ಅಪ್ಪಾ ಏನ್ ಚಳಿ. ಈ ಚಳಿಲೀ ಬಿಸಿಬಿಸಿ ಟೀ ಇದ್ದಿದ್ರೆ ಎಷ್ಟು ಚೆನ್ನಾಗಿರ್ತಿತ್ತು ಅಂತ ಪ್ರತಿಯೊಬ್ಬರೂ ಚಳಿ ಆದಾಗ ಅಥವಾ ತಲೆ ನೋವು ಬಂದಾಗ ಕಾಫಿ, ಟೀ ಯನ್ನ ನೆನಪಿಸಿಕೊಳ್ತಾರೆ. ಅಂತ ಟೈಮ್ ಅಲ್ಲಿ ಈ ಕಾಫಿ, ಟೀ ಗೆ ಒಳ್ಳೆ ಬೆಲೆ ಇದೆ. ಒಂದೊಂದು ಕಡೆ ಒಂದೊಂದು ಟೇಸ್ಟ್ ನಲ್ಲಿ ಕಾಫಿ, ಟೀ ಸಿಗುತ್ತೆ. ಎಷ್ಟೋ ಬ್ರಾಂಡ್ ಗಳು ನಮ್ಮಲಿ ಇವೆ. ಆದರೆ ಕೆಲವರಿಗೆ ಪ್ರಮುಖವಾಗೇ ಕೆಲವೊಂದು ಸ್ಥಳಗಳಲ್ಲಿ ಟೀ ಅತೀ ಹೆಚ್ಚು ಇಷ್ಟ ಆಗುತ್ತೆ.
ಹೌದು. ಕೆಲವರು ಟೀ ಪ್ರಿಯರಿರ್ತಾರೆ. ಅವರಿಗೆ ಎಲ್ಲಾ ಟೀ ಇಷ್ಟ ಆಗಲ್ಲ. ಪ್ರಮುಖವಾಗಿ ಒಂದು ಕಡೆ ಟೀ ಅಂದ್ರೆ ಬಹಳ ಇಷ್ಟ ಆಗ್ತಿರುತ್ತೆ. ಇದೇ ತರ ನಮ್ಮ ಕರ್ನಾಟಕದಲ್ಲೇ ಅತೀ ರುಚಿಯಾಗಿ ಟೀ ಮಾಡೋ ಜಾಗವಿದೆ. ಅಲ್ಲಿ ಟೀ ಕುಡಿಯೋಕೆ ಅಂತ ಎಲ್ಲೆಲ್ಲಿಂದಲೋ ಜನರು ಬರುತ್ತಾರೆ. ಆ ವಾತಾವರಣಕ್ಕೂ, ಆ ಟೀ ರುಚಿಗೂ ನಿಜಕ್ಕೂ ಅದ್ಭುತವಾಗಿರುತ್ತೆ. ಹಾಗಾದ್ರೆ ಆ ಜಾಗ ಯಾವುದು? ಅಲ್ಲಿ ಸಿಗೋ ಟೀ ಯಾವ್ದು ಅಂತ ಹೇಳ್ತಿವಿ. ಮುಂದೆ ಓದಿ.
ಬಾಯಿ ಚಪ್ಪರಿಸಿಕೊಂಡು ಕುಡಿಯೋ ಕಲ್ಲಡ್ಕ ಟೀ
ವ್ಹಾವ್ ಕ್ಯಾ ಭಾತ್ ಹೈ…ಕೆ.ಟೀ.ಕಾ ಸ್ಟೈಲ್ ಯೀ ಬಹುತೀ ಅಲಗ್ ಹೈ’ ಎಂದು ಬಾಯಿ ಚಪ್ಪರಿಸಿಕೊಂಡು ಈ ಟೀಯನ್ನ ಜನರು ಕುಡಿತಾರೆ. ಹೌದು ಈ ಟೀ ಅಂದ್ರೆ ಇಲ್ಲಿನ ಜನರು, ಇದ್ದ ಕೆಲಸವನ್ನ ಬಿಟ್ಟು ಹೋಗ್ತಾರೆ. ಯಾಕಂದ್ರೆ ಈ ಟೀ ಅಷ್ಟು ರುಚಿಯಾಗಿರುತ್ತೆ. ಇದನ್ನ ಕೆ.ಟೀ ಅಂತಲೂ ಕರೀತಾರೆ. ಅರ್ಧ ಟೀ ಅರ್ಧ ಹಾಲು ಇದು ಕೆ.ಟೀ ಯ ಸ್ಪೆಷಲ್ ಆಗಿದೆ. ಈ ಟೀ ಕುರಿತು ಇಡೀ ದೇಶವೇ ಮಾತಾಡುತ್ತೆ. ಯಾಕಂದ್ರೆ ಈ ಟೀ ಅಷ್ಟು ಅದ್ಭುತವಾಗಿರುತ್ತೆ. ಈ ಟೀ ಬಗ್ಗೆ ಯಾರನ್ನಾದ್ರೂ ಕೇಳುವ ಬದಲು, ನೀವೇ ಹೋಗಿ ಒಮ್ಮೆ ಕುಡಿದರೆ ಗೊತ್ತಾಗುತ್ತೆ ಅದರ ರುಚಿ ಏನು ಅಂತ. ನಿಜಕ್ಕೂ ನೀವು ಆ ಟೀಯನ್ನ ಸವಿದರೆ, ಆ ಜಾಗ ಬಿಟ್ಟು ಮತ್ತೆ ಬೇರೆ ಕಡೆ ಹೋಗಬೇಕು ಅಂತ ಅನಿಸೋದೇ ಇಲ್ಲ. ಆ ರೀತಿ ಮೈ ಮರೆತು ಅಲ್ಲೇ ಕುಳಿತುಬಿಡುತ್ತೀರಾ.
ಸುತ್ತಮುತ್ತ ಕರಾವಳಿಗೆ ಹೆಸರುವಾಸಿ ಈ ಕೆ.ಟೀ
ಹೌದು. ಈ ಟೀ ಸಿಗೋದು ಮಂಗಳೂರಿನ ಬಳಿ. ಮಂಗಳೂರಿನಿಂದ ಮಾಣಿಗೆ ಹೋಗುವ ರಸ್ತೆಯಲ್ಲಿ ಕಲ್ಲಡ್ಕ ಎಂಬ ಪುಟ್ಟ ಊರು ಸಿಗುತ್ತೆ. ಈ ಊರಿನಲ್ಲಿ ಶ್ರೀ ಲಕ್ಷ್ಮೀನಿವಾಸ್ ಹೋಟೆಲ್ ಇದೆ. ಈ ಹೋಟೆಲ್ ನಲ್ಲೆ ಈ ಟೀ ಸಿಗೋದು. ಆ ಕಾಲಕ್ಕೆ ಇದೊಂದು ಪುಟ್ಟ ಹೋಟೆಲ್. ಆದ್ರೆ ಈಗ ಈ ಹೋಟೆಲ್ ಬಗ್ಗೆ ಇಡೀ ಕರಾವಳಿಯೇ ಮಾತಾಡುತ್ತೆ.
ಹೆಸರು ಬಂದಿದ್ದಾದ್ರೂ ಹೇಗೆ
ಈ ಟೀ ಹೆಸರು ನಿಜಕ್ಕೂ ವಿಚಿತ್ರವಾಗಿದೆ. ಈ ಕಲ್ಲಡ್ಕ ಅಂದ್ರೆ ಏನು? ಈ ಹೆಸರನ್ನೇ ಏಕೆ ಇಟ್ಟರು ಅನ್ನೋ ಪ್ರಶ್ನೆಗಳು ನಮ್ಮ ತಲೆಯಲ್ಲಿ ಬರುತ್ತವೆ. ಇದೇ ಊರಿನಲ್ಲಿ ಲಕ್ಷ್ಮಿ ನಾರಾಯಣ ಹೊಳ್ಳ ಹಾಗೂ ಅವ್ರ ಪುತ್ರ ನರಸಿಂಹ ಹೊಳ್ಳ ಅಂತ ಇದ್ದರು. ಇವರೇ ಈ ಟೀ ಗೆ ಜನ್ಮದಾತರು. ಈ ಹೆಸರಿನ ಹಿಂದೆ ಬಹಳ ದೊಡ್ಡ ರಹಸ್ಯ ಇದೇ. ಲಕ್ಷ್ಮಿ ನಾರಾಯಣ ಹೊಳ್ಳರು 60ರ ದಶಕದಲ್ಲಿ ಹೋಟೆಲ್ ತೆರೆದಾಗ ಅಲ್ಲಿ ಕೆ.ಟೀ ಇರಲಿಲ್ಲ. ಆದರೆ ಇದೇ ಸಮಯದಲ್ಲಿ ಕೊಡಗಿನಿಂದ ಬರುತ್ತಿದ್ದ, ಕೆಳಗೂರು ಟೀ ಯನ್ನ ಬಳಸುತ್ತಿದ್ದರು. ಆಗ ಅಲ್ಲಿಗೆ ಒಬ್ಬ ಹಿರಿಯ ಗ್ರಾಹಕರು ಬರುತ್ತಾರೆ. ಬಂದು ಇವರು ಕೊಟ್ಟ ಟೀ ಕುಡಿಯುತ್ತಾರೆ. ಕುಡಿದ ಕೂಡಲೇ, ಅದರ ರುಚಿಗೆ ಮಾರು ಹೋಗಿ, ಏನ್ ಟೀ ನಪ್ಪಾ ಇದು ತುಂಬಾ ಚೆನ್ನಾಗಿದೆ. ಈ ಟೀ ಹೆಸರು ಏನು ಎಂದಾಗ, ಲಕ್ಷ್ಮಿ ನಾರಾಯಣ ಅವ್ರು ಹೇಳ್ತಾರೆ, ಆ ತರ ಹೆಸರು ಏನಿಲ್ಲ. ಬರೀ ಟೀ ಅಂತ. ಆಗ ಈ ಗ್ರಾಹಕರು ಬೇಡ, ಇದಕ್ಕೆ ಕಲ್ಲಡ್ಕ ಸ್ಪೆಷಲ್ ಟೀ ಅಂತ ಹೆಸರಿಡಿ ಎಂದು ಹೇಳಿದರು. ಅಂದಿನಿಂದ ಅದಕ್ಕೆ ಕಲ್ಲಡ್ಕ ಟೀ ಅನ್ನೋ ಹೆಸರು ಬಂತು. ಆದ್ರೆ ಬರಬರುತ್ತಾ, ಕಲ್ಲಡ್ಕ ಟೀ ಇಂದ ಕೆ.ಟೀ ಎಂದು ಪ್ರಸಿದ್ದಿಯಾಗಿದೆ.
ಕಲ್ಲಡ್ಕ ಟೀ ವಿಶೇಷತೆ
ಈ ಟೀ ವಿಶೇಷತೆ ಒಂದು ರೀತಿ ವಿಚಿತ್ರವಾಗಿದೆ. ಯಾಕಂದ್ರೆ ಟೀ ಅಂದ್ರೆ ನಾವೆಲ್ಲ ನೋಡಿರೋ ತರ, ಲೋಟದಲ್ಲಿ ಒಂದೇ ಬಣ್ಣ ಕಾಣುತ್ತೆ. ಆದರೆ ಈ ಕೆ.ಟೀ ನಲ್ಲಿ 3 ಬಣ್ಣ ಕಾಣುತ್ತೆ. ಮೇಲೆ ಹಾಲು ಹಾಗೂ ಟೀ ಮಿಶ್ರಣ ನೊರೆ, ಅದರ ಕೆಳಗೆ ಟೀ ನಂತರ ಅದರ ಕೆಳಗೆ ಹಾಲಿರುತ್ತೆ. ಆದ್ರೆ ಅವೆಲ್ಲ ನೋಡೋಕೆ ಹಂತ ಹಂತವಾಗಿ ಕಂಡರೂ ಟೇಸ್ಟ್ ಮಾತ್ರ ಪೂರ್ತಿ ಟೀ ಯದ್ದೇ ಆಗಿರುತ್ತೆ. ಹೌದು ಕೇಳುಗರಿಗೆ ಹಾಗೂ ನೋಡುಗರಿಗೆ ಇದು ವಿಚಿತ್ರ ಎನಿಸುತ್ತೆ. ಯಾಕಂದ್ರೆ ಎಲ್ಲಾ ಬೇರೆ ಬೇರೆ ರೀತಿ ಕಂಡರೆ ಅದು ಹೇಗೆ ಟೀ ಆಗುತ್ತೆ ಅಂತ. ಆದ್ರೆ ವಿಶೇಷತೆ ಇರೋದೇ ಅದರಲ್ಲಿ. ಇದೆಲ್ಲ ಬೇರೆ ಬೇರೆ ಕಂಡರೂ, ಸಂಪೂರ್ಣವಾಗಿ ಟೀಯಾಗಿ ಮಾರ್ಪಟ್ಟಿರುತ್ತದೆ. ಇದೇ ಈ ಟೀ ವಿಶೇಷವಾಗಿದೆ.
ಕಲ್ಲಡ್ಕ ಟೀ ಮಾಡುವ ವಿಧಾನ
ಇಷ್ಟು ರುಚಿಯಾಗೆ ಈ ಟೀ ಇರುತ್ತೆ. ಹಾಗಾದ್ರೆ ಬಳಸೋ ಸಾಮಗ್ರಿಗಳಾದರು ಏನು ಅನ್ನೋದು ಎಲ್ಲರಿಗೂ ಗೊಂದಲವಾಗಿರುತ್ತೆ. ಹಾಗಾದ್ರೆ ಆ ಸಾಮಗ್ರಿಗಳ ಲಿಸ್ಟ್ ಇಲ್ಲಿದೆ. ದಪ್ಪ ಹಾಲು. ಅದು ಊರಿನ ಹಾಲಾಗಿರಬಹುದು ಅಥವಾ ನಂದಿನಿಯ ಹಾಲಾಗಿದ್ದರೂ ಕೂಡ ಉತ್ತಮ. ಆದರೆ ಅದಕ್ಕೆ ಹಾಕುವ ನೀರಿನ ಪ್ರಮಾಣ ಮಾತ್ರ ಕಡಿಮೆ ಇರಬೇಕು. ಜೊತೆಗೆ ದಪ್ಪ ಡಿಕಾಕ್ಷನ್ ಹಾಗೂ ಸಕ್ಕರೆ ಇದ್ರೆ ಸಾಕು ಬಿಡಿ, ಬುರುಬುರು ನೊರೆಯ ಟೀ ರೆಡಿಯಾಗುತ್ತದೆ. ಆದರೆ ಇವರು ಉಪಯೋಗಿಸುವ ಟೀ ಪೌಡರ್ ನೇ ಉಪಯೋಗಿಸಬೇಕು. ಆಗ ಮಾತ್ರ ಅದು ಕಲ್ಲಡ್ಕ ಟೀ ಎನಿಸಿಕೊಳ್ಳುತ್ತದೆ. ಇಲ್ಲಿನ ಜನರು ಇದನ್ನ ಕೆಲವರು ಕಲ್ಲಡ್ಕ ಟೀ ಅಂತ ಕರೆದರೆ, ಇನ್ನೂ ಕೆಲವರು ರಿಮ್‌ಜಿಮ್ ಅಂತಲೂ ಕರೀತಾರೆ. ಆದರೆ ಹೆಚ್ಚಾಗಿ ಫೇಮಸ್ ಆಗಿರೋದು ಕಲ್ಲಡ್ಕ ಎಂದೇ. ಅಂದ್ರೆ ಕೆ.ಟೀ ಅಂತ.
ನಿಜಕ್ಕೂ ಈ ಟೀ ತುಂಬಾ ವಿಶೇಷ. ಈ ಟೀ ಹೇಗಿರುತ್ತೆ ಅಂತ ನಾವು ಕೇವಲ ಬಾಯಲ್ಲಿ ನಿಮಗೆ ಹೇಳಬಹುದು. ಆದ್ರೆ ನಾವೆಷ್ಟೇ ಹೇಳಿದರೂ, ರುಚಿ ಮಾತ್ರ ನಿಮಗೆ ಸಿಗಲ್ಲ. ಹಾಗಾಗಿ ಟೀ ರುಚಿ ನೋಡಬೇಕು ಅಂದ್ರೆ, ನೀವು ಈಗಲೇ ಕಲ್ಲಡ್ಕಕ್ಕೆ ಭೇಟಿ ನೀಡಿ.