ಅಬ್ಬಾ ನೋಡೋಕೆ ದೇಹ ಬಲಾಢ್ಯ. ಎಂತ ಎತ್ತರ, ಎಂತ ಶಕ್ತಿ. ನಿಜಕ್ಕೂ ನೋಡುಗರಿಗೆ ಆಶ್ಚರ್ಯವಾಗುತ್ತೆ. ಯಾಕಂದ್ರೆ ನಮ್ಮ ಹನುಮಾನ್ ಅಂದ್ರೆ ಹಾಗೆ ಇರೋದು. ಹೌದು. ಆಂಜನೇಯ ಅನ್ನೋ ಹೆಸರನ್ನ ಕೇಳಿದ್ರೆ ಸಾಕು ಅದೇನೋ ಗೊತ್ತಿಲ್ಲ ಮನಸ್ಸಿನಲ್ಲಿರೋ ನೋವೆಲ್ಲಾ ಮಾಯವಾಗುತ್ತೆ. ಸಾಮಾನ್ಯವಾಗಿ ಜನರು ಹನುಮಂತನನ್ನ, ಆಂಜನೇಯ, ಭಜರಂಗಿ, ಹನುಮಾನ್, ಕಪೀಶ ಈ ರೀತಿ ಹಲವು ಹೆಸರುಗಳಿಂದ ಕರೆಯುತ್ತಾರೆ. ಶನಿವಾರ ಬಂತು ಅಂದ್ರೆ ಸಾಕು ಭಕ್ತರು ಸಾಗರದಂತೆ ಆಂಜನೇಯನ್ನನ್ನ ನೋಡಲು ನಿಂತಿರುತ್ತಾರೆ.
ಹೌದು. ಅಂಜನಾದೇವಿ ಪುತ್ರ ಅಂದ್ರೆ ಭಕ್ತರಿಗೆ ಅದೇನೋ ಒಂಥರಾ ಭಕ್ತಿ. ಎಂಥ ಕಷ್ಟಗಳಿದ್ದರೂ, ಅದನ್ನ ಕ್ಷಣ ಮಾತ್ರದಲ್ಲಿ ಹೋಗಲಾಡಿಸುವ ದೇವರು ಅಂದ್ರೆ ಅದು ಆಂಜನೇಯ ಅಂತ ನಂಬಿದ್ದಾರೆ. ತುಂಬಾ ಭಕ್ತಿಯಿಂದ ಪೂಜೆ ಮಾಡಿದರೆ, ಆಂಜಿನೇಯ ಯಾವುದಾದರು ಒಂದು ರೂಪದಲ್ಲಿ ಕಾಣಿಸಿಕೊಳ್ಳುತ್ತಾನೆ ಅನ್ನೋದು ಭಕ್ತರಲ್ಲಿರುವ ಅಚಲವಾದ ನಂಬಿಕೆ. ಹಾಗಾಗಿ ಯಾವಾಗಲು ಆಂಜನೇಯನನ್ನ ನೆನೆಯುತ್ತಿರುತ್ತಾರೆ. ಕೆಲವರಂತೂ ಪ್ರತಿ ಕ್ಷಣ ಹನುಮಾನ್ ಚಾಲೀಸ್ ಪಠಿಸುತ್ತಿರುತ್ತಾರೆ. ಇದೇ ರೀತಿ ಶಕ್ತಿಯುತವಾಗಿರುವ ಒಂದು ಹನುಮನ ಸನ್ನಿಧಾನವಿದೆ. ಅದರ ಬಗ್ಗೆ ನಾವು ನಿಮಗೆ ತಿಳಿಸುತ್ತೇವೆ.
ಭೋಗಾಪುರೇಶ ಹನುಮಂತ
ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ನವಲಿ ಎಂಬ ಊರಿನಲ್ಲಿ ಈ ಭೋಗಾಪುರೇಶ ಹನುಮಂತ ದೇವಾಲಯವಿದೆ. ಈ ದೇವಾಲಯ ನಿಜಕ್ಕೂ ತುಂಬಾ ವಿಶೇಷವಾಗಿದೆ. ಈ ವಿಶೇಷವಾದ ರಾಮನ ಭಂಟನನ್ನ ನೋಡಲು ಎಲ್ಲೆಲ್ಲಿಂದಲೋ ಜನರು ಬರುತ್ತಾರೆ. ಯಾಕಂದ್ರೆ ಈ ದೇವಾಲಯದ ವಿಗ್ರಹ ಬಹಳ ವಿಶೇಷವಾಗಿದೆ. ಇದು ಬಹಳ ಪುರಾತನವಾದ ದೇವಾಲಯವಾಗಿದೆ. ಈ ದೇವಾಲಯ ಸುಮಾರು ದಶಕಗಳ ಹಿಂದಿನದಾಗಿದೆ. ಇದನ್ನ ಒಬ್ಬ ರಾಜ ಪ್ರತಿಷ್ಠಾಪಿಸಿದ್ದನು. ಯಾಕಂದ್ರೆ ಆಗ ಇದರ ಶಕ್ತಿ ಅರಿತವನು ಈ ರಾಜ ಮಾತ್ರ ಆಗಿದ್ದನು. ಹಾಗಾಗಿ ಈ ದೇವರನ್ನ ಇಲ್ಲಿ ಪ್ರತಿಷ್ಠಾಪಿಸಿದನು.
ಇತಿಹಾಸ
ಈ ವಿಗ್ರಹವನ್ನ ಇಲ್ಲಿ ಪ್ರತಿಷ್ಠಾಪಿಸಿದವರು ಜನಮೇಜಯ ರಾಜನು. ಮಹಾಭಾರತದ ಕುರುವಂಶದ ಅರಸನಾಗಿ ಸಾಕಷ್ಟು ಪ್ರಸಿದ್ಧಿಗಳಿಸಿರುವ ಜನಮೇಜಯನು ಪಾಂಡವ ಅರ್ಜುನನ ಮೊಮ್ಮಗನಾದ ಪರೀಕ್ಷಿತ ರಾಜನ ಮಗ. ಜನಮೇಜಯನು 4,500 ವರ್ಷಗಳ ಹಿಂದೆ ಭೋಗಾಪುರೇಶ ಆಂಜನೇಯನ ಪ್ರತಿಮೆಯನ್ನು ಪ್ರತಿಷ್ಠಾಪಿಸಿ ಪೂಜಿಸುತ್ತಿದ್ದನೆಂಬ ಪ್ರತೀತಿಯಿದೆ. ಹಾಗಾಗಿ ಸಾಕಷ್ಟು ಐತಿಹಾಸಿಕ ಶ್ರೀಮಂತಿಕೆಯಿರುವ ದೇವಾಲಯ ಕ್ಷೇತ್ರ ಇದಾಗಿದೆ.
ವಿಶೇಷತೆ
ಸಾಮಾನ್ಯವಾಗಿ ದೇವರು ಅಂದ ಕೂಡಲೇ ನೆನಪಿಗೆ ಬರೋದು, ನಿಯಮ ನಿಷ್ಠೆಗಳಿಂದ ನಡೆದುಕೊಳ್ಳಬೇಕು ಅಂತ. ಯಾಕಂದ್ರೆ ಅಪ್ಪಿ, ತಪ್ಪಿಯೂ ಯಾವ ತಪ್ಪು ಆಗಬಾರದು ಅನ್ನೋದು. ಕೆಲವೊಂದು ಸಾರಿ ಎಷ್ಟು ಭಕ್ತಿಯಿಂದ ಪೂಜೆ ಮಾಡಿದರು, ದೇವರ ಆಶೀರ್ವಾದ ಪಡೆಯೋದು ಬಹಳ ಕಷ್ಟ ಆಗಿರುತ್ತೆ. ಯಾಕಂದ್ರೆ ಅದ್ರಲ್ಲೂ ಏನಾದ್ರು ಒಂದು ಸಣ್ಣ ಲೋಪ ಆಗಿರುತ್ತೆ. ಅದ್ರಲ್ಲೂ ದೇವರ ಫೋಟೋ ಸ್ವಲ್ಪ ಸೀಳಿದೆ ಅಂತ ಗೊತ್ತಾದ್ರೆ ಸಾಕು, ಅಪ್ಪ ಇದು ಅಪಶಕುನ. ಇದನ್ನ ಮೊದಲು ಯಾವುದಾದರು ಕೆರೆಗೋ ಅಥವಾ ಅರಳಿ ಕಟ್ಟೆ ಹತ್ತಿರವೋ ಇಡಬೇಕು ಅಂತ ಯೋಚನೆ ಮಾಡ್ತಾರೆ. ಆದ್ರೆ ಈ ಭೋಗಾಪುರೇಶ ದೇವಾಲಯದಲ್ಲಿ ಪೂಜೆ ಮಾಡುವ ವಿಗ್ರಹವೇ ಬಿನ್ನವಾಗಿದೆ. ಅಂದ್ರೆ ಸೀಳು ಹೋಗಿದೆ.
ಬಿನ್ನ ವಿಗ್ರಹ
ಈ ದೇವಾಲಯಕ್ಕೆ ಸಂಬಂಧಿಸಿದಂತೆ ಅತೀವ ಕುತೂಹಲ ಅಂದ್ರೆ ಇಲ್ಲಿನ ಹನುಮಂತನ ವಿಗ್ರಹ ಬಿನ್ನವಾಗಿರುವುದು. ಹೌದು. ಈ ದೇವಾಲಯ ವಿಜಯನಗರ ಕೃಷ್ಣದೇವರಾಯರಿಂದ ಹಿಂದೆ ನವೀಕರಣಗೊಂಡಿತ್ತು. ಹಾಗಾಗಿ ಇಲ್ಲಿ ಅಪಾರ ನಿಧಿ ಇದೇ ಅನ್ನೋದು ಹಲವರಲ್ಲಿ ಸಂಶಯ ಉಂಟು ಮಾಡಿತ್ತು. ಅದಕ್ಕೋಸ್ಕರ 1822ರ ಸಮಯದಲ್ಲಿ ಕಳ್ಳರು ನಿಧಿ ಆಸೆಗಾಗಿ ಈ ದೇವಾಲಯಕ್ಕೆ ನುಗ್ಗುತ್ತಾರೆ. ನುಗ್ಗಿದವರು ಮೂಲ ವಿಗ್ರಹವಾದ ಹನುಮ ಮೂರ್ತಿಯನ್ನ ತುಂಡು ತುಂಡಾಗಿ ಒಡೆದು ಹಾಕುತ್ತಾರೆ. ಆದರೆ ಅವರಿಗೆ ಅಲ್ಲಿ ಯಾವ ಸಂಪತ್ತು ಸಿಗುವುದಿಲ್ಲ. ಅದರಿಂದ ಕೋಪಗೊಂಡ ಅವರು ಆ ದೇವಾಲಯದ ಹಿಂಭಾಗದಲ್ಲಿದ್ದ ಕೆರೆಯಲ್ಲಿ ಆ ವಿಗ್ರಹದ ತುಂಡುಗಳ್ಳನ್ನ ಎಸೆದು ಅಲ್ಲಿಂದ, ತಪ್ಪಿಸಿಕೊಳ್ಳುತ್ತಾರೆ. ಇದೇ ಸಂದರ್ಭದಲ್ಲಿ ಆ ಊರಿನಲ್ಲಿದ್ದ ಅರ್ಚಕರ ಕನಸಿನಲ್ಲಿ ಹನುಮಂತ ಹೋಗಿ, ಕೆಲವೊಂದು ಸೂಚನೆಯನ್ನ ಹೇಳಿ, ಮಾಯವಾಗುತ್ತಾನೆ.
ಕನಸಿನಲ್ಲಿ ಬಂದ ಭಜರಂಗಿ ನೀಡಿದ ಸೂಚನೆಯೇನು?
ಕಳ್ಳರು ಹನುಮ ವಿಗ್ರಹವನ್ನ ಒಡೆದು ಕೆರೆಯಲ್ಲಿ ಎಸೆದ ನಂತರ, ಆಂಜನೇಯ ಅರ್ಚಕರ ಕನಸಿನಲ್ಲಿ ಬರುತ್ತದೆ. ಬಂದು ನನ್ನನ್ನ ಈ ರೀತಿ ಒಡೆದು, ಕೆರೆಯಲ್ಲಿ ಎಸೆದಿದ್ದಾರೆ. ನೀನು ತುಂಡಾಗಿರುವ ಕಲ್ಲನ್ನ ತೆಗೆದುಕೊಂಡು, ತುಪ್ಪ ಹಾಗು ಜೇನನ್ನ ಬಳಸಿ ನನಗೆ ಮೊದಲಿನ ರೂಪ ನೀಡಬೇಕು ಅಂತ ಹೇಳಿ, ಕನಸಿನಿಂದ ಮಾಯವಾಗುತ್ತೆ. ಅದರಂತೆ ಬೆಳಿಗ್ಗೆ ಎದ್ದ ಅರ್ಚಕರು ಊರಿನ ಜನರೊಂದಿಗೆ ಕೆರೆಯ ಬಳಿ ಹೋಗಿ, ಅಲ್ಲಿಂದ ವಿಗ್ರಹದ ತುಂಡುಗಳನ್ನ ತೆಗೆದುಕೊಂಡು ಬಂದು, ತುಪ್ಪ ಹಾಗು ಜೇನಿನಲ್ಲಿ ಮೊದಲಿನಂತೆ ಮಾಡುತ್ತಾರೆ. ಆದ್ರೆ ಇದೆಲ್ಲ ಆದಮೇಲೆ ಆ ವಿಗ್ರಹವನ್ನ ದೇವಾಲಯದಲ್ಲಿ ಮತ್ತೆ ಪ್ರತಿಷ್ಠಾಪಿಸಬೇಕು. ಆದ್ರೆ ಪ್ರತಿಷ್ಠಾಪಿಸಿದ ಮೇಲೆ 11 ದಿನಗಳ ಕಾಲ ಯಾವುದೇ ಕಾರಣಕ್ಕೂ ಬಾಗಿಲು ತೆಗೆಯಬಾರದಿತ್ತು. ಯಾಕಂದ್ರೆ ವಿಗ್ರಹವನ್ನ ಜೋಡಿಸಿದ ಮೇಲೆ, ಅದು ಸಂಪೂರ್ಣವಾಗಿ ಅಂಟಿಕೊಳ್ಳಬೇಕಿತ್ತು. ಹಾಗಾಗಿ 11 ದಿನ ಬಾಗಿಲು ತೆಗೆಯದಂತೆ, ಅದಕ್ಕೆ ಪೂಜಾರಿ ಬಿಗ ಹಾಕಿದರು.
ಹನುಮನ ದರ್ಶನ
ಇದೇ ಸಮಯದಲ್ಲಿ ಹನುಮನ ಪರಮ ಭಕ್ತನೊಬ್ಬ ದೇವಾಲಯಕ್ಕೆ ಬರುತ್ತಾನೆ. ಆದ್ರೆ ಆ ಸಮಯದಲ್ಲಿ ದೇವಾಲಯದ ಬಾಗಿಲು ಮುಚ್ಚಿರುತ್ತೆ. ಯಾವುದೇ ಕಾರಣಕ್ಕೂ 11ದಿನ ಬಾಗಿಲು ತೆಗೆಯಬಾರದು ಎಂದು ದೇವರು ಹೇಳಿರುತ್ತೆ. ಆದರೆ ಈ ಭಕ್ತ ದೇವರನ್ನ ನೋಡದೆ ಒಂದು ಹನಿ ನೀರನ್ನು ಕುಡಿಯುವುದಿಲ್ಲ ಅಂತ ಅಲ್ಲೇ ಕೂರುತ್ತಾನೆ. ಸುಮಾರು 4 ದೀನ ಹಾಗೆ ಇರುತ್ತಾನೆ. ಊರಿನ ಜನರು ಅವನ ಪರಿಸ್ಥಿತಿ ನೋಡಲಾಗದೆ, ದೇವರ ಮೇಲೆ ಭಾರ ಹಾಕಿ ಬಾಗಿಲು ತೆರೆಯುತ್ತಾರೆ. ಆಗ ದೇವರ ವಿಗ್ರಹವನ್ನ ನೋಡುತ್ತಾರೆ. ಏನು ಹಾಗೆ ಇಲ್ಲ ಎನ್ನುವಂತೆ ವಿಗ್ರಹ ಮೊದಲಿನ ರೂಪಕ್ಕೆ ಬಂದಿರುತ್ತದೆ. ಆದ್ರೆ ಒಂದು ಭಾಗದಲ್ಲಿ ಮಾತ್ರ ಸೀಳು ಬಿಟ್ಟಿರುತ್ತೆ. ಯಾಕಂದ್ರೆ 11 ದೀನ ಆದಮೇಲೆ ಬಾಗಿಲು ತೆಗೆದಿದ್ದಾರೆ, ಆ ಸೀಳು ಇರುತ್ತಿರಲಿಲ್ಲ. ಆದರೆ 10ನೇ ದಿನಕ್ಕೆ ತೆಗೆದಿದ್ದರಿಂದ ಆ ಸೀಳು ಉಳಿಯುವಂತಾಗುತ್ತೆ.
ಈ ರೀತಿ ಇಲ್ಲಿ ಭಿನ್ನವಾಗಿರುವ ಆಂಜನೇಯನನ್ನ ಪೂಜಿಸುತ್ತಿದ್ದಾರೆ. ಇಲ್ಲಿಗೆ ಬರುವ ಭಕ್ತರನ್ನ ಹನುಮಾನ್ ಎಂದಿಗೂ ಬರಿ ಕೈಯಲ್ಲಿ ಕಳಿಸಿಲ್ಲ. ಭೋಗಾಪುರೇಶ ಹನುಮಂತನನ್ನ ನೋಡಲು ಅನೇಕ ಕಡೆಗಳಿಂದ ಭಕ್ತರು ಬರುತ್ತಾರೆ. ಬಂದು ಹರಕೆ ಕಟ್ಟಿ ಹೋಗುತ್ತಾರೆ. ಆ ಹರಕೆ ಸಹ 11 ದಿನಕ್ಕೆ ನೆರವೇರುತ್ತೆ ಅನ್ನೋದು ಇಲ್ಲಿನ ವಿಶೇಷವಾಗಿದೆ.