ಭಾರತದ ಸ್ವಾತಂತ್ರ್ಯ ದಿನ ಅಂದರೆ ನಾವೇನ್ ಇನ್ಡಿಪೆಂಡೆನ್ಸ್ ಡೇ ಅಂತ್ ಕರೀತೀವಿ, ಆ ದಿನ ಬಂದೇ ಬಿಟ್ಟಿತು ನೋಡಿ. ನೀಲಿ ಆಗಸದಿ ಹಾರಾಡುವ ಹಕ್ಕಿಗಳಿಂದ ಹಿಡಿದು ಈ ಮಣ್ಣಿನ ಎಲ್ಲ ಹುಳ ಹುಪ್ಪಡಿಗಳಿಗೆ ದೇಶಾಭಿಮಾನ ಕಿತ್ತು ಕೊಂಡು ಬರುವ ಆ ದಿನ ಬಂದೇ ಬಿಟ್ಟಿತು. ಜೈ ಭಾರತ್ ಮಾತಾ ಕೀ ಎಂಬ ಸ್ಲೋಗನ್ ಗಳು ಮತ್ತು ಇಂಟರ್ನೆಟ್ ನಲ್ಲಿ ಹೆಕ್ಕಿ ತೆಗೆದ ವಾಲ್ಪೇಪರ್ ಗಳ ಮೂಲಕ ನಮ್ಮ ರಾಷ್ಟ್ರ ಪ್ರೇಮವನ್ನು ತೋರಿಸುವ ಆ ದಿನ ಬಂದೇ ಬಿಟ್ಟಿತು. ಫೇಸ್ ಬುಕ್ ನಲ್ಲಿ ‘ ಐ ಲವ್ ಇಂಡಿಯಾ’ ಅಂತ ಸ್ಟೇಟಸ್ ಅಪ್ಡೇಟ್ ಮಾಡಿ ಅದೇ ಇಂಡಿಯಾದ ಮೇಲೆ ಹೊಲಸು ಮಾಡುವ ಜನರು ನಮ್ಮಲ್ಲಿ ಇದ್ದಾರೆ ಮತ್ತು ಅವರ ಸಂಖ್ಯೆಯೇ ಹೆಚ್ಚು. (Independence Day Special)
ನಿಮಗೆ ಗೊತ್ತಿಲ್ಲದ ವಿಷಯ ಏನೂ ಅಲ್ಲ. ಆಗಸ್ಟ್ 15 ಕ್ಕೆ ನೀವು ಹೆಮ್ಮೆಯಿಂದ ಹಾರಿಸಿದ ರಾಷ್ಟ್ರ ಧ್ವಜ, ನೀವು ಗರ್ವದಿಂದ ಹಿಡಿದು ಮೆರದಾಡಿದ ನಮ್ಮ ರಾಷ್ಟ್ರ ಧ್ವಜ ಮಾರನೇ ದಿನ ರಸ್ತೆಯಲ್ಲಿ ಬಿದ್ದು ಹೊರಳಾಡುತ್ತಿದ್ದರೆ ಆ ದಿನ ಅದು ನಮಗೆ ಜಸ್ಟ್ ಒಂದು ಪ್ಲಾಸ್ಟಿಕ್ ನ ವಸ್ತು ಅಷ್ಟೇ, ಅಲ್ವಾ? ಹೌದು ನಾವು ತುಂಬಾ ಬಿಜಿ ಅಂಡ್ ಈ ದಿನ ನಮಗೆ ಒಂದು ಅವಕಾಶ, ಅದನ್ನು ಆಚರಿಸುವುದರಲ್ಲಿ ಏನು ತಪ್ಪು ಅನ್ನೋ ಪ್ರಶ್ನೆ ಬರಬಹುದು. ತಪ್ಪಿಲ್ಲ ಆದರೆ ರಾಷ್ಟ್ರ ಧ್ವಜ ಅನ್ನೋದು ನಾವು ವೀಕೆಂಡ್ ನಲ್ಲಿ ಕುಡಿದು ಎಸೆಯುವ ಬಿಯರ್ ಬಾಟಲ್ ಅಲ್ಲ ಸ್ವ್ಯಾಮೀ. ದೇಶ ಪ್ರೇಮ, ದೇಶಾಭಿಮಾನ ಎಲ್ಲ ತುಂಬಾ ದೊಡ್ಡ ಪದಗಳಾದವು. ಲೆಟ್ ಅಸ್ ಬಿ ಸೆನ್ಸಿಬಲ್ ಫರ್ಸ್ಟ್.
ಈ ವಂದೇ ಮಾತರಂ ಅನ್ನೋದು ವನ್ ಡೇ ಮಾತರಂ ಆಗಿರೋದು ವಿಷಾದನೀಯ ಮತ್ತು ವಿಪರ್ಯಾಸ. ಚಿಕ್ಕವರಿದ್ದಾಗ ಶಾಲೆಯಲ್ಲಿ ಏನೋ ಅಷ್ಟೋ ಇಷ್ಟೋ ನಮ್ಮ ಯೋಧರ ಬಗ್ಗೆ , ಹೋರಾಟಗಾರರ ಬಗ್ಗೆ ವಿಷಯಗಳು ಕಿವಿಗೆ ಬೀಳುತ್ತಿದ್ದವು. ಈಗ ಎಲ್ಲ ಡಿಜಿಟಲ್ ಜಮಾನಾ. ಯಾರೋ ಫೇಸ್ ಬುಕ್ ನಲ್ಲಿ ಏನೋ ಹಾಕ್ತಾರೆ ಅಂಡ್ ಅದನ್ನ ನಾನು ಶೇರ್ ಮಾಡಿ ಕೆಲ ಸ್ನೇಹಿತರನ್ನು ಟ್ಯಾಗ್ ಮಾಡಿಬಿಟ್ಟರೆ ಮುಗೀತು ನಾನು ಆ ದಿನದ ಪರಮ ವೀರ ಸೇನಾನಿ. ಇದು ತಪ್ಪಲ್ಲ ಆದರೆ ಇದರಾಚೆಗೆ ನಾವು ಮಾಡಬಹುದಾದ ಎಷ್ಟೋ ವಿಷಯಗಳು ಇವೆ ಆದರೆ ನಾವು ಅದರ ತಂಟೆಗೆ ಸಹ ಹೋಗುವುದಿಲ್ಲ.
ಸಾವರ್ಕರ್ ಎಂಬ ವೀರ ತನ್ನ ಯವ್ವನದ ದಿನಗಳನ್ನೆಲ್ಲಾ ಅಂಡಮಾನಿನ ಜೈಲಿನಲ್ಲಿ ಕಳೆಯತ್ತಾನೆ. ಇವರ ಬಗ್ಗೆ ನಿಮಗೆ ಎಷ್ಟು ಗೊತ್ತು? ಭಗತ್ ಸಿಂಗ್ ನೇಣುಗಂಬಕ್ಕೆ ಏರಿದಾಗ ಅವನಿಗೆ ಜಸ್ಟ್ 23 ಕಣ್ರೀ ವಯಸ್ಸು. ಅವತ್ತು ಅವನ ತಾಯಿ ಅನುಭವಿಸಿದ ಪುತ್ರ ಶೋಕದ ಅಂದಾಜ಼ು ನಮಗೆ ಇದ್ದಿದ್ದರೆ ಭಾರತ ಇವತ್ತು ಈ ಪರಿಸ್ಥಿತಿಯಲ್ಲಿ ಇರುತ್ತಿರಲಿಲ್ಲ. ಚಂದ್ರ ಶೇಖರ್ ಆಜ಼ಾದ್ ಅಂತಹ ಚಂದ್ರ ಶೇಖರ್ ಆಜ಼ಾದ್ ನನ್ನು ಬ್ರಿಟೀಷರಿಗೆ ಮೋಸದಿಂದ ಹಿಡಿದು ಕೊಟ್ಟಾಗ, ಅವರ ನೆತ್ತರಿಂದ ಚೆಲ್ಲಿದ ತಣ್ಣನೆಯ ರಕ್ತಕ್ಕೆ ಭಾರತದ ಮಣ್ಣು ಕಂಪಿಸಿತಲ್ಲ, ಆ ದಿನಗಳು ಎಷ್ಟು ಕ್ರೂರವಾಗಿದ್ದವು ಅನ್ನೋ ಕಲ್ಪನೆ ನಮಗಿದ್ದಿದರೆ, ನಾವು ಹೀಗೆ ಆಡುತಿರಲಿಲ್ಲ.
ನಮಗೆ ಇವರೆಲ್ಲರ ಬಗ್ಗೆ ಗೌರವವಿದೆ, ಅಭಿಮಾನವಿದೆ ಆದರೆ ಅದು ಒಂದು ದಿನಕ್ಕೆ ಮಾತ್ರ ಸೀಮಿತ ಆಗಿದೆಯಲ್ಲ, ಅದು ಬೇಜಾರಿನ ಸಂಗತಿ. ಗಡಿಯಲ್ಲಿ ಯೋಧರು ದಿನಾ ಸಾಯುತ್ತಾರೆ. ಒಬ್ಬ ಯೋಧನ ಹೆಂಡತಿ ತನ್ನ ಗಂಡನನ್ನು ಯುದ್ಧದಲ್ಲಿ ಕಳೆದುಕೊಂಡಿರ್ತಾಳೆ, ದೇಹ ಮನೆಗೆ ಬರುತ್ತೆ. ತಡೆಯಲಾರದಷ್ಟು ಸಂಕಟ ಆದರೆ ಮತ್ತೆ ತನ್ನ ಮಗನನ್ನು ಆರ್ಮೀ ಗೆ ಸೇರಿಸಲು ಮುಂದಾಗ್ತಾಳೆ. ಯಾಕೆ? ನಮಗೆ ಯಾಕೆ ಆ ಭಾವನೆ ಬರುವುದಿಲ್ಲ ? ಅದಕ್ಕೆ ಉತ್ತರ ನಮ್ಮಲ್ಲೇ ಸಿಗಬಹುದೇನೋ?
ನಮ್ಮೆ ದೇಶದಲ್ಲಿ ಹಲವಾರು ಸಮಸ್ಯೆಗಳಿವೆ ಹೌದು ಆದರೂ ಭಾರತ ಎಂದು ಕೂಡಲೇ ನಾವು ಭಾವೋದ್ವೇಗಕ್ಕೆ ಒಳಗಾಗುತ್ತೇವೆ. ಈ ಹುಮ್ಮಸ್ಸು ಒಂದು ದಿನಕ್ಕೆ ಸೀಮಿತ ಆಗದೆ, ಪ್ರತೀ ದಿನವೂ ಭಾರತವನ್ನು ಎದೆಯಲ್ಲಿ ಇಟ್ಟು ಕೊಂಡು ಪೂಜಿಸುವ ಮತ್ತು ಈ ನಾಡನ್ನು ಬೆಳೆಸುವ ಮನಸ್ಥಿತಿ ನಮ್ಮದಾಗಲಿ. ವಿಶ್ವಗುರು ಭಾರತ ಮತ್ತೆ ವಿಶ್ವದ ಗುರು ವಾಗಿ ರಾರಾಜಿಸಲಿ. ಲೆಟ್ ಅಸ್ ಸೆಲೆಬ್ರೇಟ್ ವಂದೇ ಮಾತರಂ ಅಂಡ್ ನಾಟ್ ವನ್ ಡೇ ಮಾತರಂ.