ಈಗಿನ ಕಾಲದಲ್ಲಿ ರಜೆ ಸಿಕ್ರೆ ಸಾಕು ಆ ಊರು, ಈ ಊರು ಅಂತ ಸುತ್ತೋಕೆ ಶುರು ಮಾಡ್ತಾರೆ. ಯಾಕಂದ್ರೆ ಸಿಕ್ಕಿರೋ ರಜೆಯನ್ನ ಆರಾಮಾಗಿ ಕಳೀಬೇಕು ಅನ್ನೋದು ಎಲ್ಲರ ಆಸೆಯಾಗಿರುತ್ತೆ. ಹಾಗಾಗಿ ರಜೆಯನ್ನ ಯಾರು, ವೇಸ್ಟ್ ಮಾಡಿಕೊಳ್ಳೋದಿಲ್ಲ. ಊರೂರು ಸುತ್ಬೇಕು ಅಂತೇನೋ ಅನ್ಕೋತಾರೆ. ಆದ್ರೆ ಎಲ್ಲರೂ ಒಂದೇ ಮಾರ್ಗವನ್ನ ಆಯ್ಕೆ ಮಾಡೋಲ್ಲ. ಒಬ್ಬೊಬ್ಬರದು ಒಂದೊಂದು ರೀತಿ ಆಸೆಯಿರುತ್ತೆ. ಅಂದ್ರೆ ಒಬ್ಬರಿಗೆ ಐತಿಹಾಸಿಕ ಸ್ಟಳಗಳು ಇಷ್ಟ ಆದ್ರೆ, ಇನ್ನೂ ಕೆಲವರಿಗೆ ಟ್ರಕ್ಕಿಂಗ್ ಹೋಗೋದು, ಕಾಡು – ಮೇಡು ಅಲೆಯೋದು ಅಂದ್ರೆ ತುಂಬಾ ಇಷ್ಟ. ಇನ್ನೂ ಕೆಲವ್ರು ನಮ್ಮ ಅಜ್ಜಿ ಊರು, ದೊಡ್ಡಪ್ಪ, ಚಿಕ್ಕಮ್ಮ ಊರು ಅಂತ ಹೋಗ್ತಾರೆ. ಆದ್ರೆ ಇನ್ನೂ ಕೆಲವರಂತೂ ಟೈಮ್ ಪಾಸ್ ಮಾಡೋ ಜಾಗಗಳನ್ನ ನೋಡ್ತಾರೆ. ಇನ್ನೂ ಕೆಲವರಿಗೆ ವಿಶೇಷತೆ ಬಗ್ಗೆ ತಿಳ್ಕೊಳೋಕೆ ತುಂಬಾ ಆಸೆ ಇರುತ್ತೆ. ಹಾಗಾಗಿ ಅವರು ವಿಸ್ಮಯಕಾರಿ ಜಾಗಗಳನ್ನ ಹುಡುಕುತ್ತಾ ಹೋಗ್ತಾರೆ.
ಅಂತಹ ವಿಸ್ಮಯಕಾರಿ ಸ್ಥಳಗಳು ಹಾಗೂ ದೇವಸ್ಥಾನಗಳಿಗೆ ಭೇಟಿ ನೀಡೋಕೆ ತುಂಬಾ ಆಸೆ ಇರುತ್ತೆ. ಆದ್ರೆ ಅಂತ ಸ್ಥಳಗಳು ಎಲ್ಲಿವೆ ಅನ್ನೋದು ದೊಡ್ಡ ಗೊಂದಲವಾಗಿರುತ್ತೆ. ಹಾಗಾದ್ರೆ ನಾವು ನಿಮಗೆ ಆ ಸ್ಥಳಗಳ ಬಗ್ಗೆ ತಿಳಿಸ್ತೀವಿ. ನೀವು ಅಂತ ಸ್ಥಳಗಳನ್ನ ನೋಡೋಕೆ ಯಾವ್ದೋ ರಾಜ್ಯಕ್ಕೆ ಹೊರ ದೇಶಕ್ಕೆ ಹೋಗೋ ಅವಶ್ಯಕತೆ ಇಲ್ಲ. ಯಾಕಂದ್ರೆ, ನಮ್ಮ ಕರ್ನಾಟಕದಲ್ಲೇ ಅದ್ಭುತವಾದ ಸ್ಥಳಗಳಿವೆ.
ಕರ್ನಾಟಕದಲ್ಲೇ ಇವೆ ವಿಸ್ಮಯಕಾರಿ ಸ್ಥಳಗಳು
ಹಾಲು ರಾಮೇಶ್ವರ
ಚಿತ್ರದುರ್ಗ ಜಿಲ್ಲೆ, ಹೊಸದುರ್ಗ ತಾಲೂಕಿನಿಂದ ೧೫ ಕಿಮೀ ದೂರದಲ್ಲಿ ಈ ಹಾಲು ರಾಮೇಶ್ವರ ಸಿಗುತ್ತೆ. ಈ ದೇವಾಲಯದಲ್ಲಿ ರಾಮೇಶ್ವರ ಮೂಲ ದೇವರು. (ರಾಮೇಶ್ವರ – ಶಿವ) ಈ ದೇವಸ್ಥಾನದಲ್ಲಿ ವಿಶೇಷತೆ ಏನು ಅಂದ್ರೆ, ಈ ದೇವಾಲಯದ ಗರ್ಭಗುಡಿಯಲ್ಲಿ ಒಂದು ಹೊಂಡವಿದೆ. ಹೊಂಡದ ಮೇಲೆ ರಾಮೇಶ್ವರ ದೇವರ ವಿಗ್ರಹವಿದೆ. ಯಾರಾದರೂ, ಏನಾದ್ರು ವರ ಕೇಳಬೇಕು ಅಂದ್ರೆ ಆ ಹೊಂಡದ ಮುಂದೆ ಕೂತು ಕೇಳ್ತಾರೆ. ನಾವು ನೋಡಿರೋ ಪ್ರಕಾರ ವರ ಕೇಳೋದು ಅಂದ್ರೆ, ನಮಗೆ ಬೇಕಾದ್ದನ್ನ ದೇವರ ಮುಂದೆ ಕೇಳ್ತಿವಿ, ಅದಕ್ಕೆ ದೇವರು ಎಡಗಡೆ ಅಥವಾ ಬಲಗಡೆ ಹೂವನ್ನ ಬೀಳಿಸುತ್ತೆ ಅನ್ನೋದು ಎಲ್ಲೆಡೆ ಇರೋ ವಾಡಿಕೆ. ಆದ್ರೆ ಇಲ್ಲಿ ಪ್ರಸಾದ ಸಿಗೋದು ಬೇರೆ ರೀತಿಯಲ್ಲಿ. ಹೌದು. ಇಲ್ಲಿ ಯಾರಾದ್ರೂ ವರ ಕೇಳಿದ್ರೆ, ಅದು ನೆರವೇರುತ್ತೆ ಅಂದ್ರೆ, ನೀರಿನಿಂದ ಹಾಲು, ಬೆಣ್ಣೆ, ತೊಟ್ಟಿಲು, ಊದುಬತ್ತಿ, ವೀಳ್ಯದ ಎಲೆ ಈ ರೀತಿ ತೇಲಿ ಬರುತ್ತದೆ. ಇನ್ನೂ ಬೇಡಿಕೆ ನೆರವೇರೋಲ್ಲ ಅಂದ್ರೆ ಇಜ್ಜಿಲು ನೀರಿನಿಂದ ತೇಲಿ ಬರುತ್ತೆ. ಈರೀತಿ ವರ ಪ್ರಸಾದ ನೀಡೋದು ಈ ದೇವಾಲಯದ ವಿಶೇಷತೆಯಾಗಿದೆ. ಈ ಸ್ಥಳಕ್ಕೆ ಅನೇಕರು ಭೇಟಿ ನೀಡ್ತಾರೆ. ಹೊರ ರಾಜ್ಯಗಳಿಂದಲೂ ಸಹ ಬರುತ್ತಾರೆ.
ಅಜ್ಜಪ್ಪನಹಳ್ಳಿ
ತುಮಕೂರು ಜಿಲ್ಲೆ, ಮಧುಗಿರಿ ತಾಲೂಕಿನಲ್ಲಿರುವ ಒಂದು ಪುಟ್ಟ ಹಳ್ಳಿ ಈ ಅಜ್ಜಪ್ಪನಹಳ್ಳಿ.. ಇದು ಒಂದು ಚಿಕ್ಕ ಗ್ರಾಮವಾದರೂ ಇಲ್ಲಿ ನಡೆಯುತ್ತಿರುವ ಪವಾಡಕ್ಕೆ ಸುತ್ತ ಮುತ್ತ ಹೆಸರುವಾಸಿಯಾಗಿದೆ. ಹೌದು. ಇಲ್ಲಿನ ನೆಚ್ಚಿನ ದೇವರು ಶಿವ. ಇಲ್ಲಿರುವ ಮುಖ್ಯ ದೇವಾಲಯವು ಸಹ ಶಿವನ ದೇವಾಲಯ. ಇಲ್ಲಿ ಪ್ರತಿ ವರ್ಷ ಶಿವರಾತ್ರಿ ಹಬ್ಬವನ್ನ ಬಹಳ ಅದ್ದೂರಿಯಾಗಿ ಆಚರಿಸ್ತಾರೆ. ಯಾಕಂದ್ರೆ ಇಲ್ಲಿ ಪ್ರತಿ ವರ್ಷ ಶಿವರಾತ್ರಿಗೂ ಒಬ್ಬ ಹೊಸ ಶಿವ ಹುಟ್ಟಿಕೊಳ್ಳುತ್ತಾನೆ. ಅಂದ್ರೆ ಈ ದೇವಾಲಯದಲ್ಲಿ ಶಿವರಾತ್ರಿ ಸಮಯ ಬಂತು ಅಂದ್ರೆ ದೇವಾಲಯದಲ್ಲಿ ಹೊಸ ಲಿಂಗ ಭೂಮಿಯಿಂದ ಉತ್ಪತ್ತಿಯಾಗುತ್ತೆ. ಆ ದಿನ ಹೊಸ ಲಿಂಗಕ್ಕೆ ಪೂಜೆ ಮಾಡ್ತಾರೆ. ಇಲ್ಲಿ ಪ್ರತಿ ವರ್ಷದಂತೆ ಒಂದೊಂದು ಲಿಂಗ ಉತ್ಪತ್ತಿಯಾಗ್ತಿರೋದ್ರಿಂದ, ಸುಮಾರು 1000ಕ್ಕೂ ಹೆಚ್ಚು ಲಿಂಗಗಳಿವೆ. ಇದೆ ಇಲ್ಲಿನ ವಿಶೇಷವಾಗಿದೆ.
ಶೆಟ್ಟಿ ಹಳ್ಳಿ ಚರ್ಚ್
ಹಾಸನದ ಬಳಿಯಿರುವ ಶೆಟ್ಟಿ ಹಳ್ಳಿ ಚರ್ಚ್ ಒಂದು ವಿಸ್ಮಯಕಾರವಾದ ಹಾಗೂ ತೊರೆದ ಪ್ರದೇಶವಾಗಿದೆ. ಅದರಲ್ಲೂ ವಿಶೇಷವಾಗಿ ಇಲ್ಲಿರುವ ಚರ್ಚ್ ಒಂದು ವಿಸ್ಮಯಕಾರಿ ಪ್ರವಾಸಿ ಆಕರ್ಷಣೆಯಾಗಿದೆ. 1860ರಲ್ಲಿ ಪ್ರೆಂಚರಿಂದ ಈ ಚರ್ಚ್ ನಿರ್ಮಾಣವಾಯಿತು. 1960ರಲ್ಲಿ ತುಂಬಿ ಹರಿಯುವ ಹೇಮಾವತಿ ನದಿಯ ನೀರನ್ನು ಒಳ್ಳೆಯ ಉದ್ದೇಶಕ್ಕೆ ಬಳಸಿಕೊಳ್ಳುವ ನಿಟ್ಟಿನಲ್ಲಿ ಇಲ್ಲಿ ಜಲಾಶಯ ನಿರ್ಮಾಣ ಮಾಡಲಾಯಿತು. ಪರಿಣಾಮ ಇಲ್ಲಿದ್ದ ಜನರು ಗ್ರಾಮವನ್ನ ಬಿಟ್ಟು ಬೇರೆ ಕಡೆ ಹೋಗಬೇಕಾಯಿತು. ಆದರೆ ಈ ಚರ್ಚ್ ಮಾತ್ರ ಇನ್ನೂ ಅಲ್ಲೇ ಉಳಿದಿದೆ. ಇದರ ವಿಶೇಷತೆ ಏನು ಅಂದ್ರೆ, ಈ ಚರ್ಚ್ ಬಹಳ ಎತ್ತರವಾಗಿದೆ. ಆದರೆ ಮಳೆಗಾಲದಲ್ಲಿ ಹೇಮಾವತಿ ತುಂಬಿದಾಗ ಈ ಚರ್ಚ್ ನೀರಿನಲ್ಲಿ ಮುಳುಗುತ್ತದೆ. ಅಷ್ಟು ಎತ್ತರದ ಚರ್ಚ್ ಮುಳುಗುತ್ತದೆ ಅಂದ್ರೆ ಇಲ್ಲಿ ಅದೇ ಆಶ್ಚರ್ಯ. ಮತ್ತೆ ನೀರು ಕಡಿಮೆಯಾದಂತೆ ಚರ್ಚ್ ಮತ್ತೆ ಗೋಚರಿಸುತ್ತದೆ. ಈ ಸ್ಥಳವನ್ನ ನೋಡಲು ಜನರು ಅನೇಕ ಕಡೆಗಳಿಂದ ಬರುತ್ತಾರೆ.
ಸಾಧಲಿ
ಚಿಕ್ಕಬಳ್ಳಾಪುರದ ಬಳಿ ಈ ಸಾಧಲಿ ಎಂಬ ಗ್ರಾಮ ಬರುತ್ತೆ. ಈ ಊರನ್ನ ಮೊದಲು ಯಾರು ಅಷ್ಟಾಗಿ ಕೇಳಿರಲಿಲ್ಲ. ಆದ್ರೆ ಈಗ ಊರಿಗೆ ಸಾವಿರಾರು ಜನ ಭಕ್ತರು ಬರುತ್ತಾರೆ. ಹಾಗಾದ್ರೆ ಈ ಊರಿನಲ್ಲಿ ಅಂತದ್ದು ಏನಿದೆ ಅಂತೀರಾ ನೀವೇ ನೋಡಿ. ಈ ಊರಿನಲ್ಲಿ ಪ್ರಸಿದ್ಧಿಯಾಗಿರೋ ದೇವರು ಅಂದ್ರೆ ಅದು ಸಾಧಲಮ್ಮ. ಈ ದೇವಿಯ ದೇವಾಲಯದಲ್ಲಿ ಯಾವಾಗಲು ದೀಪ ಉರಿಯುತ್ತಲೇ ಇರುತ್ತೆ. ಯಾರಾದ್ರೂ ಹೋಗಿ ದೀಪ, ಹಚ್ಚಲಿ ಅಥವಾ ಬಿಡಲಿ, ದೀಪ ಮಾತ್ರ ಉರಿಯುತ್ತಲೇ ಇರುತ್ತೆ. ಯಾರಾದ್ರೂ ಕಷ್ಟದಲ್ಲಿರೋರು, ರಾತ್ರಿ ಸಮಯದಲ್ಲಿ ಆ ದೀಪ ಹಚ್ಚಿರೋ ಸ್ಥಳಕ್ಕೋಗಿ, ದೇವಿಯನ್ನ ಬೇಡಿಕೊಂಡರೆ, ಇದ್ದಕ್ಕಿದ್ದಂತೆ ಆ ಕಷ್ಟ ಅಲ್ಲೇ ಮುಗಿದು ಹೋಗುತ್ತೆ. ಇದೆ ಈ ದೇವಿಯ ಶಕ್ತಿ ಆಗಿದೆ. ಹಾಗಾಗಿ ಈ ದೇವಿಯನ್ನ ಕಾಣಲು ಅನೇಕ ಕಡೆಗಳಿಂದ ಜನರು ಬರುತ್ತಾರೆ.
ಉಕ್ಕಡಗಾತ್ರಿ
ದಾವಣಗೆರೆ ಜಿಲ್ಲೆಯ ಬಳಿ ಈ ಉಕ್ಕಡಗಾತ್ರಿ ಬರುತ್ತೆ. ಉಕ್ಕಡಗಾತ್ರಿ ಅಂದ್ರೆ ಮೊದಲು ಎಲ್ಲರ ನೆನೆಪಿಗೆ ಬರೋದು, ದೆವ್ವ ಬಿಡಿಸೋದ್ರಲ್ಲಿ ಫೇಮಸ್ ಅಂತ. ಹೌದು. ಇಲ್ಲಿನ ಜನರ ಆರಾಧ್ಯ ದೇವರು ಕರಿಬಸವೇಶ್ವರ (ಅಜ್ಜಯ್ಯ). ಇಲ್ಲಿ ಅಮಾವಾಸ್ಸೆ ಸಮಯದಲ್ಲಿ ಕಾಲಿಡೋಕೆ ಆಗಲ್ಲ. ಯಾಕಂದ್ರೆ ಬರೀ ದೆವ್ವಗಳ ಆರ್ಭಟವಿರುತ್ತೆ. ಈ ದೇವರು ದೆವ್ವಗಳ ಪಾಲಿಗೆ ಮಹಾನ್ ಶಕ್ತಿ. ಹಾಗಾಗಿ ಇಲ್ಲಿಗೆ ದಿನಬೆಳಗಾದ್ರೆ ಸಾವಿರಾರು ಜನ ಭಕ್ತಾಧಿಗಳು ಬರ್ತಾರೆ. ದೆವ್ವ ಇಲ್ಲ ಅದೆಲ್ಲ ಬರೀ ಸುಳ್ಳು ಅನ್ನೋರು ಇಲ್ಲಿಗೆ ಒಂದು ಸಾರಿ ಹೋದ್ರೆ ಗೊತ್ತಾಗುತ್ತೆ. ದೆವ್ವ ಅಂದ್ರೆ ಹೇಗೆ, ಏನು ಅಂತ. ಎಲ್ಲೋ ದೂರದಿಂದ ಬಂದು ಅಜ್ಜಯ್ಯನ ದರ್ಶನ ಪಡೆಯೋಕೆ ಇದು ಹೇಳಿ ಮಾಡಿಸಿದ ಜಾಗ.
ಚಂದ್ರಗಿರಿ ಬೆಟ್ಟ
ಈ ಚಂದ್ರಗಿರಿ ಬೆಟ್ಟವನ್ನ ಸಾಕಷ್ಟು ಮಂದಿ ನೋಡಿದ್ದಾರೆ ಹಾಗು ಕೇಳಿದ್ದಾರೆ. ಆದರೆ ಇಲ್ಲಿನ ವಿಶೇಷತೆ ಬಗ್ಗೆ ಕೆಲವರಿಗೆ ಮಾತ್ರ ತಿಳಿದಿದೆ. ಹೌದು ಹಾಸನ ಜಿಲ್ಲೆ, ಶ್ರವಣಬೆಳಗೊಳದ ಬಳಿಯೇ ಈ ಚಂದ್ರಗಿರಿ ಬೆಟ್ಟ ಬರೋದು. ಇಲ್ಲಿನ ವಿಶೇಷತೆ ಏನು ಅಂದ್ರೆ, ಈ ಬೆಟ್ಟದ ಮೇಲೆ ರಾಜರು ಕಟ್ಟಿದ ಮನೆಗಳು, ಕೋಟೆಗಳು, ದೇವಾಲಯಗಳು ಈಗಲೂ ಇವೆ. ಆದ್ರೆ ಆ ಕೋಟೆಗೆ ಕಾವಲಾಗಿ ಮಾತ್ರ ಯಾವೊಬ್ಬ ಮನುಷ್ಯರು ಇಲ್ಲ. ಯಾಕಂದ್ರೆ ಇಲ್ಲಿನ ಕಲ್ಲುಗಳು ಹಾಗೂ ಶಿಲೆಗಳೇ ಅದನ್ನ ಕಾಯುತ್ತಿದ್ದಾವೆ. ರಾಜರು ಕಟ್ಟಿದ ಜಾಗಗಳು ಅಂದ್ರೆ, ಅಲ್ಲೆಲ್ಲ ನಗ, ನಾಣ್ಯ ಇರೋದು ಕಾಮನ್ ಅಂತಾರೆ. ಇಲ್ಲೂ ಸಹ ಅದೇ. ಆದ್ರೆ ಇಲ್ಲಿ ಮನುಷ್ಯನಿಗಾಗಲಿ ಅಥವಾ ಯಾವುದೇ ವಸ್ತುಗಳಿಗೆ ತೊಂದರೆಯಾದರೆ , ಇಲ್ಲಿನ ಶಿಲೆಗಳು ಹಾಗೂ ಸ್ತಂಭದ ಮೇಲಿರೋ ಬ್ರಹ್ಮ ದೇವರು ಕೂಗಿಕೊಳ್ಳುವ ಶಬ್ದ ಬರುತ್ತದೆ. ಈಗಲೂ ಸಹ ಇದು ಇಲ್ಲಿ ವಾಡಿಕೆಯಲ್ಲಿದೆ. ಇಲ್ಲಿನ ಜನರು ಅದನ್ನ ಸಂಪೂರ್ಣವಾಗಿ ನಂಬಿದ್ದಾರೆ.
ಮಾಸ್ತಿ
ಇದು ಕೋಲಾರ ಜಿಲ್ಲೆ ಮಾಲೂರು ತಾಲೂಕಿನ ಬಳಿ ಬರುವಂತಹ ಜಾಗ. ಇಲ್ಲಿ ಯಾವಾಗಲು ಬಿಸಿಲಿನ ವಾತಾವರಣ ಇರೋದ್ರಿಂದ ಜನರು ಅದರಿಂದ ಬಳಲಿ ಬೆಂಡಾಗಿದ್ದಾರೆ. ಜೊತೆಗೆ ಚರ್ಮ ರೋಗಗಳು, ಹಾಗೂ ತನ್ನು ಹೆಚ್ಚಾಗಿ ಕಾಣಿಸಿಕೊಳ್ಳುತ್ತೆ. ಇಂತ ಸಂದರ್ಭದಲ್ಲಿ ಇವರಿಗೆ ಏನು ಮಾಡಬೇಕು ಅಂತ ಗೊತ್ತಾಗಲ್ಲ. ಆಗ ಇಲ್ಲಿ ಒಂದು ಹೊಂಡ ಉತ್ಪತ್ತಿಯಾಗುತ್ತೆ. ಆಗ ಯಾರೋ ಒಬ್ಬರು ಬಾಯಾರಿಕೆ ಅಂತ ಆ ನೀರನ್ನ ಕುಡಿತಾರೆ. ಆಗ ಅವರಿಗಿದ್ದ ಚರ್ಮ ರೋಗ ನಿವಾರಣೆಯಾಗುತ್ತೆ. ಈಗಲೂ ಸಹ ಅಲ್ಲಿನ ಜನರು ಕುಡಿಯೋಕಾಗ್ಲಿ, ಕಾಯಿಲೆಗಾಗಲಿ ಅದೇ ನೀರನ್ನೇ ಬಳಸ್ತಿದ್ದಾರೆ. ಇದೇ ಇಲ್ಲಿನ ವಿಶೇಷವಾಗಿದೆ.
ಮೈಲಾರ ಲಿಂಗೇಶ್ವರ
ಬಳ್ಳಾರಿ ಜಿಲ್ಲೆ, ಹೂವಿನ ಹಡಗಲಿ ತಾಲೂಕಿನಲ್ಲಿ ಬರೋದೇ ಈ ಮೈಲಾರ ಲಿಂಗೇಶ್ವರ. ಹೆಸರೇ ಹೇಳುವ ಹಾಗೆ ಇಲ್ಲಿ ಮೈಲಾರ ಲಿಂಗೇಶ್ವರ ಗ್ರಾಮ ದೇವರು. ಇಲ್ಲಿ ಯಾವಾಗ್ಲೂ ಒಂದು ವಿಚಿತ್ರ ಎದುರಾಗುತ್ತೆ. ಅದೇನಪ್ಪ ಅಂದ್ರೆ, ಇಲ್ಲಿನ ಉತ್ಸವ ಮೂರ್ತಿಯನ್ನ ಪ್ರತಿದಿನ ಮೆರವಣಿಗೆ ಮಾಡಿ, ನಂತರ ಒಂದು ಹೆಣ್ಣಿನ ದೇವರು ಇರೋ ಕೊಠಡಿಯಲ್ಲಿ ಬಿಡುತ್ತಾರೆ. ಅದೇನೋ ಅಲ್ಲಿನ ನಂಬಿಕೆ ಪ್ರಕಾರ ಆ ದೇವರಿಗೆ ಅಂದಿನಿಂದಲೂ, ಆ ಹೆಣ್ಣು ದೇವರ ಮೇಲೆ ಮನಸ್ಸು ಎಂದು ನಂಬಿದ್ದಾರೆ. ಹಾಗಾಗಿ ರಾತ್ರಿ ಆಯಿತು ಅಂದ್ರೆ ಆ ಕೊಠಡಿಯನ್ನ ಮೊದಲ ರಾತ್ರಿಗೆ ರೆಡಿ ಮಾಡಿದಂತೆ ಮಾಡಿರುತ್ತಾರೆ. ಹೂ, ಹಣ್ಣು, ಎಲೆ ಅಡಿಕೆ ಎಲ್ಲವನ್ನು ಇಟ್ಟಿರ್ತಾರೆ. ಆದ್ರೆ ಬೆಳಿಗ್ಗೆ ಆಗೋ ಅಷ್ಟ್ರಲ್ಲಿ, ಅಲ್ಲಿದ್ದ ಹಣ್ಣು, ಎಲೆ ಅಡಿಕೆ ಎಲ್ಲವು ತಿಂದು ಖಾಲಿಯಾಗಿರುತ್ತೆ. ಎಲೆ ಅಡಿಕೆಯನ್ನ ದೇವರೇ ತಿನ್ನುತ್ತದೆ ಎಂದು ಇಲ್ಲಿನ ಜನರ ನಂಬಿಕೆಯಾಗಿದೆ. ಇದು ಇಲ್ಲಿನ ವಿಶೇಷವಾಗಿದೆ.
ಈ ರೀತಿ ನಮ್ಮಲ್ಲೇ ಬಹಳ ವಿಶೇಷತೆಯನ್ನ, ಹಾಗೂ ಶಕ್ತಿಯನ್ನ ಹೊಂದಿರುವ ದೇವರು, ಹಾಗೂ ಸ್ಥಳಗಳಿವೆ. ರಜೆಗಳನ್ನ ಆರಾಮಾಗಿ ಕಳೀಬೇಕು ಅನ್ಕೊಂಡಿರೋರು ಇಂತ ಸ್ಥಳಗಳಿಗೆ ಭೇಟಿ ನೀಡಿದ್ರೆ, ವಿಸ್ಮಯಗಳನ್ನೂ ನೋಡಬಹುದು, ದೇವರ ದರ್ಶನವನ್ನೂ ಪಡೆಯಬಹುದು ಹಾಗೆ ರಜೆಯನ್ನ ಆರಾಮಾಗಿ ಮುಗಿಸಬಹುದು.