ಅಬ್ಬಾ.. ಒಂದು ಕಾಲದಲ್ಲಿ ನಮ್ಮ ರಾಜಧಾನಿಯನ್ನ ಸಿಲಿಕಾನ್ ಸಿಟಿ, ಗಾರ್ಡನ್ ಸಿಟಿ ಅಂತ ಕರೀತಿದ್ರು. ಆದ್ರೆ ಈಗ ಕೆಲವು ವರ್ಷಗಳಿಂದ ರಾಜಧಾನಿ ರೌಡಿಗಳ ಸಿಟಿಯಾಗಿದೆ. ಹೌದು. ನಮ್ಮ ರಾಜಧಾನಿಯಲ್ಲಿ ಎಲ್ಲಿ ನೋಡಿದ್ರು, ರೌಡಿಗಳ ಹಾವಳಿ.. ಸಾಮಾನ್ಯ ಜನರ ಮುಂದೆ ತಮ್ಮ ಪೌರುಷ ತೋರಿಸ್ತಾರೆ. ನಾನೇ ವೀರ, ನಾನೇ ಶೂರ ಅಂತ ಬಿಲ್ಡಪ್ ಕೊಡ್ತಾರೆ. ಆದ್ರೂ ಎಷ್ಟೇ ಪೋಸ್ ಕೊಟ್ರು, ಆ ಪೋಸ್ ಎಷ್ಟು ದಿನ ಅಂತ ಉಳಿಯೋಕೆ ಸಾಧ್ಯ ಹೇಳಿ. ಕೆಲವು ದಿನ ಮಾತ್ರ. ಯಾಕಂದ್ರೆ ಅವರನ್ನ ಮಟ್ಟ ಹಾಕೋರು ಯಾರಾದ್ರೂ ಬರೋವರೆಗೂ ಮಾತ್ರ , ಅವ್ರು ಮೆರೀತಾರೆ. ಆಮೇಲೆ ಬಾಲ ಸುಟ್ಟ ಬೆಕ್ಕಿನಂತೆ ಒಂದು ಮೂಲೆಯಲ್ಲಿ ಕೂರ್ತಾರೆ.
ಹೌದು. ನಗರದಲ್ಲಿ ರೌಡಿಸಂ ಅನ್ನೋದು ಆಲದ ಮರದಂತೆ ಬೆಳೆಯುತ್ತಿದೆ. ಚಿಕ್ಕ ಚಿಕ್ಕ ಹುಡುಗರೆಲ್ಲಾ ರೌಡಿಸಂ ಗೆ ಇಳಿಯೋದ್ರು ಮೂಲಕ, ತಮ್ಮನ್ನ ತಾವು ಪಂಟ್ರು ಅಂತ ಅನ್ಕೋತಿದಾರೆ. ಕೈಯಲ್ಲಿ ಪೆನ್ನು, ಬುಕ್ಕು ಹಿಡಿದು, ಸ್ಕೂಲ್ – ಕಾಲೇಜ್ ಗೆ ಹೋಗ್ಬೇಕಾದವ್ರು, ಈಗ ಕೈಯಲ್ಲಿ ಮಚ್ಚು ಹಿಡ್ಕೊಂಡು, ಬೀದಿ ಬೀದಿ ಸುತ್ತುತ್ತಿದ್ದಾರೆ. 100, 200 ರೂಪಾಯಿಗೆಲ್ಲಾ ಕೊಲೆ, ಸುಲಿಗೆ ಮಾಡ್ತಿದ್ದಾರೆ. ಸಾಮಾನ್ಯರನ್ನ ಅಯ್ಯೋ ಅನ್ಸೋರಿಗೆ, ಯಾರಾದ್ರೂ ಒಬ್ರು ಬ್ರೇಕ್ ಹಾಕೋಕೆ ಬರ್ಬೇಕಲ್ವಾ. ಆ ರೀತಿ ಇವರ ಕರ್ಮಕಾಂಡಕ್ಕೆಲ್ಲ ಬ್ರೇಕ್ ಹಾಕೋಕೆ ಅಂತ ನಗರಕ್ಕೆ ಎಂಟ್ರಿ ಕೊಟ್ಟೋರೇ, ನಮ್ಮ ಖಡಕ್ ಆಫೀಸರ್ ಅಲೋಕ್ ಕುಮಾರ್.
ಅಲೋಕ್ ಕುಮಾರ್ ಅಂದ್ರೆ ಎಂತ ರೌಡಿಯೂ ಕೂಡ, ಹೆಡೆಮುರಿ ಕಟ್ಟಿದ ಹಾವಿನಂತಾಗುತ್ತಾನೆ. ಯಾಕಂದ್ರೆ , ಅವ್ರು ರೌಡಿಗಳಿಗೆ ಕೊಡೊ ಟ್ರೀಟ್ಮೆಂಟ್ ಆ ರೀತಿ ಇರುತ್ತೆ. ಇವರು ಹೋದ ಕೊಡೆಯಲೆಲ್ಲಾ, ಇವರಿಗೆ ಇವರೇ ರಾಜ. ಇವರೇ ಸರ್ವಾಧಿಕಾರಿ.
ವೃತ್ತಿ ಜೀವನ
ಇವರು ಸುಮಾರು 1994ರಲ್ಲಿ ತಮ್ಮ ಐಪಿಎಸ್ ಯನ್ನ ಮುಗಿಸಿದ್ರು.. ಅಂದಿನಿಂದ ಇವರ ವೃತ್ತಿ ಜೀವನ ಆರಂಭವಾಯಿತು. ಇವರು ಮೊದಲು ಎ ಎಸ್ ಪಿ ಯಾಗಿ ಬೆಳಗಾವಿಯಲ್ಲಿ ತಮ್ಮ ಕಾರ್ಯ ಆರಂಭಿಸಿದರು. ನಂತರ ಚಿತ್ರದುರ್ಗ ಹಾಗೂ ಗುಲ್ಬರ್ಗದಲ್ಲಿ ಎಸ್ಪಿ ಯಾಗಿ ಕಾರ್ಯ ನಿರ್ವಹಿಸಿದರು. ನಂತರ ರಾಜಧಾನಿ ಬೆಂಗಳೂರಿಗೆ ಡಿಸಿಪಿ ಯಾಗಿ ವರ್ಗಾವಣೆಯಾಗಿ ಬಂದರು.
ರೌಡಿಗಳಿಗೆ ಸಿಂಹ ಸ್ವಪ್ನವಾದ ಅಲೋಕ್ ಕುಮಾರ್
ಇವರು ಎಲ್ಲೆಲ್ಲಿ ಅಧಿಕಾರ ಪಡೆಯುತ್ತಾರೋ ಅಲ್ಲೆಲ್ಲವೂ ಸಹ ಇವರಿಗೆ ಇವರೇ, ಸರ್ವಾಧಿಕಾರಿ. ತಾವಿರುವ ಜಾಗವನ್ನ ತಮ್ಮ ಕಂಟ್ರೋಲ್ ಗೆ ತೆಗೆದುಕೊಳ್ಳದೆ ಬಿಡೋದಿಲ್ಲ ಈ ಡೈನಾಮಿಕ್ ಸ್ಟಾರ್. ಅಲೋಕ್ ಕುಮಾರ್ ಹೆಸರು ಪ್ರಸಿದ್ಧಿಯಾಗಿದ್ದೆ ಕೆಲವು ಅಂಶಗಳಿಂದ. ಅದೇನಪ್ಪ ಅಂದ್ರೆ, ಜೂಜು ಅಡ್ಡೆ, ಅಕ್ರಮ ದಂಧೆ, ಹಾಗೂ ರೌಡಿಗಳ ಪುಂಡಾಟ. ಇವುಗಳಿಗೆ ಬ್ರೇಕ್ ಹಾಕೋದೇ ಇವರ ಸ್ಪೆಷಾಲಿಟಿ. ಇವರು ಕಾಲಿಟ್ಟರೆ, ಅಲ್ಲಿ ಧೂಳು ಸಹ ಮಾಸುವುದಿಲ್ಲ ಅಂತ ಕೆಲವ್ರು ಹೇಳ್ತಾರೆ. ಇವರು ಬೆಳಗಾವಿ ಗುಲ್ಬರ್ಗ ಹಾಗೂ ಗದಗದಲ್ಲಿ ರೌಡಿಗಳಿಗೆ ಕೊಟ್ಟಿರೋ ಟ್ರೀಟ್ಮೆಂಟ್ ನ ಯಾವತ್ತೂ, ಯಾರಿಂದಲೂ ಮರೆಯೋಕಾಗಲ್ಲ. ಯಾಕಂದ್ರೆ ಇವರದು ಒಂದೇ ಮಾತು. ಬದಲಾಗ್ತೀಯ ಬಿಡ್ತೀನಿ. ಇಲ್ಲ ಅಂದ್ರೆ ಒಂದೇ ಸರಿ ಎನ್ಕೌಂಟರ್. ನಾನು ಬೇರೆಯವರ ತರಾ ಕಾಲಿಗೆಲ್ಲ ಶೂಟ್ ಮಾಡಿ ಬುಲೆಟ್ ವೇಸ್ಟ್ ಮಾಡಲ್ಲ. ಡೈರೆಕ್ಟ್ ಆಗಿ ಹಣೆಗೆ ಹೊಡೆಯೋದು ಅಂತ ಖಡಕ್ ವಾರ್ನಿಂಗ್ ಕೊಡ್ತಾರೆ. ಆ ಮಾತನ್ನ ಕೇಳಿದ ಯಾರಿಗಾದ್ರೂ ಮತ್ತೆ, ಕೆಟ್ಟ ಕೆಲಸ ಮಾಡೋಕೆ ಧೈರ್ಯ ಬರುತ್ತಾ ಖಂಡಿತ ಇಲ್ಲ. ತಮ್ಮ ಮಾತಿನಿಂದಲೇ ರೌಡಿಗಳ ಬೆವರಿಳಿಸೋದೇ ಇವರ ಗಮ್ಮತ್ತು.
ಎನ್ಕೌಂಟರ್ ಸ್ಪೆಷಲಿಸ್ಟ್
ಇವರು ಕೆಲಸಕ್ಕೆ ಅಂತ ನಿಂತರೆ, ಇವರ ಮಾತನ್ನ ಇವರೇ ಕೇಳಲ್ಲ. ಪೊಲೀಸೊರನ್ನ ನೋಡಿದ್ರೆ, ಕೆಟ್ಟವರು ಹೇಗೆ ಹೆದರ್ತಾರೆ, ಹೇಗೆ ಬದಲಾಗ್ತಾರೆ ಅಂತ ಕೇವಲ ಸಿನಿಮಾದಲ್ಲಿ ನೋಡಿದ್ವಿ. ಆದ್ರೆ ಅದನ್ನ ನಿಜವಾಗಿಯೂ ನೋಡಬೇಕು ಅಂದ್ರೆ, ಅದು ಅಲೋಕ್ ಕುಮಾರ್ ಅವರ ಅಧಿಕಾರದಲ್ಲಿ ಮಾತ್ರ. ಹೌದು. ಇವರು ಎನ್ಕೌಂಟರ್ ಗೆ ಅಂತಾನೆ ಹೆಸರು ವಾಸಿಯಾಗಿದ್ದರೆ. ಇವರು ಎಲ್ಲೇ ಹೋಗಿ ಅಧಿಕಾರ ಪಡೆದರು ಅಲ್ಲಿ, ಮೊದಲು ಮೀಟಿಂಗ್ ಮಾಡೋದೇ ಇವರ ಮೊದಲು ಕೆಲಸ. ಮೀಟಿಂಗ್ ಅಲ್ಲಿ ಅವರು ಹೇಳೋದು ಒಂದೇ ಮಾತು. ರೌಡಿಗಳು, ಕಳ್ಳರು ಬದಲಾಗ್ತೀವಿ ಅಂತಾರ ಅವ್ರಿಗೆ ಒಂದು ಚಾನ್ಸ್ ಕೊಡಿ. ಇಲ್ಲ ಅಂದ್ರೆ ಡೈರೆಕ್ಟ್ ಶೂಟೌಟ್ ಆಗ್ಬೇಕು ಅಂತ ಹೇಳ್ತಾರೆ. ಹಾಗಾಗಿ ಇವರಿಗೆ ಎನ್ಕೌಂಟರ್ ಎಕ್ಸ್ಪರ್ಟ್ಅಂತಾನೆ ಕರೀತಾರೆ. ಈ ಕ್ಷಣಕ್ಕೂ ಸಹ ಅವರು ಅದನ್ನ ಉಳಿಸಿಕೊಂಡಿದ್ದಾರೆ.
Also, Read: ನ್ಯೂಸ್ ಪೇಪರ್ ಮಾರಿ ಕಷ್ಟದಲ್ಲೇ ಐ.ಪಿ.ಎಸ್ ಆಫೀಸರ್ ಆದ ರವಿ ಡಿ. ಚನ್ನಣ್ಣನವರ್ ಅವರ ಥ್ರಿಲ್ಲಿಂಗ್ ಲೈಫ್ ಸ್ಟೋರಿ
ಪರೇಡ್ ಹೆಸರಲ್ಲಿ ರೌಡಿಗಳಿಗೆ ಫುಲ್ ಕ್ಲಾಸ್
ಇವರಿಗೆ ಮೆಮೊರಿ ಪವರ್ ಎಷ್ಟು ಸ್ಟ್ರಾಂಗ್ ಇದೆ ಅಂದ್ರೆ, ಎಷ್ಟು ವರ್ಷದ ಘಟನೆಯನ್ನಾದ್ರೂ ನೆನಪಿಟ್ಕೊಂಡಿರ್ತಾರೆ. ಅದಕ್ಕೆ ಉದಾಹರಣೆ ಅಂದ್ರೆ.. ಇವರಿಗೆ ರೌಡಿ ಪರೇಡ್ ಅಂದ್ರೆ ತುಂಬಾ ಇಷ್ಟ. ಹಾಗಾಗಿ ತಾವಿದ್ದ ಜಾಗದಲ್ಲಿ ಪ್ರತಿ ಸಾರಿನೂ ಎಲ್ಲಾ ರೌಡಿಗಳನ್ನ ತಮ್ಮ ಕಚೇರಿ ಹತ್ರ ಬರೋಕೆ ಹೇಳ್ತಾರೆ. ಅಲೋಕ್ ಕುಮಾರ್ ಬರೋಕೆ ಹೇಳಿದರೆ ಅಂದ್ರೆ ಸಾಕು, ರೌಡಿಗಳಿಗೆಲ್ಲ, ಅಲ್ಲೇ ಭೂಮಿ ಕುಸಿಯಬಾರದೇ ಅನ್ನಿಸುತ್ತೆ. ಯಾರೇ ರೌಡಿಗಳಾಗಲಿ ಅವರ ಮುಂದೆ ಹೋಗ್ಬೇಕು ಅಂದ್ರೆ ಮೊದಲು ತಮ್ಮ ಅವತಾರಗಳನ್ನ ಬದಲಾಯಿಸಿಕೊಳ್ತಾರೆ. ಅಂದ್ರೆ ತಮ್ಮ ಡ್ರೆಸ್ಸಿಂಗ್ ಸ್ಟೈಲ್, ಹೇರ್ಸ್ಟೈಲ್, ಒಡವೆ, ಈ ರೀತಿ ತಮ್ಮ ಸಿರಿ ಏನೇ ಇದ್ರೂ ಅದನ್ನ ಮನೆಯಲ್ಲೇ ಇಟ್ಟು, ಒಬ್ಬ ಸಾಮಾನ್ಯ ವ್ಯಕ್ತಿಯಂತೆ ಹೋಗ್ತಾರೆ. ಯಾಕಂದ್ರೆ ಆ ರೀತಿ ಹೋದ್ರೆ, ಅಲೋಕ್ ಕುಮಾರ್ ಅವರಿಂದ ತಪ್ಪಿಸಿಕೊಳ್ಳಬಹುದು ಅನ್ನೋದು ಅವರ ಐಡಿಯಾ.
ಅಲೋಕ್ ಕುಮಾರ್ ಅವರ ಖಡಕ್ ಡೈಲಾಗ್ ಗಳು
ಇವರು ಯಾವಾಗಲು ಮಾಡುವ ಹಾಗೆ ಪರೇಡ್ ಗಳನ್ನ ಮಾಡುತ್ತಲೇ ಇರ್ತಾರೆ. ಆಗ ಅಲ್ಲಿಗೆ ಬಂದಿರೋ ರೌಡಿಗಳನ್ನ ನೋಡಿದ್ರೆ, ಇವರು ಹೊಡೆಯೋ ಖಡಕ್ ಡೈಲಾಗ್ ಗಳೇ ಚಂದ. ಹೊಸ ಬಟ್ಟೆ ಹಾಕ್ಕೊಂಡು ಬಂದಿರೋರಿಗೆ, ಏನೋ ಹಬ್ಬಕ್ಕೆ ಬರೋ ತರ ಹೊಸ ಬಟ್ಟೆ ಹಾಕ್ಕೊಂಡ್ ಬಂದಿದ್ದೀಯಾ, ನಾವೇನು ಇಲ್ಲಿ ಹಬ್ಬ ಮಾಡ್ತಿದ್ದೀವಾ ಅಥವಾ ಜಾತ್ರೆ ಮಾಡ್ತಿದ್ದೀವಾ ಅಂತ ಡೈಲಾಗ್ ಹೊಡೆದ್ರೆ, ವೈಟ್ ಅಂಡ್ ವೈಟ್ ಹಾಕಿರೋರಿಗೆ ಇನ್ನೊಂದು ರೀತಿಯಲ್ಲಿ ಪಂಚ್ ಕೊಡ್ತಿದ್ರು. ಏನೋ ವೈಟ್ ಬಟ್ಟೆ ಹಾಕ್ಕೊಂಡ್ ಬಂದ್ದಿಯಲ್ಲಾ, ಏನು ಮುಂದೆ ಎಲೆಕ್ಷನ್ ಗೆ ನಿಂತ್ಕೋಬೇಕು ಅನ್ಕೊಂಡಿದೀಯ ಅಂತ ಹೇಳೋರು. ಇನ್ನೂ ಈ ಹಚ್ಚೆ, ಮತ್ತೆ ಟ್ಯಾಟೂ ಹಾಕಿಸಿರೋರು ಅಂದ್ರೆ, ಅಲೋಕ್ ಕುಮಾರ್ ಅವರಿಗೆ ತುಂಬಾ ಸಿಟ್ಟು. ಏನು ಬಾಡಿ ಫುಲ್ ಪೇಂಟಿಂಗ್ ಮಾಡ್ಸಿದ್ದೀಯಲ್ಲಾ, ನೀನ್ಯಾವ ಫ್ಯಾಶನ್ ಶೋ ಗೆ ಹೋಗ್ಬೇಕೋ ಅಂತ ಡೈಲಾಗ್ ಮೇಲೆ ಡೈಲಾಗ್ ಹೊಡೆಯೋರು.
ಹಗರಣ ಹಾಗೂ ಜೂಜು ಹಡ್ಡೆಗಳ ಮೇಲೆ ದಾಳಿ
ಅಲೋಕ್ ಕುಮಾರ್. ಇವರ ಕಣ್ಣು ಮೊದಲು ಬೀಳೋದೇ ಈ ಜೂಜು ಹಡ್ಡೆಗಳು ಹಾಗೂ ಅಕ್ರಮ ದಂಧೆಗಳ ಮೇಲೆ. ಮೀಟರ್ ಬಡ್ಡಿ ವ್ಯಾಪಾರ ಅಂದ್ರೆ ಅಲೋಕ್ ಕುಮಾರ್ ಅವರಿಗೆ ಎಲ್ಲಿಲ್ಲದ ಸಿಟ್ಟು ನೆತ್ತಿಗೇರುತ್ತದೆ. ಯಾಕಂದ್ರೆ ಜನರನ್ನ ಇವೇ ಹಾಳು ಮಾಡ್ತಿರೋದು ಅನ್ನೋದು ಇವರ ಮುಖ್ಯ ವಿಷಯ. ಹಾಗಾಗಿ ಇವರ ಕಣ್ಣು ಮೊದಲು ಬೀಳೋದೇ ಜೂಜು ಹಡ್ಡೆಗಳ ಮೇಲೆ. ಇವರು ಯಾವುದಾದ್ರೂ ಊರಿಗೆ ವರ್ಗಾವಣೆಯಾಗಿ ಬಂದ್ರು ಅಂತ ಗೊತ್ತಾದ್ರೆ ಸಾಕು ಮೀಟರ್ ಬಡ್ಡಿ ಯವರು ಮತ್ತೆ ಜೂಜು ಅಡ್ಡೆ ನಡೆಸೋರು, ಇದ್ದಕ್ಕಿದ್ದಂತೆ, ಅಲ್ಲಿಂದ ಪರಾರಿಯಾಗ್ತಾರೆ. ಇಲ್ಲ ಅಂದ್ರೆ ಯಾವ್ದೋ ಕಣ್ಣಿಗೆ ಕಾಣದೆ ಇರೋ ಜಾಗಕ್ಕೋಗಿ ತಮ್ಮ ಅಕ್ರಮ ವ್ಯವಹಾರ ನಡೆಸ್ತಾರೆ. ಎಲ್ಲಿ ಹೋಗಿ ಏನೇ ಮಾಡಿದ್ರು ಇವರು ಮಾತ್ರ ಅದನ್ನ ಸುಮ್ನೆ ಬಿಡ್ತಿರ್ಲಿಲ್ಲ. ಅವತಾರ ಪುರುಷನಂತೆ, ಅವರನ್ನ ಹುಡುಕಿ ಬಗ್ಗಿ ಬಡಿಯುತ್ತಿದ್ರು.
ಯಾವುದೇ ಊರಿಗೋದ್ರು, ಯಾವುದೇ ಜಿಲ್ಲೆಗೋದ್ರು ಇವರ ನಾಯಕತ್ವ ಗುಣ ಮಾತ್ರ ಕಡಿಮೆ ಆಗಲ್ಲ. ಫೀಲ್ಡ್ ನಲ್ಲಿ ಅಷ್ಟೆಲ್ಲಾ ಮೆರೆಯೋ ರೌಡಿಗಳು, ಇವರ ಮುಂದೆ ಮಾತ್ರ ಬಚ್ಚಾಗಳು. ಇವರು ಸಿಸಿಬಿ ಆಯುಕ್ತರಾಗಿ ಬೆಂಗಳೂರಿಗೆ ಬಂದ ಮೇಲೆ, ಇವರು ಮಾಡಿದ ರೌಡಿ ಪರೇಡ್ ಮಾತ್ರ, ಇಂದಿಗೂ ಯಾರಿಂದಲೂ ಮರೆಯೋಕಾಗಲ್ಲ. ಸುಮಾರು 500 ರಿಂದ 700 ಅಷ್ಟು ಜನ ರೌಡಿಗಳನ್ನ ಸಿಸಿಬಿ ಕಚೇರಿಗೆ ಕರೆಸಿ, ಲೆಫ್ಟ್, ರೈಟ್ ಫುಲ್ ಕ್ಲಾಸ್ ತಗೊಂಡಿದ್ರು..
ಅಲೋಕ್ ಕುಮಾರ್ ಅಂದ್ರೆ ಮಹಿಳೆಯರಿಗೆ ಅದೇನೋ ಒಂಥರಾ ಗೌರವ. ಯಾಕಂದ್ರೆ ಅವರು ಬಂದಮೇಲೆ, ತಮ್ಮ ಮನೆ, ಸಂಸಾರ ಉಳಿದಿದೆ ಅನ್ನೋದು ಅವರ ಮಾತು. ಹಾಗಾಗಿ ಕೆಲವು ಮಹಿಳೆಯರಿಗೆ ಅಲೋಕ್ ಕುಮಾರ್ ಒಬ್ಬ ಸಹೋದರನಂತೆ ಆಗಿದ್ದಾರೆ. ಮುಂದಿನ ದಿನಗಳಲ್ಲೂ ಅಲೋಕ್ ಕುಮಾರ್ ಅಂತ ಅಧಿಕಾರಿಗಳು ನಮ್ಮ ಸಮಾಜಕ್ಕೆ ಬೇಕು ಅನ್ನೋದು ಎಲ್ಲರ ಆಸೆ.
ಈ ಪೋಸ್ಟ್ ನಿಮಗೆ ಇಷ್ಟ ವಾದಲ್ಲಿ ಲೈಕ್ ಅಂಡ್ ಫಾಲೋ MetroSaga – Kannada on Facebook