ಅದೋ ಅಲ್ಲಿ ನೋಡು ಮಗು. ಮುಂದೆ ನೀನು ಕೂಡ ಅವರಂತೆ ಆಗಬೇಕು ಅಂತ ಕೆಲವರನ್ನ ತೋರಿಸಿ ತಮ್ಮ ತಂದೆ, ತಾಯಿ ಹೇಳ್ತಾರೆ. ಕೆಲವರು ಆ ವ್ಯಕ್ತಿಯನ್ನ ಕುರಿತು ಹೇಳಿದ್ರೆ, ಇನ್ನು ಕೆಲವರು ಆ ವ್ಯಕ್ತಿಯ ಹುದ್ದೆ ನೋಡಿ ಹೇಳಿರ್ತಾರೆ. ಹೌದು. ಕೆಲವೊಂದು ವ್ಯಕ್ತಿಗೆ, ವ್ಯಕ್ತಿತ್ವಕ್ಕೆ ಹಾಗು ಆ ಹುದ್ದೆಗೆ ಅದರದ್ದೇ ಆದ ಬೆಲೆ ಇರುತ್ತೆ. ಕೋಟಿ ಇದ್ದರೂ ನಮ್ಮಿಂದ ಅದನ್ನ ಪಡೆಯಲು ಆಗೋಲ್ಲ. ಒಂದು ವೇಳೆ ನಾವು ಆ ಹುದ್ದೆಯನ್ನ ಪಡೆಯಬಹುದು. ಪಡೆದರೂ ಜನರ ಮನಸ್ಸನ್ನ ಗೆಲ್ಲೋಕೆ ಆಗಲ್ಲ.
ಹೌದು. ಈ ರೀತಿ ಜನರ ಮನಸ್ಸನ್ನ ಅತೀ ಬೇಗನೆ ಗೆದ್ದವರು ನಮ್ಮಲ್ಲಿ ಬಹಳಷ್ಟು ಮಂದಿ ಇದ್ದಾರೆ. ಅವರೆಲ್ಲ ಕೋಟಿ ಸಂಪಾದನೆ ಮಾಡಿರೋರಲ್ಲ. ಒಂದು ಕಾಲದಲ್ಲಿ ರೂಪಾಯಿಗಳನ್ನೇ ನೋಡದವರು ಈಗ, ಎಲ್ಲರೂ ಮೂಗಿನ ಮೇಲೆ ಬೆರಳಿಟ್ಟು ನೋಡುವಂತೆ ಮಾಡಿದ್ದಾರೆ. ಅದು ಅವರ ಛಲ. ಏನಿವ್ರು, ಯಾರ್ ಬಗ್ಗೆನೋ ಮಾತಾಡ್ತಿದ್ದಾರೆ , ಆದ್ರೆ ಯಾರ ಬಗ್ಗೆ ಅಂತ ಗೊತ್ತಾಗ್ತಿಲ್ಲ ಅನ್ಕೊಂಡ್ರ. ನಮ್ಮ ಈ ಸ್ಟೋರಿಯ ಹೀರೊ ಬೇರೆ ಯಾರು ಅಲ್ಲ. ನಮ್ಮ ಸಿಲಿಕಾನ್ ಸಿಟಿಯ ಯುವಕರನ್ನೆಲ್ಲ, ಮಾರು ಹೋಗುವಂತೆ ಮಾಡಿರೋ ನಗರದ ಪೊಲೀಸ್ ಅಧಿಕಾರಿ, ರವಿ ಡಿ.ಚನ್ನಣ್ಣವರ್.
ರವಿ ಡಿ. ಚನ್ನಣ್ಣನವರ್. ಈ ಹೆಸರನ್ನ ಯಾರು ಕೇಳಿಲ್ಲ ಹೇಳಿ. ಎಲ್ಲರಿಗೂ ಇವರು ಚಿರಪರಿಚಿತರು. ಹೌದು. ಇವರನ್ನ ಗುರುತಿಸದೆ ಇರೋರೆ ಇಲ್ಲ. ಇವರು ಎಲ್ಲರ ಮನೆ ಮನದಾಳದಲ್ಲಿ ತಲುಪಿರುವ ವ್ಯಕ್ತಿ.. ಇಷ್ಟು ಬೇಗ ಒಬ್ಬ ವ್ಯಕ್ತಿ, ಹೇಗೆ ಇಷ್ಟೊಂದು ಜನರನ್ನ ಗೆಲ್ಲೋಕೆ ಸಾಧ್ಯ ಅಂತ ಯೋಚನೆ ಮಾಡ್ಬೇಡಿ.. ಈ ಸಾಧನೆ ಒಂದೆರಡು ದಿನದ್ದಲ್ಲ.. ಇವರು ಇದೇ ರೀತಿ ಬದುಕಬೇಕು ಅಂತ ನಿರ್ಧಾರ ಮಾಡಿ, ಚಿಕ್ಕ ವಯಸ್ಸಿನಿಂದಲೂ ಶ್ರಮ ವಹಿಸಿ ದುಡಿದು ಈಗ ಈ ಹಂತಕ್ಕೆ ತಲುಪಿದ್ದಾರೆ..
ಬಾಲ್ಯ ಜೀವನ
ರವಿ ಚನ್ನಣ್ಣವರ್ ಅವರು ಜುಲೈ 23-1985ರಲ್ಲಿ ಗದಗ ತಾಲೂಕಿನ ನೀಲಗುಂದ ಗ್ರಾಮದಲ್ಲಿ ಜನಿಸಿದರು. ಇವರದ್ದು ಒಂದು ಕೃಷಿ ಕುಟುಂಬ. ತಂದೆ ಧ್ಯಾಮಪ್ಪ ಚನ್ನಣ್ಣನವರ್, ತಾಯಿ ರತ್ನಮ್ಮ. ಇವರದ್ದು ಒಂದು ಕೃಷಿ ಕುಟುಂಬವಾದ್ದರಿಂದ, ಹೆಚ್ಚಾಗಿ ಕೃಷಿ ಕಡೆ ಒಲವು ತೋರಿಸುತ್ತಿದ್ದರು. ತನ್ನ ತಂದೆ ಜೊತೆ ತೋಟಕ್ಕೆ ಹಾಗೂ ಹೊಲಕ್ಕೆ ಹೋಗಿ ಚಿಕ್ಕ, ಪುಟ್ಟ ಕೆಲಸಗಳನ್ನ ಮಾಡ್ತಿದ್ರು. ಜೊತೆಗೆ ಕೃಷಿ ವ್ಯವಸಾಯದ ಬಗ್ಗೆ ಕೆಲವು ವಿಷಯಗಳನ್ನ ತಿಳಿದುಕೊಳ್ತಿದ್ರು.
ವಿದ್ಯಾಭ್ಯಾಸ
ಮೊದಲು ಇವರು ಗದಗ ತಾಲೂಕಿನ ನೀಲಗುಂದ ಸರ್ಕಾರಿ ಶಾಲೆಯಲ್ಲಿ ತಮ್ಮ ಆರಂಭಿಕ ಶಿಕ್ಷಣ ಮಾಡಿದರು. ನಂತರ ಗದಗದಲ್ಲಿ ಪದವಿ ಪೂರ್ವ ಶಿಕ್ಷಣ ಮಾಡಿ, ಧಾರವಾಡದ ಕರ್ನಾಟಕ ಆರ್ಟ್ಸ್ ಕಾಲೇಜಿನಲ್ಲಿ ಬಿ.ಎ ಪಡೆದರು. ಅಲ್ಲಿಂದ ಮೇ 2007ರಲ್ಲಿ ಐಎಎಸ್ ಪರೀಕ್ಷೆಯ ತರಭೇತಿಯನ್ನು ಹೈದರಾಬಾದ್ ನಲ್ಲಿ ಮುಗಿಸಿದರು. ನಂತರ 2008ರಲ್ಲಿ ಯೂನಿಯನ್ ಪಬ್ಲಿಕ್ ಕಮಿಷನ್ ಸಿವಿಲ್ ಸರ್ವಿಸಸ್ ಪರೀಕ್ಷೆಯ ಪ್ರಥಮ ಪ್ರಯತ್ನದಲ್ಲಿ 703ನೇ ಸ್ಥಾನ ಪಡೆದರು.
ತನ್ನ ವಿದ್ಯಾಭ್ಯಾಸದ ಸಮಯದಲ್ಲಿ ವೈಯಕ್ತಿಕ ಕಾರಣಗಳು ಹಾಗೂ ಕೌಂಟುಬಿಕ ತೊಂದರೆಗಳಿದ್ದಿದ್ದರಿಂದ ಅವರು ಬೇರೆ, ಬೇರೆ ಚಿಕ್ಕ ಪುಟ್ಟ ಕೆಲಸ ಮಾಡಲು ಪ್ರಾರಂಭಿಸಿದರು. ಇವರು ತಮ್ಮ ಜವಾಬ್ದಾರಿಗಳನ್ನ ನಿಭಾಯಿಸಲು ನ್ಯೂಸ್ ಪೇಪರ್ ಸಹ ಮಾರಿದ್ದುಂಟು. ಅರೆಕಾಲಿಕ ಕೆಲಸ ಮಾಡಿಕೊಂಡು, ತಮ್ಮ ಜೀವನ ಹಾಗೂ ವಿದ್ಯಾಭ್ಯಾಸ ಎರಡನ್ನೂ ನಿಭಾಯಿಸಿಕೊಳ್ತಿದ್ರು. ದಕ್ಷ ಪೊಲೀಸ್ ಅಧಿಕಾರಿಯಾಗಬೇಕೆಂಬುದು ಅವರ ಆಸೆಯಾಗಿತ್ತು. ಆದರೆ ಕೆಲವು ಕಾರಣಗಳಿಂದ ಮೊದಲು ಅವರಿಗೆ ಆಗಿರುವುದಿಲ್ಲ. ಆದರೂ ಹಠ ಬಿಡದೆ, ಪೊಲೀಸ್ ಆಗಲು ಬೇಕಾದ ಪರೀಕ್ಷೆಗಳನ್ನೆಲ್ಲಾ ಬರೆದರು ನಂತರ ತಮ್ಮ ಆಸೆಯಂತೆ ಪೊಲೀಸ್ ಕೆಲಸಕ್ಕೆ ಆಯ್ಕೆಯಾದರು.
ನಿರೀಕ್ಷೆಗೂ ಮೀರಿ ಮಾಡಿದ ಸೇವೆಗಳು
ಬೆಳಗಾವಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾಗಿದ್ದ ಸಮಯದಲ್ಲಿ ನಡೆದ ಕೋಮುಗಲಭೆಯಲ್ಲಿ ಕಾರ್ಯ ನಿರ್ವಹಣೆ ಮಾಡಿದರು. ನಂತರ 2015ರಲ್ಲಿ ಶಿವಮೊಗ್ಗದಲ್ಲಿ ನಡೆದ ಹಿಂಸಾಚಾರವನ್ನ ಹತೋಟಿಗೆ ತರುವಲ್ಲಿ ಯಶಸ್ವಿಯಾಗಿದರೆ, ಇತ್ತ ಮಹಿಳಾ ಸುರಕ್ಷತೆಯನ್ನ ಉತ್ತೇಜಿಸಲು ‘ಒನಕೆ ಓಬವ್ವ‘ ಪಡೆ ರಚನೆ ಮಾಡಿದರು. ಜೊತೆಗೆ ಪೊಲೀಸ್ ಸಿಬ್ಬಂದಿಗೆ ಸಹಾಯ ಮಾಡಲು ಪೊಲೀಸ್ ಕ್ಯಾಂಟೀನ್ ಮತ್ತು ಪೊಲೀಸ್ ವೈದ್ಯಕೀಯ ಕಾರ್ಯಕ್ರಮಗಳನ್ನ ಜಾರಿಗೆ ತರಲು ಸಲಹೆ ನೀಡಿದವರಲ್ಲಿ ಇವರು ಅಲ್ಲಿ ಪ್ರಮುಖರಾಗಿದ್ದಾರೆ. ಅಲ್ಲದೆ ರೈತರಿಗೆ ಸಹಾಯವಾಗಲೆಂದು ‘ನಮ್ಮೂರಲ್ಲೊಬ್ಬ ಸಾಧಕ‘ ಯೋಜನೆಯನ್ನ ಪ್ರಾರಂಭಿಸಿದರು. ನಂತರ ಗ್ರಾಮದ ವಿದ್ಯಾರ್ಥಿಗಳಿಗೆ ಸಹಾಯ ಮಾಡಲು ಉಚಿತ ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ ಪರೀಕ್ಷೆಗೆ ತರಬೇತಿ ನೀಡಲು ಪ್ರಾರಂಭಿಸಿದರು..
ವೃತ್ತಿಜೀವನ
ರವಿ ಡಿ ಚನ್ನಣ್ಣನವರ್ ಅವರು ಮೊದಲಿಗೆ 2011ರಲ್ಲಿ ಬೆಳಗಾವಿ ಜಿಲ್ಲೆಯ ಹೆಚ್ಚುವರಿ ಅಧೀಕ್ಷಕರಾಗಿ ತಮ್ಮ ವೃತ್ತಿಜೀವನವನ್ನ ಪ್ರಾರಂಭಿಸಿದರು. ತದನಂತರ ಧಾರವಾಡ, ಹೊಸಪೇಟೆ, ಹಾಸನ, ಬೆಂಗಳೂರು, ದಾವಣಗೆರೆ, ಮತ್ತು ಶಿವಮೊಗ್ಗದಲ್ಲಿ ತಮ್ಮ ಸೇವೆ ಸಲ್ಲಿಸಿದರು. ನಂತರ 2018ರಲ್ಲಿ ಬೆಂಗಳೂರಿಗೆ ವರ್ಗಾವಣೆಯಾಗಿ ಬಂದರು. ಸದ್ಯಕ್ಕೆ ಬೆಂಗಳೂರಿನಲ್ಲಿ ತಮ್ಮ ಕಾರ್ಯ ನಿರ್ವಹಿಸುತ್ತಿದ್ದಾರೆ.
ನಗರ ಪೊಲೀಸ್ ಅಧಿಕಾರಿ
ರವಿ ಡಿ ಚನ್ನಣ್ಣನವರ್ ಅವರು ಬೆಂಗಳೂರಿಗೆ ವರ್ಗಾವಣೆಯಾಗಿ ಬಂದಮೇಲೆ, ಈಗ ಪಶ್ಚಿಮ ವಿಭಾಗದ ಡೆಪ್ಯುಟಿ ಕಮಿಷನರ್ (ಡಿಸಿಪಿ) ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಇವರ ಕೆಳಗೆ ಸುಮಾರು ಪೊಲೀಸ್ ಸ್ಟೇಷನ್ ಗಳು ಇವೆ. ಇವರು ಉಪ್ಪಾರ ಪೇಟೆ ಪೊಲೀಸ್ ಸ್ಟೇಷನ್ ನಲ್ಲಿ ತಮ್ಮ ಕಾರ್ಯ ನಿರ್ವಹಿಸುತ್ತಿದ್ದಾರೆ.
ರವಿ ಡಿ ಚನ್ನಣ್ಣನವರ್ ಅಂದ್ರೆ ಅದೇನೋ ಯುವಕರಿಗೆ ಒಂಥರಾ ಹುಮ್ಮಸ್ಸು . ಇವರು ಮೊದಲು ಬೆಂಗಳೂರಿಗೆ ಬಂದಾಗಲೇ ಇವರಿಗೆ ಫ್ಯಾನ್ಸ್ ಅಬ್ಬರ ಹೆಚ್ಚಾಗಿತ್ತು. ಯಾಕಂದ್ರೆ ಇವರು ತಮ್ಮ ಕರ್ತವ್ಯ ನಿರ್ವಹಿಸೋ ಸ್ಟೈಲ್ ಆ ರೀತಿ ಇತ್ತು. ಇವರು ಬೆಂಗಳೂರಿನಿಂದ ವರ್ಗಾವಣೆಯಾಗಿ ಹೋದಮೇಲೆ, ನಗರದ ಯುವಕರಿಗೆಲ್ಲಾ ಒಂದು ರೀತಿ ಬೇಸರವಾಗಿತ್ತು. ನಂತರ ಇವರು ಶಿವಮೊಗ್ಗ ಜಿಲ್ಲೆಯಿಂದ ಮತ್ತೆ ಬೆಂಗಳೂರಿಗೆ ಬರ್ತಾರೆ ಅನ್ನೋ ಸುದ್ದಿ ಕೇಳಿ, ಬೆಂಗಳೂರಿನ ಯುವಕರಿಗೆ ಮತ್ತೆ ಅದೇನೋ ಉಮ್ಮಸ್ಸು ಬಂದಿರೋ ರೀತಿ ಆಯ್ತು. ಇವರು ನಗರಕ್ಕೆ ಅಧಿಕಾರಿಯಾಗಿ ಬಂದ ಮೇಲೆ ಇವರಿಗೆ ಫ್ಯಾನ್ಸ್ ಎಗ್ಗಿಲ್ಲದೆ ಆಗ್ತಾರೆ. ಇವರನ್ನ ನೋಡಲು ಪ್ರತಿದಿನ ಮುಗಿಬಿದ್ದು ಬರುತ್ತಾರೆ. ಇವರ ಹುಟ್ಟುಹಬ್ಬ ಬಂದ್ರೆ ಸಾಕು, ಉಪ್ಪಾರಪೇಟೆ ಸುತ್ತಮುತ್ತ ಜಾತ್ರೆ ಆಗಿರುತ್ತೆ. ಯಾಕಂದ್ರೆ ಇವರ ಅಭಿಮಾನಿಗಳೇ ಸುತ್ತ ಮುತ್ತ ತುಂಬಿಕೊಂಡಿರುತ್ತಾರೆ.
ಇವರು ಅಧಿಕಾರ ಸ್ವೀಕರಿಸಿದ ಮೇಲೆ, ನಗರದ ಸುತ್ತಮುತ್ತ ರೌಡಿಗಳಿಗೆಲ್ಲಾ ಭಯ ಶುರುವಾಗುತ್ತೆ. ಯಾಕಂದ್ರೆ ಇವರು ಎಲ್ಲ ಪೊಲೀಸ್ ಸ್ಟೇಷನ್ ಪೊಲೀಸರಿಗೆ ಸಂಪೂರ್ಣ ಅಧಿಕಾರ ಕೊಟ್ಟಿರ್ತಾರೆ. ಯಾರಾದ್ರೂ ಬಾಲ ಬಿಚ್ಚಿದ್ರೆ, ಅಥವಾ ನಿಮ್ಮ ಮೇಲೆ ದಬ್ಬಾಳಿಕೆ ಮಾಡಿದ್ರೆ, ಮುಲಾಜು ನೋಡದೆ, ಆಕ್ಷನ್ ತಗೋಳಿ ಅಂತ. ಹಾಗಾಗಿ ಅವರ ಕೆಳಗೆ ಬರುವ ಪೊಲೀಸರಿಗೆಲ್ಲ ಒಂದು ರೀತಿ ಆನೆ ಬಲ ಬಂದಂತಾಗಿತ್ತು.. ಹಾಗಾಗಿ ಎಲ್ಲ ರೌಡಿಗಳ ಬೆವರಿಳಿಸೋಕೆ ಶುರು ಮಾಡಿದ್ರು. ಅಂದಿನಿಂದ ಸುತ್ತಮುತ್ತ ಕಾಟನ್ ಪೇಟೆ, ಬಳೇಪೇಟೆ ಮಾಗಡಿ ರೋಡ್ ರೌಡಿಗಳಿಗೆಲ್ಲಾ ಸುಸ್ತಾಗೋಗುತ್ತೆ. ಅಂದಿನಿಂದ ತಮ್ಮ ಹಾವಳಿಯನ್ನ ಕಡಿಮೆ ಮಾಡ್ತಾರೆ.
ಇವರ ಅಧಿಕಾರದಲ್ಲಿ ಸುಮಾರು ರೌಡಿಗಳ ಎಡೆಮುರಿಕಟ್ಟಿದ್ದಾರೆ. ಕೆಲವು ರೌಡಿಗಳಂತೂ, ಚೆನ್ನಣ್ಣನವರ್ ಕೆಲಸ ನೋಡಿ, ತಮ್ಮ ಹಾವಳಿಯನ್ನು ಕಡಿಮೆ ಮಾಡಿಕೊಂಡಿದ್ದಾರೆ. ಇದೆಲ್ಲ ಗೌರವ ಅವರಿಗೆ ಸಲ್ಲುತ್ತೆ.. ಕೆಲವರಂತೂ, ನಾವು ಸಹ ಮುಂದಿನ ದಿನಗಳಲ್ಲಿ ರವಿ ಚೆನ್ನಣ್ಣನವರ್ ಅವರಂತೆ ಆಗಬೇಕು ಅಂತ ಆಸೆ ಪಟ್ಟಿದ್ದಾರೆ.
ಈ ಪೋಸ್ಟ್ ನಿಮಗೆ ಇಷ್ಟ ವಾದಲ್ಲಿ ಲೈಕ್ ಅಂಡ್ ಫಾಲೋ MetroSaga – Kannada on Facebook