ್ ಅವರ ಕಡೆ ಇಂದ ಈ ಗೌರವವನ್ನು ಡಾ.ರಾಜ್ ಪಡೆದರು. ಈ ಮೂಲಕ ಅವರು ಈ ಪ್ರಶಸ್ತಿಯನ್ನು ಪಡೆದ ಏಕೈಕ ಭಾರತದ ನಟ ಆಗಿ ಹೋದರು. ಎಂತಹ ಹೆಮ್ಮೆ! ರಾಜಕುಮಾರ್ ಅವರ ಪಾಲಿಗೆ ಪ್ರಶಸ್ತಿಗಳು ಸಾಲು ಸಾಲಾಗಿ ಹುಡುಕಿಕೊಂಡು ಬಂದವು. ಪದ್ಮಭೂಷಣ, ದಾದಾ ಸಾಹೇಬ್ ಪಾಲಿಕೆ ಅವಾರ್ಡ್, ಮೈಸೂರು ಯೂನಿವರ್ಸಿಟಿ ಕಡೆ ಇಂದ ಗೌರವ ಡಾಕ್ಟರೇಟ್, ಹೀಗೆ ರಾಜ್ ಈ ಪ್ರಶಸ್ತಿಗಳ ಹಿರಿಮೆಯನ್ನು ಮತ್ತಷ್ಟು ಹೆಚ್ಚಿಸಿದರು.
ಡಾ. ರಾಜ್ ಈ ಪಾತ್ರವನ್ನು ಮಾಡಬಾರದೆಂದು ಜನ ಪ್ರತಿಭಟನೆ ಮಾಡಿದ್ದರು
ಅದು ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಜೀವನ ಚರಿತ್ರೆಯ ಕುರಿತಾದ ಚಿತ್ರ. ನಿಮಗೆಲ್ಲ ಗೊತ್ತಿರುವ ಹಾಗೆ ಚಿತ್ರದ ಹೆಸರು ‘ಮಂತ್ರಾಲಯ ಮಹಾತ್ಮೆ’. ಈ ಪಾತ್ರವನ್ನು ರಾಜಕುಮಾರ್ ಅವರು ಮಾಡಬೇಕು ಎಂದು ಆದಾಗ ಕ್ಷುಲ್ಲಕ ವಾದ ಮತ್ತು ಪ್ರತಿಭಟನೆಕಾರಿಯಾದ ಮಾತುಗಳು ಕೇಳಿ ಬಂದಿದ್ದವು, ಕಾರಣ ರಾಜಕುಮಾರ್ ಬ್ರಾಹ್ಮಣ ಅಲ್ಲ ಎಂದು. ಇದು ಯಾವ ಮಟ್ಟಿಗೆ ಹೋಗಿತ್ತು ಎಂದರೆ, ಮಂತ್ರಾಲಯದಲ್ಲಿ ರಾಜಕುಮಾರ್ ಅವರಿಗೆ ಉಳಿಯಲು ರೂಮ್ ಸಹ ಸಿಗಲಿಲ್ಲ.
ಇದೆಲ್ಲದರ ನಡುವೆಯೂ ರಾಜಕುಮಾರ್ ತಮ್ಮ ವಿನಯವನ್ನು ತೋರಿದ ಪರಿ ನಿಮ್ಮನ್ನು ಒಂದು ಕ್ಷಣ ಮಂತ್ರಮುಗ್ಧ ಮಾಡದೆ ಇರಲು ಸಾಧ್ಯವಿಲ್ಲ. ರಾಜ್ ಅವರು ಬೀದಿಯಲ್ಲಿ ಮಲಗಿ, ಸಾರ್ವಜನಿಕ ಶೌಚಾಲಯ ಉಪಯೋಗಿಸಿ, ಚಿತ್ರೀಕರಣವನ್ನು ಮುಗಿಸಿದರು. ರಾಯರ ಕೃಪೆ ರಾಜ್ ಅವರ ಮೇಲೆ ಎಷ್ಟಿತ್ತು ಎಂದರೆ ಸಿನಿಮಾ ಬಿಡುಗಡೆ ಆದ ಮೇಲೆ, ಅದು ಎಲ್ಲೇ ಮೀರಿ ಸೂಪರ್- ಹಿಟ್ ಆಗಿ ಹೋಯಿತು. ಇಂದು ಗುರು ರಾಘವೇಂದ್ರ ಸ್ವಾಮಿ ಎಂದರೆ ರಾಜ್ ಮುಖ ಅಲ್ಲದೆ ಇನ್ನ್ಯಾವ ಮುಖವೂ ಕಣ್ಣಿಗೆ ಬರುವುದಿಲ್ಲ.
ಅದು 1978 ರ ಚುನಾವಣೆ ಸಮಯ
೧೯೭೮ ರ ಬೈ-ಎಲೆಕ್ಷನ್ ನಲ್ಲಿ ರಾಜಕುಮಾರ್ ಅವರು ಸ್ಪರ್ಧಿಸುತ್ತಾರೆ ಎಂದು ಹೀಗೆ ಗುಲ್ಲು ಎದ್ದಿತ್ತು. ಒಂದು ವೇಳೆ ರಾಜ್ ಸ್ಪರ್ಧಿಸಿದ್ದರೆ ಅವರು ಗೆಲ್ಲುವ ಎಲ್ಲ ಸಾಧ್ಯತೆಗಳು ಇದ್ದವು ಆದರೆ ರಾಜ್ ರಾಜಕೀಯದ ಹಾದಿ ತುಳಿಯಲಿಲ್ಲ. ತಮ್ಮ ಜನ ಪ್ರೀತಿಯನ್ನು ರಾಜಕೀಯ ದಾಳವಾಗಿ ಬಳಸಲು ಅವರಿಗೆ ಇಷ್ಟ ಇರಲಿಲ್ಲ ಹಾಗೂ ರಾಜ್ ಕುಮಾರ್ ಅವರಿಗೆ ರಾಜಕೀಯದಲ್ಲಿ ಹೇಳಿಕೊಳ್ಳುವಂತಹ ಆಸಕ್ತಿಯೂ ಇರಲಿಲ್ಲ.
ರಾಜ್ ಕುಮಾರ್ ಎಂದರೆ ಕನ್ನಡ, ಕನ್ನಡ ಎಂದರೆ ರಾಜ್ ಕುಮಾರ್
ಡಾ ರಾಜ್ ಕುಮಾರ್ ಅವರು ಸೂಪರ್ ಸ್ಟಾರ್ ನಟ. ಅವರು ನಟಿಸಿದ 95 % ರಷ್ಟು ಸಿನೆಮಾ ಗಳು ಸೂಪರ್ ಹಿಟ್ ಮತ್ತು ಇದು ಯಾವುದೇ ಇತರೆ ನಟರಿಗೆ ಸಾಧ್ಯವಾಗಿಲ್ಲ. ಹೀಗಿರುವಾಗ ಹಿಂದಿ ಯ ಪ್ರಿಥ್ವಿ ರಾಜ್ ಕಪೂರ್ ಜೊತೆ ನಟಿಸುವ ಅವಕಾಶ ರಾಜ್ ರನ್ನು ಹುಡುಕಿ ಕೊಂಡು ಬಂದಿತ್ತು. ಬೇರೆ ಯಾರೇ ಆಗಿದ್ದರು ಸುಲಭವಾಗಿ ಈ ಅವಕಾಶವನ್ನು ತಮ್ಮದಾಗಿಸಿ ಕೊಳ್ಳುತ್ತಿದ್ದರು ಆದರೆ ರಾಜ್ ಇದನ್ನು ನಯವಾಗಿ ತಿರಸ್ಕರಿಸಿ ಬಿಟ್ಟರು, ಕಾರಣ ಅದು ಹಿಂದಿ ಭಾಷೆಯ ಸಿನೆಮಾ ಎಂದು.
ಆದರೆ ನೋಡಿ, ಇದೇ ಪೃಥ್ವಿ ರಾಜ್ ಕಪೂರ್ ಅವರು ನಮ್ಮ ರಾಜ್ ಕುಮಾರ್ ಜೊತೆ ‘ಸಾಕ್ಷಾತ್ಕಾರ’ ಎಂಬ ಕನ್ನಡ ಚಿತ್ರದಲ್ಲಿ ನಟಿಸಿದರು. ಇದಲ್ಲವೇ ರಾಜ್ ಅವರ ಕನ್ನಡದ ಭಕ್ತಿ. ನೀವು ಗಮನಿಸಿದ್ದರೆ, ರಾಜ್ ಅವರ ಕನ್ನಡ ಮಾತುಗಳು ಯಾವುದೇ ಮುತ್ತಿಗೂ ಕಮ್ಮಿ ಇರುತ್ತಿರಲಿಲ್ಲ . ಆ ಸ್ಪಷ್ಟ ನುಡಿ, ಕನ್ನಡದ ಅಂದವಾದ ಉಚ್ಚಾರಣೆ, ನಮ್ಗೆಲ್ಲಾ ಪಾಠವೇ ಸರಿ.
ರಾಜ್ ಕುಮಾರ್ ಮತ್ತು ಅವರ ದಾರಿಯನ್ನು ಜನ ಸಮೂಹವೇ ಅನುಸರಿಸುತಿತ್ತು.
ರಾಜ್ ಅವರ ಪ್ರತಿ ಒಂದು ಸಿನೆಮಾ ದಲ್ಲೂ ಒಂದು ಸಮಾಜ ಮುಖಿಯಾದ ಒಂದು ಮೆಸೇಜ್ ಇರುತಿತ್ತು. ಬಂಗಾರದ ಮನುಷ್ಯ ಎಂಬ ಚಿತ್ರ ಇದಕ್ಕೆ ಒಂದು ಒಳ್ಳೆ ಉದಾಹರಣೆ ಎಂದು ಹೇಳಬಹುದು. ರಾಜ್ ಅವರ ಅಭಿನಯ ಮತ್ತು ಆದರ್ಶ ಪ್ರಾಯವಾದ ಪಾತ್ರವನ್ನು ನೋಡಿದ ಮೇಲೆ ಜನ ತಮ್ಮ ನೌಕರಿಯನ್ನು ಬಿಟ್ಟು ಮತ್ತೆ ಹಳ್ಳಿಗೆ ಹೋಗಿ ವ್ಯವಸಾಯವನ್ನು ಶುರು ಮಾಡಿದ್ದು ಇದೆ. ಇದಕ್ಕೆ ಒಳ್ಳೆ ಮಾದರಿ ಎಂದರೆ ಕ್ಯಾಪ್ಟನ್ ಗೋಪಿನಾಥ್ , ಡೆಕ್ಕನ್ ಏರ್ವೇಸ್.
ನ್ಯಾಷನಲ್ ಅವಾರ್ಡ್ ಪಡೆದ ಏಕೈಕ ಗಾಯಕ ನಟ ಎಂದರೆ ನಮ್ಮ ರಾಜ್ ಕುಮಾರ್
1963 ರಲ್ಲಿ ಸಂತ ತುಕಾರಾಮ ಎಂಬ ಚಿತ್ರಕ್ಕೆ ರಾಜ್ ಅವರು ಉತ್ತಮ ನಟನೆಗಾಗಿ ನ್ಯಾಷನಲ್ ಅವಾರ್ಡ್ ಅನ್ನು ಪಡೆಯುತ್ತಾರೆ. ಮತ್ತು 1992 ರಲ್ಲಿ, ನಾದಮಯ ಎಂಬ ಹಾಡಿಗೆ ತಮ್ಮ ಸುಶ್ರಾವ್ಯ ವಾದ ಹಾಡಿಗೆ ಉತ್ತಮ ಗಾಯಕ, ನ್ಯಾಷನಲ್ ಅವಾರ್ಡ್ ಅನ್ನು ಪಡೆಯುತ್ತಾರೆ.
ರಾಜ್ ಕುಮಾರ್ ಅವರು ಭಾರತ ಮತ್ತು ಕರ್ನಾಟಕ ದಲ್ಲಿ ಮಾತ್ರ ಜನಪ್ರಿಯ ಆಗಿರಲಿಲ್ಲ
ಹೌದು, 1965ರಲ್ಲಿ, ರಾಜ್ ಅವರ ಜನಪ್ರಿಯ ವಾದ ‘ನಾಂದಿ’ ಎಂಬ ಚಿತ್ರವೂ ಫ್ರಾನ್ಸ್ ನ ಇಂಟರ್ನ್ಯಾಷನಲ್ ಫಿಲಂ ಫೆಸ್ಟಿವಲ್ ನಲ್ಲಿ ಪ್ರದರ್ಶನಗೊಂಡಿತ್ತು, ಸುಮಾರು ೪೦ ವರ್ಷದ ಹಿಂದೆ. ಇದು ರಾಜ್ ಅವರ ಪ್ರತಿಭೆ ಗೆ ಸಿಕ್ಕ ಒಂದು ಮನ್ನಣೆ ಆಗಿತ್ತು.
ರಾಜ್ ರದ್ದು ಮಗುವಿನಂತಹ ಮನಸ್ಸು
ವಿನಯಕ್ಕೆ ಮತ್ತೊಂದು ಹೆಸರೇ ಡಾ. ರಾಜ್. ಸರಳತೆ ಮತ್ತು ಮುಗ್ಧತೆ ಯನ್ನು ತಮ್ಮ ಜೀವನದ ಉದ್ದಕ್ಕೂ ಕಾಪಾಡಿಕೊಂಡು ಬಂದನಟ ಇವರು. ಯೋಗ ಅಭ್ಯಾಸವನ್ನು ತಮ್ಮ ಕೊನೆಯ ಉಸಿರು ಇರುವವರೆಗೂ ಪಾಲಿಸಿದರು. ಎಂದಿಗೂ ಪರದೆಯ ಮೇಲೆ ಸ್ಮೋಕ್ ಮಾಡುವ ಅಥವಾ ಕುಡಿಯುವ ದೃಶ್ಯದಲ್ಲಿ ರಾಜ್ ರನ್ನು ನಾವು ನೋಡಲೇ ಇಲ್ಲ ಮತ್ತು ಇದು ಅವರ ವಯಕ್ತಿಕ ಜೀವನಕ್ಕೂ ಅನ್ವಯವಾಗುತ್ತದೆ.
ಒಂದು ಪ್ರಸಂಗ: ಅದು ವೀರಪ್ಪನ್ ರಾಜ್ ರನ್ನು ಕಾಡಿಗೆ ಕರೆದು ಕೊಂಡು ಹೋದ ಸಮಯ. ಅದೆಷ್ಟೋ ದಿನಗಳನ್ನು ರಾಜ್ ಕಾಡಿನಲ್ಲಿ ಕಳೆಯಬೇಕಾಯಿತು. ಆದರೆ ವೀರಪ್ಪನ್ ಕೊನೆಗೂ ರಾಜ್ ರನ್ನು ಬಿಡುಗಡೆ ಮಾಡುವ ಸಮಯ ಬಂದೆ ಬಿಟ್ಟಿತು. ಮರಳಿ ಬರುವಾಗ ರಾಜ್ ವೀರಪ್ಪನ್ ಬಳಿ ಒಂದು ಕೋರಿಕೆ ಇಟ್ಟರಂತೆ. ಅದೇನಪ್ಪ ಅಂದರೆ, ರಾಜ್ ಕುಮಾರ್ ಅವರಿಗೆ ವೀರಪ್ಪನ್ ನ ಮೀಸೆ ಮುಟ್ಟಿ ನೋಡುವ ಆಸೆ. ಕೊನೆಗೂ ಅವನ ಮೀಸೆ ತಿರುವಿ, ಕೆನ್ನೆಗೆ ಮುತ್ತಿಟ್ಟು, ಹಾರೈಸಿ ಬಂದರಂತೆ. ಇದು ಅಲ್ಲವೇ ನಮ್ಮ ರಾಜ್.
ಮೈಸೂರು ಪಯಣ ಮತ್ತು ಭಿಕ್ಷುಕ
ಒಮ್ಮೆ ವರದಪ್ಪ ಮತ್ತು ರಾಜ್ ತಮ್ಮ ಕಾರಿನಲ್ಲಿ ಬೆಂಗಳೂರಿಂದ ಮೈಸೂರಿಗೆ ಹೋಗುತ್ತಿರುವಾಗ, ಒಬ್ಬ ಭಿಕ್ಷುಕ ಬಂದು ಬೇಡಿದನಂತೆ. ಆಗ ವರದಪ್ಪ ತಮ್ಮ ಜೇಬಿನಿಂದ ಒಂದು ನೋಟು ತೆಗೆದು ಕೊಟ್ಟರಂತೆ. ಕಾರ್ ಚಲಿಸಿತು ಆದರೆ ರಾಜ್ ಮಾತನಾಡಲೇ ಇಲ್ಲ. ಗುಮ್ಮನೆ ಮುಖ ಮಾಡಿ ಸಿಟ್ಟು ಬಂದವರಂತೆ ಕೂತು ಬಿಟ್ಟರು. ಇದನ್ನು ಬಹಳ ಹೊತ್ತಿನಿಂದ ಗಮನಿಸಿದ ವರದಪ್ಪ, ಕಾರಣ ಕೇಳಿದಾಗ, ರಾಜ್ ಹೀಗೆ ಹೇಳುತ್ತಾರೆ – ಅಲ್ಲಯ್ಯ ಇದು ಸರಿ ನಾ? ದೇವರು ನಮಗೆ ಸಾಕಷ್ಟು ಕೊಟ್ಟಿದ್ದಾನೆ. ನೀನು ಆ ಬಿಕ್ಷುಕನಿಗೆ ಬರೀ 100 ರೂ ನೋಟ್ ಕೊಡಬಹುದಾ? ಇದಕ್ಕೆ ಗೊಳ್ಳನೆ ವರದಪ್ಪ ನಕ್ಕು, ಮಾರಾಯ ಅದು 500 ರೂ ನೋಟು ಕಣಪ್ಪ ಅಂದರಂತೆ.. ಓ ಹೌದಾ, 500 ರೂ ನೋಟು ಬಂದು ಬಿಟ್ಟಿದೆಯಾ ಎಂದು ಖುಷಿ ಇಂದ ವರದಪ್ಪ ನವರನ್ನು ಅಪ್ಪಿಕೊಂಡರಂತೆ.
ಹೀಗೆ ರಾಜ್ ಅವರ ಬಗ್ಗೆ ಹೇಳುತ್ತಾ ಹೋದರೆ ಹೀಗೆ ಪದಗಳು ಸಾಗುತ್ತಲೇ ಇರುತ್ತವೆ. ನಿಮಗೆ ಈ ಮಾಹಿತಿ ಇಷ್ಟ ವಾಗಿದೆ ಎಂದು ನಂಬುತ್ತಾ, ನಾವು ನಿಮ್ಮನ್ನು ಬೀಳ್ಕೊಳ್ಳುತ್ತೇವೆ. ರಾಜ್ ಕುಮಾರ್ ಅವರ ಬಗ್ಗೆ ನಿಮಗೆ ಗೊತ್ತಿರುವ ವಿಷಯಗಳನ್ನು ಕೆಳಗಿನ ಕಾಮೆಂಟ್ ಬಾಕ್ಸ್ ನಲ್ಲಿ ಬರೆಯಿರಿ.
ಜೈ ಕರ್ನಾಟಕ. ಡಾ ಡಾ ಡಾ ಡಾ ರಾಜ್ ಕುಮಾರ್ ಗೆ ಜೈ.
Get the Best of Bengaluru delivered to your inbox. Subscribe to MetroSaga and never miss an update from us.
Like MetroSaga on Facebook | Instagram