ಬೆಂಗಳೂರಿನಲ್ಲಿ ಈ ಕೆರೆಗಳು ಹಿಂದೆ ಇದ್ವು ಅಂತ ಹೇಳಿದ್ರೆ ನೀವು ನಂಬಲ್ಲ ಕಣ್ರೀ

bangalore lakes

ಬದಲಾವಣೆಯಾಗಬೇಕು, ಬದಲಾವಣೆ ಮಾಡಬೇಕು ಅಂತ ಪ್ರತಿಯೊಬ್ಬರೂ ಹೇಳ್ತಾರೆ. ಆದರೆ ಇನ್ನೊಬ್ಬರ ಕುತ್ತಿಗೆ ಕುಯ್ದು ಆಗೋದು ಬದಲಾವಣೆಯಲ್ಲ. ಮನುಷ್ಯರನ್ನ ಕೊಂದರೆ ಮಾತ್ರ ಅದು ಕೊಲೆಯಾಗುವುದಿಲ್ಲ. ಪ್ರಕೃತಿಯನ್ನ ನಾಶ ಮಾಡುವುದು, ಎಲ್ಲಕ್ಕಿಂತ ಘೋರ ಕೊಲೆ. ಬದಲಾವಣೆಯ ದಾರಿಯಲ್ಲಿ ಬಹುದೂರ ಸಾಗಿ, ಸಿಲಿಕಾನ್ ಸಿಟಿಯಾಗಿ ರೂಪುಗೊಂಡ ಈ ಮಹಾನಗರದ ಇಂದಿಂದ ಚಹರೆಯ ಹಿಂದೆ ಸಮೃದ್ಧ ಪ್ರಕೃತಿಯ ಹುತಾತ್ಮ ಕಥನವೂ ಇದೆ.

ಹೌದು. ಒಂದು ಕಾಲದಲ್ಲಿ ನಮ್ಮ ಸಿಲಿಕಾನ್ ಸಿಟಿ ಕೆರೆಗಳಿಂದ ತುಂಬಿ ಇಡೀ ನಗರವೇ ಕಂಗೊಳಿಸುತ್ತಿತ್ತು. ಆದರೆ ಈಗ ಅಲ್ಲೊಂದು, ಇಲ್ಲೊಂದು ಅನ್ನೋ ರೀತಿಯಾಗಿದೆ. 1960ರಲ್ಲಿ ರಾಜಧಾನಿ ಸುತ್ತ ಮುತ್ತ ಸುಮಾರು 280 ಕೆರೆಗಳಿದ್ದವು. ಆದರೆ ಈಗ ಅವುಗಳ ಸಂಖ್ಯೆ 20ರ ಗಡಿ ದಾಟುವುದಿಲ್ಲ. ಕೆರೆಗಳಿದ್ದ ಜಾಗಗದಲ್ಲೆಲ್ಲಾ, ಈಗ ಕೇವಲ ದೊಡ್ಡ, ದೊಡ್ಡ ಕಟ್ಟಡಗಳೇ ಕಾಣಿಸುತ್ತವೆ. ಹಾಗಾದ್ರೆ ಆ ಕೆರೆಗಳಲ್ಲಿ ಈಗ ಇರೋದಾದ್ರೂ ಏನು, ಕೆರೆಗಳು ನಾಶ ಆಗಿದ್ದಾದ್ರೂ ಹೇಗೆ ಅಂತ ನಾವು ನಿಮಗೆ ತಿಳಿಸ್ತೀವಿ.

Advertisements

ಹಿನ್ನೋಟ

ಬೆಂಗಳೂರಿನ ಕೆರೆಗಳು ಅಂದಾಕ್ಷಣ ನೆನಪಿಗೆ ಬರುವುದೇ ಕೆಂಪಾಬುಧಿ, ಧರ್ಮಾಂಬುಧಿ, ಹಲಸೂರು ಕೆರೆ, ಎಡೆಯೂರು ಕೆರೆ, ಲಾಲ್ ಬಾಗ್ ಕೆರೆ, ಸ್ಯಾಂಕಿ ಕೆರೆ, ಸಂಪಂಗಿ ಕೆರೆ ಇನ್ನು ಮುಂತಾದವು. ಬಹುತೇಕ ಕರೆಗಳು ನಿರ್ಮಾಣಗೊಂಡಿದ್ದು ನಾಡಪ್ರಭು ಕೆಂಪೇಗೌಡರು, ಮೈಸೂರು ಮಹಾರಾಜರು ಹಾಗು ಬ್ರಿಟಿಷರಿಂದ. ಆದರೆ ಈಗ ಈ ಕೆರೆಗಳೇ ಮಣ್ಣಲ್ಲಿ, ಮಣ್ಣಾಗಿವೆ. ಕೆಂಪೇಗೌಡರು ತನ್ನ ಕುಲ ದೇವತೆಯಾಗಿದ್ದ ಕೆಂಪಮ್ಮನ ಹೆಸರಿನಲ್ಲಿ ಕೆಂಪಾಂಬುಧಿ ಕೆರೆಯನ್ನೂ, ಧರ್ಮ ದೇವತೆಯ ಹೆಸರಿನಲ್ಲಿ ಧರ್ಮಾಂಬುಧಿ ಕೆರೆಯನ್ನ ಕಟ್ಟಿಸಿದ್ದರು.

ಕೆರೆಗಳಿದ್ದ ಜಾಗದಲ್ಲಿ ಈಗ ಇರೋದಾದ್ರೂ ಏನು?

ಸಿದ್ದಿಕಟ್ಟೆ ಕೆರೆ

ಒಂದು ಕಾಲದಲ್ಲಿ ಸಿದ್ದಿಕಟ್ಟೆ ಕೆರೆ ಬಹುದೊಡ್ಡ ಕೆರೆ. ಈ ಕೆರೆಯನ್ನ ನೋಡೋಕೆ ಜನರು ಪ್ರತಿದಿನ ಬರುತ್ತಿದ್ದರು. ಇನ್ನೂ ಬೆಂಗಳೂರಿನಲ್ಲಿದ್ದ ಜನರಂತೂ ಇದೆ ಕೆರೆಯ ನೀರನ್ನ ಕುಡಿಯೋಕೆ, ಹಾಗೂ ಮನೆಗೆಲಸಗಳಿಗೂ ಉಪಯೋಗಿಸುತ್ತಿದ್ರು. ಯಾಕಂದ್ರೆ ಈ ಕೆರೆ ಅಷ್ಟೊಂದು ಯೋಗ್ಯವಾಗಿತ್ತು. ಆದ್ರೆ ಈಗ ಈ ಕೆರೆ ತನ್ನ ಅಸ್ತಿತ್ವವನ್ನ ಕಳೆದುಕೊಂಡಿದೆ. ಈಗ ಈ ಸಿದ್ದಿಕಟ್ಟೆ ಕೆರೆ ಬೆಂಗಳೂರಿನ ಸಿಟಿ ಮಾರ್ಕೆಟ್ ಆಗಿ ಬದಲಾಗಿದೆ. ಹೌದು ಈಗಿರುವ ಸಿಟಿ ಮಾರ್ಕೆಟ್ ಜಾಗದಲ್ಲಿ ಸಿದ್ದಿಕಟ್ಟೆ ಕೆರೆಯಿತ್ತು. ಆದರೆ ಅದನ್ನ ನಾಶ ಮಾಡಿ, ಮಾರ್ಕೆಟ್ ಕಟ್ಟಿದ್ದಾರೆ.

ಧರ್ಮಾಂಬುಧಿ ಕೆರೆ

ಈ ಧರ್ಮಾಂಬುಧಿ ಕೆರೆಯನ್ನ ಆಗಿನ ಕಾಲದಲ್ಲಿ ಕೆಂಪೇಗೌಡರು ತಮ್ಮ ಧರ್ಮ ದೇವತೆಯ ದೇವತೆಯ ಹೆಸರಿನಲ್ಲಿ ಕಟ್ಟಿದ್ದರು. ಆದ್ರೆ ಈಗ ಕೆರೆಯ ಜಾಗದಲ್ಲಿ ಕೆರೆ ಇಲ್ಲ. ಬದಲಾಗಿ ಇಂದಿನ ಕೆಂಪೇಗೌಡ ಬಸ್ ನಿಲ್ದಾಣ ಅಲ್ಲಿ ನಿರ್ಮಾಣವಾಗಿದೆ. ಹೌದು ನಮ್ಮ ಸಿಲಿಕಾನ್ ಸಿಟಿಯ ಜನರು ಹೃದಯ ಭಾಗ ಅಂತ ತಿಳಿದುಕೊಂಡಿರೋ ಮೆಜೆಸ್ಟಿಕ್ ನಲ್ಲೆ ಈ ಕೆರೆ ನಶಿಸಿ ಹೋಗಿರುವುದು. ಕೆಂಪೇಗೌಡರೇ ಇಷ್ಟ ಪಟ್ಟು ಕಟ್ಟಿದ್ದ ಕರೆ ಇದು. ಆದರೆ ಈಗ ಇಲ್ಲಿ, ಮೆಜೆಸ್ಟಿಕ್ ಬಸ್ ನಿಲ್ದಾಣವಾಗಿದೆ. ಅದಕ್ಕೆ ಕೆಂಪೇಗೌಡರ ಹೆಸರನ್ನ ಇಡಲಾಗಿದೆ.

Advertisements

ಸಂಪಂಗಿ ಕೆರೆ

ಒಂದು ಕಾಲದಲ್ಲಿ ಸಂಪಂಗಿ ಕೆರೆ ಬಲು ಸುಂದರವಾಗಿತ್ತಂತೆ. ಅದನ್ನ ನೋಡಿದ ಹಿರಿಯರು ಈಗಲೂ ಆ ಕೆರೆಯ ಬಗ್ಗೆ ಬಣ್ಣಿಸುತ್ತಾರೆ. ತುಂಬಾ ದೊಡ್ಡದಾಗಿದ್ದಿದ್ದರಿಂದ ಕೆರೆಯಲ್ಲಿ ಅನೇಕ ಹೂಗಳು ಬೆಳೆದಿದ್ದವಂತೆ. ಆದ್ರೆ ಈಗ ಇಲ್ಲಿ ಕಂಠೀರವ ಕ್ರೀಡಾಂಗಣ ತಲೆ ಎತ್ತಿದೆ. ನೋಡಿ, ನಮ್ಮ ಪ್ರತಿಭೆಗಳೆಲ್ಲ ಪ್ರತಿದಿನ ಹೋಗಿ, ಆಟ ಆಡೋಕೆ ಅಂತ ಬಳಸೋ ಜಾಗ,ಒಂದು ಕಾಲದಲ್ಲಿ ಸುಂದರ ಕೆರೆಯಾಗಿತ್ತು. ಆದ್ರೆ ಈಗ ಕ್ರೀಡಾಂಗಣವಾಗಿದೆ.

ಕೋರಮಂಗಲ ಕೆರೆ

ಕೋರಮಂಗಲ ಅಂದ ತಕ್ಷಣ ದೊಡ್ಡ ದೊಡ್ಡ ಕಟ್ಟಡಗಳು, ಶಾಪಿಂಗ್ ಸೆಂಟರ್ ಗಳು ನೆನಪಾಗುತ್ತವೆ. ಆದ್ರೆ ಅದೇ ಒಂದು ಕಾಲದಲ್ಲಿ ಇಲ್ಲಿ ದೊಡ್ಡ ಕೆರೆಯಿತ್ತು. ಅದಕ್ಕೆ ಕೋರಮಂಗಲ ಕೆರೆ ಎಂದೇ ಕರೆಯುತ್ತಿದ್ದರು. ಆದ್ರೆ ಈಗ ಆ ಕೆರೆ ಸಂಪೂರ್ಣ ನಶಿಸಿ ಹೋಗಿದೆ. ಈಗ ಆ ಕೆರೆಯಿದ್ದ ಜಾಗದಲ್ಲಿ, ಅಂತರರಾಷ್ಟ್ರೀಯ ಕ್ರೀಡಾಗ್ರಾಮವಾಗಿದೆ.

ಬಿನ್ನಿಮಿಲ್ ಕೆರೆ

ಬಿನ್ನಿಮಿಲ್ ಕೆರೆ. ಆದ್ರೆ ಈಗ ಆ ಜಾಗದಲ್ಲಿ ದೊಡ್ಡ ದೊಡ್ಡ ಪುರಸಭಾ ಕಟ್ಟಡಗಳು ತಲೆ ಎತ್ತಿವೆ. ಹೌದು ಬೆಂಗಳೂರಿನಲ್ಲಿ ಯಾವುದಕ್ಕೆ ಬರ ಇದೆಯೋ, ಇಲ್ವೋ ಗೊತ್ತಿಲ್ಲ. ಆದ್ರೆ ಕಟ್ಟಡಗಳಿಗೆ ಮಾತ್ರ ಬರ ಇಲ್ಲ. ಅದ್ರಲ್ಲೂ ಈ ರಾಜಕೀಯದವರು ಸಿಕ್ಕ ಸಿಕ್ಕ ಕಡೆಯಲ್ಲೆಲ್ಲಾ, ನಮ್ಮದು ಒಂದು ಬಿಲ್ಡಿಂಗ್ ಇರಲಿ ಅಂತಾರೆ. ಅದಕ್ಕೆ ಸುಂದರವಾದ ಕೆರೆಗಳನ್ನ ನಾಶ ಮಾಡಿ ಪುರಸಭಾ ಕಟ್ಟಡಗಳನ್ನ ಕಟ್ಟಿದ್ದಾರೆ.

Advertisements

ತುರಕರ ಕೆರೆ

ಗಾಯತ್ರಿ ನಗರ ಎಲ್ಲರಿಗೂ ಸಾಮಾನ್ಯವಾಗಿ ಗೊತ್ತು. ಯಾಕಂದ್ರೆ ಒಂದು ಕಾಲದಲ್ಲಿ ಅದು ಗುಂಡಾಗಿರಿಗೆ ಹೆಸರುವಾಸಿಯಾಗಿತ್ತು. ಅಲ್ಲಿ ಇದ್ದದ್ದೇ ಈ ತುರಕರ ಕೆರೆ. ಈ ಕೆರೆ ಏರಿಯಾದ ಮಧ್ಯದಲ್ಲಿ ಇದ್ದಿದ್ದರಿಂದ ಎಲ್ಲರು ಈ ಕೆರೆಯ ನೀರನ್ನ ಬಳಸಿಕೊಳ್ತಿದ್ರು. ಆದ್ರೆ ಈಗ ಬಳಸಿಕೊಳ್ಳೋಕೆ ಇಲ್ಲಿ ಕೆರೆಯೇ ಇಲ್ಲದಂತಾಗಿದೆ. ಹೌದು ಈ ಕೆರೆ ಇದ್ದ ಜಾಗದಲ್ಲಿ ಈಗ, ಗಾಯತ್ರಿ ನಗರದ ಆಟದ ಮೈದಾನ ನಿರ್ಮಾಣವಾಗಿದೆ.

ಜೋಗನಹಳ್ಳಿಯ ಕೆರೆಗಳು

ಜೋಗನಹಳ್ಳಿಯಲ್ಲಿ ಕೇವಲ ಒಂದು ಕೆರೆ ಇರಲಿಲ್ಲ. ಎರಡು, ಮೂರೂ ಕೆರೆಗಳಿದ್ದವು. ಸುತ್ತಲೂ ಕೆರೆಗಳಿದ್ದಿದರಿಂದ, ಎತ್ತ ನೋಡಿದರು ಬಲು ಸುಂದರವಾಗಿ ಕಾಣುತ್ತಿತ್ತು. ಆದ್ರೆ ಈಗ ಆ ಜಾಗಗಳಲ್ಲಿ ಇದ್ದ ಕೆರೆಯನ್ನ ನುಂಗಿದ್ದಾರೆ. ಹೌದು ಈ ಕೆರೆಗಳಿದ್ದ ಜಾಗದಲ್ಲಿ ಈಗ ಮರಿಯಪ್ಪನ ಪಾಳ್ಯದ ಗಾಯತ್ರಿ ದೇವಿ ಪಾರ್ಕ್ ರೂಪುಗೊಂಡಿದೆ. ಕೆರೆ ಇದ್ದ ಜಾಗವನ್ನ ಈಗ ಪಾರ್ಕ್ ಕಟ್ಟಿ, ಮಕ್ಕಳ ಆಟೋಟಕ್ಕೆ, ವಯಸ್ಕರರ ಸುತ್ತಾಟಕ್ಕೆ ಮಾಡಲಾಗಿದೆ.

ಸುಂದರವಾದ ಕೆರೆಗಳಿದ್ದ ಜಾಗದಲ್ಲಿ ಈಗ ಕಟ್ಟಡಗಳು, ಬಸ್ ನಿಲ್ದಾಣಗಳು, ಕ್ರೀಡಾಂಗಣಗಳು ನಿರ್ಮಾಣವಾಗಿವೆ. ಕೆರೆಗಳು ನಗರದ ಸೌಂದರ್ಯವನ್ನ ಹೆಚ್ಚಿಸುವುದಷ್ಟೇ ಅಲ್ಲ, ಅದರ ಆರೋಗ್ಯವನ್ನ ಕಾಪಾಡುವಲ್ಲಿಯೂ ಕೆರೆಗಳ ಪಾತ್ರ ಬಹು ಮುಖ್ಯವಾದದ್ದು ಎಂದು ಎಲ್ಲರಿಗೂ ಗೊತ್ತು. ಈಗ ಕೆರೆಗಳನ್ನ ನಾಶ ಮಾಡೋ ದುಷ್ಟರಿಂದ ಕೆರೆಗಳನ್ನ ಕಾಪಾಡುವುದಾದ್ರು , ಹೇಗೆ ಮತ್ತೆ ಯಾರು ಅನ್ನೋದು ಎಲ್ಲರಿಗೂ ಇರೋ ದೊಡ್ಡ ಪ್ರಶ್ನೆಯಾಗಿದೆ.

Advertisements

ಕಾಲಾನುಕ್ರಮದಲ್ಲಿ ಕಣ್ಮರೆಯಾದ ಕೆರೆಗಳು ಹಾಗೂ ಜಲಾಶಯಗಳು

ಕೆಲವು ಕೆರೆಗಳ ಬಗ್ಗೆ ಮಾಹಿತಿ ಸಿಕ್ಕರೆ, ಇನ್ನೂ ಎಷ್ಟೋ ಕೆರೆಗಳ ಬಗ್ಗೆ ಮಾಹಿತಿಯೇ ಇಲ್ಲದಂತಾಗಿದೆ. ಯಾಕಂದ್ರೆ ಅಲ್ಲಿ ಕಟ್ಟಡ ನಿರ್ಮಾಣವಾಗಿಲ್ಲ ಅಂದ್ರು, ಪೂರ್ತಿ ಪಾಳು ಬಿದ್ದಿದೆ. ಅಂತ ಕೆರೆಗಳು ನಮ್ಮಲ್ಲಿವೆ. ಹಂತಹಂತವಾಗಿ ಒಂದೊಂದಾಗಿ ನಶಿಸಿ ಹೋಗುತ್ತಿವೆ. ಅಕ್ಕಿ ತಿಮ್ಮನಹಳ್ಳಿ ಕೆರೆ, ಚಲ್ಲಘಟ್ಟ ಕೆರೆ, ಕಾರಂಜಿ ಕೆರೆ, ನಾಗಶೆಟ್ಟಿ ಹಳ್ಳಿ ಕೆರೆ, ಕಾಡುಗೊಂಡನ ಹಳ್ಳಿ ಕೆರೆ, ದೊಮ್ಮಲೂರು ಕೆರೆ, ಮಿಲ್ಲರ್ಸ್ ಕೆರೆ, ಸುಭಾಷ್ ನಗರ ಕೆರೆ, ಕುರುಬರ ಹಳ್ಳಿ ಕೆರೆ, ಕೋಡಿಹಳ್ಳಿ ಕೆರೆ, ಸಿನಿವೈಗಳು ಕೆರೆ, ಮಾರೇನಹಳ್ಳಿ ಕೆರೆ, ಶಿವನ ಹಳ್ಳಿ ಕೆರೆ, ಚೆನ್ನಮ್ಮನ ಕೆರೆ, ಪುಟ್ಟೇನ ಹಳ್ಳಿ ಕೆರೆ, ಜಕ್ಕರಾಯನ ಕೆರೆ.

ಈ ರೀತಿ ಒಂದೊಂದಾಗಿ ನಗರದ ಕೆರೆಗಳು ಕಣ್ಮರೆಯಾಗುತ್ತಿವೆ. 200-300 ಕೆರೆಗಳಿದ್ದ ಜಾಗದಲ್ಲಿ ಈಗ ಬೆರಳಲ್ಲಿ ಎಣಿಸುವಷ್ಟು ಕೆರೆಗಳಿವೆ. ಆ ಕೆರೆಗಳ ಮೇಲೆ ನಮ್ಮ ಸರ್ಕಾರದ ಕಣ್ಣು ಬಿದ್ದಿಲ್ಲ ಅನ್ಕೋಬೇಡಿ. ಅವುಗಳ ಮೇಲು ಸಹ ಕಣ್ಣು ಬಿದ್ದಿದೆ. ಆದರೆ ಅದಕ್ಕೆ ಇನ್ನೂ ಸರಿಯಾದ ಪ್ಲಾನ್ ಆಗಿಲ್ಲ ಅಷ್ಟೇ. ಇದೆ ರೀತಿ ಮುಂದಿನ ದಿನಗಳಲ್ಲೂ ಮುಂದುವರೆದರೆ, ನಮ್ಮ ನಗರ ಪ್ರಕೃತಿಯಿಂದ ಸಂಪೂರ್ಣ ದೂರವಾಗುತ್ತದೆ.