ಈ ಜಿಲ್ಲೆಯಲ್ಲಿ ಈ ದೇವಿಯೇ ಶಕ್ತಿ ದೇವತೆ ಹಾಗೂ ಅದಿ ದೇವತೆ. ಈ ದೇವಿಯ ಸೂಚನೆ ಇಲ್ಲದೆ ಒಂದು ಹುಲ್ಲು ಕಡ್ಡಿಯು ಇಲ್ಲಿ ಅಲುಗಾಡುವುದಿಲ್ಲ. ಎಲ್ಲಿ ನೋಡಿದರು ಈ ತಾಯಿ ತನ್ನ ಶಕ್ತಿ ತೋರಿಸುತ್ತ, ಎಲ್ಲರ ಮನೆ ಮನೆಯಲ್ಲಿ ತಾಂಡವವಾಡ್ತಿದ್ದಾಳೆ.
ಹೌದು. ಹಾಸನದ ಪುರದಮ್ಮ ಎಂದಾಕ್ಷಣ ತಿಳಿದವರಿಗೆ ನೆನಪಾಗೋದು ಅಂದ್ರೆ, ಮಹಾನ್ ಶಕ್ತಿ ಹೊಂದಿರುವ ತಾಯಿ ಎಂದು. ಜೊತೆಗೆ ನಮ್ಮ ಕಷ್ಟ ಕಾರ್ಪಣ್ಯಗಳನ್ನ ಹೋಗಲಾಡಿಸುವಲ್ಲಿ ಎತ್ತಿದ ಕೈ ಎಂದು. ಹೌದು. ಈ ದೇವಿಯ ಮಹಾತ್ಮೆಯೇ ಅಷ್ಟಿದೆ. ಪ್ರತಿದಿನ ಈ ತಾಯಿಯನ್ನ ನೋಡಲು ಸಾವಿರಾರು ಜನ ಭಕ್ತಾಧಿಗಳು ಇಲ್ಲಿಗೆ ಬರುತ್ತಾರೆ. ಇಲ್ಲಿಗೆ ನೊಂದು ಬಂದವರಿಗೆ, ತಾಯಿ ಯಾವತ್ತೂ ಬರೀ ಕೈಯಲ್ಲಿ ಕಳಿಸೋಲ್ಲ ಅನ್ನೋದು ಭಕ್ತರ ನಂಬಿಕೆ.
ಕೇವಲ ಕಲ್ಲಿನ ವಿಗ್ರಹವಾಗಿರುವ ತಾಯಿ
ಹಾಸನ ಜಿಲ್ಲೆಯ ಸೊಪ್ಪಿನಹಳ್ಳಿ ಬಳಿ ಈ ಪುರದಮ್ಮ ದೇವಾಲಯ ಬರುತ್ತೆ. ಈ ದೇವಾಲಯದಲ್ಲಿ ನಿಜಕ್ಕೂ ಹಲವು ವಿಶೇಷತೆಗಳಿವೆ. ಹೌದು. ಈ ತಾಯಿ ಕೇವಲ ಕಲ್ಲಿನ ರೂಪದಲ್ಲೇ ಪೂಜೆ ಮಾಡಿಸಿಕೊಳ್ಳುತ್ತಿದ್ದಾಳೆ. ಅಂದ್ರೆ ತಾಯಿಗೆ ಯಾವುದೇ ಒಡವೆ, ಅಲಂಕಾರ ಯಾವುದು ಇಲ್ಲ. ಮೊದ ಮೊದಲು ಈ ದೇವಿಗೆ ದೇವಸ್ಥಾನವೇ ಇರಲಿಲ್ಲ. ಆದ್ರೆ ಈಗ ತಾಯಿಗೆ ದೇವಸ್ಥಾನವನ್ನ ಕಟ್ಟಲಾಗುತ್ತಿದೆ. ತಾಯಿ ಮೈ ಮೇಲೆ ತಾಳಿ ಬಿಟ್ಟರೆ, ಬೇರೆ ಯಾವ ಒಡವೆಯನ್ನು ಹಾಕಿಲ್ಲ. ನೋಡಿದವರಿಗೆ ಒಂದು ರೀತಿ ಆಶ್ಚರ್ಯ ಅನಿಸುತ್ತೆ. ಏನು ಈ ದೇವರಿಗೆ ಒಂದು ಒಡವೆಯೇ ಹಾಕಿಲ್ಲ ಅಂತ. ಆದ್ರೆ ಒಡವೆಗಳನ್ನ ಸಿಂಗರಿಸಿಕೊಳ್ಳುವುದು ಅಂದ್ರೆ ಈ ತಾಯಿಗೆ ಇಷ್ಟ ಇಲ್ಲ. ಹಾಗಾಗಿ ಇಲ್ಲಿ ಮೊದಲು ದೇವಾಲಯವನ್ನೇ ಕಟ್ಟಿರಲಿಲ್ಲ. ಆದ್ರೆ ನಂತರ ತಾಯಿ ಅಪ್ಪಣೆ ಪಡೆದು ದೇವಾಲಯ ನಿರ್ಮಿಸಲಾಗಿದೆ.
ಪೂಜಾರಿಯೇ ಇಲ್ಲದ ದೇವಸ್ಥಾನ
ಈ ದೇವಸ್ಥಾನದಲ್ಲಿ ವಿಶೇಷ ಏನು ಅಂದ್ರೆ, ಇಲ್ಲಿ ದೇವಿಗೆ ಪೂಜೆ ಮಾಡಲು ಯಾವ ಪೂಜಾರಿಯು ಇಲ್ಲ. ಹೌದು. ಇಲ್ಲಿಗೆ ಬರುವ ಭಕ್ತರೇ ಇಲ್ಲಿ ಪೂಜಾರಿಗಳು. ಅಂದ್ರೆ, ಈ ದೇವಾಲಯಕ್ಕೆ ಬರುವ ಭಕ್ತರೇ ತಮಗಿಷ್ಟವಾಗುವ ರೀತಿಯಲ್ಲಿ ಪೂಜೆ ಮಾಡಬೇಕು. ಯಾಕಂದ್ರೆ ಭಕ್ತರ ಆಸೆಯನ್ನ ನೆರವೇರಿಸುವ ತಾಯಿಗೆ, ಪೂಜೆಯನ್ನು ಅವರೇ ಮಾಡಬೇಕು ಅನ್ನೋದು ಆಸೆ. ಹಾಗಾಗಿ ಇಲ್ಲಿ ಯಾವ ಪೂಜಾರಿಯನ್ನು ನೇಮಕ ಮಾಡಿಲ್ಲ. ಮಧ್ಯ ರಾತ್ರಿ ಕೂಡ ಭಕ್ತಾಧಿಗಳು ಬಂದು ತಮಗಿಷ್ಟವಾಗುವ ರೀತಿಯಲ್ಲಿ ಪೂಜೆ ಮಾಡಬಹುದು. ಇಲ್ಲಿ ಪೂಜೆ ಮಾಡುವುದಕ್ಕೆ ಮಾತ್ರ ಯಾವುದೇ ಅಡೆ ತಡೆಗಳಿಲ್ಲ. ನೀನು ಹೂವಾಕ್ಕುತ್ತಿಯೋ, ಅಥವಾ ಸೀರೆ ಉಡಿಸುತ್ತೀಯೋ ಅದು ನಿನಗೆ ಬಿಟ್ಟಿದ್ದು. ಆದ್ರೆ ನಿನಗಿಷ್ಟವಾಗುವ ರೀತಿಯಲ್ಲಿ, ಮನಸ್ಸಿಗೆ ನೆಮ್ಮದಿ ಸಿಗುವ ರೀತಿಯಲ್ಲಿ ಪೂಜೆ ಮಾಡು ಅನ್ನೋದು ಈ ದೇವಿ ಆಸೆ. ಹಾಗಾಗಿ ಇಲ್ಲಿ ಯಾವ ಅರ್ಚಕರನ್ನ ಪೂಜೆ ಮಾಡೋಕೆ ನೇಮಕ ಮಾಡಿಲ್ಲ.
ಮಾಂಸದೂಟವೇ ತಾಯಿಗೆ ಎಡೆ
ಕೆಲವು ದೇವರಿಗೆ ಸಿಹಿ ಎಡೆ ಇಡ್ತಾರೆ. ಆದ್ರೆ ಈ ದೇವರಿಗೆ ಮಾತ್ರ ಮಾಂಸದೂಟವನ್ನೇ ಎಡೆಯಾಗಿ ಇಡೋದು. ಹೌದು ಬೇಡಿದ ವರವನ್ನ ನೀಡಿದ ಅಮ್ಮನಿಗೆ ಹರಕೆ ತೀರಿಸಲು ಭಕ್ತರು ದೇವಾಲಯದ ಬಳಿಯೇ ಮಾಂಸದೂಟ ತಯಾರಿಸಿ ತಾಯಿಗೆ ಎಡೆ ಇಡುತ್ತಾರೆ. ಇಲ್ಲಿ ಇನ್ನೊಂದು ವಿಶೇಷ ಅಂದ್ರೆ, ಭಕ್ತರು ಎಡೆಗೆ ತಯಾರಿಸಿದ ಅಡಿಗೆಯನ್ನ ದೇವರಿಗೆ ಅರ್ಪಿಸಿದ ಮೇಲೆ, ನಂತರ ತಾವು ತಯಾರಿಸಿದ ಅಡಿಗೆಯಲ್ಲಿ ಸ್ವಲ್ಪ ಊಟವನ್ನ ಅಲ್ಲಿರುವ ಯಾರಿಗಾದರೂ ನೀಡಬೇಕು ಅದು ಇಲ್ಲಿನ ಇನ್ನೊಂದು ವಿಶೇಷವಾಗಿದೆ. ಮಾಂಸದೂಟ ತಿನ್ನದ ಜನರಿಗೆ ಯಾವುದೇ ಬಲವಂತವಿಲ್ಲ. ಭಕ್ತರು ತರೋ ಪ್ರಾಣಿಯನ್ನ ಬಲಿ ಕೊಟ್ಟು, ಬೇರೆಯವರಿಂದ ನೈವೇದ್ಯ ಮಾಡಿಸಿ ತಾಯಿಗೆ ಎಡೆ ಇಡಬಹುದು. ಈ ಸಂಪ್ರದಾಯ ಹಲವು ದಶಕಗಳಿಂದ ನಡೆದುಕೊಂಡು ಬಂದಿದೆ.
ದೇವಿಗೆ ಪ್ರಾಣಿಗಳ ಬಲಿ ಕೊಡುವುದು ಇಲ್ಲಿನ ವಾಡಿಕೆ
ಹೆಚ್ಚಾಗಿ ನಾವು ನೋಡಿರೋ ರೀತಿ ದೇವರಿಗೆ ಕುರಿ, ಕೋಳಿ ಹಾಗೂ ಇನ್ನಿತರ ಪ್ರಾಣಿಗಳನ್ನ ಬಲಿ ಕೊಡುತ್ತಾರೆ. ಆದ್ರೆ ಇಲ್ಲಿ ದೇವಿಗೆ ವಿಶೇಷವಾದ ಬಲಿ ಅಂದ್ರೆ ಅದು ಹಂದಿ. ಹೌದು. ತಾಯಿಗೆ ಕುರಿ, ಕೋಳಿ ಗಳಿಗಿಂತ ಹಂದಿ ಬಲಿ ಬಹಳ ಪ್ರಿಯ. ಹಾಗಾಗಿ ಅದನ್ನ ತಿನ್ನದವರು ಸಹ ತಾಯಿಗೋಸ್ಕರ ಬಲಿ ಕೊಡುತ್ತಾರೆ. ಆದ್ರೆ ಅದನ್ನ ತಿನ್ನಲೇ ಬೇಕು ಅನ್ನೋದೇನು ಇಲ್ಲ. ಆದ್ರೆ ಇಲ್ಲಿ ಹಂದಿಯನ್ನ ಯಾವುದೇ ಕಾರಣಕ್ಕೂ ಹಂದಿ ಅಂತ ಹೇಳಬಾರದು. ಯಾಕಂದ್ರೆ ತಾಯಿಗೆ ಆ ಪದದ ಬಳಕೆ ಆಗುವುದಿಲ್ಲ ಅನ್ನೋದು ಇಲ್ಲಿನ ಜನರ ನಂಬಿಕೆ. ಹಾಗಾಗಿ ಅದಕ್ಕೆ ಬೇಟೆ ಅಂತ ಎಲ್ಲರೂ ಕರೆಯುತ್ತಾರೆ. ಇಲ್ಲಿರುವ ಅಂಗಡಿಗೆ ಹೋಗಿ ಕುರಿ, ಕೋಳಿ ಕೊಡಿ ಅಂದ್ರೆ ಕೊಡ್ತಾರೆ. ಆದ್ರೆ ಹಂದಿ ಕೊಡಿ ಅಂದ್ರೆ ಯಾರೂ ಕೊಡಲ್ಲ. ಯಾಕಂದ್ರೆ ತಾಯಿಗೆ ಅದು ಇಷ್ಟ ಆಗಲ್ಲ ಅಂತ. ಹಾಗಾಗಿ ಬೇಟೆ ಕೊಡಿ ಅಂತಾನೆ ಕೇಳಬೇಕು. ತಾಯಿಗೆ ಬಲಿ ಕೊಡೋಕೆ ಯಾವುದೇ ಪ್ರಾಣಿಗಳನ್ನ ತಂದಿದ್ದರೂ, ಮೊದಲು ಬೇಟೆಯನ್ನ ಬಲಿ ಕೊಡಬೇಕು. ನಂತರ ಬೇರೆ ಪ್ರಾಣಿಗಳನ್ನ ಬಲಿ ಕೊಡಬೇಕು. ಯಾಕಂದ್ರೆ ಅದು ಇಲ್ಲಿನ ವಾಡಿಕೆ.
ಅಮವಾಸೆ ದಿನ ಸಾಗರದಂತೆ ಹರಿದು ಬರೋ ಭಕ್ತರು
ತಾಯಿಯ ದರ್ಶನ ಪಡೆಯೋಕೆ ಭಕ್ತರು ಪ್ರತಿದಿನ ಬರುತ್ತಾರೆ. ಆದ್ರೆ ಅಮವಾಸೆ ದಿನದಂದು ಬರುವಷ್ಟು ಜನ ಬೇರೆ ಯಾವ ದಿನದಲ್ಲೂ ಕಾಣಲ್ಲ. ಹೌದು. ಇಲ್ಲಿ ಅಮವಾಸೆ ದಿನದಂದು ಜಾತ್ರೆ ರೀತಿ ಇರುತ್ತೆ. ಆ ದಿನ ತಾಯಿಗೆ ವಿಶೇಷ ಶಕ್ತಿ ಇರುತ್ತೆ ಅನ್ನೋದು ಜನರ ನಂಬಿಕೆ. ಹಾಗಾಗಿ ಪೂಜೆ ಮಾಡೋದು ಮಧ್ಯ ರಾತ್ರಿ ಆದ್ರೂ ಪರವಾಗಿಲ್ಲ ಅಂತ ಜನರು ಅಮವಾಸೆ ದಿನವೇ ಬರುತ್ತಾರೆ. ಅಮವಾಸೆ ದಿನದಂದು ಇಲ್ಲಿ ಕಾಲಿಡೋಕು ಜಾಗವಿರಲ್ಲ. ಅಷ್ಟು ಜನ ಭಕ್ತರಿರುತ್ತಾರೆ.
ಈ ರೀತಿ ಇಷ್ಟಾರ್ಥಗಳನ್ನ ಕರುಣಿಸುವ ಈ ದೇವಾಲಯಕ್ಕೆ ನಾನಾ ಜಿಲ್ಲೆ ಹಾಗೂ ಹೊರ ಜಿಲ್ಲೆಗಳಿಂದಲೂ ಜನರು ಸಾಗರೋಪಾದಿಯಲ್ಲಿ ಆಗಮಿಸುತ್ತಾರೆ. ಕೋಳಿ, ಕುರಿ ಮತ್ತು ಹಂದಿಯನ್ನು ದೇವಿಗೆ ಬಲಿ ಕೊಟ್ಟು ಹರಕೆ ತೀರಿಸುತ್ತಾರೆ. ನೀವು ಈ ದೇವಿ ದರ್ಶನ ಪಡೆಯಬೇಕೆ, ಹಾಗಾದ್ರೆ ಹಾಸನ ಜಿಲ್ಲೆಯಲ್ಲಿರುವ ಸೊಪ್ಪಿನಹಳ್ಳಿಯ ಪುರದಮ್ಮ ದೇವಾಲಯಕ್ಕೆ ಭೇಟಿ ನೀಡಿ, ತಾಯಿ ಕೃಪೆಗೆ ಪಾತ್ರರಾಗಿ.